news & views
ground report from sira
ಶಿರಾ: ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದು, ಆ ನಂತರ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳ ಪೈಕಿ 10ರಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ ಈಗ ಎರಡು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಈ ಉಪ ಚುನಾವಣೆಯನ್ನೂ ಸೀರಿಯಸ್ಸಾಗಿ ತೆಗೆದುಕೊಂಡಿದೆ ಎಂಬುದಕ್ಕೆ ರಿಪೀಟ್-ರಿಪೀಟ್ ಆಗಿ ಅನೇಕ ಕಾರಣಗಳು ಕಾಣಿಸುತ್ತಿವೆ. ಅತ್ತ ಕಾಂಗ್ರೆಸ್, ಇತ್ತ ಜೆಡಿಎಸ್ ನಾಯಕರಿಗೆ ಚೆಳ್ಳೆಹಣ್ಣು ತಿನ್ನಿಸಿ ಗಡಿ ಕ್ಷೇತ್ರದಲ್ಲಿ ಖಾತೆ ತೆರೆಯಲು ಗಟ್ಟಿಯಾಗಿ ಟ್ರೈ ಮಾಡುತ್ತಿದೆ.
ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಮೇಲೆ ಕೇಸು ಆಗಿರುವುದರಿಂದ ಹಿಡಿದು, ಶುಕ್ರವಾರದಂದು ಶಿರಾದಲ್ಲಿ ನಡೆದ ಕೆಲ ಘಟನೆಗಳಂತೂ ಬಿಜೆಪಿ ಇಡುತ್ತಿರುವ ನಿಗೂಢ ಹೆಜ್ಜೆಗಳಿಗೆ ಪುಷ್ಠಿ ನೀಡುವಂತಿವೆ. ಬೆಳಗ್ಗೆ ಶಿರಾದಲ್ಲಿ ಕಾಣಿಸಿಕೊಂಡ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಮುಂತಾದವರು ಪಕ್ಷದ ಅಭ್ಯರ್ಥಿ ರಾಜೇಶ್ ಗೌಡ ನಾಮಪತ್ರ ಸಲ್ಲಿಸುವ ತನಕ ಒಟ್ಟಿಗೇ ಇದ್ದರು. ಅದಕ್ಕೂ ಮೊದಲು ಶಿರಾದ ಟೋಲ್ ಗೇಟಿನಿಂದ ಮಿನಿ ವಿಧಾನಸೌಧದ ತನಕ ನಡೆದ 15 ಕಿ.ಮೀ ದೂರದ ಮೆರೆವಣಿಗೆಯಲ್ಲೂ ಜತೆಯಲ್ಲೇ ಬಂದರು.
ಅದಾದ ಮೇಲೆ ನಾಮಪತ್ರ ಸಲ್ಲಿಕೆ ‘ಶಾಸ್ತ್ರ’ ಮುಗಿಯುತ್ತಿದ್ದಂತೆಯೇ ಕಾರಜೋಳ, ವಿಜಯೇಂದ್ರ ತಮ್ಮ ಪಾಡಿಗೆ ತಾವು ಹೊರಟರೆ, ಮತ್ತೊಬ್ಬ ಡಿಸಿಎಂ ಡಾ.ಅಶ್ವತ್ಥನಾರಾಯಣ ಮಾತ್ರ ಆಂಧ್ರದ ಗಡಿ ತಾಲ್ಲೂಕು ಮಡಕಶಿರಾ ಕಡೆ ಕಾರನ್ನು ತಿರುಗಿಸಿದ್ದರು. ಅಲ್ಲಿಂದ ನೇರವಾಗಿ ನೀಲಕಂಠಾಪುರ ಎಂಬ ಗ್ರಾಮಕ್ಕೆ ಎಂಟ್ರಿ ಕೊಟ್ಟರಲ್ಲದೆ, ಅದೇ ಊರಿನಲ್ಲಿ ವಾಸಿಸುತ್ತಿರುವ ರಾಯಲಸೀಮೆಯ ಪ್ರಭಾವೀ ರಾಜಕಾರಣಿ, ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಮಂತ್ರಿ ರಘುವೀರಾ ರೆಡ್ಡಿ ನಿವಾಸದ ಮುಂದೆ ಹೋಗಿ ಅವರ ಕಾರು ನಿಂತಾಗ ಅವರನ್ನು ಬೆನ್ಹತ್ತಿ ಬಂದಿದ್ದ ಕೆಲವೇ ಪತ್ರಕರ್ತರು, ಬಿಜೆಪಿ ನಾಯಕರು ಅವಾಕ್ಕಾಗಿದ್ದರು.
