ಕತ್ತಲೆಯಲ್ಲಿ ಕೋಲಾರ ಜಿಲ್ಲೆ; ಹೊತ್ತಿ ಉರಿಯಿತು ವಿದ್ಯುತ್ ಪ್ರಸರಣ ಕಚೇರಿ ಹಿಂದಿನ ವಿದ್ಯುತ್ ಸ್ವೀಕರಣಾ ಕೇಂದ್ರ
ಕೋಲಾರ: ಇಡೀ ಜಿಲ್ಲೆಗೆ ವಿದ್ಯುತ್ ಪೂರೈಕೆ ಮಾಡುವ ನಗರಕ್ಕೆ ಹೊಂದಿಕೊಂಡೇ ಇರುವ ನಗರದ ವಿದ್ಯುತ್ ಪ್ರಸರಣ ನಿಗಮದ ಕಚೇರಿ ಹಿಂದೆಯೇ ಇರುವ ಪವರ್ ಸ್ಟೇಷನ್‌ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಇಡೀ ಜಿಲ್ಲೆ ಕತ್ತಲೆಯಲ್ಲಿ ಮುಳುಗಿದೆ.
ಬೆಂಗಳೂರು ಹೆದ್ದಾರಿ ಹಾಗೂ ಕೋಲಾರಕ್ಕೆ ಸಂಪರ್ಕ ಕಲ್ಪಿಸುವ ಈ ಪವರ್ ಸ್ಟೇಷನ್ ಕೋಲಾರ ಶಾಸಕ ಶ್ರೀನಿವಾಸಗೌಡರ ಮನೆಗೆ ಕೇವಲ 500ರಿಂದ 600 ಮೀಟರ್ ದೂರದಲ್ಲಿದೆ. ಹೆಚ್ಚುಕಮ್ಮಿ ಈ ಜಾಗ ನಗರದ ಹೃದಯ ಭಾಗದಲ್ಲೇ ಇದ್ದು, ಸುತ್ತಲೂ ಮನೆಗಳಿವೆ.
ರಾಜ್ಯ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) 220 ಕೆಎ ಸಾಮರ್ಥ್ಯದ ಪವರ್ ಸ್ಟೇಷನ್‌ನ 110 ಎಂ.ವಿ.ಎ ಪವರ್ ಸ್ವೀಕರಣಾ ಟ್ರಾನ್ಸ್‌ಫಾರ್ಮರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಬೃಹತ್ ಅಗ್ನಿ ಅನಾಹುತ ಸಂಭವಿಸಿದೆ.
ಬೆಂಕಿ ದುರಂತದ ತೀವ್ರತೆ ಎಷ್ಟಿತ್ತೆಂದರೆ, ಬೆಂಕಿ ಕೆನ್ನಾಲಗೆ ಮುಗಿಲೆತ್ತರಕ್ಕೆ ಚಾಚಿತ್ತು. ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಅಂದಾಜು 5 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಗೊತ್ತಾಗಿದೆ. ನಾಲ್ಕೈದು ಗಂಟೆಗಳ ಹರಸಾಹಸ ನಡೆಸಿದ ನಂತರ ಬೆಂಕಿಯನ್ನು ಅಗ್ನಿಶಾಮಕ ದಳ ನಂದಿಸಿದ್ದು, ಈಗ ದುರಂತಕ್ಕೆ ಕಾರಣವಾದ ಅಂಶಗಳನ್ನು ಪತ್ತೆ ಹಚ್ಚುವುದರ ಜತೆಗೆ, ವಿದ್ಯುತ್ ಪೂರೈಕೆ ಮರುಸ್ಥಾಪನೆಗೆ ಅಧಿಕಾರಿಗಳು, ತಂತ್ರಜ್ಞರು ಪ್ರಯತ್ನ ಮಾಡುತ್ತಿದ್ದಾರೆ.
ಹೇಗಾಯಿತು ಘಟನೆ?
ಕೆಪಿಟಿಸಿಎಲ್‌ನ 220 ಕೆವಿ ಸ್ಟೇಷನ್‌ನ ೬೬ ಕೆವಿ ಬೂಸ್ಟಿಂಗ್ ಪ್ಲಾಷ್‌ನಿಂದಾಗಿ ಆಕಸ್ಮಿಕವಾಗಿ ಬೆಂಕಿಯ ಕಿಡಿ ಕಾಣಿಸಿಕೊಂಡಿದೆ. ಆ ಕಿಡಿ ಕಾಣಿಸಿಕೊಂಡ ಕ್ಷಣ ಮಾತ್ರದಲ್ಲಿ ವಿದ್ಯುತ್ ಕೇಂದ್ರದಲ್ಲಿ ಭಾರೀ ಬೆಂಕಿ ಜ್ವಾಲೆಗಳು ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿದೆ. ಈ ಘಟನೆ ಕೋಲಾರ ನಗರ ಸೇರಿ ಇಡೀ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ. ಅಪರಾಹ್ನ 3 ಗಂಟೆ ಹೊತ್ತಿಗೆ ಅವಗಢ ಸಂಭವಿಸಿದೆ ಎಂಬ ಮಾಹಿತಿ ಸಿಕ್ಕಿದೆ.
ವಿದ್ಯುತ್ ಕೇಂದ್ರದ ಟ್ರಾನ್ಸ್‌ಫಾರ್ಮರ್‌ನಲ್ಲಿ 39,000 ಲೀಟರ್ ಓಸೀಲ್ ಆಯಿಲ್ ತುಂಬಿತ್ತು. ಈ ಕಾರಣಕ್ಕೆ ಬೆಂಕಿ ನಂದಿವುದಕ್ಕೆ ಬಹಳ ಸಮಯ ಹಿಡಿಯುತು. ಜತೆಗೆ, ದಟ್ಟಹೊಗೆ ಮತ್ತು ಬೆಂಕಿಯ ಕೆನ್ನಾಲಗೆಗಳು ತೀವ್ರವಾಗಿ ಕಾಣಿಸಿಕೊಂಡ ಪರಿಣಾಮ ಬೆಂಕಿ ಹತೋಟಿಗೆ ಬರುವುದಕ್ಕೆ ಕೆಲ ಗಂಟೆಗಳೇ ಬೇಕಾಯಿತು. ಒಟ್ಟು ನಾಲ್ಕು ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಭಸ್ಮವಾಗಿವೆ ಎಂದು ಗೊತ್ತಾಗಿದೆ.
ಘಟನೆ ಸುದ್ದಿ ಕಾಳ್ಗಿಚ್ಚಿನಂತೆ ಇಡೀ ನಗರವನ್ನು ವಾಪಿಸಿತು. ಎಲ್ಲೆಲ್ಲೂ ಆತಂಕ ಮನೆ ಮಾಡಿತ್ತು. ಜನರು ವಿದ್ಯುತ್ ಕೇಂದ್ರದತ್ತ ಧಾವಿಸಿ ಬಂದರು. ದಟ್ಟ ಹೊಗೆ ಮತ್ತು ಬೆಂಕಿಯನ್ನು ಕಂಡು ಅಕ್ಕಪಕ್ಕದ ಮನೆಗಳವರು ಹೊರಗೆ ಓಡಿಬಂದರು.
ಈ ಸುದ್ದಿ ಬರೆಯುವ ಹೊತ್ತಿಗೆ ಕೋಲಾರ, ಬಂಗಾರಪೇಟೆ, ಮುಳಬಾಗಿಲು, ನಂಗಲಿ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಪುನರುದ್ಧಾರ ಆಗಿರಲಿಲ್ಲ. ಸ್ಥಳಕ್ಕೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಧಾವಿಸಿಬಂದು ಪರಿಶೀಲನೆ ನಡಸಿದ್ದಾರೆ. ಬೆಂಗಳೂರಿನಿಂದ ಟೆಕ್ನಿಕಲ್ ಟೀಮ್ ಕೂಡ ಬಂದಿದೆ.