top photo courtesy: India in Bahrain@IndiaInBahrain
ಭಾರತಕ್ಕೆ ಸ್ವಾಂತಂತ್ರ್ಯ ಬಂದು 73 ವರ್ಷಗಳೇ ಕಳೆದರೂ ದಾಸ್ಯದ ಮೇಲೆ ನಮಗೇಕೆ ಇನ್ನೂ ಒಲವು. ವೈಸರಾಯ್ ಟೆರಿಟರಿ ಅಥವಾ ವಿಟಿ ಎನ್ನುವ ಹೆಸರನ್ನು ನಮ್ಮ ವಿಮಾನಗಳಿಂದ ಕಿತ್ತೊಗೆಯಲು ಏಳು ದಶಕಗಳಷ್ಟು ದೀರ್ಘ ಸಮಯ ಬೇಕೆ? ಪಾಕಿಸ್ತಾನ, ಬರ್ಮಾ, ಶ್ರೀಲಂಕಾ, ನೇಪಾಳ, ಭೂತಾನ್ʼಗೆ ಸಾಧ್ಯವಾದ್ದು ಭಾರತಕ್ಕೇಕೆ ಆಗುತ್ತಿಲ್ಲ? ಈ ಬಗ್ಗೆ ವಿಚಾರಪೂರ್ಣ ಲೇಖನ ಬರೆದಿದ್ದಾರೆ ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ.
***
ನೀವು ಸದಾ ಕಾಲ ಆಕಾಶಮಾರ್ಗದಲ್ಲಿ ಪ್ರಯಾಣಿಸುವವರಾಗಿದ್ದರೆ, ನೀವು ಪ್ರಯಾಣಿಸುವ ವಿಮಾನದ ಮೇಲೆ ಕಿಟಕಿಯ ಬಳಿ ವಿಟಿ ಎಂದು ಬರೆದಿರುವುದನ್ನು ಗಮನಿಸಿರುತ್ತೀರಿ, ಅಥವಾ ಗಮನಿಸಿದ್ದರೂ ಅದೇನೆಂದು ತಿಳಿಯುವ ಗೋಜಿಗೆ ಹೋಗಿರುವುದಿಲ್ಲ. ವಿಮಾನದಲ್ಲಿ ಪದೇಪದೆ ಹಾರಾಡುವ ನಮ್ಮ ಎಂಪಿ, ಎಂಎಲ್‌ಎ, ಮಂತ್ರಿಮಾಗಧರಿಗೂ ವಿಟಿ ಎಂದರೇನೆಂದು ದೇವರಾಣೆಗೂ ತಿಳಿದಿರುವುದಿಲ್ಲ.
ವಿಟಿ ಎಂದರೇನೆಂದು ಎಂಪಿಗಳಿಗೆ, ಮಂತ್ರಿಗಳಿಗೆ ಮೊದಲ ಬಾರಿ ತಿಳಿಸಿದ ಕೀರ್ತಿ ಸಲ್ಲುವುದಿದ್ದರೆ ಅದು ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದ, ಪತ್ರಕರ್ತರೂ ಆದ ತರುಣ್ ವಿಜಯ್ (ಅವರು ನನ್ನ ಆತ್ಮೀಯ ಗೆಳೆಯರೂ ಹೌದು) ಅವರಿಗೆ ಮಾತ್ರ. 2016ರಲ್ಲಿ ಒಮ್ಮೆ ರಾಜ್ಯಸಭೆ ಕಲಾಪದ ಸಂದರ್ಭದಲ್ಲಿ ನಮ್ಮ ವಿಮಾನದ ಮೇಲೆ ನಮೂದಿಸಲಾದ ವಿಟಿ ಎಂದರೆ ಏನು ಗೊತ್ತಾ? ಎಂದು ಅವರು ಕೇಳಿದಾಗ ಅಲ್ಲಿದ್ದವರದೆಲ್ಲದ್ದು ನಿರುತ್ತರ. ವಿಟಿ ಎಂದರೇನೆಂದು ತರುಣ್ ವಿಜಯ್ ವಿವರಿಸಿ ಹೇಳಿದಾಗ ಎಲ್ಲರಿಗೂ ಕಾದಿತ್ತು ಶಾಕ್.
