ವಿಕ್ಟೋರಿಯಾ: ಹಿಂದೆ ಫಿಜಿ ದ್ವೀಪ ಹಾಗೂ ಇತರೆ ಕೆಲ ದ್ವೀಪರಾಷ್ಟ್ರಗಳಲ್ಲಿ ಭಾರತೀಯ ಮೂಲದ ವಲಸಿಗರು ರಾಷ್ಟ್ರ ನಾಯಕರಾಗಿ ಹೊರಹೊಮ್ಮಿದ್ದರು. ಇದೀಗ ಆಫ್ರಿಕಾ ಖಂಡಕ್ಕೆ ಪೂರ್ವದಲ್ಲಿರುವ ಹಿಂದೂ ಮಹಾಸಾಗರದಲ್ಲಿ ನಡುಗಡ್ಡೆಯಾಗಿರುವ ಶಿಶೆಲ್ಸ್ ದೇಶಕ್ಕೆ ಭಾರತೀಯ ಮೂಲದವರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ಹೆಸರು ವಾವೆಲ್ ರಾಮ್ ಕಲಾವನ್. ಅವರ ಪೂರ್ವಜರು ಬಿಹಾರದ ಗೋಪಾಲ್‌ಗಂಜ್ ನವರು.
ಇದೇ ಅಕ್ಟೋಬರ್ 26ರಂದು ನಡೆದಿದ್ದ ಚುನಾವಣೆಯಲ್ಲಿ ಕಲಾವನ್ ನೇತೃತ್ವದ ಪಕ್ಷಕ್ಕೆ ಶೇ.54ರಷ್ಟು ಬಹುಮತ ಬಂದು ಅಧಿಕಾರ ಸಿಕ್ಕಿದೆ. 1976ರಿಂದ ಅಂದರೆ; 44 ವರ್ಷಗಳ ನಂತರ ಪ್ರತಿಪಕ್ಷ ನಾಯಕರೊಬ್ಬರು ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಅಂದಹಾಗೆ; ಪಾವಲ್ ಅಲ್ಲಿನ ಆಂಗ್ಲಿಕನ್ ಚರ್ಚಿನ ಮಾಜಿ ಧರ್ಮಗುರು.
ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೂತನ ಅಧ್ಯಕ್ಷ ಕಲಾವನ್ ಅವರಿಗೆ ಶುಭ ಕೋರಿದ್ದಾರೆ. ನಿಮ್ಮ ಅವಧಿಯಲ್ಲಿ ಭಾರತ ಮತ್ತು ಶಿಶೆಲ್ಸ್ ಸಂಬಂಧಗಳು ಮತ್ತಷ್ಟು ಗಾಢವಾಗಲಿ ಎಂಬ ಸಂದೇಶದೊಂದಿಗೆ ಮೋದಿ ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ಈ ದ್ವೀಪ ರಾಷ್ಟಕ್ಕೆ ಪ್ರಧಾನಿ ನರೇಂದ್ರ ಮೋದಿಯೂ ಭೇಟಿ ಕೊಟ್ಟಿದ್ದರು. 2015ರ ಮಾರ್ಚ್ 10 ಮತ್ತು 11ರಂದು ಎರಡು ದಿನಗಳ ಭೇಟಿ ನೀಡಿದ್ದರು. 33 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಶಿಶೆಲ್ಸ್‌ಗೆ ಭೇಟಿ ನೀಡಿದ್ದು ಅದೇ ಪ್ರಥಮವಾಗಿತ್ತು.
ಶಿಶೆಲ್ಸ್ ಎಂಬುದು ಮಾಹೆ ಸೇರಿದಂತೆ ಅನೇಕ ಪುಟ್ಟಪುಟ್ಟ ದ್ವೀಪಗಳಿರುವ ಸ್ವತಂತ್ರ ರಾಷ್ಟ್ರವಾಗಿದ್ದು, ಬ್ರಿಟಿಷ್ ವಸಾಹತುನಿಂದ 1977ರಲ್ಲಿ ಸ್ವಾತಂತ್ರ್ಯ ಪಡೆದಿತ್ತು. ಪೂರ್ವ ಆಫ್ರಿಕಾದ ಈ ದೇಶದ ಅಕ್ಕಪಕ್ಕದಲ್ಲಿ ಇನ್ನೂ ಅನೇಕ ಹೆಸರಾಂತ ದ್ವೀಪ ರಾಷ್ಟ್ರ ಗಳಿವೆ. ಶಿಶೆಲ್ಸ್ ರಾಜಧಾನಿ ವಿಕ್ಟೋರಿಯಾ ನಗರವಾಗಿದ್ದು, ಸುಂದರ ಬೀಚುಗಳು, ಅರಣ್ಯ, ವಿಶೇಷ ವನ್ಯಜೀವಿಗಳಿಂದ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಹೀಗಾಗಿ ಈ ದೇಶಕ್ಕೆ ಪ್ರವಾಸೋದ್ಯಮವೇ ಆದಾಯದ ಮೂಲವಾಗಿದೆ.
