Special Report
ಯುವ ರೈತರಿಗೆ ಮಾದರಿಯಾದ ಬಾಗೇಪಲ್ಲಿ ತಾಲೂಕಿನ ಹಿರಿಯ ರೈತ I ರಸಗೊಬ್ಬರ & ರಾಸಾಯನಿಕಗಳ ಬಳಕೆ ಇಲ್ಲ
by Ra Na Gopala Reddy Bagepalli
ಬಾಗೇಪಲ್ಲಿ: ಬಯಲುಸೀಮೆ ಮತ್ತು ಬರದ ನಾಡಿನಲ್ಲಿ ಭತ್ತವನ್ನು ಬೆಳೆಯುವುದು ಕಷ್ಟದ ಕೆಲಸ. ಅದರಲ್ಲಿಯೂ ಕುಡಿಯುವುದಕ್ಕೂ ನೀರಿನ ತತ್ವಾರ ಇರುವ ಈ ಭಾಗದಲ್ಲಿ ಯಾರಾದರೂ ಭತ್ತ ಬೆಳೆಯುತ್ತಾರೆ ಎಂದರೆ ಜನ ಹುಬ್ಬೇರಿಸುವುದು ಸಹಜ.
ಸಹಜ ಕೃಷಿಯಲ್ಲಿ ಜಗತ್ತಿನ ಗಮನ ಸೆಳೆದಿದ್ದ ಜಪಾನಿನ ಫುಕುವೋಕಾ ಅವರಂತೆಯೇ ಇಲ್ಲೊಬ್ಬ ಹಿರಿಯ ರೈತರೊಬ್ಬರು ವರ್ಷಕ್ಕೆ ಎರಡು ಬಾರಿ ತಮ್ಮ ಜಮೀನನ ಬಳಿ ನೀರಿನ ಹೊಂಡದ ಸಹಾಯ ಮೂಲಕ ಭತ್ತದ ಫಸಲನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಸಮೃದ್ಧ ಭತ್ತ ಬೆಳೆಯುವಲ್ಲಿ ಯಶಸ್ವಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಎಲ್ಲಿ ಈ ಭತ್ತದ ಬೆಳೆ?
ಬಾಗೇಪಲ್ಲಿ ತಾಲೂಕಿನ ಮಾರಗಾನಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವಿಕುಂಟೆ ಗ್ರಾಮದ ಡಿ.ಪಿ.ಗೋಪಾಲ್ ಎಂಬ ರೈತ ಭತ್ತವನ್ನು ಎರಡು ಕಾಲಘಟ್ಟದಲ್ಲಿ ಬೆಳೆಯುತ್ತಾರೆ. ಒಂದು ಮುಂಗಾರಿನ ಜುಲೈ ತಿಂಗಳ ಮೂರನೇ ವಾರದಲ್ಲಿ ಮಾಡಿದ ಸಸಿಯನ್ನು ಗದ್ದೆಯಲ್ಲಿ ನಾಟಿ ಮಾಡಲಾಗುತ್ತದೆ. ಮೊದಲು ಹಾಕಿದ ಭತ್ತ ಡಿಸೆಂಬರ್ ಹೊತ್ತಿಗೆ ಫಸಲಾಗಿ ಬರುತ್ತದೆ. ಬೇಸಿಗೆಯ ಭತ್ತದ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಬೇಕೆಂದರೆ ಪುನಾ ಡಿಸೆಂಬರ್ ಮೂರನೇ ವಾರದೊಳಗೆ ಸಸಿ ಮಾಡಿ ಗದ್ದೆಯಲ್ಲಿ ಬಿತ್ತನೆ ಮಾಡುವುದು ಅಗತ್ಯ. ತಡವಾದಂತೆ ಇಳುವರಿ ಕಡಿಮೆಯಾಗುತ್ತದೆ. ಎರಡನೇ ಭತ್ತದ ಪಸಲನ್ನು ಮೇ ತಿಂಗಳ ಮೊದಲ ವಾರದಲ್ಲಿ ಕೊಯ್ಲು ಮಾಡಬಹುದು.
ಈ ಭಾಗದ ಕೃಷಿಕರು ಖುಷ್ಕಿ ಬೇಸಾಯನ್ನು ಮಾಡುತ್ತಾರೆ. ಸಕಾಲಕ್ಕೆ ಮಳೆ ಸರಿಯಾಗಿ ಆಗುತ್ತಿಲ್ಲ. ಆದರೂ ಇಲ್ಲಿ ತಮ್ಮ ಹಸುಗಳ ಸೆಗಣಿ ಗೊಬ್ಬರವನ್ನು ಮತ್ತು ಒಣಗಿದ ಎಲೆಗಳನ್ನು ತಂದು ಭೂಮಿಯಲ್ಲಿ ಫಲವತ್ತತೆಯ ಮೂಲಕ ವ್ಯವಸಾಯವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಹೆಚ್ಚೂಕಮ್ಮಿ ಒಂದು ಎಕರೆಗೆ ಸುಮಾರು 26ರಿಂದ 28 ಕ್ವಿಂಟಲ್‌ಗಳವರೆಗೆ ಇಳುವರಿಯನ್ನು ಪಡೆಯುತ್ತಿದ್ದಾರೆ.
