ದೊಡ್ಡಕರಪ್ಪನಹಳ್ಳಿ ಸಮೀಪದ ಬ್ಯಾಟರಾಯನಹಳ್ಳಿ ಬ್ಲಾಕ್‌ನಲ್ಲಿ ಡ್ರಿಲ್ಲಿಂಗ್ ಆರಂಭ.
***
ground report
ಕೆಜಿಎಫ್: ಗಣಿಗಳು ಮುಚ್ಚಿಕೊಂಡ ಮೇಲೆ ಬದುಕಿಗಾಗಿ ಬೆಂಗಳೂರನ್ನೇ ನೆಚ್ಚಿಕೊಂಡಿದ್ದ ಈ ಪಟ್ಟಣಕ್ಕೆ ಪುನಾ ಗತವೈಭವ ಮರಳುವ ಕಾಲ ಸನ್ನಿಹಿತವಾಗಿದೆ. ಆದರೆ; ಇದರಲ್ಲಿ ಎರಡು ಆಯ್ಕೆಗಳನ್ನು ಮಾಡಿಕೊಂಡಿರುವ ಕೇಂದ್ರ-ರಾಜ್ಯ ಸರಕಾರಗಳು ಜನರಲ್ಲಿ ಸಣ್ಣಗೆ, ನಿಧಾನಗತಿಯಲ್ಲಿ ನಿರೀಕ್ಷೆಗಳನ್ನು ಹುಟ್ಟುಹಾಕುತ್ತಿವೆ.
ಆಯ್ಕೆ ಒಂದು: ಕೆಜಿಎಫ್‌ನಲ್ಲಿ ಈವರೆಗೆ ಚಿನ್ನದ ಗಣಿಗಾರಿಕೆ ಮಾಡದೆ ಉಳಿದುಕೊಂಡಿರುವ ಸುಮಾರು 3,200 ಎಕರೆ ಅಥವಾ ಅದಕ್ಕಿಂತ ಹೆಚ್ಚು ಭೂ ಭಾಗದಲ್ಲಿ ಕೈಗಾರಿಕಾ ಕಾರಿಡಾರ್ ಇಲ್ಲವೇ ಕೈಗಾರಿಕಾ ಪಾರ್ಕ್ ಸ್ಥಾಪನೆ ಮಾಡುವುದು.
ಆಯ್ಕೆ ಎರಡು: ಒಂದು ವೇಳೆ ಈ 3,200 ಎಕರೆ ಪ್ರದೇಶದ ಭೂಗರ್ಭದಲ್ಲಿ ಚಿನ್ನದ ನಿಕ್ಷೇಪವೇನಾದರೂ ಇದ್ದರೆ ಮತ್ತೆ ಗಣಿಗಾರಿಕೆ ಆರಂಭಿಸುವುದು.
ಈ ಎರಡೂ ಆಯ್ಕೆಗಳನ್ನು ಮುಂದಿಟ್ಟುಕೊಂಡು ಕೆಜಿಎಫ್‌ನಲ್ಲಿ ಕೆಲ ಕೆಲಸಗಳು ಆಗುತ್ತಿದ್ದು, ಅದಕ್ಕೆ ರಾಜ್ಯದವರೇ ಆದ ಕೇಂದ್ರ ಗಣಿ ಸಚಿವ ಪ್ರಹ್ಲಾದ ಜೋಶಿ ಹಾಗೂ ಕೋಲಾರದ ಲೋಕಸಭೆ ಸದಸ್ಯ ಮುನಿಸ್ವಾಮಿ ಉತ್ಸಾಹದಿಂದ ಓಡಾಡುತ್ತಿದ್ದಾರೆ. ಅದೃಷ್ಟಕ್ಕೇನಾದರೂ ಚಿನ್ನದ ನಿಕ್ಷೇಪ ಸಿಕ್ಕರೆ ಆ ಪ್ರದೇಶದಲ್ಲಿ ಪುನಾ ಗಣಿಗಾರಿಕೆ ಆರಂಭವಾಗಬಹುದು. ಈ ನಿರೀಕ್ಷೆಯಲ್ಲಿ ಜನರ ಜತೆಗೆ ಹಳೆಗಣಿಗಳ ಕಾರ್ಮಿಕರಿದ್ದರೆ, ಮುನಿಸ್ವಾಮಿ ಅವರೂ ಸೇರಿ ಅನೇಕ ರಾಜಕೀಯ ಮುಖಂಡರು ಗಣಿಗಾರಿಕೆ ಮತ್ತೆ ಶುರುವೇ ಆಗಲಿದೆ ಎನ್ನುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲ ಮಾಧ್ಯಮಗಳಲ್ಲೂ ಅವರು ಹೇಳಿರುವ ವಿಷಯಗಳಷ್ಟೇ ವರದಿಯಾಗುತ್ತಿವೆ. ಹೀಗಾಗಿ ಆ ಮಾಜಿ ʼಮಿನಿ ಇಂಗ್ಲೆಂಡ್ʼ ಮೊಗದಲ್ಲಿ ಮಂದಹಾಸ ಮೂಡಿದೆ.
