ಆದಿಚುಂಚನಗಿರಿ: ಬರುವ ಸಂಕ್ರಾಂತಿ ದಿನದಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಬುಧವಾರದಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಸಂತ ಸಮಾವೇಶ ನಡೆಯಿತು.
ಈ ಸಮಾವೇಶದಲ್ಲಿ ಉಡುಪಿ ಮಠದ ಹಾಗೂ ಶ್ರೀರಾಮ ಮಂದಿರ ನಿರ್ಮಾಣದ ಟ್ರಸ್ಟಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಬೆಂಗಳೂರಿನ ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ, ಶ್ರೀ ಚನ್ನಸಿದ್ಶಿದವಚಾರ್ಯ ಸ್ವಾಮೀಜಿ, ಅರಕಲಗೂಡು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕೊಡಗಿನ ಶ್ರೀ ರೇಣುಕಾನಂದ ಸ್ವಾಮೀಜಿ, ವೇದಾನಂದ ಕ್ಷೇತ್ರಿಯ ಪ್ರಚಾರಕರಾದ ಸುದೀರ್ ಜೀ, ತಿಪ್ಪೇಸ್ವಾಮಿ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ನಮ್ಮೆಲ್ಲರ ಶ್ರದ್ಧಾಭಕ್ತಿಯಿಂದ ಮಂದಿರ ನಿರ್ಮಾಣ: ನಿರ್ಮಲಾನಂದನಾಥ ಶ್ರೀಗಳು
ರಾಮನನ್ನು ಪೂಜಿಸುವ ಜತೆಗೆ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕಿದೆ. ರಾಮಮಂದಿರ ರಾಮನಿಗಾಗಿ ಅಲ್ಲ, ನಮ್ಮೆಲ್ಲರ ಆಧ್ಯಾತ್ಮಿಕ ಚೈತನ್ಯಕ್ಕಾಗಿ. ಆದಿಚುಂಚನಗಿರಿ ಮತ್ತು ಅಯೋಧ್ಯೆ ನಡುವೆ ಅವಿನಾಭಾವ ಸಂಬಂಧವಿದೆ. ಅಯೋಧ್ಯೆಯಿಂದ ಗೊರಖ್ನಾಥರು ಆದಿಚುಂಚನಗಿರಿಗೆ ಬಂದು ಧ್ಯಾನ ಮಾಡಿ ಮೊದಲು ಮಠ ಸ್ಥಾಪಿಸಿ ನಂತರ ಕೊನೆಯ ಮಠವಾಗಿ ಗೊರಖ್ಪುರದಲ್ಲಿ ನಿರ್ಮಿಸಿದ್ದಾರೆ. ಹಿಂದೆ ನಮ್ಮೆಲ್ಲರ ಹಣ ಬೋಗಕ್ಕಾಗಿ ಅಲ್ಲ, ತ್ಯಾಗಕ್ಕಾಗಿತ್ತು. ರಾಮನ ಆಲಯ ಒಬ್ಬ ವ್ಯಕ್ತಿಯಿಂದ ಆಗುವುದಲ್ಲ, ನಮ್ಮೆಲ್ಲರ ಶ್ರದ್ಧಾಭಕ್ತಿಯಿಂದ ಆಗಬೇಕಿದೆ. ಧರ್ಮ ನಮ್ಮ ಆಸ್ತಿ, ಹಣ ನನ್ನ ಆಸ್ತಿಯಲ್ಲ ಎಂಬುದನ್ನು ಶ್ರೀರಾಮ ವನವಾಸಕ್ಕೆ ಹೋಗುವಾಗ ಹೇಳಿದ್ದರು. ಪ್ರತಿ ಹಳ್ಳಿಯಲ್ಲೂ ರಾಮಮಂದಿರ ನಿರ್ಮಾಣವಾಗಿದ್ದವು. ಆ ಎಲ್ಲಾ ರಾಮಮಂದಿರಗಳ ಪ್ರತಿಫಲ ಇಂದಿನ ರಾಮಮಂದಿರವಾಗಿದೆ. ರಾಮಮಂದಿರ ನಿರ್ಮಾಣ ನಮ್ಮ ಪೂರ್ವಜನ್ಮದ ಪುಣ್ಯ. ಸಂಕ್ರಮಣದಿಂದ ರಾಮಮಂದಿರ ನಿರ್ಮಾಣದ ಅಭಿಯಾನ ಆರಂಭವಾಗಲಿದೆ. ಶ್ರೀಮಠದ ಎಲ್ಲಾ ಶಾಖೆಗಳು ಸಂಪೂರ್ಣವಾಗಿ ಮುಂದೆ ನಿಂತು ನಿಧಿ ಸಮರ್ಪಣಕ್ಕಾಗಿ ಶ್ರಮಿಸಲಿದೆ ಎಂದರು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು.
