ನಂಜನಗೂಡು ತಾಲೂಕಿನ ಮಹದೇವ ತಾತ ಅವರ ಐಕ್ಯಸ್ಥಳಕ್ಕೆ ಬಿ.ವೈ.ವಿಜಯೇಂದ್ರ ಬೇಟಿ ನೀಡಿದ್ದು ಯಾಕೆ? ಇಷ್ಟಕ್ಕೂ ಅಪ್ಪ ಅಧಿಕಾರ ಕಳೆದುಕೊಂಡರೆ ಮಗನ ಭವಿಷ್ಯವೇನು?
ಬೆಂಗಳೂರು: ರಾಜ್ಯ ರಾಜಕಾರಣದ ಚಿತ್ರ ಬದಲಾಗುವ ಸೂಚನೆಗಳು ಕಾಣುತ್ತಿದ್ದಂತೆಯೇ ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ಅವರು ಟೆಂಪಲ್ ರನ್ ಆರಂಭಿಸಿದ್ದಾರೆ.
ಸೋಮವಾರ ಕುಟುಂಬ ಸಮೇತ ನಂಜನಗೂಡು ತಾಲೂಕಿನ ಮಹದೇವ ತಾತ ಅವರ ಐಕ್ಯಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ ವಿಜಯೇಂದ್ರ ಅವರು ಮಂಗಳವಾರ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಮಹದೇವ ತಾತ ಅವರು ಸಿದ್ಧಿಪುರುಷರಾಗಿದ್ದು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ. ನಂಜನಗೂಡು ತಾಲ್ಲೂಕಿನ ಹುಲ್ಲಳ್ಳಿ ಸಮೀಪ ಕಪಿಲಾ ನದಿ ದಂಡೆಯ ಮೇಲಿರುವ ಮಹದೇವ ತಾತ ಅವರ ಐಕ್ಯಸ್ಥಳಕ್ಕೆ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ನಾಯಕರನೇಕರು ಭೇಟಿ ನೀಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಬಹುತೇಕ ನಾಯಕರಿಗೆ ಮಹದೇವ ತಾತ ಅವರ ಐಕ್ಯಸ್ಥಳ ಎಂದರೆ ನಂಬಿಕೆಯ ತಾಣ. ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಈ ಕ್ಷೇತ್ರಕ್ಕೆ ಪ್ರತಿವರ್ಷ ತಪ್ಪದೇ ಭೇಟಿ ನೀಡುತ್ತಿದ್ದರು.
ಇದೀಗ ಬಿ.ವೈ.ವಿಜಯೇಂದ್ರ ಅವರು ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಮಹದೇವ ತಾತ ಅವರ ಐಕ್ಯಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜತೆಗೆ, ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಕರ್ನಾಟಕದಲ್ಲಿ ನಾಯಕತ್ವ ಬದಲಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದು, ಇದರ ಬೆನ್ನಲ್ಲೇ ಅದು ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿದೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ವಿಜಯೇಂದ್ತ ಅವರ ಟೆಂಪಲ್ ರನ್ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಒಕ್ಕಲಿಗ ನಾಯಕರೊಬ್ಬರು ಸಿಎಂ ಆದರೆ ವಿಜಯೇಂದ್ರ ಅವರನ್ನು ಡಿಸಿಎಂ ಮಾಡಬೇಕು.
ಒಂದು ವೇಳೆ ಲಿಂಗಾಯತರಿಗೇ ಸಿಎಂ ಹುದ್ದೆ ನೀಡಿದರೆ ವಿಜಯೇಂದ್ರ ಅವರನ್ನು ಸಂಪುಟ ದರ್ಜೆ ಸಚಿವರನ್ನಾಗಿ ಮಾಡಬೇಕು ಎಂದು ಯಡಿಯೂರಪ್ಪ ಅವರು ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ ಎಂದು ಗೊತ್ತಾಗಿದೆ.
ಹೀಗೆ ಉಪಮುಖ್ಯಮಂತ್ರಿ ಇಲ್ಲವೇ ಮಂತ್ರಿಯಾಗುವ ವಿಜಯೇಂದ್ರ ಅವರಿಗೆ ಜಲಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ದಿ ಖಾತೆ ನೀಡಬೇಕು ಎಂದು ಅವರು ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಈ ಮುಂಚೆ ನಾಯಕತ್ವ ಬದಲಾವಣೆಯ ವಿಷಯ ಬಂದರೆ ಶತಾಯಗತಾಯ ವಿರೋಧಿಸುತ್ತಿದ್ದ ಯಡಿಯೂರಪ್ಪ ಇದೀಗ ಮಗನ ಭವಿಷ್ಯ ಸುಗಮವಾಗಿರಬೇಕು ಎಂಬ ಕಾರಣಕ್ಕಾಗಿ ನಾಯಕತ್ವ ಬಿಟ್ಟುಕೊಡಲು ಮಾನಸಿಕವಾಗಿ ಸಜ್ಜಾಗಿದ್ದಾರೆ ಎಂಬುದು ಮೂಲಗಳ ಹೇಳಿಕೆ.
ಇಂತಹ ಸುದ್ದಿಗಳ ನಡುವೆಯೇ ಅವರ ಪುತ್ರ ವಿಜಯೇಂದ್ರ ಅವರು ಆರಂಭಿಸಿರುವ ಟೆಂಪಲ್ ರನ್ ರಾಜಕೀಯ ವಲಯಗಳ ಕುತೂಹಲಕ್ಕೆ ಕಾರಣವಾಗಿದೆ. ಹೊಸ ಜವಾಬ್ದಾರಿ ವಹಿಸಿಕೊಳ್ಳಲು ತಮಗೆ ಶಕ್ತಿ ನೀಡುವಂತೆ ಈ ಟೆಂಪಲ್ ರನ್ ಸಮಯದಲ್ಲಿ ಮಹದೇವ ತಾತ ಹಾಗೂ ಶ್ರೀಕಂಠೇಶ್ವರ ಸ್ವಾಮಿಯನ್ನು ಅವರು ಪ್ರಾರ್ಥಿಸಿದ್ದಾರೆ ಎಂಬುದು ಅವರ ಸಮೀಪವರ್ತಿಗಳಿಂದ ಸಿಕ್ಕಿರುವ ಮಾಹಿತಿ.
