- ರಾಜಕಾರಣದಲ್ಲಿ ಅಸಭ್ಯ ಭಾಷೆಗೆ ಜಾಗವುಂಟೆ? ಎಂದು ಕೇಳುವ ಕಾಲವೊಂದಿತ್ತು. ಈಗ ಅಸಭ್ಯ ಭಾಷೆಯದ್ದೇ ವಿಜೃಂಭಣೆ. ನಾಯಕರು ಬಾಯಿ ತೆಗೆದರೆ ಹೊರಡುವ ಶಬ್ದಗಳನ್ನು ಕೇಳಿದರೆ ಹೌಹಾರುವಂತಾಗುತ್ತದೆ. ಸಭ್ಯತೆ ಮತ್ತು ಸಭ್ಯ ಭಾಷೆಯ ದ್ರಷ್ಟ್ರಾರರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವಂಥವರಿಂದ ವರ್ತಮಾನದ ನಾಯಕರು ಕಲಿಯುವಂಥದ್ದು ಬಹಳಷ್ಟಿದೆ. ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಅವರು ಬರೆದಿರುವ ಈ ಲೇಖನ ರಾಜಕಾರಣಿಗಳ ನಾಲಗೆಗೆ ಕಿಂಚಿತ್ತಾದರೂ ಸಭ್ಯತೆಯನ್ನು ಕಲಿಸಲಿ ಎಂಬುದೇ ನಮ್ಮ ಆಶಯ.
ಆಚಾರವಿಲ್ಲದ ನಾಲಿಗೆ/ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ/ ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆ ಬಾಚಿಕೊಂಡಿರುವಂಥ ನಾಲಿಗೆ/ ಚಾಡಿ ಹೇಳಲು ಬೇಡ ನಾಲಿಗೆ/ ನಿನ್ನ ಬೇಡಿಕೊಂಬೆನು ನಾಲಿಗೆ/ ಶ್ರೀರಾಮನ ನಾಮವ ಪಾಡುತಲಿರು ಕಂಡ್ಯ ನಾಲಿಗೆ/_
ಲಂಗುಲಗಾಮಿಲ್ಲದ ಮನುಷ್ಯನ ನಾಲಿಗೆಯ ಅಸಡ್ಡಾಳ ವರ್ತನೆಯ ಕುರಿತು 15ನೇ ಶತಮಾನದಲ್ಲೇ ದಾಸ ಸಾಹಿತ್ಯದ ಪ್ರವರ್ತಕ ಪುರಂದರದಾಸರು ಕೀರ್ತನೆಯ ರೂಪದಲ್ಲಿ ನುಡಿದ ಅಣಿಮುತ್ತುಗಳಿವು. ಆಚಾರ, ವಿಚಾರ ಎರಡನ್ನೂ ಮರೆತ ನಾಲಿಗೆಪರರನ್ನು ದೂಷಿಸಲು ಅದೆಷ್ಟು ಉದ್ದಕ್ಕೆ ಬೇಕಾದರೂ ಚಾಚಬಹುದು ಎಂಬ ಎಚ್ಚರಿಕೆಯನ್ನು ಅವರು ಆಗಲೇ ನೀಡಿದ್ದರು. ಪುರಂದರದಾಸರು ಅದೆಂತಹ ದಾರ್ಶನಿಕರು ಎಂಬುದಕ್ಕೆ ಅವರ ದಾಸ ಸಾಹಿತ್ಯವೇ ಸಾಕ್ಷಿ.
