by DG Pavan Kalyan Devikunte
ಪಕ್ಷಿ ಸಂಕುಲ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ರಕೃತಿಯಲ್ಲಿ ಅನೇಕ ಬಗೆಯ ಹಕ್ಕಿಗಳನ್ನು ನೋಡಬಹುದು. ಈ ಎಲ್ಲಾ ಹಕ್ಕಿಗಳ ಪೈಕಿ ವಿಭಿನ್ನ ಲೈಫ್ ಸ್ಟೈಲ್ ಮತ್ತು ವೈವಿಧ್ಯಮಯ, ಬುದ್ಧಿವಂತಿಕೆಯ ಲಕ್ಷಣ ಹೊಂದಿರುವ ಹಕ್ಕಿ ಎಂದರೆ ಗೀಜಗ.
ಮುಂಗಾರು ಸಮಯದಲ್ಲಿ ಹೆಚ್ಚಾಗಿ ಗೀಜಗ ಹಕ್ಕಿಗಳು ಕಾಣಿಸಿಕೊಳ್ಳುತ್ತವೆ. ಹೊಲಗಳಲ್ಲಿ ಫಸಲು ತುಂಬಿರುವ ಸಮಯದಲ್ಲಿ ಅವು ಗೂಡು ಕಟ್ಟುವುದು ಸಾಮಾನ್ಯ. ಗುಂಪು ಹಾರುತ್ತಾ, ಹೊಲಗಳ ಬದುಗಳ ಮೇಲೆ ಸಾಲಾಗಿ ಕೂತು ಪಕ್ಷಿ ಪ್ರೇಮಿಗಳನ್ನು ಪುಳಕಗೊಳಿಸುತ್ತವೆ.
ಗೀಜಗ ಗೂಡು ಬಗೆ ಗೊತ್ತಾ?
ಮೊದಲು ಗಂಡು ಗೀಜಗ ಗೂಡು ಕಟ್ಟಲು ಪ್ರಾರಂಭಿಸುತ್ತದೆ. ತದ ನಂತರ ಮನುಷ್ಯರಂತೆ ಜೋಡಿ ಗೀಜಗ ಹಕ್ಕಿಗಳ ನಡುವೆಯೇ ಒಪ್ಪಂದಗಳಿರುತ್ತವೆ. ಆ ಒಪ್ಪಂದಗಳೇ ರೋಮಾಂಚಕ ಮತ್ತು ಕುತೂಹಲಕಾರಿ ಎಂದು ಆ ಪಕ್ಷಿಗಳನ್ನು ಬಾಲ್ಯದಿಂದ ನೋಡುತ್ತಾ ಬಂದಿರುವ ಹಳ್ಳಿಗಳ ಹಿರಿಯರು ಹೇಳುತ್ತಾರೆ.
ಗಂಡು ಗೀಜಗ ತಾನು ಕಟ್ಟಿದ ಅರ್ಧಗೂಡನ್ನು ಹೆಣ್ಣು ಗೀಜುಗಕ್ಕೆ ತೋರಿಸುತ್ತದೆ. ಅದು ಒಪ್ಪಿದರೆ ಆ ಗೂಡನ್ನು ಪೂರ್ಣಗೊಳಿಸುತ್ತದೆ. ಹೆಣ್ಣು ಗೀಜಗ ಮೊಟ್ಟೆ, ಮರಿಗಳ ಯೋಗ-ಕ್ಷೇಮ ನೋಡಿಕೊಂಡು ಗೂಡಿನಲ್ಲಿದ್ದರೆ, ಗಂಡು ಗೀಜುಗ ಆಹಾರ ಹುಡುಕಿ ತಂದು ಹೆಣ್ಣು ಗೀಜುಗ, ಪುಟಾಣಿ ಗೀಜುಗವನ್ನು ಪೋಷಿಸುತ್ತದೆ. ಥೇಟ್ ಗಂಡ-ಹೆಂಡತಿ ಸಂಸಾರದಂತೆ ಗೀಜಗ ಸಂಸಾರವೂ ಸಾಗುತ್ತದೆ.
