by Ra Na Gopala Reddy Bagepalli
ಬಾಗೇಪಲ್ಲಿ: ಮಳೆಗಾಲದ ನಡುವೆ ಹಳ್ಳಿಜನರ ಮೊಗದಲ್ಲಿ ಮಂದಹಾಸ ಮೂಡಿದೆ.
ಪ್ರಕೃತಿಯು ಸಕಲ ಜೀವಿಗಳಿಗೂ ಜೀವಿಸಲು ಅನುವಾಗುವ ಎಲ್ಲವನ್ನೂ ಕೊಡುಗೆಯಾಗಿ ನೀಡಿದ್ದು, ಇಂತಹ ಪ್ರಕೃತಿಯನ್ನು ದುರಾಸೆಯಿಂದ ದೋಚದೆ ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ಎಲ್ಲ ಜೀವಿಗಳು ಬದುಕಲು ಅವಕಾಶ ಕಲ್ಪಿಸಬೇಕು ಎನ್ನುವ ತತ್ವದೊಂದಿಗೆ ರೈತ ಭೂಮಿ ತಾಯಿಯನ್ನೇ ನಂಬಿಕೊಂಡಿದ್ದಾನೆ.
ಅದಕ್ಕೆ ಪೂರಕವಾಗಿ ಕಾಲಕ್ಕನುಗುಣವಾಗಿ ಹಲವು ಆಹಾರ ಪದಾರ್ಥಗಳನ್ನು ಪ್ರಕೃತಿ ನೀಡುತ್ತದೆ. ಅಂಥವುಗಳಲ್ಲಿ ಅಣಬೆ ಕೂಡ ಒಂದು.
ಅಣಬೆಯು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ವಿಪುಲವಾದ ಪೌಷ್ಠಿಕಾಂಶಗಳನ್ನು ಹೊಂದಿದೆ. ಮಳೆಗಾಲ ಬಂದರೆ ಕೆಲ ತಿಂಗಳ ಕಾಲ ಇದು ಸಿಗುತ್ತದೆ. ಈ ಅಣಬೆಗಳೆಂದರೆ ಕೆಲವರಿಗೆ ಬಲು ಪ್ರೀತಿ. ಬಲು ರುಚಿಕರವಾದ ಈ ಅಣಬೆಗಳು ತಾಲೂಕಿನ ಮಾಡಪಲ್ಲಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಬೆಳೆದಿದ್ದವು. ಗುರುವಾರ ಅವು ಸಿಕೆನ್ಯೂಸ್ ನೌ ಕಣ್ಣಿಗೆ ಬಿದ್ದವು.
“ಅಣಬೆಗಳಿಂದ ಮಾಡಿದ ಸಾಂಬಾರೆಂದರೆ ನನಗೆ ಬಲು ಇಷ್ಟ. ಮಳೆಗಾಲದಲ್ಲಿ ಮುಂಜಾನೆಯೇ ಎದ್ದು ಹುಡುಕುತ್ತಾ ಹೊಲಗದ್ದೆಗಳನ್ನು ತಿರುಗಾಡಿ ಮನೆಗೆ ತರುತ್ತೇನೆ” ಎಂದು ರೈತ ಲಕ್ಷ್ಮೀನರಸಿಂಹಪ್ಪ ತಿಳಿಸಿದರು.