ಮುಳಬಾಗಿಲು: ಕನ್ನಡ ಆಧುನಿಕ ಸಾಹಿತ್ಯದ ಸರ್ವಜ್ಞ ಡಿ.ವಿ.ಗುಂಡಪ್ಪ (ಡಿವಿಜಿ) ಅವರ 134ನೇ ಜನ್ಮದಿನದ ಕಳೆದ 9 ದಿನಗಳಾದ ನಂತರ ರಾಜ್ಯ ಸರಕಾರ ಒಂದು ಸಾರ್ಥಕ ಕೆಲಸಕ್ಕೆ ಮುಂದಾಗಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ಡಿವಿಜಿ ಅವರು ಬದುಕಿಬಾಳಿದ ಮನೆ ಶಾಲೆಯಾಗಿ ನಡೆಯುತ್ತಿದ್ದು, ಅದನ್ನು ಆಧುನೀಕರಣಗೊಳಿಸಿ ಶಾಲೆ ಮತ್ತು ಸ್ಮಾರಕವನ್ನು ನಿರ್ಮಾಣ ಮಾಡಲು ಮುಂದೆ ಬಂದಿರುವ ಖಾಸಗಿ ಸಂಸ್ಥೆಯೊಂದಕ್ಕೆ ಎದುರಾಗಿದ್ದ ಅಡ್ಡಿಗಳನ್ನು ಪ್ರಾಥಮಿಕ ಮತ್ತು ಪ್ರೌಢಕ್ಷಣ ಖಾತೆ ಸಚಿವ ಎಸ್.ಸುರೇಶ್‌ಕುಮಾರ್ ಅವರು ನಿವಾರಿಸಿದ್ದಾರೆ.
ಒನ್ ಸ್ಕೂಲ್ ಅಟ್ ಎ ಟೈಮ್ (ಓಸಾಟ್) ಅನ್ನುವ ಖಾಸಗಿ ಸಂಸ್ಥೆ ಈ ಶಾಲೆಯನ್ನು ಪುನರುದ್ಧಾರ ಮಾಡಲು ಮುಂದೆ ಬಂದಿದೆ. ಆದರೆ, ಇದಕ್ಕೆ ಕೆಲ ಅಡ್ಡಿಗಳು ಎದುರಾಗಿದ್ದವು, ಶಾಲೆಯ ಜತೆಗೆ ಡಿವಿಜಿ ಸ್ಮಾರಕವೂ ನಿರ್ಮಾಣವಾಗಲಿ ಎಂದು ಕೆಲವರು ಪ್ರತಿಪಾದಿಸಿದ್ದರು. ಹಳೆಯದಾದ ಕಟ್ಟಡವು ಶಿಥಿಲವಾಗುತ್ತಿದೆ. ಜತೆಗೆ ಸ್ಮಾರಕ ಮಾಡುವ ಬಗ್ಗೆಯೂ ಗೊಂದಲಗಳಿದ್ದವು.
ಈ ಹಿನ್ನೆಲೆಯಲ್ಲಿ ಗುರುವಾರ ಮುಳಬಾಗಿಲು ಪಟ್ಟಣದಲ್ಲಿರುವ ʼಸರಕಾರಿ ಕನ್ನಡ ಡಿವಿಜಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆʼಗೆ ಭೇಟಿ ನೀಡಿದ ಸಚಿವರು; ಸ್ಥಳೀಯರು, ಪಟ್ಟಣದ ಪ್ರಮುಖರು, ಶಿಕ್ಷಕರು, ಜಿಲ್ಲೆ ಮತ್ತು ತಾಲ್ಲೂಕಿನ ಅಧಿಕಾರಿಗಳ ಜತೆ ಮಾತನಾಡಿದ ಉಂಟಾಗಿದ್ದ ಗೊಂದಲವನ್ನು ತಿಳಿಗೊಳಿಸಿದರು.
ಮಾತುಕತೆಯ ನಂತರ ಸುರೇಶ್‌ಕುಮಾರ್ ಅವರು ಹೇಳಿದ್ದಿಷ್ಟು;
“ಒನ್ ಸ್ಕೂಲ್ ಅಟ್ ಎ ಟೈಮ್ ಅನ್ನುವ ಖಾಸಗಿ ಸಂಸ್ಥೆ ಸರಕಾರಿ ಶಾಲೆಗಳನ್ನು ಮರು ನಿರ್ಮಾಣ ಮಾಡಿ ಜೀರ್ಣೋದ್ಧಾರ ಮಾಡುವ ಕೆಲಸ ಮಾಡುತ್ತಿದೆ. ಈವರೆಗೆ 41 ಶಾಲೆಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದೆ. ಹತ್ತು ದಿನಗಳ ಹಿಂದೆ ಮಾಲೂರಿನಲ್ಲಿ ಈ ಸಂಸ್ಥೆ ಕಟ್ಟಿದ್ದ ಶಾಲೆಯನ್ನು ನಾನೇ ಲೋಕಾರ್ಪಣೆ ಮಾಡಿದ್ದೆ.”
