ಇಂದು (ಏಪ್ರಿಲ್ 18) ವಿಜಯನಗರ ಸಂಸ್ಥಾಪನಾ ದಿನ. ವಿಜಯನಗರ ಎಂದಾಕ್ಷಣ ನೆನಪಿಗೆ ಬರುವುದು ಹಕ್ಕ-ಬುಕ್ಕರು ಹಾಗೂ ಶ್ರೀಕೃಷ್ಣದೇವರಾಯರು. ಆದರೆ, ಎಲ್ಲರೂ ಚಕಿತರಾಗುವ ಪ್ರಶ್ನೆಯೊಂದು ಈಗ ಧುತ್ತನೆದ್ದು ಕೂತಿದೆ. ಅಸಲಿಗೆ ಈ ಹಕ್ಕ-ಬುಕ್ಕರು ಯಾರು? ಇವರು ವಾಲ್ಮೀಕಿ ವಂಶಸ್ಥರಾ? ಅಥವಾ… ಸಾಹಿತಿ-ಚಿಂತಕ ರಮೇಶ್ ಹಿರೇಜಂಬೂರು ಈವರೆಗಿನ ಚೆರಿತ್ರೆಯ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ.
ಇಂದು, ಅಂದರೆ ಏಪ್ರಿಲ್ 18 ವಿಜಯನಗರ ಸಂಸ್ಥಾಪನಾ ದಿನ. ವಿಜಯನಗರ ಎಂದಾಕ್ಷಣ ನೆನಪಿಗೆ ಬರುವುದು ಹಕ್ಕ-ಬುಕ್ಕರು ಹಾಗೂ ಶ್ರೀಕೃಷ್ಣದೇವರಾಯರು.
ನಾಯಕ ಸಮುದಾಯದ ಮುಮ್ಮಡಿ ಸೀಗನಾಯಕ ತನ್ನದೇ ಆದ ಸಾಮ್ರಾಜ್ಯ ಕಟ್ಟಿಕೊಂಡು ಬದುಕಿದ. ಅದಾದ ನಂತರ ಸೀಗನಾಯಕನ ಮಗ ಕಂಪಿಲರಾಯ ತಂದೆಯ ಸಾಮ್ರಾಜ್ಯದ ಜೊತೆಗೆ ತನ್ನ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಣೆ ಮಾಡಿದ. ಕಂಪಿಲರಾಯನ ಮಕ್ಕಳಾದ ಗಂಡುಗಲಿ ಕುಮಾರರಾಮ, ಮಾರೆವ್ವ ಮಹಾನ್ ಚತುರರು. ಗಂಡುಕಲಿ ಕುಮಾರರಾಮ ಕೂಡ ಇತಿಹಾಸದಲ್ಲಿ ತನ್ನದೇ ಆದ ಕದಂಬ ಬಾಹುಗಳನ್ನ ಚಾಚಿ ಅಜರಾಮರವಾಗುವಂತೆ ಮಾಡಿದವನು. ಇವರೆಲ್ಲರೂ ವಾಲ್ಮೀಕಿ ಕುಡಿಗಳೇ.
ಮತ್ತೊಂದು ಕಡೆ ಕುರಗೋಡು ವಂಶಸ್ಥರಾದ ಭೂತನಾಯಕ ಮತ್ತೊಂದು ಕಡೆ ಸಂಸ್ಥಾನವನ್ನು ನಿರ್ಮಾಣ ಮಾಡಿಕೊಂಡು ಬದುಕಿದವನು. ಆತನ ಮಗನೇ ಸಂಗಮ. ಈ ಸಂಗಮ ಗಂಡುಗಲಿ ಕುಮಾರರಾಮನ ಸೋದರಿ ಮಾರೆವ್ವಳನ್ನು ವಿವಾಹವಾಗುತ್ತಾನೆ. ಈ ದಂಪತಿಯ ಮಕ್ಕಳೇ ಹಕ್ಕ-ಬುಕ್ಕರು.