ಹಾಗಾದರೆ, ಕೆಜಿಎಫ್‌ನಲ್ಲಿ ನಡೆಯುತ್ತಿರವ ನೈಜ ಪ್ರಕ್ರಿಯೆಗಳಾದರೂ ಏನು? ವಸ್ತುನಿಷ್ಠವಾಗಿ ಅಲ್ಲಿ ಏನೇನು ನಡೆಯುತ್ತಿದೆ? ಅಲ್ಲಿ ಮತ್ತೆ ಗಣಿಗಾರಿಕೆ ಶುರುವಾಗುತ್ತಾ? ಇಲ್ಲವಾ? ಅಥವಾ ಇಂಡಸ್ಟ್ರಿಯಲ್ ಪಾರ್ಕ್ ಬರುತ್ತಾ? ಅಥವಾ ಅದೂ ಇಲ್ಲವಾ? ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಎಲ್ಲ ಅಂತೆ-ಕಂತೆಗಳ ಬೆನ್ಹತ್ತಿದ ಸಿಕೆನ್ಯೂಸ್ ನೌ ಕೆಲ ಮಹತ್ತ್ವದ ಅಂಶಗಳನ್ನು ಸಂಗ್ರಹ ಮಾಡಿದ್ದು, ತಜ್ಞರ ಅಭಿಪ್ರಾಯಗಳ ಸಮೇತ ಅವುಗಳನ್ನು ಇಲ್ಲಿ ವಿವರಿಸಿದೆ.
ಆರಂಭವಾಗಿದೆ ಡ್ರಿಲ್ಲಿಂಗ್
ಈಗಾಗಲೇ ಕೇಂದ್ರ ಗಣಿ ಇಲಾಖೆಯ ಸೂಚನೆಯ ಮೇರೆಗೆ ಹಿಂದೆ ಗಣಿಗಾರಿಕೆ ನಡೆಯದ ಜಾಗವೊಂದರಲ್ಲಿ ಡ್ರಿಲ್ಲಿಂಗ್ ಶುರು ಮಾಡಲಾಗಿದೆ. ದೊಡ್ಡಕರಪ್ಪನಹಳ್ಳಿ ಸಮೀಪದ ಬ್ಯಾಟರಾಯನಹಳ್ಳಿ ಬ್ಲಾಕ್‌ನಲ್ಲಿ ಈ ಕೆಲಸ ಆರಂಭವಾಗಿದೆ. ಮಹಾರಾಷ್ಟ್ರದ ನಾಗಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಂಇಸಿಎಲ್ ಸಂಸ್ಥೆಯ ಸೂಚನೆ ಮೇರೆಗೆ ಸುಮಾರು 30ಕ್ಕೂ ಹೆಚ್ಚು ತಜ್ಞರು ಕೆಜಿಎಫ್‌ನಲ್ಲಿ ಡ್ರಿಲ್ಲಿಂಗ್ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಜಾರ್ಖಂಡ್‌ನ ಜೆಮ್‌ಷೆಡ್‌ಪುರದಿಂದ ಅತ್ಯಾಧುನಿಕ ಡ್ರಿಲ್ಲಿಂಗ್ ಯಂತ್ರವನ್ನು ತರಿಸಲಾಗಿದೆ. ಎಂಇಸಿಎಲ್ʼನ ನುರಿತ ತಜ್ಞರೇ ಈ ಕೆಲಸದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು, ಸುಮಾರು 