ಇನ್ನು ಗಂಡು ಗೀಜಗ ಗೂಡು ಕಟ್ಟುವಾಗ ಕಠಿಣ ಪರಿಶ್ರಮದಿಂದ ದಿನಕ್ಕೆ ನೂರಾರು ಸಲ ಕಡ್ಡಿಗಳು, ಹುಲ್ಲನ್ನು ಹೊಲ ಗದ್ದೆಗಳಿಂದ ಹೆಕ್ಕಿ ತಂದು ಗೂಡು ಕಟ್ಟುತ್ತದೆ.
ಗೂಡು ಕಟ್ಟಲು ಗೀಜಗ ಸಾಮಾನ್ಯವಾಗಿ ಉದ್ದನೆಯ ಹುಲ್ಲು, ತೆಂಗಿನ ನಾರು, ರಾಗಿ ಹುಲ್ಲು, ಜೋಳದ ಹೊಲದಲ್ಲಿ ತನ್ನ ಕೊಕ್ಕಿನ ಸಹಾಯದಿಂದ ತಂದು ಗೂಡನ್ನು ಕಟ್ಟುತ್ತದೆ. ನಾವು ಮನೆ ಕಟ್ಟುವಾಗ ಒಂದೊಂದೇ ಇಟ್ಟಿಗೆಯನ್ನು ಪೇರಿಸಿದಂತೆ ಗೀಜಗ ಕೂಡ ಅದೇ ರೀತಿಯಲ್ಲಿ ತನ್ನ ಗೂಡನ್ನು ಹಂತ ಹಂತವಾಗಿ ನಾಜೂಕಾಗಿ ಕಟ್ಟುತ್ತಾ ಹೋಗುತ್ತದೆ.
ವಿಶೇಷವೆಂದರೆ; ಗೀಜಗ ತನ್ನ ಗೂಡನ್ನು ಸುರಕ್ಷಿತ ಸ್ಥಳದಲ್ಲಿ ಕಟ್ಟುತ್ತದೆ. ಕೆರೆಯ ನೀರಿನೆಡೆಗೆ ಬಾಗಿರುವ ಜಾಲಿ ಮರ, ಪಾಳು ಬಿದ್ದಿರುವ ಬಾವಿ, ಕುಂಟೆ, ಬಾವಿ, ನದಿ, ದೊಡ್ಡ ಕಾಲುವೆ ಮತ್ತಿತರೆ ದಡಗಳಲ್ಲಿರುವ ಬೇವಿನ ಮರ, ಈಚಲ ಮರ, ಹೊಂಗೆ ಮರ, ಜಾಲಿ ಮರ ಮತ್ತಿತರೆ ಮರಗಳ ಕೊಂಬೆ ಅಂಚಿನ ರೆಂಬೆಗಳಿಗೆ ಗೂಡು ಹೆಣಿಯುತ್ತದೆ.
- ಬಾಗೇಪಲ್ಲಿ ದೇವಿಕುಂಟೆ ಈಚಲು ಮರದಲ್ಲಿ ಗೀಜಗ ಗೂಡುಗಳು.
ರೆಂಬೆಯ ಕೊನೆಯಂಚಿನಲ್ಲಿ ಗೀಜಗ ಗೂಡು ಕಟ್ಟಲು ಕಾರಣ ಏನೂ ಅಂತೀರಾ? ಗರುಡ, ಅಳಿಲು, ಮುಂಗುಸಿ, ಹಾವು ಆಕ್ರಮಣಕಾರಿ ಪ್ರಾಣಿಗಳ ಕೈಗೆಟುಕದಿರಲಿ ಎಂದು ಅಂಥ ಕಡೆ ಗೂಡು ಕಟ್ಟಿಕೊಳ್ಳುತ್ತದೆ. ಇದು ಗೀಜಗನ ಕುಶಲತೆ, ಬುದ್ದಿವಂತಿಕೆಗೆ ಸಾಕ್ಷಿ. ಈ ಹಕ್ಕಿಯನ್ನು ಯಾವುದೇ ಡಿಗ್ರಿ ಪಡೆಯದ ನೇಕಾರ ಅಥವಾ ಎಂಜಿನಿಯರ್ ಎಂದು ಜನರು ಅಕ್ಕರೆಯಿಂದ ಕರೆಯುತ್ತಾರೆ.