ರಘುವೀರಾ ರೆಡ್ಡಿ ನಿವಾಸದಲ್ಲಿ ಡಾ.ಅಶ್ವತ್ಥನಾರಾಯಣ.
ಡಿಸಿಎಂ ಬರುವ ವಿಷಯ ತಮಗೂ ಗೊತ್ತು ಎಂಬುದಕ್ಕೆ ಸಾಕ್ಷಿಯಾಗಿ ರಘುವೀರಾ ರೆಡ್ಡಿ ಅವರು ಮನೆ ಬಾಗಿಲಲ್ಲೇ ಹಾರ, ಶಾಲು ಹಿಡಿದು ನಿಂತಿದ್ದರು. ಡಿಸಿಎಂ ಬರುತ್ತಿದ್ದಂತೆ ಅವರನ್ನು ಮನೆಯೊಳಕ್ಕೆ ಕರೆದುಕೊಂಡ ಹೋದ ಅವರು, ಮನೆಗೆ ಬಂದ ಅತಿಥಿ ಜತೆ ಒಂದು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸುತ್ತಾ ಕೂತುಬಿಟ್ಟರು. ಇದೆಲ್ಲ ಗಮನಿಸುತ್ತಿದ್ದ ಕೆಲವರು, ಗಡಿಯಲ್ಲೂ ಬಿಜೆಪಿಯು ಆಪರೇಷನ್ ಕಮಲ ಶುರುವಿಟ್ಟುಕೊಂಡಿತಾ? ಎಂದು ಮುಖ-ಮುಖ ನೋಡಿಕೊಂಡರು. ಶಿರಾ ಉಪ ಚುನಾವಣೆಯನ್ನೇ ನೆಪವಾಗಿಟ್ಟುಕೊಂಡು ನೆರೆಯ ಆಂಧ್ರದಲ್ಲಿ ಬಿಜೆಪಿ ದಾಳ ಉರುಳಿಸುತ್ತಿದೆಯಾ ಎಂಬ ಅನುಮಾನವೂ ಕಾಡತೊಡಗಿತು. ಗಂಟೆ ಕಳೆದ ಮೇಲೆ ಹೊರಬಂದ ನಾಯಕರಿಬ್ಬರೂ ತುಟಿಕ್ʼಪಿಟಿಕ್ ಎನ್ನಲಿಲ್ಲ. ಆದರೆ, ಶಿರಾದ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಡಿಸಿಎಂ ಕೇಳಿದ್ದು ಮಾತ್ರ ಗುಟ್ಟಾಗಿ ಉಳಿದಿಲ್ಲ.
ರಘುವೀರಾ ಸಾಮಾನ್ಯರಲ್ಲ
ರಘುವೀರಾ ರೆಡ್ಡಿ ಅವರು ಆಂಧ್ರ ಪ್ರದೇಶದ ವರ್ಚಸ್ವಿ ನಾಯಕರಾಗಿದ್ದು, ಯಾದವ ಸಮುದಾಯಕ್ಕೆ ಸೇರಿದವರು. ಈ ಹಿಂದೆ ಅವರನ್ನು ನಮ್ಮ ರಾಜ್ಯದ ಚಿತ್ರದುರ್ಗ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರು ಒತ್ತಡ ಹೇರಿದ್ದರು. ಕರ್ನಾಟಕ-ಆಂಧ್ರ ಗಡಿಭಾಗದಲ್ಲಿ ಅತ್ಯಂತ ಪ್ರಭಾವಿ. ಶಿರಾ, ಮಧುಗಿರಿ ಮತ್ತು ಪಾವಗಡ ಮುಂತಾದ ಪ್ರದೇಶಗಳಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದಾರೆ. ಒಂದೆರಡು ಲೋಕಸಭೆ ಚುನಾವಣೆಗಳಲ್ಲಿ ಯಾದವ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿರುವ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಲು ಅವರ ಮೇಲೆ ರಾಜ್ಯ ಕಾಂಗ್ರೆಸ್ ನಾಯಕರು ಒತ್ತಡ ಹೇರಿದ್ದರು.
ರೆಡ್ಡಿ ಅವರು ಅವಿಭಜಿತ ಆಂಧ್ರ ಪ್ರದೇಶದ ಕೋಟ್ಲ ವಿಜಭಾಸ್ಕರ ರೆಡ್ಡಿ, ವೈ.ಎಸ್.ರಾಜಶೇಖರ ರೆಡ್ಡಿ, ರೋಶಯ್ಯ ಮತ್ತು ಕಿರಣ್ಕುಮಾರ್ ರೆಡ್ಡಿ ಅವರ ಸಂಪುಟಗಳಲ್ಲಿ ಸಚಿವರೂ ಆಗಿದ್ದರು.
