ಅತ್ಯಾಧುನಿಕ ಕ್ರಯೋಜೆನಿಕ್ ಟಾಂಕ್ಗಳಿಂದ 99.5% ಶುದ್ಧ ಆಮ್ಲಜನಕ ಉತ್ಪಾದನೆ I ಸೇನಾ ವಿಮಾನಗಳ ಮೂಲಕ ಟ್ಯಾಂಕ್ಗಳ ಸರಬರಾಜು
ಬೆಂಗಳೂರು: ಕೋವಿಡ್-19 ಎರಡನೇ ಅಲೆ ದೇಶಾದ್ಯಂತ ವ್ಯಾಪಿಸಿರುವ ಈ ಸಂದರ್ಭದಲ್ಲಿ ದೇಶದಲ್ಲಿ ಆಕ್ಸಿಜನ್ ಕೊರತೆ ಎದುರಾಗಿದ್ದು, ಈ ಸಮಸ್ಯೆ ಪರಿಹಾರಕ್ಕಾಗಿ ಮೆಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ (ಎಂಇಐಎಲ್) ಸಂಸ್ಥೆ ಗುಣಮಟ್ಟದ ಆಮ್ಲಜನಕ ಸರಬರಾಜಿಗೆ ಅನುವಾಗುಂತೆ ಥಾಯ್ಲೆಂಡ್ನ ಬ್ಯಾಂಕಾಕ್ನಿಂದ 11 ಕ್ರಯೋಜೆನಿಕ್ ಟ್ಯಾಂಕ್ಗಳನ್ನು ಆಮದು ಮಾಡಿಕೊಂಡು ಉಚಿತವಾಗಿ ಒದಗಿಲು ಮುಂದಾಗಿದೆ.
ಶನಿವಾರ ತೆಲಂಗಾಣದ ಬೇಗಂಪೇಟ್ನ ವಾಯುಸೇನೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನಗಳಲ್ಲಿ ಮೂರು ಕ್ರೆಯೋಜೆನಿಕ್ ಟ್ಯಾಂಕ್ಗಳನ್ನು ಹೊತ್ತು ತಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಟ್ಯಾಂಕರ್ಗಳು ಆಮದಾಗಲಿವೆ.
ಗುಣಮಟ್ಟದ ಆಮ್ಲಜನಕ ಪರಿವರ್ತನೆಗೆ ಸಹಕಾರಿಯಾಗಿರುವ ಈ ಪ್ರತಿ ಟ್ಯಾಂಕರ್ 20 ಸಾವಿರ ಕ್ರಯೋಜೆನಿಕ್ ಆಮ್ಲಜನಕದೊಂದಿಗೆ ಆಮದಾಗಿದ್ದು, ಇದರಿಂದ 1.40 ಕೋಟಿ ಲೀಟರ್ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಸಾಧ್ಯವಾಗಲಿದೆ. ಒಟ್ಟಾರೆ, 11 ಟ್ಯಾಂಕರ್ಗಳಿಂದ ದೇಶಕ್ಕೆ 15.40 ಕೋಟಿ ಲೀಟರ್ ವೈದ್ಯಕೀಯ ಆಮ್ಲಜನಕ ಲಭ್ಯವಾಗಲಿದೆ.
ಎಂಇಐಎಲ್ನ ಈ ಸಮಾಜಮುಖಿ ಕಾರ್ಯಕ್ಕೆ ಕೇಂದ್ರ ರಕ್ಷಣಾ ಸಚಿವಾಲಯ ಸಂಪೂರ್ಣ ಸಹಕಾರ ಮತ್ತು ಅನುಮತಿಗಳನ್ನು ನೀಡಿದ್ದು, ಚಂಢಿಗಢದಿಂದ ಹೊರಟ ವಿಶೇಷ ವಾಯುಸೇನಾ ವಿಮಾನಗಳು ಬ್ಯಾಂಕಾಕ್ನಿಂದ ಕ್ರೆಯೋಜೆನಿಕ್ ಆಮ್ಲಜನಕ ಟ್ಯಾಂಕರ್ಗಳನ್ನು ಹೊತ್ತು ತಂದಿವೆ.
ವೈದ್ಯಕೀಯ ಬಳಕೆಯ ಆಮ್ಲಜನಕವನ್ನು ಉತ್ಪಾದನಾ ಘಟಕಗಳಿಂದ ಅಗತ್ಯ ಇರುವ ಆಸ್ಪತ್ರೆಗಳಿಗೆ ಸಾಗಿಸುವುದು ಸವಾಲಿನ ಕೆಲಸವಾಗಿದ್ದು, ಪ್ರಸ್ತುತ ಬ್ಯಾಂಕಾಕ್ನಿಂದ ಎಂಇಐಎಲ್ ಆಮದು ಮಾಡಿಕೊಳ್ಳುತ್ತಿರುವ 11 ಕ್ರೆಯೋಜೆನಿಕ್ ಆಕ್ಸಿಜನ್ ಟ್ಯಾಂಕರ್ಗಳು ಸರಕಾರದ ಕೆಲಸವನ್ನು ಸುಲಭವಾಗಿಸಲಿದೆ ಮತ್ತು ಆಸ್ಪತ್ರೆಗಳಿಗೆ ಗುಣಮಟ್ಟದ ಆಮ್ಲಜನಕ ಸರಬರಾಜಿಗೆ ಅನುವು ಮಾಡಿಕೊಡಲಿದೆ ಎಂದು ಎಂಇಐಎಲ್ ಉಪಾಧ್ಯಕ್ಷ ಪಿ.ರಾಜೇಶ್ ರೆಡ್ಡಿ ಪ್ರತಿಪಾದಿಸಿದ್ದಾರೆ.