2020ರ ಜನಗಣತಿಯಂತೆ ಈ ರಾಷ್ಟ್ರದ ಜನರಲ್ಲಿ ಶೇ.56ರಷ್ಟು ಮಂದಿ ನಗರ ಪ್ರದೇಶದಲ್ಲಿದ್ದಾರೆ. ಭಾರತೀಯರೂ ಸೇರಿ ಅನ್ಯರಾಷ್ಟ್ರ, ಅನ್ಯ ಧರ್ಮೀಯರೂ ಇದ್ದಾರೆ. ಇವರೆಲ್ಲರನ್ನು ಲೆಕ್ಕಕ್ಕೆ ತೆಗೆದುಕೊಂಡರೂ ದೇಶದ ಒಟ್ಟಾರೆ ಜನಸಂಖ್ಯೆ 98,546 ಮಾತ್ರ. ಅದರ ಪ್ರಮಾಣ ಒಂದು ಲಕ್ಷವನ್ನೂ ಮೀರಿಲ್ಲ ಎಂದರೆ ಯಾರಿಗಾದರೂ ಅಚ್ಚರಿಯಾಗಬಹುದು. ವಿಶ್ವ ಜನಸಂಖ್ಯೆಯಲ್ಲಿ ಇದು ಶೇ.0. ಅತಿ ಕಡಿಮೆ ಜನಸಂಖ್ಯೆಯ ದೇಶಗಳಲ್ಲಿ ಇದು ಒಂದು.
ಶಿಶೆಲ್ಸ್ ರಾಜಧಾನಿ ವಿಕ್ಟೋರಿಯಾ ಮತ್ತು ವಿಕ್ಟೋರಿಯಾ ನಗರದ ಕ್ಲಾಕ್ ಟವರ್. ದೇಶದ ವಿವಿಧ ಸುಂದರ ದ್ವೀಪಗಳು.
5ನೇ ಅಧ್ಯಕ್ಷರು
ಕಲಾವನ್ ಅವರು ಶಿಶೆಲ್ಸ್ ದೇಶದ ಐದನೇ ಅಧ್ಯಕ್ಷರು. 1976ರಲ್ಲಿ ಶಿಶೆಲ್ಸ್ ಡೆಮಾಕ್ರಟಿಕ್ ಪಕ್ಷದ ಸರ್ ಜೇಮ್ಸ್ ಮ್ಯಾಂಚೆಮ್ ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರ ನಂತರ, 1977ರಲ್ಲಿ ಅಧಿಕಾರಕ್ಕೆ ಬಂದ ಶಿಶೆಲ್ಸ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಫ್ರಂಟ್‌ನ ಫ್ರಾನ್ಸ್ ಆಲ್ಬರ್ಟ್ ರೆನೆ 2004ರವರೆಗೆ, ಅಂದರೆ; ಬರೋಬ್ಬರಿ 27 ವರ್ಷಗಳ ಕಾಲ ಆಡಳಿತ ನಡೆಸಿದ್ದರು. ಅವರಾದ ಮೇಲೆ 2004ರಿಂದ 2016ರವರೆಗೆ ಶಿಶೆಲ್ಸ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಫ್ರಂಟ್‌ನ ಜೇಮ್ಸ್ ಮಿಶೆಲ್ ಅಧ್ಯಕ್ಷರಾಗಿದ್ದರು. ಇವರು 12 ವರ್ಷ ಅಧಿಕಾರದಲ್ಲಿದ್ದರು. ಇವರಾದ ಮೇಲೆ ಅಧ್ಯಕ್ಷರಾದ ಡೆನಿ ಫಾರೆ ಅವರು ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿಗೆ ಸೇರಿದವರು. ಇವರು 2016ರಿಂದ 2020ರ ಅಕ್ಟೋಬರ್ 26ರವರೆಗೂ ಅಧಿಕಾರದಲ್ಲಿದ್ದರು.
ಇದೀಗ ದೇಶದ 5ನೇ ಅಧ್ಯಕ್ಷರಾಗಿ 26ರಂದೇ ಕಲಾವನ್ ಪ್ರಮಾಣ ಸ್ವೀಕರಿಸಿದ್ದಾರೆ. ಕಲಾವನ್ ಅವರ ಪಕ್ಷ ಶೇಕಡಾವಾರು 54ರಷ್ಟು (35,562) ಮತ ಗಳಿಸಿದ್ದರೆ, ನಿಕಟಪೂರ್ವ ಅಧ್ಯಕ್ಷ ಡೆನಿ ಫಾರೆ ಅವರ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ ಶೇ.43.51ರಷ್ಟು (28,178) ಮತ ಗಳಿಸಿದೆ. ಮತ್ತೊಂದು ಪಕ್ಷವಾದ ಒನ್ ಶಿಶೆಲ್ಸ್ 1.58ರಷ್ಟು (1,021) ಮತ ಗಳಿಸಿದೆ.. ಒಟ್ಟು 64,761 ಮತಗಳು ಚಲಾವಣೆಯಾಗಿವೆ.