ಈ ಹಕ್ಕ-ಬುಕ್ಕರಿಬ್ಬರೂ ಮಹಾನ್ ಯುದ್ಧ ಚತುರರು. ಆ ಕಾರಣಕ್ಕೇ ಇವರಿಬ್ಬರೂ ತಮ್ಮದೇ ಆದ ಒಂದು ಹೊಸ ಸಾಮ್ರಾಜ್ಯ ನಿರ್ಮಾಣ ಆಡಬೇಕು ಎಂದು ತೀರ್ಮಾನಿಸುತ್ತಾರೆ. ಆಗ ಸೃಷ್ಟಿಯಾಗಿದ್ದೇ ವಿಜಯನಗರ ಸಂಸ್ಥಾನ. ಸಂಗಮನಂತೆಯೇ ಮಕ್ಕಳೂ ಕೂಡ ವೀರಾಧಿ ವೀರರು. ಹೀಗಾಗಿ ಸೋರರಿಬ್ಬರೂ ಸೇರಿ ಯುದ್ಧಕ್ಕೆ ನಿಂತರೆ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟುತ್ತಿತ್ತು. ಅಂತಹ ವೀರರಿವರು. ಹೀಗಾಗಿಯೇ ವಿಜಯನಗರ ಸಂಸ್ಥಾನದ ಕುರುಹುಗಳು ಇಂದಿಗೂ ಸಾಕ್ಷಿಯಾಗಿ ನಿಂತಿರುವುದು.
ಹಕ್ಕರಾಯ, ಬುಕ್ಕರಾಯರ ಮೂಲವೇನು?
ಹಕ್ಕ-ಬುಕ್ಕರಿಬ್ಬರೂ ನಾಯಕ ಸಮುದಾಯದ ಅರಸರು. ಹರಿಹರ ರಾಯ, ಹಕ್ಕರಾಯ, ಬುಕ್ಕರಾಯ ಎಂದು ಹೆಸರು ಬರಲು ಬಹಳ ಪ್ರಮುಖ ಕಾರಣ ವಿಜಯನಗರ ಸಂಸ್ಥಾನದ ನಂತರ ತಮ್ಮ ರಾಜ್ಯಕ್ಕೆ ಒಬ್ಬ ಆದಿಶಕ್ತಿ ದೇವತೆಯನ್ನು ನಿರ್ಮಿಸಿ ಅವಳಿಗೆ ʼರಾಯಮ್ಮʼ ಎಂದು ಕರೆಯುತ್ತಾರೆ. ʼರಾಯʼ ಎಂದರೆ ರಾಜ ಎಂಬರ್ಥ, ಅಮ್ಮ ಎಂದರೆ ತಾಯಿ ಅಥವಾ ಮಾತೆ. ರಾಜಮಾತೆ ಎಂದು ಕರೆಯಲು ರಾಯಮ್ಮ ಎಂದು ತಮ್ಮ ರಾಜ್ಯದ ಅಧಿದೇವತೆಯನ್ನು ಸೃಷ್ಟಿಸುತ್ತಾರೆ. ಈಗ ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ನಾಯಕ ಸಮುದಾಯದ ಗುರುಗಳಾದ ತಿಪ್ಪೇಸ್ವಾಮಿ ಬಂದು ನೆಲೆಸಿದ ಕಾರಣಕ್ಕೆ ಅಥವಾ ಅವರನ್ನು ಎಲ್ಲರೂ ಒಟ್ಟುಗೂಡಿ ಆರಾಧಿಸುತ್ತಿರುವ ಕಾರಣಕ್ಕೆ ಈಗಲೂ ಅಲ್ಲಿ ಬಹುತೇಕ ಜನರಿಗೆ ನಾಯಕ ಸಮುದಾಯದಲ್ಲಿ ತಿಪ್ಪೇಸ್ವಾಮಿ ಎಂದೇ ಹೆಸರಿಡುತ್ತಾರೆ. ಹೀಗೆ ವಿಜಯನಗರ ಸಾಮ್ರಾಜ್ಯದಲ್ಲಿ ರಾಯಮ್ಮ ದೇವಿಯ ಪೂಜನೀಯ ಕಾರಣಕ್ಕಾಗಿ ಹಕ್ಕರಾಯ, ಬುಕ್ಕರಾಯ ಎಂದು ಮರುನಾಮಕರಣ ಮಾಡಿಕೊಂಡರು. ಜತೆಗೆ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರ ಮನೆ ದೇವರು ದಾರಮಾದಲಿಂಗೇಶ್ವರಸ್ವಾಮಿ.
