ಮೇಲಿನ ಚಿತ್ರ: ಬಾಗೇಪಲ್ಲಿ ವೀಕೆಂಡ್ ಲಾಕ್‌ಡೌನ್ ಸಾಂದರ್ಭಿಕ ಚಿತ್ರ.
ಮೇ 20ರಿಂದ 4 ದಿನ ಇಡೀ ಜಿಲ್ಲೆ ಸಂಪೂರ್ಣ ಬಂದ್; ಏನಿರುತ್ತದೆ? ಏನಿರಲ್ಲ? ಇಲ್ಲಿದೆ ಪೂರ್ಣ ಮಾಹಿತಿ
ಸೋಂಕು ನಿರ್ವಹಣೆಯಲ್ಲಿ ಇಡೀ ರಾಜ್ಯಕ್ಕೆ ಮಾದರಿ ಜಿಲ್ಲೆ ಎಂದು ಉಸ್ತುವಾರಿ ಸಚಿವರು ಬೆನ್ನುತಟ್ಟಿದ ಬರೀ ನಾಲ್ಕೇ ದಿನದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ ಜಿಲ್ಲಾಧಿಕಾರಿ!!
ಚಿಕ್ಕಬಳ್ಳಾಪುರ: ನಿಯಂತ್ರಣಕ್ಕೆ ಬಾರದೆ ತೀವ್ರವಾಗಿ ಹರಡುತ್ತಿರುವ ಕೋವಿಡ್ ಸೋಂಕನ್ನು ಕಟ್ಟಿ ಹಾಕಲು ಆರೋಗ್ಯ ಸಚಿವರ ತವರು ಚಿಕ್ಕಬಳ್ಳಾಪುರ ಜಿಲ್ಲೆ ಲಾಕ್‌ಡೌನ್‌ಗೆ ಶರಣಾಗಿದೆ.
ಇಡೀ ರಾಜ್ಯದಲ್ಲೇ ಕೋವಿಡ್ ನಿರ್ವಹಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಮಾದರಿ ಎಂದು ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಬೆನ್ನು ತಟ್ಟಿದ ನಾಲ್ಕೇ ದಿನಗಳಲ್ಲೇ ಜಿಲ್ಲಾಧಿಕಾರಿ ಆರ್.ಲತಾ ವಾರು ನಾಲ್ಕು ದಿನಗಳ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ.
ಮೇ 20ರಿಂದ 23ರವರೆಗೆ (ಗುರುವಾರದಿಂದ ಭಾನುವಾರ ವರೆಗೆ) ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗುತ್ತದೆ. ವೈದ್ಯ ಸೇವೆ, ಹಾಲು, ಪತ್ರಿಕೆ, ಆಸ್ಪತ್ರೆ ಇನ್ನಿತರೆ ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆಗಳ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರಕಾರವು ಕೋವಿಡ್ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ವಿವೇಚನಾಧಿಕಾರ ಹೊಂದಿರುತ್ತಾರೆ ಎಂದು ನಿರ್ದೇಶನ ನೀಡಿದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಲಾಕ್‌ಡೌನ್ ನಿರ್ಧಾರ ಕೈಗೊಳ್ಳಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ಜತೆ ಚರ್ಚಿಸಿದ ಬಳಿಕ ಸಚಿವರ ಸೂಚನೆಯಂತೆ ಜಿಲ್ಲೆಯಲ್ಲಿ ನಾಲ್ಕು ದಿನಗಳ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಜನರ ಒಳಿತಿಗಾಗಿಯೇ ಮಾಡಲಾಗುತ್ತಿರುವ ಈ ನಾಲ್ಕು ದಿನಗಳ ಲಾಕ್‌ಡೌನ್‌ಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಡಿಸಿ ಮನವಿ ಮಾಡಿದರು.
ಹೋಮ್ ಐಸೋಲೇಷನ್‌ಗೆ ಅವಕಾಶ ಇಲ್ಲ
ಪ್ರಸ್ತುತ ಜಿಲ್ಲೆಯಲ್ಲಿನ 8 ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 9,144 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರಗಳಲ್ಲಿ 382 ಜನ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಹೆಚ್ಚುತ್ತಿರುವ ಕಾರಣ ಸೋಂಕಿತರ ಮನೆಯವರಿಗೆ ಹಾಗೂ ಅಕ್ಕಪಕ್ಕದವರಿಗೆ ಸೋಂಕು ಹರಡಬಾರದು ಎಂಬ ಉದ್ದೇಶದಿಂದ ಮನೆಯವರನ್ನು ಹೊರತುಪಡಿಸಿ ಪ್ರತ್ಯೇಕವಾಗಿ ವಾಸಿಸಲು ಕೊಠಡಿ, ಶೌಚಾಲಯ ವ್ಯವಸ್ಥೆ ಇಲ್ಲದಿರುವ ಪ್ರತಿಯೊಬ್ಬರನ್ನು ನಮ್ಮ ಸ್ಥಳೀಯ ಮಟ್ಟದ ಅಧಿಕಾರಿಗಳು ಹಾಗೂ ಮೆಡಿಕಲ್ ಆಫೀಸರ್ʼಗಳು ಗುರುತಿಸಿದ ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿನ 22 ವಸತಿ ನಿಲಯಗಳು ಹಾಗೂ 46 ಸಮುದಾಯ ಭವನಗಳನ್ನು ಬಳಸಿಕೊಂಡು 9,144 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಬಾಣಸಿಗರಿಂದ ಹಿಡಿದು ಗುಣಮಟ್ಟದ ಆಹಾರ, ಸ್ವಚ್ಛತೆ, ಬಿಸಿ ನೀರು, ಶುದ್ಧ ಕುಡಿಯುವ ನೀರು ಸೇರಿದಂತೆ ಕೋವಿಡ್ ಕೇರ್ ಸೆಂಟರ್‌ಗಳಿಗೆ ಬೇಕಾದ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲು ನೋಡೆಲ್ ಅಧಿಕಾರಿಗಳನ್ನು ವಿವಿಧ ತಂಡಗಳಾಗಿ ರಚಿಸಲಾಗಿ ಉಸ್ತುವಾರಿ ವಹಿಸಲಾಗಿದೆ ಎಂದರು ಜಿಲ್ಲಾಧಿಕಾರಿ.
