ಕಾಂಗ್ರೆಸ್‌ಗೆ ಬರುವ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ
ಮೈಸೂರು: ಬಿಜೆಪಿ, ಜೆಡಿಎಸ್ ತೊರೆಯುವ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಲ್ಲಿ ಮಾಧ್ಯಮ ಪ್ರತಿನಿಧಿಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮತ್ತವರ ಪುತ್ರ ವಿಜಯೇಂದ್ರ ಭ್ರಷ್ಟಾಚಾರದಿಂದ ಬಿಜೆಪಿ ಶಾಸಕರ ನೈತಿಕ ಶಕ್ತಿ ಕುಗ್ಗಿದೆ. ಬಿಜೆಪಿ ಮತ್ತು ಜೆಡಿಎಸ್ ಕೆಲ ಶಾಸಕರು ಕಾಂಗ್ರೆಸ್ ಸೇರಲು ಯತ್ನಿಸುತ್ತಿದ್ದಾರೆ ಎಂದರು.
ಮೈಸೂರು ಭಾಗದ ಜೆಡಿಎಸ್, ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆಂದು ಹೇಳಿದ ಅವರು, ಸಂಪರ್ಕದಲ್ಲಿರುವ ಶಾಸಕರ ಹೆಸರು ಮತ್ತು ಸಂಖ್ಯೆಯನ್ನು ಈಗಲೇ ಬಹಿರಂಗಪಡಿಸಲ್ಲ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರು ಪಕ್ಷಕ್ಕೆ ಬರುವವರನ್ನು ಆಹ್ವಾನಿಸಿದ್ದಾರೆ. ಪಕ್ಷಕ್ಕೆ ಬರುವವರ ಬಗ್ಗೆ ಅಲ್ಲಂ ವೀರಭದ್ರಪ್ಪ ಸಮಿತಿ ಪರಿಶೀಲನೆ ಮಾಡುತ್ತದೆ ಎಂದರು.
ರಾಜ್ಯದಲ್ಲಿ ಬಿಜೆಪಿ ವೈಫಲ್ಯ ಸಾಕಷ್ಟಿದೆ. ಯಡಿಯೂರಪ್ಪ ಗೋಲ್ಡನ್ ಆಪರ್ಚುನಿಟಿ ಮಿಸ್ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ಆರೋಪ ಇದ್ದರೂ ವರಿಷ್ಠರು ಸಿಎಂ ಬದಲಾವಣೆ ಮಾಡುತ್ತಿಲ್ಲ. ಹೈಕಮಾಂಡ್ ಬೆಂಬಲ ಇಲ್ಲದೆ ಯತ್ನಾಳ್, ವಿಶ್ವನಾಥ್ ಮಾತನಾಡಲು ಸಾಧ್ಯವೇ? ಹೈಕಮಾಂಡ್ ಅವರೇ ಮಾಹಿತಿ ಕೊಟ್ಟು ಯತ್ನಾಳ್‌ರಿಂದ ಹೇಳಿಕೆ ಕೊಡಿಸುತ್ತಿದ್ದಾರೆಂದು ಧ್ರುವನಾರಾಯಣ ದೂರಿದರು.
ಅತ್ಯಂತ ಭ್ರಷ್ಟ ಸರಕಾರ ಇದು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟಿದೆ. ಆದರೆ ಈ ಸರಕಾರದ ಭ್ರಷ್ಟಾಚಾರದ ಬಗ್ಗೆ ಸಚಿವರು, ಶಾಸಕರೇ ಹೇಳ್ತಿದ್ದಾರೆಂದರು. ಹೀಗಾಗಿ ಬಿಜೆಪಿಯಲ್ಲಿ ಮುಂದುವರಿಯಲು ಕೆಲ ಶಾಸಕರಿಗೆ ನೈತಿಕತೆ ಕುಂದಿದೆ. ಕಾಂಗ್ರೆಸ್ ಸೇರಲು ಆಸಕ್ತಿ ತೋರುತ್ತಿದ್ದಾರೆ.
ಆರ್.ಧ್ರುವನಾರಾಯಣ
ಸಂಚಲನ ಉಂಟು ಮಾಡಿದ ಹೇಳಿಕೆ
ಈ ನಡುವೆ ಧ್ರುವನಾರಾಯಣ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲ ಉಂಟು ಮಾಡಿದೆ. ಒಂದೆಡೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಮಂತ್ರಿಗಳಾಗಿರುವ ಎಲ್ಲರೂ ಪಕ್ಷಕ್ಕೆ ಮರಳಲು ಅರ್ಜಿ ಹಾಕಿಕೊಳ್ಳಬಹುದು ಎಂದು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿ ಆಗಿದೆ. ಆದರೆ, ಬ್ರಹ್ಮ ಬಂದು ಹೇಳಿದರೂ ಪಕ್ಷಕ್ಕೆ ದ್ರೋಹ ಮಾಡಿದವರನ್ನು ಮರಳಿ ಸೇರಿಸಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ.
ಇವರಿಬ್ಬರ ಹೇಳಿಕೆ ಉತ್ತರ ದಕ್ಷಿಣದಂತೆ ಇದ್ದರೂ ಮೈಸೂರು ಭಾಗದವರೇ ಆದ ಧ್ರುವನಾರಾಯಣ ಕೊಟ್ಟಿರುವ ಹೇಳಿಕೆ ಸ್ವತಃ ಪಕ್ಷದಲ್ಲಿ ಕೆಲವರಿಗೆ ಅಚ್ಚರಿ ಉಂಟು ಮಾಡಿದೆ. ಪಕ್ಷದ ಶಿಸ್ತಿನ ಸಿಪಾಯಿ ಅದ ಧ್ರುವನಾರಾಯಣ್ ನೀಡಿರುವ ಹೇಳಿಕೆಯನ್ನು ಕೆಲವರು ಗೆ ಬಗೆಯಲ್ಲಿ ಡಯಾಗ್ನೈಸ್ ಮಾಡುತ್ತಿದ್ದಾರೆ.
ಮತ್ತೊಂದೆಡೆ, ಬಿಜೆಪಿಯಲ್ಲಿ ಆರ್.ಧ್ರುವನಾರಾಯಣ ಹೇಳಿಕೆ ದೊಡ್ಡ ಕಂಪನವನ್ನೇ ಸೃಷ್ಟಿ ಮಾಡಿದೆ. ಅವರ ಸಂಪರ್ಕದಲ್ಲಿ ಯಾವ ಶಾಸಕರು, ಸಚಿವರು ಇರಬಹುದು ಎಂದು ಲೆಕ್ಕಾಚಾರದಲ್ಲಿ ಮುಳುಗಿದೆ ಎಂದು ಮೂಲವೊಂದು ತಿಳಿಸಿದೆ.
ಆಪರೇಷನ್ ಕಮಲಕ್ಕೆ ಸಿಕ್ಕಿ ಪಕ್ಷಕ್ಕೆ ಬಂದರಾರೂ ಈವರೆಗೂ ಪಕ್ಷಕ್ಕೆ ಒಗ್ಗಿಕೊಂಡಿಲ್ಲ. ಅವರು ಬಂದಿದ್ದು ಅಧಿಕಾರಕ್ಕಾಗಿ. ಇವತ್ತೇ ಅವರು ಪಕ್ಷ ಬಿಟ್ಟು ಹೋದರೂ ಹೈಕಮಾಂಡ್ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ಇದು ಯಡಿಯೂರಪ್ಪ ಅವರ ಸರಕಾರವೇ ಹೊರತು ಬಿಜೆಪಿ ಸರಕಾರವಲ್ಲ ಎಂಬುದು ಹಿರಿಯ ಪತ್ರಕರ್ತರೊಬ್ಬರು ಹೇಳುವ ಮಾತು.