ಜಾಗತಿಕ ಸಾಂಕ್ರಾಮಿಕ ಸೃಷ್ಟಿಸಿರುವ ಆಮ್ಲಜನಕ ಕೊರತೆ ನೀಗಿಸುವಲ್ಲಿ ಈ ಕ್ರೆಯೋಜೆನಿಕ್ ಆಕ್ಸಿಜನ್ ಪಾತ್ರ ಮಹತ್ವದ್ದಾಗಿದ್ದು, ಆಮ್ಲಜನಕ ಕೊರತೆ ಮತ್ತು ಪೂರೈಕೆ ನಡುವೆ ಎಂಇಐಎಲ್ ಸಂಪರ್ಕ ಸೇತುವಾಗಿ ತನ್ನ ಸೇವೆ ಒದಗಿಸುತ್ತಿದೆ.
ಥಾಯ್ಲೆಂಡ್ನಿಂದ ಆಮದು ಮಾಡಿಕೊಳ್ಳುತ್ತಿರುವ ಕ್ರೆಯೋಜೆನಿಕ್ ಟ್ಯಾಂಕರ್ ಒಂದರ ನಿರ್ಮಾಣಕ್ಕೆ ಮೂರು ತಿಂಗಳ ಅವಧಿ ಬೇಕಿದ್ದು, ಈ ಆಮದಿನಿಂದ ಬೃಹತ್ ಪ್ರಮಾಣದ ಆಮ್ಲಜನಕ ಕೊರತೆ ಸಮಸ್ಯೆ ನಿವಾರಣೆ ಸಾಧ್ಯವಾಗಲಿದೆ.
ಕೋವಿಡ್-19 ಎರಡನೇ ಅಲೆಯಿಂದ ದೇಶವೇ ತತ್ತರಿಸಿರುವ ಈ ಸಂದರ್ಭದಲ್ಲಿ ಮೆಘಾ ಎಂಜಿನಿಯರಿಂಗ್ ತನ್ನೆಲ್ಲಾ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಆಮ್ಲಜನಕ ಪೂರೈಕೆಯಲ್ಲಿ ತೊಡಗಿದೆ.
ಈಗಾಗಲೇ ತನ್ನ ಘಟಕಗಳನ್ನು ವೈದ್ಯಕೀಯ ಆಮ್ಲಜನಕವನ್ನು ಉತ್ಪಾದನೆ ಮಾಡುತ್ತಿರುವ ಎಂಇಐಎಲ್ ಉಚಿತ ಸರಬರಾಜಿನಲ್ಲಿ ತೊಡಗಿಕೊಂಡಿದ್ದು, ತನ್ನ ಬೊಲಾರಾಮ್ ಘಟಕದಲ್ಲಿ ಮೇ 9ರಿಂದ 21ರ ಅವಧಿಯಲ್ಲಿ ಪ್ರತಿ ನಿತ್ಯ ಅಂದಾಜು 400 ಸಿಲಿಂಡರ್ ಆಮ್ಲಜನಕವನ್ನು ಉತ್ಪಾದಿಸಿದ್ದು, 29,694 ಮೆಟ್ರಿಕ್ ಟನ್ನಷ್ಟು ವೈದ್ಯಕೀಯ ಆಮ್ಲಜನಕವನ್ನು ಉಚಿತವಾಗಿ ಸರಬರಾಜು ಮಾಡಿದೆ.
ಮೆಘಾ ಎಂಜಿನಿಯರಿಂಗ್ ತನ್ನ ಬೊಲಾರಾಮ್ ಘಟಕದಲ್ಲಿ ದಿನದ 24 ಗಂಟೆಗಳೂ ಆಮ್ಲಜನಕ ಉತ್ಪಾದನೆಯಲ್ಲಿ ತೊಡಗಿದ್ದು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಒರಿಸ್ಸಾ ರಾಜ್ಯಗಳ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಿದ್ದು, ಎಂಇಐಎಲ್ ಇದಕ್ಕಾಗಿಯೇ ಪ್ರತ್ಯೇಕ ತಂಡವನ್ನು ರಚಿಸಿ 24/7 ಕಾರ್ಯನಿರ್ವಹಿಸುತ್ತಿದೆ.