ಹೀಗಾಗಿ ಮುಂದೆ ಅನೇಕ ದೇವತೆಗಳು ಸ್ವಾಮಿ ಎಂಬ ಹೆಸರಿನಲ್ಲೇ ಕೊನೆಗಾಣುವ ರೀತಿಯಲ್ಲಿ ಅನೇಕ ದೇವರು, ದೇವತೆಗಳನ್ನು ಸೃಷ್ಟಿ ಮಾಡಲಾಗಿದೆ. ದಾರಮಾದಲಿಂಗೇಶ್ವರಸ್ವಾಮಿ ದೇಗುಲ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹುಲಿಕುಂಟೆ ಬಳಿ ಇದೆ. ಅದರ ಜೀರ್ಣೋದ್ದಾರಕ್ಕಾಗಿ ಹಾಗೂ ಈಗಾಗಲೇ ಹುಲಿಕುಂಟೆಯಲ್ಲಿ ಸಿಕ್ಕಿರುವ ಶಿಲಾಶಾಸನದ ಪ್ರಕಾರ ಹಕ್ಕಬುಕ್ಕರಿಗೂ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹುಲಿಕುಂಟೆಗೂ ಸಂಬಂಧ ಇದೆ. ಕೊನೆಯದಾಗಿ ಹಕ್ಕ-ಬುಕ್ಕರ ವಂಶಸ್ಥರು ತಮ್ಮ ಮನೆ ದೇವರು ದಾರಮಾದಲಿಂಗೇಶ್ವರಸ್ವಾಮಿ ಸನ್ನಿಧಿಯ ಬಳಿ ಬಂದು ಕೆಲಸಿದ್ದಕ್ಕೆ ಇನ್ನೂ ಕುರುಹುಗಳಿದ್ದು, ಅವುಗಳ ಉತ್ಕನನವಾಗಬೇಕಿದೆ. ಅದನ್ನೇ ಉದ್ದೇಶವಾಗಿಟ್ಟುಕೊಂಡು ಹುಲಿಕುಂಟೆ ಗ್ರಾಮಸ್ಥರು ಕರ್ನಾಟಕ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದು, ಸರಕಾರ ಅದರ ಅಧ್ಯಯನ ನಡೆಸಲು ಅನುವು ಮಾಡಿಕೊಡಬೇಕಿದೆ.
ಇದರ ನಡುವೆ ಹಕ್ಕ-ಬುಕ್ಕರು ಕುರುಬ ಸಮುದಾಯದವರು ಎಂದು ವದಂತಿ ಹಬ್ಬಿಸಿ, ಹತ್ತು ಸುಳ್ಳುಗಳನ್ನು ಹೆಣೆದು ಸತ್ಯ ಮಾಡುವ ಹುನ್ನಾರಗಳು ನಡೆಯುತ್ತಿವೆ. ಆದರೆ ಅದು ಅತಿರೇಕದ ಪರಮಾವಧಿಯೇ ಹೊರತು, ಸತ್ಯವಾಗುವುದಿಲ್ಲ ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಹಕ್ಕ-ಬುಕ್ಕರು ಕೇವಲ ನಾಯಕ ಸಮುದಾಯಕ್ಕೆ ಮಾತ್ರ ಸೀಮಿತವಾಗಿ ಎಂದೂ ಕೆಲಸ ಮಾಡಿದವರಲ್ಲ.
ರಾಜರಾದವರು ಜಾತಿ ನೋಡಿಕೊಂಡು ರಾಜ್ಯಭಾರ ಮಾಡಿದವರಲ್ಲ. ಆದರೆ ಇಂದು ಕೆಲವರು ಹಕ್ಕ-ಬುಕ್ಕರ ಇತಿಹಾಸವನ್ನೇ ತಿರುಚಿ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುವುದುರ ಜೊತೆಗೆ ಅದನ್ನು ತಮಗೆ ಹೇಗೆ ಬೇಕೋ ಹಾಗೆ ಇತಿಹಾಸ ಬದಲಿಸುವ ಪ್ರಯತ್ನ ನಡೆಸುತ್ತಿರುವುದು ತೀರಾ ದುರ್ದೈವದ ಸಂಗತಿ. ಹೀಗಾಗಿಯೇ ಈಗ ಹಕ್ಕ-ಬುಕ್ಕರು, ಅವರ ವಂಶಜರು ನಾಯಕ ಅಥವಾ ವಾಲ್ಮೀಕಿ ಸಮುದಾಯದವರು ಎಂದು ಒತ್ತಿ ಹೇಳಬೇಕಾದ ಅನಿವಾರ್ಯತೆ ಎದುರಾಗಿದೆ.