ಮುಂದಿನ ಸಿಎಂ ಯಾರು?
ಸದ್ಯಕ್ಕೆ ಈ ಗುಟ್ಟು ರಟ್ಟಾಗಿಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬರುತ್ತಾರೆನ್ನುತ್ತಿದೆ ಒಂದು ಮೂಲ. ಆದರೆ, ರಾಜ್ಯದಲ್ಲಿ ಆಳದಲ್ಲಿ ಆವರಿಸಿಕೊಂಡಿರುವ ಜಾತಿ ಸಮೀಕರಣದಿಂದ ಅವರ ಸಾಧ್ಯತೆ ಕಡಿಮೆ. ಇನ್ನೊಬ್ಬರು ರಾಜ್ಯ ಗಣಿ ಮಂತ್ರಿ ಮುರುಗೇಶ್ ನಿರಾಣಿ. ಕಷ್ಟಪಟ್ಟು, ಒತ್ತಡ ಹಾಕಿ ಹೇಗೋ ಮಂತ್ರಿಯಾದ ನಿರಾಣಿ, ದಿಲ್ಲಿಯ ಒಂದಿಬ್ಬರು ಬಿಜೆಪಿ ನಾಯಕರ ಜತೆ ಹಾಗೂ ಮುಂಬಯಿಯ ಬಿಸ್ನೆಸ್ ಕುಳಗಳ ಜತೆ ಭರ್ತಿ ವ್ಯವಹಾರ ಇಟ್ಟುಕೊಂಡಿದ್ದಾರೆಂಬ ಮಾಹಿತಿ ಇದೆ.
ಜಾತಿಯಲ್ಲಿ ಲಿಂಗಾಯಿತರೂ, ಅದರಲ್ಲೂ ಪಂಚಸಾಲಿಗಳೂ ಆಗಿರುವ ಅವರಿಗೆ ಜಾಕ್‌ಪಾಟ್ ಹೊಡೆದರೂ ಹೊಡೆಯಬಹುದು ಎನ್ನುತ್ತಾರೆ ಹಿರಿಯ ಪತ್ರಕರ್ತ & ರಾಜಕೀಯ ವಿಶ್ಲೇಷಕ ಆರ್.ಟಿ.ವಿಠ್ಠಲಮೂರ್ತಿ.
ಇನ್ನು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಒಲವು ಬಹುತೇಕ ಬಸವರಾಜ ಬೊಮ್ಮಾಯಿ ಮೇಲೆಯೇ ಇದೆ. ಈಗಾಗಲೇ ಯಡಿಯೂರಪ್ಪ ಫ್ಯಾಮಿಲಿ ಜತೆ ಸಿಕ್ಕಾಪಟ್ಟೆ ಅಂತರ ಕಾಯ್ದುಕೊಂಡಿರುವ ವರಿಷ್ಠರು, ಸಿಎಂ ಹೇಳಿದ ಮಾತು ಕೇಳುವುವುದು ಕಷ್ಟಸಾಧ್ಯ. ಹೀಗಾಗಿ ಬೊಮ್ಮಾಯಿ ಹೆಸರು ಸೈಡಿಗೆ ಹೋದರೆ ಅಚ್ಚರಿಯೇನೂ ಇಲ್ಲ.
ಉಳಿದಂತೆ ವಿಜಯೇಂದ್ರ ಡಿಸಿಎಂ ಆಗಬೇಕಾದರೆ ಒಕ್ಕಲಿಗರೊಬ್ಬರು ಸಿಎಂ ಆಗಬೇಕು. ಸದ್ಯಕ್ಕೆ ಆ ಕುರ್ಚಿಗೆ ಹೈಕಮಾಂಡ್ ಮುಂದೆ ಇರುವ ಏಕೈಕ ಒಕ್ಕಲಿಗ ಹೆಸರೆಂದರೆ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತ್ರ. ಪುತ್ರ ಡಿಸಿಎಂ ಆಗುವುದು ಸುಲಭವಾದರೆ, ಅಶ್ವತ್ಥನಾರಾಯಣ ಸಿಎಂ ಆಗಲು ಅಭ್ಯಂತರವೇನಿಲ್ಲ ಎಂಬ ಸಂದೇಶವನ್ನೂ ಯಡಿಯೂರಪ್ಪ ದಿಲ್ಲಿಗೆ ದಾಟಿಸಿದ್ದಾರೆಂಬ ಮಾಹಿತಿ ಇದೆ.
ಆಡಳಿತಾರೂಢ ಪಕ್ಷದ ಮೂಲಗಳೇ ಹೇಳುವಂತೆ, ನಾಯಕತ್ವ ಬದಲಾವಣೆ ಪ್ರಕ್ರಿಯೆಗಳು ತುರುಸಾಗಿ ಶುರುವಾಗಿವೆ. ದಿನ ನಿಗದಿಯೊಂದೇ ಬಾಕಿ. ಬಹುಶಃ ಒಂದು ತಿಂಗೊಳಗೆ ಈ ಅಂಕಕ್ಕೆ ತೆರೆ ಬೀಳಬಹುದು ಎನ್ನಲಾಗಿದೆ.
ಸಂತೋಷ್ ಸಸಿಹಿತ್ಲು