ಕೃಷಿ ಹೊಂಡದ ಮೂಲಕ ಬೇಸಾಯ
ದೇವಿಕುಂಟೆ ಗ್ರಾಮದ ಕೆರೆಯ ಕೆಳಗೆ ಬಾವಿ ಇದ್ದ ಕಾರಣ ನೀರಿನ ಸಮಸ್ಯೆ ಇಲ್ಲ. ಗ್ರಾಮ ಪಂಚಾಯಿತಿಯಲ್ಲಿ ಕೃಷಿ ಹೊಂಡದ ಸೌಲಭ್ಯ ಇರುತ್ತದೆ. ರೈತರು ಇಂತಹ ನೀರಿನ ಮೂಲಗಳಿಂದ ರಾಸಾಯನಿಕ ರಹಿತ ಬೆಳೆಗಳನ್ನು ಬೆಳೆದು ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು. ಇಂದು ರಾಸಾಯನಿಕ ರಸಗೊಬ್ಬರಗಳನ್ನು ಬಳಸಿ ಬೆಳೆಸಲಾಗುತ್ತಿರುವ ಬೆಳೆಗಳಿಂದ ಅನೇಕ ರೋಗಗಳು ಬರುತ್ತಿವೆ. ಹೀಗಾಗಿ ಗೋವುಗಳ ಗೊಬ್ಬರದ ಮೂಲಕ ಬೇಸಾಯ ಮಾಡಿದರೆ ಹಲವಾರು ರೋಗಗಳನ್ನು ತಡೆಯಬಹುದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಗಳು.
ಕೊರೊನಾದಿಂದ ಸಿಟಿಯಲ್ಲಿದ್ದ ಜನರು ಗ್ರಾಮಗಳಿಗೆ ಮರಳಿದ್ದಾರೆ. ವ್ಯವಸಾಯದ ಕಡೆ ಗಮನ ಕೊಡುತ್ತಿದ್ದಾರೆ. ಇಂಥವರೆಲ್ಲ ಗ್ರಾಮ ಪಂಚಾಯತಿಯಲ್ಲಿ ದೊರೆಯುವ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಬಳಸಿಕೊಂಡರೆ ಮಾದರಿ ಬೇಸಾಯ ಮಾಡಬಹುದು. ಉತ್ತಮ ಆರೋಗ್ಯ ಎಲ್ಲರಿಗೂ ಸಿಗುತ್ತದೆ ಎಂದು ಹೇಳುತ್ತಾರೆ ಎನ್ನುತ್ತಾರೆ ಯುವ ಕೃಷಿಕ ಡಿ.ಜಿ.ಪವನ್ ಕಲ್ಯಾಣ್.
ಚಿಟ್ಟೆಗಳ ಗೊಬ್ಬರ ಹಾಕಿ ರೋಗವನ್ನು ತಡೆಗಟ್ಟಿದ ರೈತ
ಮೊದಲಿನಿಂದಲೂ ಫಸಲಿಗೆ ರೋಗಗಳು ಬಂದರೆ ಗ್ರಾಮಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಕಾಡಿನಲ್ಲಿ ದೊರೆಯುವ ಚಿಟ್ಟೆಗಳ ಗೊಬ್ಬರ ತಂದು ಹಾಕುತ್ತಾರೆ. ಆಗ ರೋಗ ಬಂದಿದ್ದರೆ ಸಂಪೂರ್ಣ ಸರಿ ಹೋಗುತ್ತದೆ ಎಂದು ಕೃಷಿಕ ಗೋಪಾಲ್ ಹೇಳುತ್ತಾರೆ.
ಸಾವಯವದಲ್ಲಿ ಸಂತೋಷವಿದೆ
ತಮ್ಮ ಭತ್ತದ ಬೇಸಾಯದ ಬಗ್ಗೆ ಸಂತೋಷದಿಂದ ಮಾತನಾಡಿದ ಆರವತ್ತೈದು ವರ್ಷದ ಹಿರಿಯ ಜೀವ ಗೋಪಾಲ್ ಅವರು, ರಾಸಾಯನಿಕ ಗೊಬ್ಬರಗಳ ಗೊಡವೆಯೇ ಇಲ್ಲದ ಸಾವಯವ ಕೃಷಿಯ ಬಗ್ಗೆ ನನಗೆ ಬಹಳ ಸಂತೋಷವಿದೆ. ನಮ್ಮ ಪರಂಪರಾಗತವಾಗಿ ಬಂದ ಕೃಷಿ ಪದ್ಧತಿ ಇದು. ಆದರೆ, ನಾವು ಹೆಚ್ಚೆಚ್ಚು ರಸಗೊಬ್ಬರಗಳನ್ನು ಬಳಸುತ್ತಾ ಭೂಮಿಯನ್ನು ಹಾಳು ಮಾಡುತ್ತಿದ್ದೇವೆ. ಹಾಗೆ ಆಗಬಾರದು. ನಮ್ಮ ಭೂಮಿಯ ಫಲವತ್ತತೆಯನ್ನು ಉಳಿಸಿಕೊಳ್ಳಲು ನಮ್ಮ ಹಿರಿಯರು ಹಾಕಿಕೊಟ್ಟ ಸಾಂಪ್ರದಾಯಿಕ ಮತ್ತು ಸಾವಯವ ಕೃಷಿ ಪದ್ಧತಿ ಬಹಳ ಒಳ್ಳೆಯದು ಎನ್ನುತ್ತಾರೆ.