ಜಾತಿಯಿಂದ ಯಾವ ಮಹಾಪುರುಷರನ್ನೂ ಅಳೆಯಬಾರದು. ಅದರೆ ಇತಿಹಾಸವನ್ನೇ ತಮಗೆ ಹೇಗೆ ಬೇಕೋ ಹಾಗೆ ತಿರುಚುವ ಕಾಲ ಸೃಷ್ಟಿಯಾದಾಗ ಸತ್ಯ ಬಾಯಿ ಬಿಡದೇ ಹೋದರೆ ತಪ್ಪಾಗುತ್ತದೆ.
ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು ಎನ್ನುವ ಮಾತಿದೆ. ಅದು ಸತ್ಯ ಕೂಡ. ಹಿಂದೆ ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಜಾತಿ ಎಂದರೆ ದೂರ ನಿಲ್ಲುತ್ತಿದ್ದವರೆಲ್ಲ ಈಗ ನಮ್ಮನ್ನೂ ಪರಿಶಿಷ್ಟ ವರ್ಗಕ್ಕೆ ಸೇರಿಸಿ ಎಂದು ದುಂಬಾಲು ಬೀಳುತ್ತಿದ್ದಾರೆ. ಅದರೆ ಜತೆಗೆ ತಮಗೆ ಅನುಕೂಲವಾಗುವಂತೆ ಇತಿಹಾಸವನ್ನೂ ತಿರುಚಿ ಹೇಳುತ್ತಿದ್ದಾರೆ. ಸುಳ್ಳನ್ನು ಸಾವಿರ ಬಾರಿ ಹೇಳಿದರೂ ಅದು ಸತ್ಯವಾಗದು. ಸತ್ಯಕ್ಕೆ ಎಂದೂ ಸಾವಿಲ್ಲ. ಅದನ್ನು ಅರಿಯದ ಕೆಲ ಮನಸ್ಸುಗಳು ಈ ರೀತಿಯ ಹುನ್ನಾರ ಮಾಡುತ್ತಿವೆ. ಆದರೆ ಇಂದು ನಾಯಕ ಸಮುದಾಯ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇಡೀ ರಾಜ್ಯಾದ್ಯಂತ ನಾಯಕ ಸಮುದಾಯದ ಹಿರಿಯರಾದ ಹಕ್ಕ-ಬುಕ್ಕರು ನಿರ್ಮಾಣ ಮಾಡಿದ ವಿಜಯನಗರ ಸಂಸ್ಥಾನದ ಸಂಸ್ಥಾಪನಾ ದಿನ ಆಚರಿಸುತ್ತಿದ್ದಾರೆ.
****
ರಮೇಶ್ ಹಿರೇಜಂಬೂರು
- ಪ್ರತಿಭಾವಂತ ಪತ್ರಕರ್ತ, ಲೇಖಕ. ನಾಡಿನ ಪ್ರಮುಖ ಪತ್ರಿಕೆಗಳು, ಸುದ್ದಿವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು ಫೊಟೋಗ್ರಫಿಯಲ್ಲೂ ಆಸಕ್ತರು. ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.
ಪ್ರಿಯ ಓದುರಗೇ ಗಮನಿಸಿ..
ಲೀಡ್ ಚಿತ್ರದ ಕೃಪೆ: ಜಿ.ಕೆ.ಸತ್ಯ ಮತ್ತು ರಾಷ್ಟ್ರೋತ್ಥಾನ ಪರಿಷತ್
ಗೆಸ್ಟ್ ಕಾಲಂಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳಿಗೆ ಆಯಾ ಲೇಖಕರೇ ಉತ್ತರದಾಯಿಗಳು. ಆಸಕ್ತಿ ಇದ್ದರೆ ತಾವೂ ಪ್ರತಿಕ್ರಿಯೆ ವ್ಯಕ್ತಪಡಿಸಬಹುದು. ಐತಿಹಾಸಿಕ ದಾಖಲೆಗಳಿದ್ದರೆ ಅವುಗಳೊಂದಿಗೆ ಈ ಲೇಖನದ ಬಗ್ಗೆ ಚರ್ಚಿಸಬಹುದು. ಅಭಿಪ್ರಾಯಗಳಿಗೆ ಸ್ವಾಗತ. ಆರೋಗ್ಯಕರ ಹಾಗೂ ಉಪಯುಕ್ತ ಸಂವಾದವನ್ನು ಸಿಕೆನ್ಯೂಸ್ ನೌ ಗೌರವಿಸುತ್ತದೆ.
–ಸಂಪಾದಕ