ಪುರಂದರ ದಾಸರು ಅಂದು ನುಡಿದ ಭವಿಷ್ಯವಾಣಿ ಇಂದಿಗೂ ಪ್ರಸ್ತುತ.ದಾರ್ಶನಿಕರ, ದ್ರಷ್ಟಾರರ ನುಡಿಗಳೆಂದರೆ ಹಾಗೆಯೇ ಅಲ್ಲವೆ? ಯುಗಯುಗಗಳು ಮುಗಿದರೂ ಆ ನುಡಿಗಳ ಸತ್ಯಾಸತ್ಯತೆಯ ಪ್ರಖರತೆ ಕುಂದುವುದಿಲ್ಲ. ಜನರಿಗೆ ಅದೊಂದು ಎಚ್ಚರಿಕೆಯ ಕರೆಗಂಟೆಯಾಗಿ, ಮಾರ್ಮಿಕ ಸಂದೇಶವಾಗಿ ಕಿವಿಯಲ್ಲಿ ಅನುರಣಿಸುತ್ತಲೇ ಇರುತ್ತದೆ.
ಆದರೆ ಇಂತಹ ಎಚ್ಚರಿಕೆಯ ಸಂದೇಶಗಳಿಗೆ ಪ್ರಸಕ್ತ ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಮೊದಲಾದ ಕ್ಷೇತ್ರಗಳು ಏಕೆ ಕಿವುಡಾಗಿವೆ ಎಂಬ ಜಿಜ್ಞಾಸೆ ಪ್ರಜ್ಞಾವಂತರೆಲ್ಲರಲ್ಲೂ ಕಾಡುವುದು ಸಹಜ. ಒಬ್ಬರು ಇನ್ನೊಬ್ಬರನ್ನು ದೂಷಿಸುವ, ನಿಂದಿಸುವ, ವಾಚಾಮಗೋಚರವಾಗಿ ಟೀಕಿಸುವ ಅಸಹ್ಯ ಪರಿ ಕಂಡಾಗ ಪುರಂದರದಾಸರು ಹೇಳಿದ್ದೇನು? ಇವರೆಲ್ಲ ಮಾಡುತ್ತಿರುವುದೇನು? ಎಂಬ ವಿಷಾದ ಕಾಡುವುದೂ ಅಷ್ಟೇ ಸಹಜ.
ವಿಶೇಷವಾಗಿ ವರ್ತಮಾನದ ರಾಜ್ಯ ರಾಜಕೀಯ ಕ್ಷೇತ್ರದಲ್ಲಿ ನಾಯಕ ಶಿರೋಮಣಿಗಳೆನಿಸಿಕೊಂಡ ಮಹಾಮಹಿಮರು ಒಬ್ಬರು ಇನ್ನೊಬ್ಬರನ್ನು ಆಡಿಕೊಳ್ಳುವ ಪರಿ ಅನಾಗರಿಕರನ್ನೂ ತಲೆ ತಗ್ಗಿಸುವಂತೆ ಮಾಡಿರುವುದು ನಿಜ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಸಂದರ್ಭದಲ್ಲಿ ತಕ್ಷಣ ನಮಗೆಲ್ಲ ನೆನಪಾದರೆ ಅದು ನನ್ನ ತಪ್ಪಲ್ಲ. ಏಕೆಂದರೆ ಪರರ ದೂಷಣೆ ವಿಚಾರದಲ್ಲಿ ಅವರನ್ನು ಮೀರಿಸಬಲ್ಲವರು ಬೇರೆ ಯಾರೂ ಕಂಡುಬರುತ್ತಿಲ್ಲ! ಸಿದ್ದರಾಮಯ್ಯ ಏಕವಚನ ಪ್ರಿಯರು.