Ground Report
M Krishnappa Chikkaballapur
ಚಿಕ್ಕಬಳ್ಳಾಪುರ: ಜಿಲ್ಲೆಯ ಬಹುನಿರೀಕ್ಷಿತ ಸರಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಕಾಮಗಾರಿ ಭರದಿಂದ ಸಾಗುತಿದ್ದು 2022ರ ಜೂನ್ ವೇಳೆಗೆ ಉದ್ಘಾಟನೆಯಾಗಲಿದೆ. ಅಲ್ಲದೆ, 2022-23ನೇ ಸಾಲಿನಿಂದಲೇ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯೂ ಆರಂಭವಾಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಕೂಡ ಕಾಲೇಜು ಕಾಮಗಾರಿಯನ್ನು ಪರಿವೇಕ್ಷಣೆ ಮಾಡುತ್ತಿದ್ದು, ನಿಗದಿತ ಕಾಲದೊಳಗೇ ಕಾಮಗಾರಿ ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದ್ದಾರೆ.
ಇನ್ನೊಂದೆಡೆ ಜಿಲ್ಲಾಧಿಕಾರಿ ಆರ್.ಲತಾ ಅವರೂ ವೈದ್ಯಕೀಯ ಕಾಲೇಜಿನ ಕಾಮಗಾರಿಯನ್ನು ನಿಯಮಿವಾಗಿ ಪರಿವೇಕ್ಷಣೆ ಮಾಡುತ್ತಿದ್ದು, ನಿಗಧಿತ ಸಮಯದೊಳಗೆ ಕಾಮಗಾಗಿ ಪೂರ್ಣವಾಗಿ ಕಾಲೇಜು ಆರಂಭವಾಗಲಿದೆ ಎಂದಿದ್ದಾರೆ.
ಯೋಜನೆಯನ್ನು 2022ರ ಜೂನ್ 22ರ ಒಳಗಾಗಿಯೇ ಮುಗಿಸುವ ಡೆಡ್‌ಲೈನ್ ಹಾಕಿಕೊಳ್ಳಲಾಗಿದೆ. ಕಟ್ಟಡ ಕಾಮಗಾರಿಗಳು ಚುರುಕಾಗಿ ನಡೆಯುತ್ತಿವೆ. ಕಾಮಗಾರಿಗಳ ಗುಣಮಟ್ಟದ ಬಗ್ಗೆ ತೀವ್ರ ನಿಗಾ ಇರಿಸಲಾಗಿದೆ. ಇದುವರೆಗೂ ಶೇ.50ರಷ್ಟು ಕಾಮಗಾರಿಗಳು ಪೂರ್ಣವಾಗಿವೆ ಎಂದು ಜಿಲ್ಲಾಧಿಕಾರಿಗಳು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದರು.
ಸಚಿವ ಡಾ.ಸುಧಾಕರ್ ಅವರು ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ಬಂದಾಗಲೆಲ್ಲ ಮೆಡಿಕಲ್ ಕಾಲೇಜು ಕೆಲಸಗಳ ಬಗ್ಗೆ ತಪ್ಪದೇ ಮಾಹಿತಿ ಪಡೆಯುತ್ತಾರೆ. ಅದೃಷ್ಟವಶಾತ್, ಅವರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಗಳನ್ನೇ ಹೊಂದಿರುವುದು, ಸ್ವತಃ ಅವರೂ ವೈದ್ಯರಾಗಿರುವುದು ಇನ್ನಷ್ಟು ಸಹಕಾರಿ ಆಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ನಿಜಕ್ಕೂ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳು ವೇಗಗತಿಯಲ್ಲಿ ಕಾರ್ಯಗತವಾಗುತ್ತಿವೆ. ಅದರಲ್ಲೂ ನಮ್ಮ ಅವಧಿಯಲ್ಲಿ ಮೆಡಿಕಲ್ ಕಾಲೇಜು ಬರುತ್ತಿದೆ ಎಂಬುದು ಇನ್ನಷ್ಟು ಖುಷಿಯ ಸಂಗತಿ. ಜನರಿಗೆ ಉತ್ತಮ ರೀತಿಯಲ್ಲಿ ಆರೋಗ್ಯ ಸೌಲಭ್ಯಗಳು ಲಭ್ಯವಾಗಲಿವೆ.
-ಆರ್.ಲತಾ, ಜಿಲ್ಲಾಧಿಕಾರಿ
600 ಕೋಟಿ ರೂ. ವೆಚ್ಚ
ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಬಳಿ ಇರುವ ಬಂಡಹಳ್ಳಿಯ ಬಳಿ ವೈದ್ಯ ಕಾಲೇಜನ್ನು ಕಾರ್ಯಗತ ಮಾಡಲಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 44ರ ಪಕ್ಕದಲ್ಲಿಯೇ ಜಿಲ್ಲೆಯ ಈ ಕನಸಿನ ಯೋಜನೆ ಸಾಕಾರವಾಗುತ್ತಿದೆ.