curtassy: tarun vijay facebook page
ವಿಟಿ ಎಂದರೆ ವಿಕ್ಟೋರಿಯನ್ ಅಥವಾ ವೈಸರಾಯ್ ಟೆರಿಟರಿ ಎಂದು. ಪ್ರತಿಯೊಂದು ದೇಶದ ವಿಮಾನಕ್ಕೂ ಆ ದೇಶಕ್ಕೆ ಸಂಬಂಧಿಸಿದ ನೋಂದಣಿ ಸಂಕೇತ ಇರುವುದು ಅನಿವಾರ್ಯ. ಐದು ಅಕ್ಷರಗಳಲ್ಲಿರುವ ಈ ನೊಂದಾವಣೆಯ ಸಂಕೇತ ಮೊದಲೆರಡು ಅಕ್ಷರಗಳು ವಿಮಾನ ಯಾವ ದೇಶಕ್ಕೆ ಸೇರಿದ್ದು ಎಂಬುದನ್ನು ಸಂಕೇತಿಸುತ್ತದೆ. ಉಳಿದ ಮೂರು ಅಕ್ಷರಗಳು ಆ ವಿಮಾನ ಯಾವ ಕಂಪನಿಯ ಒಡೆತನಕ್ಕೆ ಸೇರಿದೆ ಎಂಬುದನ್ನು ಸಂಕೇತಿಸುತ್ತದೆ. ಉಳಿದು ಮೂರು ಅಕ್ಷರಗಳು ಆ ವಿಮಾನ ಯಾವ ಕಂಪನಿಯ ಒಡೆತನಕ್ಕೆ ಒಳಪಟ್ಟಿದೆ ಎಂಬುದರ ಸಂಕೇತ. ಉದಾಹರಣೆಗೆ ಇಂಡಿಗೋ ಕಂಪನಿಗೆ ಸೇರಿದ ವಿಮಾನವಾದರೆ ವಿಟಿ-ಐಡಿವಿ, ಜೆಟ್ ಕಂಪನಿಗೆ ಸೇರಿದ್ದಾದರೆ ವಿಟಿ-ಜೆಎಂವಿ… ಹೀಗೆ. ಪ್ರತಿಯೊಂದು ದೇಶದಲ್ಲೂ ಇಂತಹ ನೊಂದಾವಣೆ ಕಡ್ಡಾಯ. ಈ ನೋಂದಣಿ ಅಂತಾರಾಷ್ಟ್ರೀಯ ನಿಯಮಕ್ಕೊಳಪಟ್ಟಿರುತ್ತದೆ. ಯಾವ ದೇಶದ, ಯಾವ ಏರ್‌ಲೈನ್‌ಗೆ ಸಂಬಂಧಿಸಿದ ವಿಮಾನ ಎಂಬುದನ್ನು ತಪ್ಪದೇ ನಮೂದಿಸಲೇಬೇಕು.
ವಿಟಿ ಇಟ್ಟಿದ್ದು ಯಾರು?
ನಮ್ಮ ದೇಶದ ವಿಮಾನಗಳಿಗೆ ವಿಟಿ ಎಂಬ ನೋಂದಣಿ ಸಂಕೇತ ದೊರಕಿದ್ದು ಬ್ರಿಟಿಷರು ಇಲ್ಲಿ ನಮ್ಮನ್ನಾಳುತ್ತಿದ್ದಾಗ. 1929ರಲ್ಲಿ. ಬ್ರಿಟಿಷರು ಎಲ್ಲೆಲ್ಲಿ ತಮ್ಮ ರಾಜ್ಯಭಾರ ನಡೆಸುತ್ತಿದ್ದರೋ ಅಲ್ಲೆಲ್ಲ ವಿಮಾನಗಳಿಗೆ ವಿಟಿ ಎಂದೇ ನೋಂದಣೆ ಸಂಕೇತ ನೀಡಿದ್ದರು. ಚೀನಾ, ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾ ದೇಶಗಳು ಆ ನಂತರ ತಮ್ಮ ನೋಂದಣೆ ಸಂಕೇತವನ್ನು ಬದಲಿಸಿಕೊಂಡವು. ಆದರೆ ಭಾರತದಲ್ಲಿ 90 ವರ್ಷಗಳ ಅನಂತರವೂ ವಿಟಿ ಬದಲಾಗಲೇ ಇಲ್ಲ. ಬ್ರಿಟಿಷರೇನೋ ತಮ್ಮ ಸಾಮ್ರಾಜ್ಯಕ್ಕೆ ವೈಸರಾಯ್ ಟೆರಿಟರಿ ಎಂದು ಹೆಮ್ಮೆಯಿಂದ ನಾಮಕರಣ ಮಾಡಿಕೊಂಡಿದ್ದಿರಬಹುದು. ಆದರೀಗ ಬ್ರಿಟಿಷರ ಸಾಮ್ರಾಜ್ಯದಡಿ ನಾವು ಭಾರತೀಯರು ಇಲ್ಲವಲ್ಲ. ಅವರ ಕಪಿಮುಷ್ಟಿಯಿಂದ ಮುಕ್ತಿ ಪಡೆದೇ ಬರೋಬ್ಬರಿ 73 ವರ್ಷಗಳಾದವು. ಆದರೆ ಗುಲಾಮಗಿರಿಯ ಸಂಕೇತವಾದ ವಿಟಿ ಎಂಬ ಸಂಕೇತವನ್ನು ಬದಲಾಯಿಸಬೇಕೆಂಬ ಸ್ವಾಭಿಮಾನ, ಸ್ವದೇಶಿತನವೇ ನಮ್ಮನ್ನಾಳಿದವರಿಗೆ ಮೂಡಲಿಲ್ಲವೆಂದರೆ ನಾವೆಂತಹ ದೌರ್ಭಾಗ್ಯಶಾಲಿಗಳು!