ಯಾರು ಎಷ್ಟೇ ದೊಡ್ಡವರಾಗಿರಲಿ, ಪ್ರಧಾನಿ, ರಾಷ್ಟ್ರಪತಿಗಳೇ ಆಗಿರಲಿ, ಮಠದ ಸ್ವಾಮೀಜಿಗಳೇ ಆಗಿರಲಿ, ಅವರು ಮಾತ್ರ ಎಂಥವರನ್ನೂ ಸಂಬೋಧಿಸುವುದು ಏಕವಚನದಲ್ಲೇ. ಪ್ರಧಾನಿ ಮೋದಿಯವರನ್ನು ಅವನು, ಇವನು ಎಂದು ಸಲೀಸಾಗಿ ಅವರ ನಾಲಿಗೆ ಉಲಿದುಬಿಡುತ್ತದೆ. ಮೋದಿಯವರ ಬಗ್ಗೆ, ಅವರ ವೈಚಾರಿಕ ನಿಲುವಿನ ಬಗ್ಗೆ, ಅವರ ಆಡಳಿತ ಶೈಲಿಯ ಬಗ್ಗೆ ಸಿದ್ದರಾಮಯ್ಯನವರಿಗೆ ಭಿನ್ನಾಭಿಪ್ರಾಯವಿರಬಹುದು. ಇರಲಿ, ಅದಕ್ಕೆ ಯಾರದ್ದೂ ಅಭ್ಯಂತರವಿಲ್ಲ. ಆದರೆ ಭಿನ್ನಾಭಿಪ್ರಾಯವಿದೆ ಎಂದ ಮಾತ್ರಕ್ಕೆ ಮೋದಿ ಏರಿರುವ ಸ್ಥಾನಕ್ಕೆ ಗೌರವ ನೀಡದೆ ಬೀದಿಯಲ್ಲಿ ಹೋಗುವ ದಾಸಯ್ಯನೆಂಬಂತೆ (ಬೀದಿಯಲ್ಲಿ ಹೋಗುವ ದಾಸಯ್ಯನೂ ಗೌರವಕ್ಕೆ ಪಾತ್ರನೇ, ಆ ಮಾತು ಬೇರೆ!) ಏಕವಚನದಲ್ಲಿ ಕೀಳಾಗಿ ಸಂಬೋಧಿಸುವುದು ಯಾವ ಸಂಸ್ಕೃತಿ? ಪ್ರಧಾನಿ ಮೋದಿಯವರಿಗೇ ಏಕವಚನ ಬಳಸುವ ಸಿದ್ದರಾಮಯ್ಯ ಇನ್ನು ಉಳಿದವರಿಗೆ ಬಹುವಚನ ಪ್ರಯೋಗ ಬಳಸುವ ಮಾತೆಲ್ಲಿ?
ಸಿದ್ದರಾಮಯ್ಯನವರ ಏಕವಚನ ಪ್ರಯೋಗ ಬಳಕೆ ಕಂಡು ರೋಸಿ ಹೋಗಿ ಆಕ್ರೋಶ ವ್ಯಕ್ತಪಡಿಸಿದವರಿಗೆ ಅವರ ರೆಡಿಮೇಡ್ ಉತ್ತರ ಸದಾ ಸಿದ್ಧ. “ಅಯ್ಯೋ, ನಾನು ಗ್ರಾಮೀಣ ಪ್ರದೇಶದಿಂದ ಬಂದವನು. ಎಲ್ಲರನ್ನೂ ನಾ ಕರೆಯೋದೇ ಹಾಗೆ. ದೇವರಿಗೆ ಕೃಷ್ಣ, ರಾಮ, ಅವನು, ಇವನು ಅಂತ ಹೇಳೋಲ್ವೆ? ದೇವರೇನು ಬೇಜಾರು ಮಾಡಿಕೊಂಡಿದ್ದಾನಾ?’ ಒಂದು ಕ್ಷಣ ಈ ಉತ್ತರ ಕೇಳಿದವರು ತಬ್ಬಿಬ್ಬಾಗುವುದು ಸಹಜ. ಆದರೆ ಹೀಗೆ ಏಕವಚನ ಪ್ರಯೋಗವನ್ನು ಸಮರ್ಥಿಸಿಕೊಳ್ಳುವ, ತನ್ನ ಆ ಪ್ರಯೋಗದ ಸಮರ್ಥನೆಗೆ ದೇವರನ್ನೂ ಸುಖಾಸುಮ್ಮನೆ ಎಳೆದುತರುವ ಸಿದ್ದರಾಮಯ್ಯ ಕಾಂಗ್ರೆಸ್ ಮುಖ್ಯಸ್ಥರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗಳಿಗೆ ಮಾತ್ರ “ಸೋನಿಯಾಜೀ, ರಾಹುಲ್‌ಜೀʼ ಎಂದೇಕೆ ಬಹುವಚನ, ಅತಿಶ್ರದ್ಧೆಯ ಸಂಬೋಧನೆ ಮಾಡುತ್ತಾರೆ? “ಏನಮ್ಮಾ ಸೋನಿಯಾ, ನಿನ್ನ ನಾಯಕತ್ವದಲ್ಲಿ ಕಾಂಗ್ರೆಸ್‌ಹೀಗೆ ದೈನೇಸಿಯಾಗಿ ಸೋಲ್ತಿದೆಯಲ್ಲ, ಏನ್ ಸಮಾಚಾರ?’, “ಏನಯ್ಯ ರಾಹುಲ್, ನೀನು ಏನೇ ನಾಟಕ ಆಡಿದ್ರೂ ಕಾಂಗ್ರೆಸ್ ಉದ್ದಾರ ಆಗೋದು ಕಷ್ಟʼ ಎಂದು ಅಪ್ಪಿತಪ್ಪಿಯೂ ಯಾಕೆ ಹೇಳುತ್ತಿಲ್ಲ? ಇತರರಿಗೆ ಅವನು, ಇವನು ಎನ್ನುವ ಸಿದ್ಧರಾಮಯ್ಯ ಸೋನಿಯಾ, ರಾಹುಲ್‌ಗಳಿಗೆ ಸೋನಿಯಾಜೀ, ರಾಹುಲ್‌ಜೀ ಎಂದು ಭಯಭಕ್ತಿಯ ಬಹುವಚನ ಪ್ರಯೋಗ ಮಾಡುವುದೇಕೆ? ಸೋನಿಯಾ, ರಾಹುಲ್ ದೇವರಿಗಿಂತಲೂ ಮಿಗಿಲಾದ ವ್ಯಕ್ತಿಗಳೇ? ಇದೇ ಪ್ರಶ್ನೆಯನ್ನು ಮಾಜಿ ಸಚಿವ, ಒಂದು ಕಾಲದ ಗೆಳೆಯ ಹೆಚ್.ವಿಶ್ವನಾಥ್ ಮುಖಕ್ಕೆ ಹೊಡೆದಂತೆ ಈಗಾಗಲೇ ಕೇಳಿದ್ದಾರೆ. ಆದರೆ ಸಿದ್ದರಾಮಯ್ಯ ಮಾತ್ರ ಈ ವಿಷಯದಲ್ಲಿ ಗಪ್‌ಚಿಪ್!
ಸಿದ್ದರಾಮಯ್ಯ ಒಬ್ಬರೇ ಎಂದಲ್ಲ, ವ್ಯಕ್ತಿಗತ ನಿಂದನೆ, ಕೀಳುಮಟ್ಟದ ಆರೋಪ ಎಸಗುವುದರಲ್ಲಿ ಯಾವ ಪಕ್ಷದ ಮುಖಂಡರೂ ಕಡಿಮೆಯೇನಿಲ್ಲ. ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಸಿ.ಟಿ.