18 ಜಾಗಗಳಲ್ಲಿ ಡ್ರಿಲ್ಲಿಂಗ್ ನಡೆಯಲಿದೆ. ಮೂರು ತಿಂಗಳಲ್ಲಿ ಡ್ರಿಲ್ಲಿಂಗ್ ಕೆಲಸ ಮುಗಿಸಿ ಅಲ್ಲಿ ಹೊರಬೀಳುವ ಮಣ್ಣು, ಕಲ್ಲು ಮತ್ತಿತರೆ ಅಂಶಗಳನ್ನು ಎಂಇಸಿಎಲ್‌ಗೆ ಕಳಿಸಬೇಕು. ಈ ಎಲ್ಲ ಪ್ರಕ್ರಿಯೆಗಳು ನಡೆದು ಅಂತಿಮ ವರದಿ ಬರಲು ಬಹುಶಃ ಆರು ತಿಂಗಳಾದರೂ ಆಗಬಹುದು ಎಂದು ಗಣಿ ತಜ್ಞರು ಹೇಳುತ್ತಿದ್ದಾರೆ.
ಕೆಜಿಎಫ್‌ನಲ್ಲಿ ಚಿನ್ನದ ನಿಕ್ಷೇಪ ಇನ್ನೂ ಇದೆ. ಮತ್ತೆ ಗಣಿಗಾರಿಕೆ ಆರಂಭಿಸಬಹುದು ಎಂದು ಕಳೆದ ಇಪ್ಪತ್ತು ವರ್ಷಗಳಿಂದ ಹೇಳಲಾಗುತ್ತಿತ್ತು. ಈ ಎಲ್ಲ ಊಹಾಪೋಹಗಳ ನಡುವೆಯೇ ಅಗಸ್ಟ್ 28ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು, ರಾಜ್ಯ ಗಣಿ ಮತ್ತು ಕೈಗಾರಿಕೆ ಸಚಿವರು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದ ಪ್ರಹ್ಲಾದ ಜೋಶಿ, ಕೆಜಿಎಫ್‌ನಲ್ಲಿ ನಿಕ್ಷೇಪಗಳಿವೆಯೇ? ಇಲ್ಲವೇ? ಎಂಬುದನ್ನು ಪತ್ತೆ ಹಚ್ಚಲಾಗುವುದು. ಒಂದು ವೇಳೆ ಅಲ್ಲಿ ಖನಿಜ ನಿಕ್ಷೇಪಗಳು ಇಲ್ಲದಿದ್ದರೆ, ಗಣಿಗಾರಿಕೆ ಮಾಡಿಲ್ಲದ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದರು. ಅದರ ಮುಂದುವರಿದ ಭಾಗವಾಗಿ ಈಗ ಅಲ್ಲಿ ಡ್ರಿಲ್ಲಿಂಗ್ ಆಗುತ್ತಿದೆ.
*ಕೆಜಿಎಎಫ್: ಕೆಳಗಿನ ವರದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ..
ಸಂಸದರು ಚಿನ್ನ ಇದೆ ಅಂತಾರೆ!