CURTASSY: INDIAN AIRLINES
ತರುಣ್ ವಿಜಯ್ ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ವಿಷಯ ವಿವರಿಸಿದಾಗ ಪಕ್ಷಬೇಧ ಮರೆತು ಎಲ್ಲರೂ ಒಕ್ಕೊರಲಿನಿಂದ ಈ ಗುಲಾಮಗಿರಿಯ ಸಂಕೇತವನ್ನು ತಕ್ಷಣ ಬದಲಾಯಿಸಬೇಕೆಂದು ಆಗ್ರಹಿಸಿದ್ದರು. ಆದರೆ ಅದಿನ್ನೂ ಸಾಧ್ಯವಾಗಿಲ್ಲ ಎನ್ನುವುದು ಏನನ್ನು ಸೂಚಿಸುತ್ತದೆ? ಶ್ರೀಲಂಕಾ, ಪಾಕಿಸ್ತಾನಕ್ಕೆ ಸಾಧ್ಯವಾಗುವ ಸಂಗತಿ ಭಾರತದಂಥ ಬೃಹತ್ ದೇಶಕ್ಕೆ, ಶಕ್ತಿಶಾಲಿ ದೇಶಕ್ಕೆ ಏಕೆ ಸಾಧ್ಯವಾಗುವುದಿಲ್ಲ? ನಮ್ಮ ಸ್ವಾಭಿಮಾನ ಶೂನ್ಯತೆ ಆ ಮಟ್ಟಕ್ಕೆ ತಲುಪಿಬಿಟ್ಟಿದೆಯಾ? ʼಹಿಂದುಸ್ತಾನ ಈಗಲೂ ವೈಸರಾಯ್‌ಗಳ ಸಾಮ್ರಾಜ್ಯವಾಗಿರಲು ಸಾಧ್ಯವಿಲ್ಲ. ಗುಲಾಮಗಿರಿಯ ಈ ಸಂಕೇತವನ್ನು ತಕ್ಷಣ ಬಲಾಯಿಸಬೇಕೆಂದು ತರುಣ್ ವಿಜಯ್ ಅವರ ಆಗ್ರಹ ಈಗಲೂ ಫಲಿಸಲಿಲ್ಲ.
ಹಾಗಂತ ವಿಟಿ ಸಂಕೇತವನ್ನು ಬದಲಿಸಲು ಪ್ರಯತ್ನಗಳೇ ನಡೆದಿಲ್ಲವೆಂದೇನಿಲ್ಲ. 2004ರಲ್ಲಿ ವಿಮಾನಯಾನ ಸಚಿವಾಲಯ ಅಂತಾರಾಷ್ಟ್ರೀಯ ನಾಗರೀಕ ಉಡ್ಡಯನ ಸಂಸ್ಥೆ (ಐಸಿಎಓ)ಯನ್ನು ಸಂಪರ್ಕಿಸಿ ತನ್ನ ಸಂಕೇತವನ್ನು ಬದಲಿಸುವಂತೆ ಆಗ್ರಹಿಸಿತ್ತು. ವಿಟಿ ಎಂದಿರುವುದನ್ನು ಬಿಎ (ಭಾರತ್) ಅಥವಾ ಐಎನ್ (ಇಂಡಿಯಾ) ಎಂದು ಬದಲಾಯಿಸಲು ಹೇಳಿತ್ತು. ಆದರೆ ಬಿ ಮತ್ತು ಐ ಸಂಕೇತಗಳನ್ನು ಚೀನಾ ಮತ್ತು ಇಟಲಿ ಕ್ರಮವಾಗಿ ತೆಗೆದುಕೊಂಡುಬಿಟ್ಟಿರುವುದರಿಂದ ಐಸಿಎಓ ಅದನ್ನು ಭಾರತಕ್ಕೆ ಕೊಡಲು ಸಮ್ಮತಿಸಲಿಲ್ಲ. ಹಾಗಾಗಿ ವಿಟಿ ಎಂಬ ಸಂಕೇತವೇ ಮುಂದುವರೆಯಲಿದೆ ಎಂದು ಆಗ ನಾಗರಿಕ ವಿಮಾನ ಸಚಿವರಾಗಿದ್ದ ಪ್ರಫುಲ್ಲ ಪಟೇಲ್ (ಯುಪಿಎ ಸರ್ಕಾರ) ಈ ಸಮಸ್ಯೆಗೆ ಇತಿಶ್ರೀ ಹಾಡಿದ್ದರು.