ರವಿ, ಈಶ್ವರಪ್ಪ ಮೊದಲಾದ ಪ್ರಮುಖ ರಾಜಕಾರಣಿಗಳು ಸಭ್ಯ ಸಂಸ್ಕೃತಿ ಬೆಳೆಸುವ ಬದಲು ಅಸಭ್ಯ ಸಂಸ್ಕೃತಿ, ಪರಂಪರೆಯನ್ನೇ ಬೆಳೆಸುತ್ತಿದ್ದಾರೆ. ನಾಲಿಗೆ ಕತ್ತರಿಸ್ತೀವಿ, ಕೈಕಾಲು ಕಡಿದುಹಾಕ್ತೀವಿ ಮುಂತಾದ ಭರ್ತ್ಸನೆಯ ಟೀಕೆಗಳು ಬಿಜೆಪಿ ಮುಖಂಡರ ನಾಲಿಗೆಯಿಂದಲೂ ಉದುರಿವೆ. ಕಾಂಗ್ರೆಸ್, ಜೆಡಿಎಸ್‌ನವರ ಸಂಸ್ಕೃತಿಯೇ ಅಂತಹುದು ಎಂದು ಸುಮ್ಮನಿರಬಹುದಾದರೂ ಸಭ್ಯತೆ, ಸಂಸ್ಕೃತಿ, ಸದಾಚಾರಗಳನ್ನು ಸಮಾಜಕ್ಕೆ ಕಲಿಸಬೇಕಾದ ಆರೆಸ್ಸೆಸ್ ಹಿನ್ನೆಲೆಯ ಬಿಜೆಪಿ ಪ್ರಮುಖರು ಆಗಾಗ ನಾಲಿಗೆಯನ್ನು ಹರಿಬಿಡುವುದು ಸಮಂಜಸವೆ? ಲಂಗುಲಗಾಮಿಲ್ಲದಂತೆ ಅವರ ನಾಲಿಗೆಗಳು ಉಲಿಯುವುದೇಕೆ? ಈ ಪ್ರಶ್ನೆ ನನ್ನನ್ನು ಕಾಡಿದಂತೆ ಉಳಿದವರನ್ನೂ ಕಾಡಿರುತ್ತದೆ.
ಇಂದಿರಾ ಗಾಂಧೀಜಿ ಎಸಗಿದ ತಪ್ಪುಗಳು!!
ವಾಜಪೇಯಿ
ಬಿಜೆಪಿಯ ಹುಟ್ಟಿಗೆ ಕಾರಣರಾದ ದೀನದಯಾಳ್ ಜೀ, ಅಟಲ್ ಜೀ, ಜಗನ್ನಾಥರಾವ್ ಜೋಶಿ, ಆಡ್ವಾಣೀ ಜೀ, ಭಾವೂರಾವ್ ದೇಶಪಾಂಡೆ ಮೊದಲಾದ ಮಹನೀಯರು ವೈಚಾರಿಕವಾಗಿ ಎದುರಾಳಿಗಳನ್ನು ಕಟುವಾಗಿ ಟೀಕಿಸುತ್ತಿದ್ದರು. ಆದರೆ ಅವರ ನುಡಿಗಳಲ್ಲಿ ಎಂದಿಗೂ ವೈಯಕ್ತಿಕ ತೇಜೋವಧೆ, ನಿಂದನೆಗಳಿರುತ್ತಿರಲಿಲ್ಲ. ದೀನದಯಾಳ ಜೀ ಮೊದಲ ಬಾರಿಗೆ ಪಾರ್ಲಿಮೆಂಟಿಗೆ ಉತ್ತರ ಪ್ರದೇಶದ ಒಂದು ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ಸೋತ ಬಳಿಕ ಅವರು ಗೆದ್ದ ಅಭ್ಯರ್ಥಿಯ ಬಗ್ಗೆ ʼಆತ ಯೋಗ್ಯ ವ್ಯಕ್ತಿ. ಸಮರ್ಥʼ ಎಂದು ಪ್ರತಿಕ್ರಿಯಿಸಿದರೇ ಹೊರತು ನಿಂದಿಸಲಿಲ್ಲ. ವಾಜಪೇಯಿ ಸೋತಾಗಲೂ ಯಾರನ್ನೂ ನಿಂದಿಸಲಿಲ್ಲ. ತನಗಿಂತ ಕಿರಿಯ ವಯಸ್ಸಿನ ಇಂದಿರಾ ಗಾಂಧಿಯವರನ್ನು ಅವರು “ಇಂದಿರಾಜೀ” ಎಂದೇ ಸಂಬೋಧಿಸುತ್ತಿದ್ದರು. “ಇಂದಿರಾಗಾಂಧಿ ಎಸಗಿದ ತಪ್ಪುಗಳು” ಎಂಬ ಕಾಂಗ್ರೆಸ್ ಭ್ರಷ್ಟಾಚಾರದ ಕುರಿತು ಬಿಜೆಪಿಯಿಂದ ಚಿಕ್ಕ ಕೈಪಿಡಿ ಮುದ್ರಿಸಿದ್ದಾಗ, ವಾಜಪೇಯಿ ಆಕ್ಷೇಪ ವ್ಯಕ್ತಪಡಿಸಿದರು. ಅವರು ಆಕ್ಷೇಪ ವ್ಯಕ್ತಪಡಿಸಿದ್ದು ಇಂದಿರಾ ಗಾಂಧಿ ಎಸಗಿದ ತಪ್ಪುಗಳ ಕುರಿತಲ್ಲ. ಆದರೆ “ಇಂದಿರಾ ಗಾಂಧಿ” ಎಂದು ಕೈಪಿಡಿಯಲ್ಲಿ ಮುದ್ರಿಸಿದ್ದಕ್ಕೆ. “ಇಂದಿರಾ ಗಾಂಧೀಜಿ ಎಸಗಿದ ತಪ್ಪುಗಳು” ಎಂದು ತಿದ್ದಿ ಮುದ್ರಿಸಿದ ಬಳಿಕವೇ ಆ ಕೈಪಿಡಿಯನ್ನು ಸಾರ್ವಜನಿಕರಿಗೆ ವಿತರಿಸಲು ಅವರು ಅನುಮತಿ ನೀಡಿದ್ದರು.
ಆರ್‌ಎಸ್‌ಎಸ್ ಎಂದರೆ ಏನು?
ಜಗನ್ನಾಥರಾವ್ ಜೋಶಿ ರಾಜ್ಯಸಭಾ ಸದಸ್ಯರಾಗಿದ್ದಾಗ ದಿಲ್ಲಿಯ ತಮ್ಮ ಮನೆಯ ಮುಂದೆ “ಜಗನ್ನಾಥರಾವ್ ಜೋಶಿ, ಆರ್‌ಎಸ್‌ಎಸ್” ಎಂಬ ಫಲಕ ಹಾಕಿಕೊಂಡಿದ್ದರು.ಇದು ಸುಭದ್ರಾ ಜೋಶಿ ಮೊದಲಾದ ಆಗಿನ ಕಾಲದ ಕಮ್ಯುನಿಸ್ಟ್ ಮುಖಂಡರನ್ನು ಕೆರಳಿಸಿತು. ಆರ್‌ಎಸ್‌ಎಸ್ ಗಾಂಧೀಜಿಯನ್ನು ಕೊಂದ ಸಂಸ್ಥೆ. ಅಂಥ ಸಂಸ್ಥೆಯ ಹೆಸರನ್ನು ತಮ್ಮ ಫಲಕದಲ್ಲಿ ಅಳವಡಿಸಿ ಜಗನ್ನಾಥರಾವ್ ಜೋಶಿ ದೊಡ್ಡ ಪ್ರಮಾದವೆಸಗಿದ್ದಾರೆಂದು ಕಮ್ಯುನಿಸ್ಟ್ ಮುಖಂಡರು ಬೊಬ್ಬಿರಿದರು. ಜಗನ್ನಾಥರಾವ್ ಈ ಪ್ರಮಾದಕ್ಕಾಗಿ ಕೂಡಲೇ ಕ್ಷಮೆ ಯಾಚಿಸಬೇಕೆಂದೂ ಆಗ್ರಹಿಸಿದರು. ಜಗನ್ನಾಥರಾವ್ ಮಾತ್ರ ತಣ್ಣಗೆ ಉತ್ತರಿಸಿದರು. “ನನ್ನ ಹಸರಿನ ಮುಂದೆ ಆರ್‌ಎಸ್‌ಎಸ್ ಎಂದಿರುವುದು ನಿಜ. ಅದರಲ್ಲೇನು ತಪ್ಪಿದೆ? ಆರ್‌ಎಸ್‌ಎಸ್ ಎಂದರೆ ರಾಜ್ಯಸಭಾ ಸದಸ್ಯ ಎಂದಷ್ಟೇ. ಅಷ್ಟುದ್ದ ಹಾಕುವ ಬದಲು ಆರ್‌ಎಸ್‌ಎಸ್ ಎಂದು ಚಿಕ್ಕದಾಗಿ ಹಾಕಿಕೊಂಡಿರುವೆ”. ಅವರ ಈ ಉತ್ತರದಿಂದ ನಿಬ್ಬೆರಗಾಗುವ ಸರದಿ ಕಮ್ಯುನಿಸ್ಟ್ ಮುಖಂಡರದ್ದಾಗಿತ್ತು! ಜಗನ್ನಾಥರಾಯರು ತಮ್ಮ ಹೆಸರಿನ ಮುಂದೆ ಆರ್‌ಎಸ್‌ಎಸ್ ಎಂದು ನಿಜವಾಗಿಯೂ ಏಕೆ ಹಾಕಿಕೊಂಡಿದ್ದರೆಂಬುದು ಅವರಿಗೆ ಮಾತ್ರ ಗೊತ್ತಿತ್ತು! ಕಮ್ಯುನಿಸ್ಟರ ಆಕ್ರೋಶಕ್ಕೆ ಕೆರಳದೆ ಜಾಣತನದಿಂದ ಉತ್ತರಿಸಿದ ಜಗನ್ನಾಥರಾಯರ ವ್ಯಕ್ತಿತ್ವ ಅಂತಹುದಾಗಿತ್ತು. ಜಗನ್ನಾಥರಾಯರ ಸ್ಥಾನದಲ್ಲಿ ಈಗಿನ “ಹೊಡಿ, ಬಡಿ” ಸಂಸ್ಕೃತಿಯ ಬಿಜೆಪಿ ಮುಖಂಡರಿದ್ದಿದ್ದರೆ “ನಿಮ್ಮ ನಾಲಿಗೆ ಕತ್ತರಿಸ್ತೀನಿ” ಎಂದು ಆರ್ಭಟಿಸುತ್ತಿದ್ದರೇನೋ!
ರಾಜಕೀಯ ಕ್ಷೇತ್ರವೆಂದರೆ ಕೊಳೆತು ನಾರುವ ಕಸದ ತೊಟ್ಟಿ ಎಂಬ ಭಾವನೆ ಸಾರ್ವತ್ರಿಕವಾಗಿ ಹರಡಿದೆ. ಈ ಅಭಿಪ್ರಾಯ ಬದಲಾಗಬೇಕಾದರೆ ರಾಜಕಾರಣಿಗಳ ನಾಲಿಗೆ ಪರಿಶುಭ್ರಗೊಳ್ಳಬೇಕು. ಆಚಾರವಿಲ್ಲದ ನಾಲಿಗೆಯಾಗಬಾರದು. ವಿಚಾರವಿಲ್ಲದೆ ಪರರ ದೂಷಿಸುವ ನಾಲಿಗೆಯಾಗಬಾರದು. ನುಡಿದರೆ ಮುತ್ತಿನ ಹಾರದಂತಿರಬೇಕು. ಮಾತೇ ಮುತ್ತು ಮೊದಲಾದ ಮಾತಿನ ಮಹಿಮೆ ಬಣ್ಣಿಸುವ ನುಡಿಮುತ್ತುಗಳನ್ನು ಕೃತಿಗಿಳಿಸಬೇಕು. “ಎನಗಿಂತ ಕಿರಿಯರಿಲ್ಲ. ಶಿವಶರಣರಿಗಿಂತ ಹಿರಿಯರಿಲ್ಲ” ಎಂಬ ವಿನಯವಂತಿಕೆಯನ್ನು ರೂಢಿಸಿಕೊಳ್ಳಬೇಕು.
ಇದು ಸಾಧ್ಯವೇ?
ದು.ಗು. ಲಕ್ಷ್ಮಣ
ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.