M Krishnappa Chikkaballapur
ಚಿಕ್ಕಬಳ್ಳಾಪುರ: ಶಿಕ್ಷಕರು ಇರಲಿ ಅಥವಾ ಇಲಾಖೆಯ ಯಾವುದೇ ಸಮಸ್ಯೆ ಇದ್ದರೂ ಒಂದು ಎಸ್ಸೆಮ್ಮೆಸ್ ಮಾಡಿದರೂ ಸಾಕು. ತಕ್ಷಣ ಆ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಉಪ ನಿರ್ದೇಶಕ (ಆಡಳಿತ) ಕೆ.ಎಂ.ಜಯರಾಮರೆಡ್ಡಿ ಭರವಸೆ ನೀಡಿದ್ದಾರೆ.
ಇದುವರೆಗೆ ಈ ಹುದ್ದೆಯಲ್ಲಿದ್ದ ಹೆಚ್.ಜಿ.ನಾಗೇಶ್ ಅವರಿಂದ ತೆರವಾದ ಸ್ಥಾನಕ್ಕೆ ಕೋಲಾರ ಡಯಟ್ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಂ.ಜಯರಾಮರೆಡ್ಡಿ ಅವರನ್ನು ನೂತನ ಡಿಡಿಪಿಐ ಆಗಿ ವರ್ಗಾವಣೆ ಮಾಡಲಾಗಿದೆ. ಹಾಗೆಯೇ; ಹೆಚ್.ಜಿ.ನಾಗೇಶ್ ಅವರು ಕೋಲಾರ ಡಯಟ್ ಪ್ರಾಂಶುಪಾಲರಾಗಿ ವರ್ಗಾವಣೆಯಾಗಿದ್ದಾರೆ. ಗುರುವಾರ ಜಯರಾಮ ರೆಡ್ಡಿ ಅವರು ಅಧಿಕಾರ ವಹಿಸಿಕೊಂಡರು.
- ಅಧಿಕಾರ ವಹಿಸಿಕೊಂಡ ನಂತರ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಅವರು ವಿವಿಧ ವಿಚಾರಗಳನ್ನು ಹಂಚಿಕೊಂಡರು. ಅವು ಹೀಗಿವೆ;
*ಜಿಲ್ಲೆಯಲ್ಲಿ ಶೈಕ್ಷಣಕ ಪ್ರಗತಿಯ ಜತೆಗೆ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿ ಕೆಲಸ ಮಾಡುವೆ. ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ವೃದ್ಧಿಸಲು ಶ್ರಮಿಸುವೆ.
*ಕೊರೋನ ಕಾಡಿದ ನಮಗೆ ಶಿಕ್ಷಣದಲ್ಲೂ ಸಾಕಷ್ಟು ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಆದರೂ ಇರುವ ಕಾಲಾವಕಾಶದಲ್ಲಿ ಶ್ರದ್ಧೆ ನಿಷ್ಠೆಯಿಂದ ಕಲಿಕೆಯಲ್ಲಿ ಮಕ್ಕಳು ನಿರತರಾಗುವಂತೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಇರುವ ಎಲ್ಲಾ ಉಪಕ್ರಮಗಳನ್ನು ಬಳಸಿ ಪಠ್ಯ ಚಟುವಟಿಕೆಯ ಮೂಲಕ ಶಿಕ್ಷಣ ನೀಡಲು ಎಲ್ಲಾ ಶಿಕ್ಷಕರು ತೊಡಗಿಸಿಕೊಳ್ಳಬೇಕು. ಶೈಕ್ಷಣಿಕ ಅವಧಿಯನ್ನು ವ್ಯರ್ಥ ಮಾಡದೇ ಮಕ್ಕಳ ಶಿಕ್ಷಣ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು.