“ಬಿಜಿಎಂಎಲ್ ವ್ಯಾಪ್ತಿಯ ಗಣಿಗಾರಿಕೆ ಮಾಡಿರದ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇನ್ನೂ ಇದೆ ಎಂಬ ನಂಬಿಕೆ ಇದೆ. ಜತೆಗೆ, ಕೆಜಿಎಫ್ ಪಟ್ಟಣದಲ್ಲಿ ಅಲ್ಲಿ ಬಿದ್ದಿರುವ ಸೈನೇಡ್ ಗುಡ್ಡಗಳಲ್ಲೂ ಅಲ್ಪಸ್ವಲ್ಪ ಚಿನ್ನವಿದೆ. ಅದನ್ನೆಲ್ಲ ತೆಗೆಯಬೇಕಿದೆ. ಹಿಂದೆ ಅವರಿವರು ಚಿನ್ನಕ್ಕಾಗಿ ಗಣಿಗಳಿಗೆ ಹೋಗುತ್ತಿದ್ದರು ಎಂಬುದನ್ನು ಕೇಳಿದ್ದೆವು. ಹೀಗಾಗಿ ಇಲ್ಲಿ ಚಿನ್ನ ಇದೆಯಾ, ಇಲ್ಲವಾ ಎಂಬುದನ್ನು ಪರೀಕ್ಷೆ ಮಾಡಿಸಲು ಕೇಂದ್ರ ಸರಕಾರ ಸೂಚನೆ ನೀಡಿದೆ. ಹಿಂದಿನ ಸರಕಾರಗಳು ಬರೀ ಹೇಳುತ್ತಿದ್ದವು. ನಾವು ಕೆಲಸ ಮಾಡಿ ತೋರಿಸುತ್ತಿದ್ದೇವೆ” ಎನ್ನುತ್ತಾರೆ ಕೋಲಾರದ ಸಂಸದ ಮುನಿಸ್ವಾಮಿ. ಡ್ರಿಲ್ಲಿಂಗ್ ಶುರುವಾದ ದಿನವೇ ಹೀಗೆ ಹೇಳಿದ ಸಂಸದರ ಮಾತುಗಳು ಮತ್ತೆ ಗಣಿಗಾರಿಕೆ ಆರಂಭ ಆಗಿಯೇ ಬಿಡುತ್ತದೆನೋ ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಡ್ರಿಲ್ಲಿಂಗ್ ಜಾಗದಲ್ಲಿ ಸಂಸದ ಮುನಿಸ್ವಾಮಿ.
ತಜ್ಞರು ಹೇಳುವುದೇನು?
ನಿಕ್ಷೇಪ ಪತ್ತೆ ಕಾರ್ಯ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ರಾಜ್ಯದ ಪ್ರಮುಖ ಗಣಿ ತಜ್ಞರು, ಮೇಲೆ ತಿಳಿಸಿದ 3,200 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಞೇಪ ಇರುವುದು ಬಹುತೇಕ ಅನುಮಾನ ಅಥವಾ ಇದ್ದರೂ ತೀರಾ ಕಡಿಮೆ ಪ್ರಮಾಣದಲ್ಲಿ ಇರಬಹುದು ಎಂದಿದ್ದಾರೆ. ಹಾಗಾದರೆ, ಈ ಜಾಗ ಕೈಗಾರಿಕಾ ಪಾರ್ಕ್ ಸ್ಥಾಪನೆಗೆ ಸೂಕ್ತವಾ? ಅಲ್ಲವಾ? ಎಂಬುದರ ಬಗ್ಗೆಯೂ ಅವರು ನಿಖರವಾಗಿ ಮಾತನಾಡಿದ್ದಾರೆ. ಮತ್ತೊಂದೆಡೆ, ಗಣಿ ಪುನಾರಂಭ ಆದರೆ ನಮ್ಮ ಬಾಕಿ ಯಾರು ಪಾವತಿಸುತ್ತಾರೆ? ಕೈಗಾರಿಕಾ ಪಾರ್ಕ್ ಸ್ಥಾಪನೆಯಾದರೆ ನಮ್ಮ ಕಥೆ ಏನು? ಎಂಬ ಪ್ರಶ್ನೆಗಳನ್ನುಗಣಿಗಳಲ್ಲಿ ಕೆಲಸ ಮಾಡಿ ಸೆಟಲ್‌ಮೆಂಟ್‌ಗಾಗಿ ಕಾಯುತ್ತಿರುವ ಕಾರ್ಮಿಕರು ಎತ್ತಿದ್ದಾರೆ.
*ಈ ವರದಿಯ ಮುಂದಿನ ಭಾಗದಲ್ಲಿ ತಜ್ಞರ ಅಭಿಪ್ರಾಯಗಳು ಪ್ರಕಟವಾಗಲಿವೆ. ನಿರೀಕ್ಷಿಸಿ..
*ಕೆಜಿಎಎಫ್ ಕುರಿತ ಕೆಳಗಿನ ವರದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ..