ಕೆಲ ಪಂಚಾಯಿತಿಗಳಲ್ಲಿ ಶೂನ್ಯಕ್ಕೆ ಬಂದ ಸೋಂಕು
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಗೆ ತಂದ ಪರಿಣಾಮದಿಂದ ಆರಂಭದಲ್ಲಿ ಶೇ.35ರಷ್ಟಿದ್ದ ಕೊರೋನಾ ಪಾಸಿಟಿವಿಟಿ ಪ್ರಮಾಣವು ಶೇ.5ಕ್ಕೆ ಇಳಿಕೆಯಾಗಿರುವುದು ಸಂತಸದ ವಿಷಯ ಹೀಗೆ ಗಣನೀಯ ಸಂಖ್ಯೆಯಲ್ಲಿ ಇಳಿಕೆಯಾಗಲು ಜಿಲ್ಲೆಯ ಜನರ, ಜನಪ್ರತಿನಿಧಿಗಳ ಹಾಗೂ ಜಿಲ್ಲಾಡಳಿತದ ಅಧಿಕಾರಿ/ಸಿಬ್ಬಂದಿಗಳ ಸಹಕಾರವೇ ಮುಖ್ಯ ಕಾರಣ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಕೈಗೊಂಡ ಸತತ ಪ್ರಯತ್ನದಿಂದಾಗಿ ಈ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣವನ್ನು ಶೇ.5ಕ್ಕೆ ಇಳಿಕೆ ಮಾಡಬೇಕೆಂಬ ಗುರಿಯನ್ನು ಕಳೆದ ತಿಂಗಳ ಆರಂಭದಲ್ಲಿ ಹೊಂದಲಾಗಿತ್ತು, ಜಿಲ್ಲಾಡಳಿತದ ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಕೋವಿಡ್ ಪಾಸಿಟಿವಿಟಿ ಪ್ರಮಾಣವು ಶೇ.5ಕ್ಕೆ ಇಳಿಕೆಯಾಗಿದೆ. ಸೋಂಕು ಕಡಿಮೆಯಾದ ಮಾತ್ರಕ್ಕೆ ಹಾಗೂ ಸರ್ಕಾರದ ಲಾಕ್ ಡೌನ್ʼನಲ್ಲಿ ಕೆಲವು ರಿಯಾಯಿತಿ ನೀಡಿದ ಮಾತ್ರಕ್ಕೆ ಜನರು ಎಚ್ಚರ ತಪ್ಪಬಾರದು. ಕೋವಿಡ್ʼನ ನಿಯಂತ್ರಣದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು ಒಂದು ವೇಳೆ ಎಚ್ಚರ ತಪ್ಪಿದಲ್ಲಿ ಮತ್ತೆ ಸೋಂಕು ಏರಿಕೆಯಾಗುವ ಸಾಧ್ಯತೆ ಇದೆ. ಕೊರೋನಾ ಶಿಸ್ತು ಮತ್ತು ಶಿಷ್ಟಾಚಾರವನ್ನು ತಪ್ಪದೇ ಮುಂದುವರಿಸಬೇಕೆಂದು ಅವರು ಕಿವಿಮಾತು ಹೇಳಿದರು.
ಮೇಳ್ಯ ಗ್ರಾಮ ಪಂಚಾಯಿತಿ ಕೊರೋನಾ ಮುಕ್ತ
ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಡದಲಮರಿ ಮತ್ತು ಗೌರಿಬಿದನೂರು ತಾಲೂಕಿನ ಮುದಲೋಡು ಗ್ರಾಮ ಪಂಚಾಯತಿಗಳು ಕೋವಿಡ್ ಸಕ್ರಿಯ ಪ್ರಕರಣಗಳನ್ನು ಶೂನ್ಯಕ್ಕೆ ತಂದು ಈಗಾಗಲೇ ಕೊರೊನಾ ಮುಕ್ತ ಗ್ರಾಮ ಪಂಚಾಯಿತಿಗಳಾಗಿದ್ದು, ಇದೀಗ ಹೊಸದಾಗಿ ಗೌರಿಬಿದನೂರು ತಾಲೂಕಿನ ಮೇಳ್ಯ ಗ್ರಾಮ ಪಂಚಾಯ್ತಿಯು ಈ ಪಟ್ಟಿಗೆ ಸೇರ್ಪಡೆಯಾಗಿ ಕರೋನಾ ಮುಕ್ತ ಗ್ರಾಮ ಪಂಚಾಯ್ತಿಯಾಗಿದೆ. ಜಿಲ್ಲೆಯಲ್ಲಿ ಮೂರು ಗ್ರಾಮ ಪಂಚಾಯಿತಿಗಳು ಸಂಪೂರ್ಣವಾಗಿ ಕೋವಿಡ್ ಮುಕ್ತವಾಗಿವೆ. ಇನ್ನುಳಿದ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ನಗರ ವ್ಯಾಪ್ತಿಯ ಬಹುತೇಕ ವಾರ್ಡುಗಳಲ್ಲಿ ಸಕ್ರಿಯ ಪ್ರಕರಣಗಳು ಒಂದಂಕಿಯಲ್ಲಿದ್ದು ಇನ್ನೊಂದು ವಾರದಲ್ಲಿ ಅವುಗಳನ್ನು ಶೂನ್ಯಕ್ಕೆ ತರಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಲಸಿಕೆಯೇ ಕೊನೆ ಅಸ್ತ್ರ
ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದರ ಜತೆ ಜೊತೆಗೆ ಲಸಿಕೀಕರಣವನ್ನು ಪರಿಣಾಮಕಾರಿಯಾಗಿ ಮಾಡುವುದೇ ಕರೋನಾವನ್ನು ಸಂಪೂರ್ಣವಾಗಿ ತೊಲಗಿಸಲು ಇರುವ ಕೊನೆ ಅಸ್ತ್ರ. ಆದ್ದರಿಂದ ಜಿಲ್ಲೆಯಲ್ಲಿ ಲಸಿಕೀಕರಣವನ್ನು ಆಂದೋಲನದ ರೀತಿಯಲ್ಲಿ ಹೆಚ್ಚು ಹೆಚ್ಚಾಗಿ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ವಿಕಲ ಚೇತನರ ಲಸಿಕೀಕರಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ 2ನೇ ಸ್ಥಾನ ಗಳಿಸಿದೆ ಎಂದರು ಅವರು.
ಲಾಕ್‌ಡೌನ್ ಸಹಕಾರಿ
ಜಿಲ್ಲೆಯಲ್ಲಿನ 157 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 1788 ಗ್ರಾಮಗಳಿದ್ದು ಈ ಪೈಕಿ 587 ಗ್ರಾಮಗಳು ಕೊರೋನಾ ಸೋಂಕಿಗೆ ಒಳಪಟ್ಟಿದ್ದು ಉಳಿದ 1,201 ಗ್ರಾಮಗಳನ್ನು ಕೊರೋನಾ ಮುಕ್ತ ಮಾಡಲಾಗಿದೆ. ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡ್ʼಗಳಿದ್ದು, ಈ ಪೈಕಿ 1, 5, 6, 7, 8, 9, 10, 12, 13, 14, 16, 17, 18, 19, 21, 22, 24, 28, 29 ಒಳಗೊಂಡಂತೆ ಬರೋಬ್ಬರಿ 19 ವಾರ್ಡ್ʼಗಳು ಕೊರೊನಾ ಮುಕ್ತ ವಾರ್ಡ್ʼಗಳಾಗಿವೆ. ಅದೇ ರೀತಿ ಗೌರಿಬಿದನೂರು ನಗರಸಭೆ (4, 9, 10, 16, 27) ಮತ್ತು ಬಾಗೇಪಲ್ಲಿ ಪುರಸಭೆ (4, 10, 12, 17, 19 )ಯಲ್ಲಿ ತಲಾ 5 ವಾರ್ಡ್ʼಗಳು ಕೊರೊನಾ ಮುಕ್ತವಾಗಿದ್ದು, ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 4(3, 16, 19, 28) ವಾರ್ಡ್ʼಗಳಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು ಶೂನ್ಯಕ್ಕೆ ಬಂದಿದೆ. ಉಳಿದಂತೆ ಚಿಂತಾಮಣಿ ನಗರಸಭೆ (18, 26, 29) ಮತ್ತು ಗುಡಿಬಂಡೆ ಪಟ್ಟಣ ಪಂಚಾಯಿತಿ (4, 6, 10)ಯ ತಲಾ 3 ವಾರ್ಡ್ʼಗಳು ಕೊರೊನಾ ಮುಕ್ತ ವಾರ್ಡ್ʼಗಳನ್ನಾಗಿ ಮಾಡಲಾಗಿದೆ. ಈ ಆರೋಗ್ಯಕರ ಬೆಳವಣಿಗೆಗೆ ಈ ಹಿಂದೆ ವಾರಕ್ಕೆ ನಾಲ್ಕು ದಿನಗಳ ಅವಧಿಗೆ 4 ಸಲ ಲಾಕ್‌ಡೌನ್ ಜಾರಿಗೆ ತರಲಾಗಿದೆ. ಲಸಿಕೀಕರಣವನ್ನು ಆಂದೊಲನದ ರೀತಿ ಮಾಡಿದ್ದು ಹಾಗೂ ಗ್ರಾಮ ಹಾಗೂ ವಾರ್ಡಗಳ ಕೋವಿಡ್ ಟಾಸ್ಕ್ʼಪೋರ್ಸ್ ಸಮಿತಿಗಳ ಉತ್ತಮ ಕಾರ್ಯವೈಖರಿಯ ಪರಿಣಾಮ ಕೊರೋನಾ ಸೋಂಕು ಈ ಮಟ್ಟಕ್ಕೆ ಇಳಿಯಲು ಸಹಕಾರಿಯಾಗಿದೆ ಎಂದರು.