ನವದೆಹಲಿ: ಡಿಜಿಟಲ್ ಪಾವತಿ ವ್ಯವಸ್ಥೆಗೆ ಉತ್ತೇಜ ನೀಡುವ ಉದ್ದೇಶಕ್ಕಾಗಿ ಕೇಂದ್ರ ಸರಕಾರವೇ ಅಭಿವೃದ್ಧಿಪಡಿಸಿರುವ ʼಇ-ರುಪಿʼಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೇಶಕ್ಕೆ ಸಮರ್ಪಣೆ ಮಾಡಿದರು.
ಸರಕಾರದ ಹಣಕಾಸು ಸೌಲಭ್ಯಗಳು ಸೋರಿಕೆಯಾಗದೆ, ಅಂದರೆ ಮೂರನೇ ಕೈ ಪ್ರಮೇಯ ಇಲ್ಲದೇ ವೇರವಾಗಿ ಜನರಿಗೇ ತಲುಪಿಸುವ ಉದ್ದೇಶದಿಂದ ಇ-ರುಪಿ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಈ ಮೂಲಕ ಪ್ರತಿಯೊಬ್ಬ ಪ್ರಜೆಗೂ ಅನುಕೂಲವಾಗಲಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ಡಿಜಿಟಲ್ ಆಡಳಿತಕ್ಕೆ ಹೊಸ ಆಯಾಮ ನೀಡುವ ದಿಸೆಯಲ್ಲಿ ಭಾರತ ಇಂದು ಮಹತ್ವದ ಹೆಜ್ಜೆ ಇರಿಸಿದೆ. ಈಗಾಗಲೇ ಇರುವ ಡಿಜಿಟಲ್ ಪಾವತಿಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಇ-ರುಪಿ ಹೆಚ್ಚು ಪರಿಣಾಮಕಾರಿಯಾಗಿ ನೆರವಾಗುತ್ತದೆ. ಇದು ಅತ್ಯಂತ ಪಾರದರ್ಶಕ ಹಾಗೂ ಸೋರಿಕೆ ರಹಿತವಾಗಿರುತ್ತದೆ ಎಂದು ಅವರು ವಿವರಿಸಿದರು.
ಮೊದಲಿಗೆ ಇ-ರುಪಿ ಸೇವೆಯನ್ನು ಆರೋಗ್ಯಕ್ಕೆ ಸಂಬಂಧಿಸಿದ ಹಣ ಪಾವತಿಗೆ ಬಳಕೆ ಮಾಡಲಾಗುವುದು. ಅಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿ ಮಾಡಿ ಕೊವಿಡ್ ಲಸಿಕೆ ಪಡೆಯುವವರು ಸೇರಿ ತಮ್ಮ ಸುತ್ತಮುತ್ತಲಿನ ನೂರು ಜನರಿಗೆ ಕೊವಿಡ್ ಲಸಿಕೆ ನೀಡಲು ನೆರವಾಗುವವರಿದ್ದರೆ ಅಂಥವರು ಇ-ರುಪಿ ವೋಚರ್ ಪಡೆಯಬಹುದು. ಭವಿಷ್ಯದ ದಿನಗಳಲ್ಲಿ ಆಹಾರ ವಿತರಣೆ, ಆರೋಗ್ಯ ಸೇವೆ ಸೇರಿ ವಿವಿಧ ವಲಯಗಳಲ್ಲಿ ಇ-ರುಪಿ ಬಳಕೆ ಮಾಡಲಾಗುವುದು ಎಂದು ಪ್ರಧಾನಿ ಹೇಳಿದರು.
ಬಳಕೆ ಹೇಗೆ?
ಇ-ರುಪಿ ಪಾವತಿ ವ್ಯವಸ್ಥೆಯಲ್ಲಿ ಫಲಾನುಭವಿಗಳು ಎಲೆಕ್ಟ್ರಾನಿಕ್ ವೋಚರ್ ಅಥವಾ ಕೂಪನ್ಗಳನ್ನು ಪಡೆಯುತ್ತಾರೆ. ಅವುಗಳನ್ನು ಅವರು ಆನ್ಲೈನ್ ಬ್ಯಾಂಕಿಂಗ್, ಪೇಮೆಂಟ್ ಅಪ್ಲಿಕೇಷನ್ ಇಲ್ಲವೇ ಯಾವುದೇ ಸಾಂಪ್ರದಾಯಿಕ ಪಾವತಿ ವಿಧಾನರಹಿತವಾಗಿ ಬಳಸಬಹುದು. ಇನ್ನೂ ಸರಳವಾಗಿ ಹೇಳುವುದಾದರೆ, ಇ-ರುಪಿ ಕೂಪನ್ಗಳನ್ನು ಕ್ಯೂ ಆರ್ ಕೋಡ್ ಎಸ್ಎಂಎಸ್ ಸ್ಟ್ರಿಂಗ್ ಆಧಾರವಾಗಿ ಬಳಕೆ ಮಾಡಬಹುದು.
ಕೇಂದ್ರ ಸರಕಾರವು ಇ-ರುಪಿ ಮೂಲಕ ಫಲಾನುಭವಿಗಳಿಗೆ ಹಣ ವರ್ಗಾಯಿಸಲು ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಮುಖ್ಯವಾಗಿ ಆರೋಗ್ಯ ಸೇವೆಗಳಿಗಾಗಿ ಆಸ್ಪತ್ರೆಗಳಲ್ಲೂ ಗ್ರಾಹಕರು ಬಳಕೆ ಮಾಡಬಹುದು. ಕೇಂದ್ರದ ಹಣಕಾಸು ಸೇವಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಹಾಗೂ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಇ-ರುಪಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಅಲ್ಲದೆ, ಈ-ರುಪಿ ತಂತ್ರಾಂಶವು ಯುಪಿಐ ಐಡಿ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಯಾವುದೇ ಮಧ್ಯವರ್ತಿಯ ಪಾತ್ರವಿಲ್ಲದೆ ನೇರವಾಗಿ ಆಯಾ ವ್ಯಕ್ತಿಗೆ ಹಣ ಪಾವತಿಯಾಗುತ್ತದೆ.