ಗೀಜಗ ಗುಂಪು ಜೀವಿ. ದವಸ ಧಾನ್ಯಗಳ ತೋಟದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದು ಪ್ರಕೃತಿಯಲ್ಲಿ ಸ್ವತಂತ್ರ್ಯವಾಗಿ ಹಾರಾಡುವ ಹಕ್ಕಿ. ತನ್ನದೇ ಆದ ವಿಶಿಷ್ಟ್ಯತೆಯನ್ನು ಹೊಂದಿದೆ.
ಅಂದಹಾಗೆ, ಗೀಜುಗ ಸಂಕುಲದಲ್ಲಿ ಮೂರು ಉಪ ಜಾತಿಗಳು ಇವೆ. ಮುಖ್ಯವಾಗಿ ಹಳದಿ ಬಣ್ಣದ ಗುಬ್ಬಚ್ಚಿ ರೀತಿಯ ಕಪ್ಪು ಮಚ್ಚೆಗಳು ಇರುವ ಗೀಜಗ. ಕಡುಕಪ್ಪು ಬಣ್ಣದ ಕೊಕ್ಕೆಯನ್ನು ಹೊಂದಿರುವ ಗೀಜಗವೂ ಇದೆ. ಗೀಜುಗ ಹಕ್ಕಿಗಳು ಹೆಚ್ಚಾಗಿ ಭಾರತ, ಬರ್ಮಾ, ಪಾಕಿಸ್ತಾನ, ಶ್ರೀಲಂಕಾ ದೇಶಗಳ ಬಯಲು ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಈ ಹಕ್ಕಿಯ ಆಹಾರವು ಸಾಮಾನ್ಯವಾಗಿ ಚಿಕ್ಕ ಕ್ರಿಮಿ ಕೀಟಗಳು, ದವಸ ಧಾನ್ಯ.
ಗೀಜಗವು ಹೊಲಗಳಲ್ಲಿ ಭತ್ತ, ಮೆಕ್ಕೆ, ಜೋಳ, ಸಜ್ಜೆ, ರಾಗಿ ಬೆಳೆ ಕಟಾವಿನ ಸಂದರ್ಭದಲ್ಲಿ ನೂರಾರು ಸಂಖ್ಯೆಯ ಗೀಜಗಗಳು ಹಿಂಡು ಹಿಂಡಾಗಿ ಬೆಳೆಗಳಲ್ಲಿ ಕೂತಿರುತ್ತವೆ.
ರೈತರ ಜಮೀನಿನಲ್ಲಿರುವ ಮರ, ಗಿಡ, ಪೊದೆಗಳಲ್ಲಿ ರಾತ್ರಿ ವೇಳೆ ಒಂದೇ ಮರದಲ್ಲಿ ನೂರಾರು ಗೀಜಗಗಳು ಒಂದೇ ಕಡೆ ಮಲಗುತ್ತವೆ. ಗೀಜಗನ ಹಕ್ಕಿ ಬದುಕು ಒಂದು ಅದ್ಭುತ.
ಡಿ.ಜಿ ಪವನ್ ಕಲ್ಯಾಣ್
- ಓದಿದ್ದು ಇಂಗ್ಲೀಷ್ ಲಿಟರೇಚರ್. ಆಸಕ್ತಿ ಇತಿಹಾಸ ಮತ್ತು ಪ್ರವೃತ್ತಿ ಇತಿಹಾಸ ಸಂಶೋಧನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐತಿಹಾಸಿಕ ತಾಣಗಳ ಬಗ್ಗೆ ಅತೀವ ಆಸಕ್ತಿ. ದೇವಿಕುಂಟೆ, ಗುಮ್ಮನಾಯಕನ ಪಾಳ್ಯ ಕೋಟೆಗಳ ಕುರಿತು ಆಳ ಶೋಧ ಮಾಡುತ್ತಿರುವ ಲೇಖಕರು, ರಾಜ್ಯದ ಗಡಿಭಾಗವನ್ನು ಆಳಿದ ವಿವಿಧ ಪಾಳೇಯಗಾರರ ಆಡಳಿತದ ಮೇಲೆ ಬೆಳಕು ಚೆಲುವ ಕೆಲಸ ಮಾಡುತ್ತಿದ್ದಾರೆ.