ಸಚಿವ ಡಾ.ಕೆ.ಸುಧಾಕರ್ ಅವರ ಮಹತ್ವಾಕಾಂಕ್ಷೆಯ ಯೋಜನೆ ಈ ವೈದ್ಯಕೀಯ ಕಾಲೇಜು. ಕಾಲೇಜಿನ ಜತೆಗೆ ಸುಸಜ್ಜಿತ ಆಸ್ಪತ್ರೆಯೂ ಬರುವುದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು, ಶಿಡ್ಲಘಟ್ಟ, ಚಿಂತಾಮಣಿ ತಾಲ್ಲೂಕುಗಳ ಜನರಿಗೆ ಮಾತ್ರವಲ್ಲದೆ, ಪಕ್ಕದ ಕೋಲಾರ ಜಿಲ್ಲೆಜನರಿಗೂ ಉಪಯೋಗವಾಗಲಿದೆ.
ಪೂರಕ ಮೂಲಸೌಕರ್ಯಗಳು
ವೈದ್ಯಕೀಯ ಕಾಲೇಜಿನ ಕಟ್ಟಡದ ಜತೆಜತೆಯಲ್ಲೇ 300 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆ ಕೂಡ ತಲೆಎತ್ತುತ್ತಿದೆ. ಹಾಗೆಯೇ; ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವಸತಿ ಗೃಹಗಳೂ ಸೇರಿದಂತೆ ಕಾಲೇಜಿಗೆ ಅತ್ಯಗತ್ಯವಾಗಿ ಬೇಕಿರುವ ಪೂರಕ ಮೂಲಸೌಕರ್ಯಗಳನ್ನು ಕರಾರುವಕ್ಕಾಗಿ ರೂಪಿಸಲಾಗುತ್ತಿದೆ.
ಕಾಲೇಜಿನ ಕಟ್ಟಡದ ಕಾಮಗಾರಿ ಕೆಲಸವನ್ನು 2020ರ ಫೆಬ್ರವರಿಯಲ್ಲೇ ಪ್ರಾರಂಭಿಸಲಾಗಿತ್ತಲ್ಲದೆ, ಮುಂದಿನ ಜೂನ್ ತಿಂಗಳ ಹೊತ್ತಿಗೆ ಕಟ್ಟಡ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡು ಉದ್ಘಾಟನೆಯಾಗುವ ನಿರೀಕ್ಷೆ ಕಾಣುತ್ತಿದೆ. ನಿರೀಕ್ಷೆಯಂತೆ ಎಲ್ಲವೂ ನಡೆದರೆ ಕೇವಲ ಮೂರೇ ವರ್ಷಗಳಲ್ಲಿ ಮೆಡಿಕಲ್ ಕಾಲೇಜು ಕಾರ್ಯಾರಂಭವಾಗಲಿದೆ.
ಸಚಿವ ಸುಧಾಕರ್ ಅವರೇ ತಿಳಿಸಿದಂತೆ; “ವೈದ್ಯಕೀಯ ಕಾಲೇಜಿನ ಜತೆಗೆ ಹೆಲ್ತ್‌ಸಿಟಿ ನಿರ್ಮಾಣ ಮಾಡುವ ಪ್ರಸ್ತಾವನೆ ಇದ್ದು, ಮುಂದಿನ ಕೆಲ ದಿನಗಳಲ್ಲಿಯೇ ಅದೂ ಸಾಕಾರವಾಗುವ ನಿರೀಕ್ಷೆ ಇದೆ. ಬಹುಶಃ ಹೆಲ್ತ್‌ಸಿಟಿಯೂ ವೈದ್ಯಕೀಯ ಕಾಲೇಜಿನ ಹತ್ತಿರವೇ ಬರುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.
ಜನರಿಗೆ ಹೆಚ್ಚು ಅನುಕೂಲ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆಯನ್ನು ಹೊರತುಪಡಿಸಿದರೆ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಉತ್ತಮ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಆರ್ಥಿಕವಾಗಿ ಚೆನ್ನಾಗಿರುವ ಜನರು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಆರ್ಥಿಕ ದುರ್ಬಲರು ಗುಣಮಟ್ಟದ ಆರೋಗ್ಯ ಸೇವೆ ಸಿಗದೇ ಒದ್ದಾಡುತ್ತಿದ್ದಾರೆ.
ಇನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು ಘಟಿಸಿದರೆ ಗಡಿ ಪಟ್ಟಣವಾದ ಬಾಗೇಪಲ್ಲಿಯಿಂದ ದೇವನಹಳ್ಳಿಯವರೆಗೂ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯನ್ನು ಹೊರತುಪಡಿಸಿದರೆ ಸುಸಜ್ಜಿತವಾದ ಯಾವುದೇ ಆಸ್ಪತ್ರೆ ಇಲ್ಲ. ಬಾಗೇಪಲ್ಲಿ ಬಳಿ ಏನಾದರೂ ಅಂಥಹ ತುರ್ತು ಘಟನೆಗಳೇನಾದರೂ ಸಂಭವಿಸಿದರೆ ಗಾಯಾಳುಗಳನ್ನು 100 ಕಿ.ಮೀ ದೂರದ ಬೆಂಗಳೂರಿಗೇ ಕರೆದೊಯ್ಯಬೇಕು. ಹೀಗಾಗಿ ಪೆರೇಸಂದ್ರದ ಬಳಿ ಕಾರ್ಯಗತವಾಗುತ್ತಿರುವ ವೈದ್ಯಕೀಯ ಕಾಲೇಜು ಇವೆಲ್ಲ ಸಮಸ್ಯೆಗಳನ್ನೂ ನೀಗಿಸಲಿದೆ ಎಂದು ಜನರು ಹೇಳುವ ಮಾತು.
- ವೈದ್ಯ ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿಯ ದೃಶ್ಯ.