ಮೈಸೂರು: ಜಗತ್ತಿನ ಯಾವುದೇ ಮೂಲೆಗಾದರೂ ನೀವು ಹೋಗಿ ಕಲಿಯಿರಿ. ಆದರೆ ನಿಮ್ಮ ಸೇವೆಯನ್ನು ಇಲ್ಲಿನ ಜನತೆಗಾಗಿ ಮೀಸಲಿಡಿ ಎಂದು ಭಾವೀ ವೈದ್ಯರುಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಿವಿಮಾತು ಹೇಳಿದ್ದಾರೆ.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾಮಠದಲ್ಲಿ ಬುಧವಾರ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 11ನೇ ಘಟಿಕೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು; ಹೆಚ್ಚು ಹೆಚ್ಚು ಕಲಿಯಿರಿ, ಎಷ್ಟು ತಿಳಿದುಕೊಂಡರೂ ಅದು ಕಡಿಮೆಯೇ. ವಿದೇಶಕ್ಕೆ ಹೋಗಿ ಬೇಕಾದರೂ ಕಲಿಯಿರಿ. ಆದರೆ ಮರಳಿ ಬಂದು ಇಲ್ಲಿನ ಜನತೆಗೆ ಸೇವೆ ನಿಡುವುದನ್ನು ಮಾತ್ರ ಮರೆಯದಿರಿ. ಜೆಎಸ್ಎಸ್ ಶ್ರೇಷ್ಠ ಶಿಕ್ಷಣ ಸಂಸ್ಥೆ. ಇಲ್ಲಿ ನೀವು ಕಲಿತಿದ್ದೀರಿ, ಸ್ಪೂರ್ತಿಯ ಸೆಲೆ ಇಲ್ಲಿದೆ. ಆ ಸ್ಫೂರ್ತಿಯನ್ನು ನಿಮ್ಮ ಜೊತೆ ಒಯ್ಯಿರಿ ಎಂದರು.
ನಾವಿಂದು ಕೋವಿಡ್ ವಿರುದ್ಧ ಹೋರಾಡುತ್ತಿದ್ದೇವೆ. ಸೋಂಕಿತರ ಚಿಕಿತ್ಸೆ, ತಪಾಸಣೆಗಾಗಿ ಜೆಎಸ್ಎಸ್ ಸಂಸ್ಥೆಯು ಸರಕಾರದ ಜತೆ ಸಹಾಯಕ್ಕೆ ನಿಂತಿತ್ತು. ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ ನಿಮಗಿಲ್ಲಿ ಸಾಧನೆಗೆ ಅವಕಾಶ ಲಭಿಸಿದೆ. ವೈದ್ಯಕೀಯ ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟು ಪದವಿ ಪಡೆದಿದ್ದೀರಿ. ಮೊದಲು ನೀವೆಲ್ಲ ತಮ್ಮ ಜವಾಬ್ದಾರಿ ಏನು ಎಂಬುದನ್ನು ಅರಿಯಬೇಕು. ಈ ಶಿಕ್ಷಣ ಇಲ್ಲಿಗೆ ನಿಲ್ಲಲ್ಲ. ಅದು ಸದಾ ಮುಂದುವರಿಯಲಿದೆ. ಜೀವನದಲ್ಲಿ ಹುಟ್ಟಿನಿಂದ ಸಾಯುವವರೆಗೂ ಕಲಿಯುವುದು ಇದ್ದೇ ಇರುತ್ತದೆ. ಕಲಿಯುವಿಕೆ ನಿರಂತರ ಎಂದರು ಅವರು.
ಸಾರ್ವಜನಿಕರ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಸಮುದಾಯವನ್ನು ಶಿಕ್ಷಣಭರಿತವಾಗಿ ಮಾಡಿ ಅವರಿಗೆ ಜೀವನ ಶೈಲಿಯ ಕುರಿತು ಅರಿವು ಮೂಡಿಸಬೇಕು. ನಿಮ್ಮಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ವೈದ್ಯೋ ನಾರಾಯಣೋ ಹರಿ ಎಂಬ ಮಾತಿದೆ. ವೈದ್ಯರನ್ನು ದೇವರಿಗೆ ಹೋಲಿಕೆ ಮಾಡುತ್ತಾರೆ. ಅಂತಹ ದೇವರುಗಳನ್ನು ಸೃಷ್ಟಿ ಮಾಡಿರತಕ್ಕ ಈ ಸಂಸ್ಥೆಯೇ ನಿಜ ದೇವಾಲಯ ಎಂದು ನಾನು ಭಾವಿಸುತ್ತೇನೆ. ನಡೆದಾಡುವ ದೈವ ಸಂಭೂತರಾಗಿ ಶ್ರೀ ಸ್ವಾಮೀಜಿಯವರ ವಿಶೇಷ ಆಶೀರ್ವಾದ ನಿಮ್ಮ ಇಡೀ ಜೀವನದುದ್ದಕ್ಕೂ ರಕ್ಷಾಕವಚವಾಗಿರಲಿದೆ ಎಂದು ಸಚಿವರು ವೈದ್ಯರಿಗೆ ಹಾರೈಸಿದರು.