ಆಗ ಸಂಸ್ಥೆಯ ಪ್ರತಿನಿಧಿಗಳು ಕನ್ನಡ ಪ್ರಾತಃಸ್ಮರಣೀಯರೂ ಆದ ಮುಳಬಾಗಿಲಿನಲ್ಲಿರುವ ಡಿವಿಜಿ ಅವರ ಮನೆ ಈಗ ಶಾಲೆಯಾಗಿದೆ. ಅದು ಶಿಥಿಲವಾಗುತ್ತಿದೆ. ಅದನ್ನು ಮರು ನಿರ್ಮಾಣ ಮಾಡುವ ಉದ್ದೇಶ ನಮಗಿದೆ. ಆದರೆ ಅಲ್ಲಿ ಕೆಲ ಸಮಸ್ಯೆಗಳಿವೆ. ಮನೆ-ಶಾಲೆ ಇದೆ. ಹೇಗೆ ಮಾಡುವುದು ಅಂತ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದರು. ಆಯಿತು, ನಾನೇ ಬರ್ತೀನಿ. ಊರಿನ ಪ್ರಮುಖರ ಜತೆ ಮಾತಾಡ್ತೀನಿ ಎಂದು ಹೇಳಿದ್ದೆ. ಅದರಂತೆ ಇವತ್ತು ಬಂದು ಎಲ್ಲರ ಜತೆ ಮಾತನಾಡಿದ್ದೇನೆ. ಶಾಲೆಯ ಒಂದು ಭಾಗವನ್ನು ಭಾವನಾತ್ಮಕ ಕಾರಣದಿಂದ ಸ್ಮಾರಕವನ್ನಾಗಿ ಉಳಿಸಿಕೊಂಡು ಉಳಿದ ಭಾಗದಲ್ಲಿ ಶಾಲೆಯನ್ನು ಮರು ನಿರ್ಮಾಣ ಮಾಡಲು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ”
“ಇಲ್ಲಿ ಡಿವಿಜಿ ಸ್ಮಾರಕದ ಜತೆಗೆ ಅವರ ಪ್ರತಿಮೆಯನ್ನು ಮಾಡಲಾಗುವುದು. ಇದೊಂದು ಉತ್ತಮ ಕಾರ್ಯವಾಗಿದ್ದು, ಎಲ್ಲರ ಸಹಕಾರ ಅಗತ್ಯವಿದೆ. ಪ್ರಸ್ತುತ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿ ಇರುವುದರಿಂದ ಅದನ್ನು ಮರು ನಿರ್ಮಾಣ ಮಾಡುವುದು ಒಳ್ಳೆಯ ಕೆಲಸ.”
ದೇಶಾದ್ಯಂತ 41 ಶಾಲೆಗಳ ನಿರ್ಮಾಣ
ಒನ್ ಸ್ಕೂಲ್ ಅಟ್ ಎ ಟೈಮ್ ದೇಶಾದ್ಯಂತ ಈ ಸಂಸ್ಥೆ 41ಕ್ಕೂ ಹೆಚ್ಚು ಶಾಲೆಗಳನ್ನು ಮರು ನಿರ್ಮಾಣ ಮಾಡಿದ್ದು, ಆ ಪೈಕಿ ರಾಜ್ಯದಲ್ಲಿ 28 ಶಾಲೆಗಳನ್ನು ನಿರ್ಮಾಣ ಮಾಡಿದೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಮಣಿಪುರದಲ್ಲೂ ಶಾಲೆಗಳನ್ನು ಕಟ್ಟಿದ್ದೇವೆ. ಕೋಲಾರ ಜಿಲ್ಲೆಯಲ್ಲಿ 5 ಶಾಲೆಗಳನ್ನು ನಿರ್ಮಿಸಿದೆ. ಇನ್ನೆರಡು ವರ್ಷಗಳಲ್ಲಿ ಈ ಯೋಜನೆ ಮುಗಿಯಲಿದೆ ಎಂದು ಸಂಸ್ಥೆ ಪ್ರತಿನಿಧಿಯೊಬ್ಬರು ತಿಳಿಸಿದರು.
ತಮ್ಮ ಹಿರಿಯರು, ಪತ್ನಿ ಭಾಗೀರಥಮ್ಮ ಅವರೊಂದಿಗೆ ಬಾಳಿ ಬದುಕಿದ ಈ ಮನೆಯನ್ನು ಡಿವಿಜಿ ಅವರು 1928ರಲ್ಲಿ ಶಾಲೆಗೆ ದಾನ ಮಾಡಿದ್ದರು. ಈ ಅಪರೂಪ ತಾಣವನ್ನು ಡಿವಿಜಿ ಅವರ ಹೆಸರಿನಲ್ಲಿಯೇ ಚಿರಸ್ಥಾಯಿಗೊಳಿಸುವ ಪ್ರಯತ್ನ ಈಗ ನಡೆದಿದೆ.
- (ಡಿವಿಜಿ ಕಲಾಕೃತಿ ಕೃಪೆ: ಮೋಹನ್ ವೆರ್ಣೀಕರ್)
- ಡಿವಿಜಿ ಅವರ ಕುರಿತ ಲೇಖನ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…