ಏನಿರುವುದಿಲ್ಲ?
- ಎಲ್ಲ ರೀತಿಯ ಮದ್ಯದಂಗಡಿಗಳು ಬಂದ್
- ಚಿಂತಾಮಣಿ ಎಪಿಎಂಸಿಯ ಗುರುವಾರ & ಶನಿವಾರದ ಮಾರುಕಟ್ಟೆ ಹೊರತುಪಡಿಸಿ
- 4 ದಿನ ಉಳಿದೆಲ್ಲ ಎಪಿಎಂಸಿ ಮಾರುಕಟ್ಟೆಗಳು ಸಂಪೂರ್ಣ ಬಂದ್
- ಕೋವಿಡ್ ಆಸ್ಪತ್ರೆಗಳ ಹತ್ತಿರದ ಹೋಟೆಲ್‌ಗಳು ಹೊರತುಪಡಿಸಿ ಉಳಿದ ಹೋಟೆಲ್‌ಗಳು ಇರುವುದಿಲ್ಲ
- ಅಂತರ ಜಿಲ್ಲೆ, ಅಂತಾರಾಜ್ಯ ವಾಹನಗಳಿಗೆ ನಿರ್ಬಂಧ
- ಎಟಿಎಂ ಹೊರತುಪಡಿಸಿ ಎಲ್ಲಾ ಬ್ಯಾಂಕುಗಳು ಕೂಡ ಸಂಪೂರ್ಣ ಬಂದ್
- ಹಾಲು ಖರೀದಿಗೆ ವಾಹನಗಳ ಬಳಕೆ ಮಾಡುವಂತಿಲ್ಲ
- ನಗರ & ಪಟ್ಟಣಗಳಲ್ಲಿರುವ ಪೆಟ್ರೋಲ್ ಬಂಕ್‌ಗಳು ಇರಲ್ಲ
ಏನಿರುತ್ತದೆ?
- ಬೆಳಗ್ಗೆ 6ರಿಂದ 10ವರೆಗೂ ಹಾಲು ಖರೀದಿಗೆ ಅವಕಾಶ
- ಮೆಡಿಕಲ್ ಶಾಪ್, ಆಸ್ಪತ್ರೆಗಳು ಎಂದಿನಂತೆ ತೆರೆದಿರುತ್ತವೆ
- ಗುರುವಾರ, ಶನಿವಾರ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆ
- ಎಟಿಎಂ ಕೇಂದ್ರಗಳು ಇರುತ್ತವೆ
- ಹೆದ್ದಾರಿಗಳಲ್ಲಿರುವ ಪೆಟ್ರೋಲ್ ಬಂಕ್‌ಗಳು
- ಆಸ್ಪತ್ರೆಗಳ ಹತ್ತಿರದ ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ
- ಕೃಷಿ ಆಧಾರಿತ ಕೈಗಾರಿಕೆಗಳಿಗೆ ಅವಕಾಶ
- ಫಾರ್ಮಾ ಆಧಾರಿತ ಕೈಗಾರಿಕೆಗಳಿಗೆ ನಿರ್ಬಂಧ ಇಲ್ಲ
- ಆಹಾರ ಸಂಸ್ಕರಣೆ ಘಟಕಗಳಿಗೆ ಅವಕಾಶ
- ಸರಕು ಸಾಗಾಟ ವಾಹನಗಳಿಗೆ ಮುಕ್ತ ಅವಕಾಶ
- ವೈದ್ಯಕೀಯ ಉದ್ದೇಶಕ್ಕಾಗಿ ಹಾಗೂ ಅನಿವಾರ್ಯ ತುರ್ತು ಸಂದರ್ಭಗಳಲ್ಲಿ ಸೂಕ್ತ ದಾಖಲೆ ತೋರಿಸಿದರೆ ಸಂಚಾರಕ್ಕೆ ಅವಕಾಶ
ಅನಗತ್ಯ ಸಂಚರಿಸಿದರೆ ಕೇಸ್: ಎಸ್‌ಪಿ ಮಿಥುನ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಅಂತಾರಾಜ್ಯ ಮತ್ತು ಅಂತರ ಜಿಲ್ಲಾ ಸಂಚಾರವನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಆದರೆ ಗೂಡ್ಸ್ ವಾಹನಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 27 ಪೋಸ್ಟ್‌ಗಳನ್ನು ಹಾಕಲಾಗಿದ್ದು ಲಾಕ್‌ಡೌನ್ ಅವಧಿಯಲ್ಲಿ ಇನ್ನೂ ಹೆಚ್ಚಿನ ಚೆಕ್ ಪೋಸ್ಟ್‌ಗಳನ್ನು ಹಾಕಲಾಗುವುದು. ಅನವಶ್ಯಕವಾಗಿ ಸಂಚಾರ ಮಾಡುವ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗುವುದು ಎಂದರು.
- ಲಾಕ್‌ಡೌನ್ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು? ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್. ಕಬಾಡೆ, ಆಹಾರ ಇಲಾಖೆಯ ಉಪ ನಿರ್ದೇಶಕಿ ಸವಿತಾ ಮುಂತಾದವರು ಉಪಸ್ಥಿತರಿದ್ದರು.