ರಾಮನ ಆರಾಧನೆಯಿಂದ ರಾಮರಾಜ್ಯ: ಉಡುಪಿ ಶ್ರೀಗಳು
ರಾಮನ ಆರಾಧನೆ ಪ್ರತಿನಿತ್ಯ ನಡೆದರೆ ಮಾತ್ರ ರಾಮರಾಜ್ಯ ನಿರ್ಮಾಣ ಸಾಧ್ಯ. ರಾಮಮಂದಿರ ನಿರ್ಮಾಣ ಕನಸು ನನಸಾಗಿದೆ, ಮುಂದೆ ರಾಮರಾಜ್ಯ ಆರಂಭವಾಗಬೇಕು. ರಾಮಮಂದಿರವನ್ನು ಅದೇ ರೀತಿ ಉಳಿಸಿಕೊಳ್ಳುತ್ತೇವೆ ಎಂಬ ಸಂಕಲ್ಪ ಮಾಡಬೇಕಿದೆ. ಹಿರಿಯರು ಕೊಟ್ಟಿರುವ ಸಂಸ್ಕೃತಿಯ ಪುನರುತ್ಥಾನ ಅಗತ್ಯವಾಗಿ ಆಗಬೇಕಿದೆ. ಕೇವಲ ಅಯೋಧ್ಯೆಯಲ್ಲಿ ಮಾತ್ರ ರಾಮಮಂದಿರವಾಗದೆ ನಮ್ಮ ದೇಹವೇ ರಾಮಮಂದಿರವಾಗಬೇಕಿದೆ. ಈ ದೊಡ್ಡ ಅಭಿಯಾನದಲ್ಲಿ ನಾಡಿನ ಎಲ್ಲಾ ಸಂತರು ಕೈಜೋಡಿಸಿರುವುದು ಶ್ಲಾಘನೀಯ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಇದರ ನೇತೃತ್ವ ವಹಿಸಿ ಮುನ್ನಡೆಸಲಿದ್ದಾರೆ ಎಂದರು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು.
ಮಂದಿರ ನಿರ್ಮಾಣ ಎಲ್ಲರ ಜವಾಬ್ದಾರಿ: ಸುದೀರ್ ಜೀ
ರಾಮಾಯಣ, ಮಹಾಭಾರತ ಭಾರತದ ಜನರಲ್ಲಿ ಪ್ರಭಾವ ಬೀರಿವೆ. ರಾಮನ ಜನ್ಮಸ್ಥಳದಲ್ಲಿ ಮಂದಿರ ಕಟ್ಟುವ ಉದ್ದೇಶ ಇದಾಗಿದೆ. ೭೦ ವರ್ಷಗಳ ಸುದೀರ್ಘ ಕಾಲ ನ್ಯಾಯಾಲಯದಲ್ಲಿದ್ದು ಈಗ ಇತ್ಯರ್ಥ ಇದೆ. ೧೪ ಸಾವಿರ ಚದುರಡಿ ಪ್ರದೇಶ ರಾಮಮಂದಿರಕ್ಕೆ ಸೇರಿದ್ದು ಎಂದು. ಮಂದಿರ ನಿರ್ಮಾಣ ಹಿಂದೂ ಸಮಾಜದ ಜವಬ್ದಾರಿ, ಅಲ್ಲಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು ಸರ್ಕಾರದ ಜವಬ್ದಾರಿ. ನಿಧಿಗೆ ಯಾವುದೇ ಗುರಿ ಇಟ್ಟಿಲ್ಲ, ಆದರೆ ಪ್ರತೀ ಹಿಂದುಗಳ ಮನೆಯನ್ನು ನಾವು ತಲುಪುತ್ತೇವೆ. ೧೧ ಕೋಟಿ ಹಿಂದುಗಳ ಮನೆಗಳನ್ನು ತಲುಪುವ ಗುರಿ ಹೊಂದಿದ್ದೇವೆ. ಜನವರಿ ೧೫ ರಿಂದ ಪೆ.೫ ರವರೆಗೆ ಸಂಗ್ರಹಣಾ ಅಭಿಯಾನ ನಡೆಯಲಿದೆ. ಇದಕ್ಕೆ ಕರ್ನಾಟಕದ ಎಲ್ಕಾ ಸಾಧು ಸಂತರು ಸಹಕರಿಸಬೇಕು. ಹಿಂದೂ ಕಾರ್ಯಕರ್ತರಿಗೆ ಸ್ವಾಮೀಜಿಗಳು ಸಾನಿಧ್ಯ ವಹಿಸಿದರೆ ಆನೆ ಬಲ ಬಂದಂತಾಗುತ್ತದೆ.
ರಾಮಮಂದಿರ ಪ್ರತಿ ಹಿಂದೂವಿನ ಆಸ್ತಿ: ಬೇಲಿ ಮಠದ ಶ್ರೀ
ರಾಮಮಂದಿರದ ಆಸ್ತಿ ಯಾರೊಬ್ಬರ ಆಸ್ತಿಯಲ್ಲ, ಪ್ರತಿಯೊಬ್ಬ ಹಿಂದೂವಿನ ಆಸ್ತಿಯಾಗಿದೆ. ಇತಿಹಾಸ ಮುಂದಿನ ಆತ್ಮವಿಶ್ವಾಸದ ಅಡಿಗಲ್ಲಾಗಲಿದೆ. ವಿಶ್ವೇಶತೀರ್ಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಮಸೀಧಿ ದ್ವಂಸ ನಡೆಸಿದಾಗ ಕೋರ್ಟ್ ವಿಧಿಸಿದ ಜುಲ್ಮಾನೆಯನ್ನು ನನ್ನ ಹೆಸರಿನಲ್ಲಿ ನ್ಯಾಯಲಯಕ್ಕೆ ಕಟ್ಟಲಾಗಿದೆ. ಕೋಟಿ ಕೊಡುವವರಿಗಿಂತ ರೂಪಾಯಿ ಕೊಡುವವರಿಗೆ ಆದ್ಯತೆ ನೀಡಲಾಗಿದೆ. ದೇಶದ ಪ್ರತಿಯೊಬ್ಬ ಹಿಂದುವಿನ ನಂಬಿಕೆ, ಸಂಕಲ್ಪದಿಂದ ಕಟ್ಟಿದ ಅದ್ಬುತ ದೇವಾಲಯ ಎಂಬುದಾಗಲಿ ಎಂದರು ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ.