ದಶಪಥ ಯೋಜನೆ ನಿಮ್ಮದಲ್ಲ ಮಿಸ್ಟರ್ ಪ್ರತಾಪ ಸಿಂಹ ಎಂದ ಹಳ್ಳಿಹಕ್ಕಿ
ಮೈಸೂರು: ಕೇಂದ್ರ ಸಚಿವರು ಕೈಗೊಂಡಿರುವ ಜನಾಶೀರ್ವಾದ ಯಾತ್ರೆಯಿಂದ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿದೆ ಎಂದು ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ತಮ್ಮದೇ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಕೂಡಲೇ ಎಲ್ಲಾ ರಾಜಕೀಯ ಸಭೆ-ಸಮಾರಂಭ, ಮೆರವಣಿಗೆಗಳನ್ನು ಸ್ಥಗಿತಗೊಳಿಸಬೇಕು. ಕೋವಿಡ್ ಹರಡಲು ಇದೇ ಪ್ರಮುಖವಾದ ಕಾರಣವಾಗಿದೆ ಎಂದು ಹೇಳಿದರು.
ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಂದಲೇ ಸಮಸ್ಯೆ ಹೆಚ್ಚು. ರಾಜಕೀಯ ಪಕ್ಷಗಳು ಜನ ಗುಂಪಾಗಿ ಸೇರುವ ಕಾರ್ಯಕ್ರಮಗಳನ್ನ ಬಿಡಿ. ವೀಕೆಂಡ್ ಕರ್ಫ್ಯೂ ಅಗತ್ಯವಿಲ್ಲ, ವೀಕೆಂಡ್ ಕರ್ಫ್ಯೂನಿಂದ ಕೊರೊನಾ ಕಂಟ್ರೋಲ್ ಆಗಲ್ಲ. ಶಾಲಾ ಕಾಲೇಜುಗಳು ಆರಂಭವಾಗುವುದರಿಂದ ಕೋವಿಡ್ ಹರಡಲ್ಲ ಎಂದರು ಅವರು.
ಶಾಲೆ ಕಾಲೇಜು ಆರಂಭ ಸ್ವಾಗತಾರ್ಹ
ನಾಳೆಯಿಂದ ಶಾಲಾ-ಕಾಲೇಜು ಆರಂಭ ಸ್ವಾಗತ ವಿಚಾರ. ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆ ಆರಂಭ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಆದಿಯಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿಳಿಸಿದರು.
ಕೇವಲ ನಗರ ಪ್ರದೇಶಗಳಿಗೆ ಮಾತ್ರ ಬಿಗಿ ಕ್ರಮಗಳು ಸೀಮಿತವಾಗಬಾರದು. ಗ್ರಾಮೀಣ ಪ್ರದೇಶಗಳಲ್ಲೂ ಕೂಡ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಶಿಕ್ಷಣ ಇಲಾಖೆ ಮಾತ್ರವಲ್ಲದೆ ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳು ಗಮನಹರಿಸಬೇಕು. ಗ್ರಾಪಂಗಳು ನಮಗೆ ಸಂಬಂಧಿದ ಇಲ್ಲ ಎಂದು ಸುಮ್ಮನಿರಬಾರದು. ಎಲ್ಲರೂ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಪ್ರಾಮಾಣಿಕವಾಗಿ ಎಲ್ಲಾ ಇಲಾಖೆ ಕಾರ್ಯನಿರ್ವಹಿಸಬೇಕು ಎಂದರು.
ದಶಪಥ ಯೋಜನೆ ನಿಮ್ಮದಲ್ಲ ಮಿಸ್ಟರ್ ಪ್ರತಾಪ ಸಿಂಹ
ಮಿಸ್ಟರ್ ಪ್ರತಾಪ್ ಸಿಂಹ. ದಶಪಥ ಯೋಜನೆ ನಿಮ್ಮದಲ್ಲ. ಇದು ನಾನು ಎಂಪಿ ಆಗಿದ್ದ ವೇಳೆ ಡಿಪಿಆರ್ ಆಗಿತ್ತು. ಆ ವೇಳೆ ನಾನು, ಧ್ರುವನಾರಾಯಣ್, ರಮ್ಯಾ, ಡಿ.ಕೆ.ಸುರೇಶ್ ಈ ಬಗ್ಗೆ ಸಭೆಗೆ ಹೋಗಿದ್ದೆವು. ಕೇಂದ್ರದಲ್ಲಿ ಕುಳಿತು ಈ ಬಗ್ಗೆ ಡಿಪಿಆರ್ ಫೈನಲ್ ಮಾಡಿಸಿದ್ದೇವೆ. ಆದರೆ ಈಗ ಬಂದು ನಾನು ಮಾಡ್ದೆ ಅಂದ್ರೆ ಹೇಗೆ ಎಂದು ವಿಶ್ವನಾಥ್ ಪ್ರಶ್ನಿಸಿದರು.
ಇದರಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಮಹಾದೇವಪ್ಪ ಅವರ ಶ್ರಮವೂ ಇದೆ. ಅಂದಿನ ಸಿದ್ದರಾಮಯ್ಯ ಅವರ ಸರಕಾರದ ಪಾತ್ರವೂ ಇದೆ. ಮಗು ಹುಟ್ಟಿದ ಬಳಿಕ ಬಿಟ್ಟು, ಶಾಲೆಗೆ ಹೋಗುವಾಗ ಮಗು ನಂದು ಎಂದರೆ ಹೇಗೆ? ಈ ಯೋಜನೆ ನಾವೇ ತಂದಿದ್ದು ಎಂದ ಸಂಸದ ಪ್ರತಾಪ ಸಿಂಹಗೆ ವಿಶ್ವನಾಥ್ ಟಾಂಗ್ ನೀಡಿದರು.
ಹಿಂದೆ ಇದ್ದ ಎಂಪಿ, ಯುಪಿಎ ಸರಕಾರ, ಸಿದ್ದರಾಮಯ್ಯ ಸರಕಾರದ ಸಾಧನೆ ಇದು. ಪ್ರತಾಪ ಸಿಂಹ ಹೇಳಿಕೆ ಸರಿ ಅಲ್ಲ. ನಾನೇ ಮಾಡಿಬಿಟ್ಟೆ ಅನ್ನೋದು ಸರಿ ಅಲ್ಲ. ಪಾಪ ಆ ಹೆಣ್ಣು ಮಗಳು ಹೇಳಿದ್ದು ಸರಿ ಇದೆ ಎಂದು ಸಂಸದೆ ಸುಮಲತಾ ಮೇಲೆ ಅನುಕಂಪ ತೋರಿದರು ವಿಶ್ವನಾಥ್.
10ರಿಂದ 12 ವರ್ಷಗಳ ಹಿಂದೆ ದಶಪಥ ಆಗಿದ್ದು. ಸುಳ್ಳು ಎಷ್ಟು ದಿನ ಅಂತಾ ಹೇಳುತ್ತೀರಾ? ಇದು ನಾನು, ಧೃವನಾರಾಯಣ್, ರಮ್ಯಾ ಎಂಪಿಗಳಾಗಿದ್ದಾಗ ಆದ ಕೆಲಸ. ನೀವು ಹೊಸದಾಗಿ ತಂದಿದ್ದರೆ ಬೇಕಾದರೆ ಜನರಿಗೆ ಹೇಳಿ. ಉಂಡವಾಡಿ ಯೋಜನೆಯೂ ಅಷ್ಟೆ ಎಂದು ಅವರು ತಿರುಗೇಟು ನೀಡಿದರು.
ಶಾಸಕ ಜಿ.ಟಿ.ದೇವೇಗೌಡ ವಿರುದ್ದವೂ ವಾಗ್ದಾಳಿ ನಡೆಸಿದ ವಿಶ್ವನಾಥ್, ಉಂಡುವಾಡಿ ಕುಡಿಯುವ ನೀರು ಯೋಜನೆ ಜಿ.ಟಿ.ದೇವೇಗೌಡರ ಸಾಧನೆ ಅಲ್ಲ. ಅದನ್ನು ನಾನು ಮಾಡಿಸಿದ್ದು. ನೀವು ಎಲ್ಲಿದ್ದಿರೀ ಮಿಸ್ಟರ್ ಜಿ.ಟಿ.ದೇವೇಗೌಡ ಎಂದು ಕುಟುಕಿದರು.
ಮೈಸೂರು ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸುತ್ತಿರುವುದಕ್ಕೆ ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದರಲ್ಲದೆ, ಜಿಲ್ಲೆಯಲ್ಲಿ ಇತ್ತೀಚೆಗೆ ಕೊರೊನಾ ಪಾಸಿಟಿವಿಟಿ ದರ ಕಡಿಮೆಯಾಗಿದೆ. ವೀಕೆಂಡ್ ಕರ್ಫ್ಯೂ ಜಾರಿಯಿಂದ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ರಾಜ್ಯದ ಗಡಿ ಭಾಗಗಳಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು. ಗಡಿ ಭಾಗದಲ್ಲಿ ಹಣ ಪಡೆದು ವಾಹನಗಳನ್ನು ಒಳಬಿಡುತ್ತಿದ್ದಾರೆ. ಗಡಿಗಳನ್ನು ಬಂದ್ ಮಾಡಿ, ಬಿಗಿ ಕ್ರಮ ವಹಿಸಬೇಕು. ಆ ಮೂಲಕ ವೀಕೆಂಡ್ ಕರ್ಫ್ಯೂ ರದ್ದು ಮಾಡಬೇಕು ಎಂದು ಆಗ್ರಹಿಸಿದರು.