ತಮ್ಮ ಸ್ವಗ್ರಾಮ ನೀಲಕಂಠಾಪುರದಲ್ಲಿ ರೆಡ್ಡಿ ಅವರು ಶ್ರೀ ಅಯ್ಯಪ್ಪ ಸ್ವಾಮಿ, ಪಂಚಮುಖಿ ಗಣಪತಿ, ಆಂಜನೇಯ ಸ್ವಾಮಿ ದೇಗುಲಗಳನ್ನು ನಿರ್ಮಾಣ ಮಾಡಿಸುತ್ತಿದ್ದು, ಆ ದೇವಾಲಯಗಳಿಗೆ ಡಿಸಿಎಂ ಅವರನ್ನು ಕರೆದುಕೊಂಡು ಹೋಗಿ ತೋರಿಸಿದರು. ಆ ಸಂದರ್ಭದಲ್ಲಿಯೂ ಅವರು ಸೈಲಂಟಾಗಿ ಮಾತನಾಡಿಕೊಳ್ಳುತ್ತಲೇ ಇದ್ದರು. ಕರ್ನಾಟಕಕ್ಕೆ ಸೇರಿದ ಬಿಜೆಪಿ ನಾಯಕರೊಬ್ಬರು ಅದರಲ್ಲೂ ಕಟ್ಟರ್ ವಿರೋಧ ಪಕ್ಷವಾದ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲು ಗಡಿದಾಟಿ ಬಂದ ಕ್ಷಣಗಳನ್ನು ನೀಲಕಂಠಾಪುರದ ಜನರು ಆಶ್ಚರ್ಯಚಕಿತರಾಗಿ ಗಮನಿಸಿದರು. ಇಡೀ ಊರಿನ ಜನ ಡಿಸಿಎಂ ಬೇಟಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಡಾ.ಅಶ್ವತ್ಥನಾರಾಯಣ ಅವರು ಮಧ್ಯಾಹ್ನದ ಭೋಜನವನ್ನು ರೆಡ್ಡಿ ಅವರ ನಿವಾಸದಲ್ಲಿಯೇ ಸೇವಿಸಿದರು.
ಶಿರಾದಲ್ಲಿ ಬಿಜೆಪಿ ಬಲ ಪ್ರದರ್ಶನ
ರಾಜರಾಜೇಶ್ವರಿ ನಗರದಲ್ಲಿ ನಾಮಪತ್ರ ಸಲ್ಲಿಸುವಾಗಲೇ ಸಿಎಂ ಆದಿಯಾಗಿ ಎಲ್ಲ ವಲಸಿಗರು ಬಂದು ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಬಲ ತುಂಬಿದ್ದರು. ಶಿರಾದಲ್ಲೂ ಹಾಗೆಯೇ ಆಯಿತು. ಚುನಾವಣೆಗೆ ಮುನ್ನ ಕಾಂಗ್ರೆಸ್ಸಿನಿಂದ ಬಿಜೆಪಿ ಹಾರಿದ್ದ ಡಾ.ರಾಜೇಶ್ ಗೌಡರಿಗೆ ಶಕ್ತಿ ತುಂಬಲು ಬೆಂಗಳೂರಿನಿಂದ ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ.ಸಿಎನ್.ಅಶ್ವತ್ಥನಾರಾಯಣ, ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಮುಂತಾದವರು ಧಾವಿಸಿ ಬಂದಿದ್ದರು.
ನಾಮಪತ್ರ ಸಲ್ಲಿಕೆಗೆ ಬಿಜೆಪಿ ನಾಯಕರು ಶಿರಾದ ಕರಜೀವನಹಳ್ಳಿ ಟೋಲ್ʼನಿಂದ ಮೆರವಣಿಗೆಯಲ್ಲಿ ಸಾಗಿದರು. ಕೋವಿಡ್ ಭಯಬಿಟ್ಟು ಪಕ್ಷದ ಕಾರ್ಯಕರ್ತರೂ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಮಾತಿನ ಬುಲೆಟ್ ಸಿಡಿಸಿದ ಡಿಸಿಎಂ
ಬಹಿರಂಗ ಭಾಷಣ ಇರಲಿಲ್ಲವಾದರೂ ಡಿಸಿಎಂ ಡಾ.ಅಶ್ವತ್ಥನಾರಾಯಣ ಮಾತ್ರ ಮಾಧ್ಯಮಗಳ ಜತೆ ಮಾತನಾಡಿದರು. ಅಕ್ಕಪಕ್ಕದಲ್ಲಿ ಗೋವಿಂದ ಕಾರಜೋಳ, ವಿಜಯೇಂದ್ರ ಇದ್ದರಲ್ಲದೆ, ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ಅವರು ಅಕ್ಷರಶಃ ಮಾತಿನ ಸಿಡಿಗುಂಡುಗಳನ್ನೇ ಸಿಡಿಸಿದರು. ಅವರು ಹೇಳಿದ್ದಿಷ್ಟು;
*ಈ ಉಪ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಕಮಲ ಅರಳುತ್ತದೆ. ಬಿಜೆಪಿ ಜಯಭೇರಿ ಬಾರಿಸಲಿದೆ.