ಅನೇಕ ಕಾರ್ಯಕ್ರಮಗಳನ್ನು ಸರಕಾರ ಮಾಡುತ್ತಿದೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣವನ್ನು ಚೆನ್ನಾಗಿ ನಿಭಾಯಿಸುತ್ತಿದ್ದೇವೆ. ಸರಕಾರದ ಜತೆ ಆಧಾರ ಸ್ತಂಭಗಳಾಗಿ ಹಲವು ಸಂಸ್ಥೆಗಳು ನಿಂತಿವೆ. ಕರ್ನಾಟಕ ಕೋವಿಡ್ ನಿಯಂತ್ರಿಸುವಲ್ಲಿ ಸಾಧನೆಗೈದಿದೆ. ಇನ್ನೇನು ದೀಪಾವಳಿ ಸಮೀಪಿಸುತ್ತಿದೆ. ದಸರಾವನ್ನು ಸರಳವಾಗಿ ಆಚರಿಸಿ ಯಶಸ್ವಿಯಾಗಿದ್ದೇವೆ. ಕೋವಿಡ್ ಹೆಚ್ಚಳವಾಗಿಲ್ಲ. ನಮಗೆ ಕೇರಳ ಪಾಠವಾಗಬೇಕು. ತಿಂಗಳ ಹಿಂದೆ ಪ್ರಕರಣ ಹೆಚ್ಚಿತ್ತು. ಆದರೆ ಇಂದು ಪ್ರಕರಣಗಳು ಕಡಿಮೆಯಾಗುತ್ತಿವೆ. ಹಾಗಂತ ನಾವು ಮೈಮರೆಯಬಾರದು ಎಂದು ಅವರು ಎಚ್ಚರಿಸಿದರು.
ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಾನಿಧ್ಯ
ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಾನಿಧ್ಯದಲ್ಲಿ ಪದವಿ ಪ್ರದಾನ ಮಾಡಲಾಗಿದ್ದು ಶ್ರೀಗಳು ಪ್ರತಿಜ್ಞಾವಿಧಿ ಬೋಧಿಸಿದರು. ಒಟ್ಟು 1436 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 52 ವಿದ್ಯಾರ್ಥಿಗಳಿಗೆ ಪದಕ, 42 ವಿದ್ಯಾರ್ಥಿಗಳಿಗೆ ಪಿ.ಎಚ್ಡಿ, 5 ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಪದವಿ ನೀಡಲಾಯಿತು. ಕೊರೋನ ಹಿನ್ನೆಲೆಯಲ್ಲಿ ಪದಕ ಗೆದ್ದ ವಿದ್ಯಾರ್ಥಿಗಳಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.
ಡಾ.ಸಿದ್ದಾರ್ಥ ಸುಬ್ರಹ್ಮಣ್ಯಂ ಜೋಶಿ, ಡಾ.ಕೃಷ್ಣಕುಮಾರ್, ಡಾ.ಅಶ್ವತಿ ಕೆ. ಡಾ.ವಿನುತಾ ಜೆ, ಡಾ.ಸ್ಫೂರ್ತಿರಾಜ್ , ಡಾ.ಡಿ ಹೆಚ್.ಪ್ರವೀಣ್, ಡಾ.ಅನು ಜಾರ್ಜ್ ಟಿ, ಡಾ.ಅಭಿಮನ್ಯು ಚಂದಕ್, ಡಾ.ಸಿ.ಮಯೂರ್, ಡಾ.ಪೂಜಾ ಸೇರಿದಂತೆ ಹಲವರು ಪದಕ ಪಡೆದರು. ವರ್ಚುವಲ್ ಲೈವ್ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು, ಘಟಿಕೋತ್ಸವ ಕಾರ್ಯಕ್ರಮದಲ್ಲಿ ಜೆಎಸ್ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬೆಠಸೂರು ಮಠ್, ಸಮಕುಲಾಧಿಪತಿ ಡಾ.ಬಿ.ಸುರೇಶ್, ಕುಲಪತಿ ಸುರೀಂದರ್ ಸಿಂಗ್ ಭಾಗಿಯಾಗಿದ್ದರು.