ಆದರೆ ಪಾಕಿಸ್ತಾನ ಎಪಿ ಎಂದು ಹೊಸ ನೋಂದಣೆ ಸಂಕೇತವನ್ನಿಟ್ಟು ಕೊಂಡಿದೆ. ಶ್ರೀಲಂಕಾ, ನೇಪಾಳ, ಭೂತಾನ್ ಕ್ರಮವಾಗಿ 4ಆರ್, 9ಎನ್ ಮತ್ತು ಎ5 ಎಂದು ನೋಂದಣೆ ಸಂಕೇತವನ್ನು ಬದಲಿಸಿವೆ.
ವಿಟಿ ಎಂಬುದು ಗುಲಾಮಿ ಸಂಕೇತ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ ಎಂದು ವಾದಿಸುವ ಪ್ರಭೃತಿಗಳೂ ಇದ್ದಾರೆ. ವಿಟಿ ಎಂದರೆ ವೈಸರಾಯ್ ಟೆರಿಟರಿ ಎಂದೇನಲ್ಲ ಎಂದು ವಾದಿಸುವವರೂ ಇದ್ದಾರೆ. ಹಾಗಿದ್ದರೆ ವಿಟಿ ಎಂದರೆ ನಿಜವಾಗಿ ಏನರ್ಥ? ಎಂದು ಕೇಳಿದರೆ ಅದಕ್ಕೂ ಸ್ಪಷ್ಟ ಉತ್ತರ ಈ ರೀತಿ ವಾದಿಸುವ ವೀರರಿಂದ ಸಿಗುವುದಿಲ್ಲ.
ಪ್ರತಿಯೊಂದು ವಾದಕ್ಕೂ ಪ್ರತಿವಾದ ಇದ್ದೇ ಇರುತ್ತದೆ. ಆ ಪ್ರತಿವಾದ ಎನ್ನುವುದು ಹಲವು ಬಾರಿ ವಿತಂಡವಾದವಾಗಿರುತ್ತದೆ ಎಂದು ಹೇಳಬೇಕಾಗಿಲ್ಲ. ಇಲ್ಲಿ ನಾವು ಗಮನಿಸಬೇಕಾದುದೇನೆಂದರೆ -ವಾದ ಅಥವಾ ಪ್ರತಿವಾದ ಎಷ್ಟು ಪ್ರಬಲ ಮತ್ತು ಸಮರ್ಥನೀಯ ಎನ್ನುವುದಕ್ಕಿಂತ ವಾಸ್ತವಾಂಶ ಏನು ಎಂಬುದನ್ನು. ವಿಟಿ ಎಂದರೆ ವೈಸರಾಯ್ ಟೆರಿಟರಿ ಎಂಬುದೇ ನಿಜವಾಗಿದ್ದರೆ ಅದು ಗುಲಾಮಗಿರಿಯ ಸಂಕೇತವಲ್ಲದೆ ಮತ್ತೇನು?
ಭಾರತ, ಇಂಡಿಯಾ ಅಲ್ಲ
ಅಸಲಿಗೆ ಸ್ವಾತಂತ್ರ್ಯ ಬಂದ ಬಳಿಕ, ಸಾವಿರಾರು ವರ್ಷಗಳಿಂದ ಅಯಾಚಿತವಾಗಿ ದೈವದತ್ತವಾಗಿ ಬಂದಿರುವ ಭಾರತವೆಂಬ ನಮ್ಮ ದೇಶದ ಹೆಸರನ್ನು ಬ್ರಿಟಿಷರು ಇಂಡಿಯಾ ಎಂದು ತಿರುಚಿದ್ದನ್ನು ನಾವಿನ್ನೂ ತಲೆಯ ಮೇಲೆ ಹೊತ್ತು ಕುಣಿದಾಡುತ್ತಿದ್ದೇವಲ್ಲ, ನಾವೆಂಥ ಸ್ವಾಭಿಮಾನಶೂನ್ಯರು? ಪುಟ್ಟ ಪುಟ್ಟ ದೇಶಗಳಾದ ಸಿಲೋನ್, ಬರ್ಮಾ ಕೂಡ ಬ್ರಿಟಿಷರಿಂದ ಮುಕ್ತವಾದ ಬಳಿಕ ಮ್ಯಾನ್ಮಾರ್, ಶ್ರೀಲಂಕಾ ಎಂದು ಹೆಸರು ಬದಲಿಸಿಕೊಂಡು ಸ್ವಾಭಿಮಾನ ಮೆರೆದಿವೆ. ಆದರೆ ನಾವು ʼಇಂಡಿಯಾ’ ಎಂದು ಕರೆಯುವುದರಲ್ಲೇ ಸಾರ್ಥಕ್ಯ ಕಾಣುತ್ತಿದ್ದೇವೆ! ಪುರೋಹಿತರು ಸಂಕಲ್ಪ ಮಾಡಿಸುವಾಗ ʼಭರತಖಂಡೇ ಭರತ ವರ್ಷೇ ಜಂಬೂದ್ವೀಪೇ…’ ಎಂದು ಹೇಳುತ್ತಾರೆಯೇ ಹೊರತು ʼಇಂಡಿಯಾ ಖಂಡೇ ಇಂಡಿಯಾ ವರ್ಷೇ ಇಂಡಿಯಾ ದ್ವೀಪೇ…’ ಎನ್ನುವುದಿಲ್ಲ. ʼಭಾರತ್ ಮಾತಾ ಕೀ ಜೈ’ ಎನ್ನುತ್ತೇವೆಯೋ ಹೊರತು ʼಇಂಡಿಯಾ ಮಾತಾ ಕೀ ಜೈ’ ಎನ್ನುವುದಿಲ್ಲ. ರಾಷ್ಟ್ರಕವಿ ಕುವೆಂಪು ʼಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಎಂದು ಹಾಡು ಕಟ್ಟಿದರೇ ಹೊರತು ʼಇಂಡಿಯಾ ಜನನಿಯ ತನುಜಾತೆ…’ ಎನ್ನಲಿಲ್ಲ.
ಇದೆಲ್ಲವೂ ನಮ್ಮನ್ನಾಳುವವರಿಗೆ ಗೊತ್ತಿಲ್ಲವೆಂದೇನಿಲ್ಲ. ಗೊತ್ತಿದ್ದರೂ ದೇಶದ ಹೆಸರನ್ನು ಮೂಲ ನೆಲೆಗೆ ತರಲು ಪ್ರಯತ್ನಿಸುತ್ತಿಲ್ಲವಲ್ಲ ಎಂಬ ವೇದನೆ ನನ್ನಂಥವರದು. ನಮ್ಮ ಸಂವಿಧಾನದಲ್ಲಿ ಕೂಡ ʼIndia that is Bharath’ ಎಂದಿದೆಯೇ ಹೊರತು ದೇಶದ ಹೆಸರು ಭಾರತ ಎಂದು ಸ್ಪಷ್ಟತೆ ಇಲ್ಲ. ದೇಶದ ಹೆಸರನ್ನೇ ಬದಲಾಯಿಸಲು ಸಾಧ್ಯವಾಗದವರು ಇನ್ನು ನಮ್ಮ ವಿಮಾನ ಸಾರಿಗೆಯ ನೋಂದಣೆ ಸಂಕೇತವನ್ನು ಬದಲಾಯಿಸುತ್ತಾರೆಂದು ನಂಬುವುದು ಹೇಗೆ?
ದಾಸ್ಯದ ಪಳೆಯುಳಿಕೆಗಳು ಸಂಪೂರ್ಣ ನಶಿಸಿಹೋಗಲು ಇನ್ನು ಅದೆಷ್ಟು ವರ್ಷಗಳು ಬೇಕೋ ಯಾರು ಬಲ್ಲರು?
Comments 1