*ಶಿಕ್ಷಕರು ಕೂಡ ತಮ್ಮ ಶೈಕ್ಷಣಿಕ ಅವಧಿ ಮತ್ತು ಇಲಾಖೆಯಿಂದ ತಮಗೆ ಆಗಬೇಕಿರುವ ಕೆಲಸ ಕಾರ್ಯದ ನಿಮಿತ್ತ ಶಾಲಾವಧಿ ಪೂರೈಸಿದ ನಂತರ ನೇರವಾಗಿ ಕಚೇರಿಯಲ್ಲಿ ಭೇಟಿ ಮಾಡಿ ಕುಂದುಕೊರತೆ ನೀಗಿಸಿಕೊಳ್ಳಬಹುದು. ಶಾಲಾವಧಿ ಹೊರತುಪಡಿಸಿ ಇನ್ನುಳಿದ ಯಾವುದೇ ಸಮಯದಲ್ಲಿ ಭೇಟಿ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದು.
*ಮಕ್ಕಳು ಸಹಾ ಪರಿಕ್ಷೆಯ ದೃಷ್ಟಿಕೋನದಲ್ಲಿ ಆತಂಕ ಇಟ್ಟುಕೊಳ್ಳದೆ ಪರೀಕ್ಷೆ ಎದುರಿಸಬೇಕು ಪೊಷಕರು ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಶಾಲಾ ಶಿಕ್ಷಕರೊಂದಿಗೆ ಸಮನ್ವಯ ಕಾಪಾಡಿಕೊಳ್ಳಬೇಕಲ್ಲದೆ ಮಕ್ಕಳ ಪ್ರಗತಿಗೆ ಶಿಕ್ಷಕರೊಂದಿಗೆ ಸಹಕರಿಸಬೇಕು.
ಶಿಕ್ಷಕರಿಂದ ಸ್ವಾಗತ, ಗೌರವ
ಇದೇ ವೇಳೆ ಕೆ.ಎಂ.ಜಯರಾಮರೆಡ್ಡಿ ಅವರನ್ನು ಶಿಕ್ಷಣ ಇಲಾಖೆಯ ಶಿಕ್ಷಕ ವೃಂದ ಸ್ವಾಗತಿಸಿ ಶುಭಕೋರಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ, ಕಚೇರಿ ವ್ಯವಸ್ಥಾಪಕ ಕೆ.ಎಸ್.ನಟರಾಜ್, ಅಧೀಕ್ಷಕರಾದ ಮುನಿರಾಜು, ಶ್ರೀನಾಥ್, ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಆರ್,ವೆಂಕಟರಮಣರೆಡ್ಡಿ, ಕೃಷ್ಣಮೂರ್ತಿ, ಶಿಕ್ಷಣ ಇಲಾಖೆ ಶಿಕ್ಷಕ ವೃಂದದ ಪ್ರಮುಖರಾದ ದೈಹಿಕ ಶಿಕ್ಷಣ ಶಿಕ್ಷಕ ವಿ.ನಾರಾಯಣಪ್ಪ ಸೇರಿ ಇನ್ನಿತರ ಶಿಕ್ಷಕ ವೃಂದದವರು ರೆಡ್ಡಿ ಅವರನ್ನು ಗೌರವಿಸಿ ಸನ್ಮಾನಿಸಿದರು.
ಈ ವೇಳೆ ಜಿಲ್ಲಾ ಉಪ ಸಮನ್ವಯಾಧಿಕಾರಿ ಮಂಜಣ್ಣ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮುನಿರಾಜು, ಪ್ರೌಢಶಾಲೆ ಮುಖ್ಯ ಶಿಕ್ಷಕ ಉಸ್ಮಾನ್‍ಸಾಬ್, ನಿವೃತ್ತ ಮುಖ್ಯ ಶಿಕ್ಷಕ ಚನ್ನಮಲ್ಲಿಕಾರ್ಜುನಯ್ಯ, ಶಿಕ್ಷಕರಾದ ಲಕ್ಷ್ಮಣ್, ಕ್ಷೇತ್ರ ಶಿಕ್ಷಣ ಇಲಾಖೆಯ ತೇಜ್‍ದೀಪು, ಕಮಲಮ್ಮ ಆನಂದ್ ನವೀನ್‍ಕುಮಾರ್ ಇದ್ದರು.