*ಈ ಉಪ ಚುನಾವಣೆಯಲ್ಲಿ ಅಭಿವೃದ್ಧಿಯಷ್ಟೇ ಚರ್ಚೆಯ ವಿಷಯ. ಶಿರಾ ಜನತೆಗೂ ಅಭಿವೃದ್ಧಿಯೇ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಗೆದ್ದೇಗೆಲ್ಲುತ್ತದೆ.
*ಬಿಜೆಪಿ ಸರಕಾರದ ನೇತೃತ್ವದಲ್ಲಿ ರಾಜ್ಯವು ಸರ್ವಾಂಗೀಣ ಅಭಿವೃದ್ಧಿಯನ್ನು ಕಾಣಬಹುದು. ಅದೇ ರೀತಿ ಶಿರಾ ಕ್ಷೇತ್ರವು ಪ್ರಗತಿ ಸಾಧಿಸಲಿದೆ. ಈ ವಿಷಯನ್ನು ಮತದಾರರು ಅರ್ಥ ಮಾಡಿಕೊಳ್ಳಲಿದ್ದಾರೆ.
*ಕಾಂಗ್ರೆಸ್ ಅಭ್ಯರ್ಥಿಯ ಸಾಮರ್ಥ್ಯದ ಬಗ್ಗೆ ಆ ಪಕ್ಷದ ರಾಷ್ಟ್ರೀಯ ಉಸ್ತುವಾರಿ ಅವರಿಗೇ (ರಣದೀಪ್ ಸುರ್ಜೀವಾಲ) ಅನುಮಾನವಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಮೊಬೈಲ್ ಸಂಭಾಷಣೆಯಲ್ಲಿ ಅದನ್ನು ನಾವೆಲ್ಲರೂ ಕೇಳಿದ್ದೇವೆ. ಅನೇಕ ಸಲ ಗೆದ್ದು ತಾವು ಬೆಳೆದು ಜನರನ್ನು ನಿರ್ಲಕ್ಷ್ಯ ಮಾಡಿದ ನಾಯಕರನ್ನು ಗೆಲ್ಲಿಸಬೇಕೆ?
*ಕ್ಷೇತ್ರದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಅವರೆಲ್ಲ ಏನೆಲ್ಲ ಮಾಡಿಕೊಂಡರು ಎಂಬುದು ನಿಮಗೆಲ್ಲ ಗೊತ್ತಿದೆ. ಆಗ ಒಟ್ಟಾಗಿ ಅಧಿಕಾರ ಅನುಭವಿಸಿ ಈಗ ಬೇರೆ ಬೇರೆ ಅಭ್ಯರ್ಥಿಗಳನ್ನು ನಿಲ್ಲಿಸಿಕೊಂಡಿದ್ದಾರೆ. ಜೆಡಿಎಸ್ ಜನರ ವಿಶ್ವಾಸ ಕಳೆದುಕೊಂಡಿದೆ.
*ಶಿರಾ ಕ್ಷೇತ್ರವು ಕಳೆದ 75 ವರ್ಷಗಳಿಂದ ಹಿಂದುಳಿದಿದೆ. ಅನೇಕ ನಾಯಕರು ಇಲ್ಲಿಂದ ಗೆದ್ದಿದ್ದಾರೆ. ಅವರನ್ನು ಗೆಲ್ಲಿಸಿದ ಮತದಾರರು ಸೋತಿದ್ದಾರೆ. ಈ ಚುನಾವಣೆಯಲ್ಲಿ ಆ ಚಿತ್ರಣ ಬದಲಾಗಲಿದೆ. ಕಳೆದ ಏಳೂವರೆ ದಶಕದಲ್ಲಿ ಆಗದ ಅಭಿವೃದ್ಧಿಯನ್ನು ಇನ್ನು ಎರಡೂವರೆ ವರ್ಷದಲ್ಲಿ ನಾವು ಮಾಡಿ ತೋರಿಸುತ್ತೇವೆ.