ಏರ್‌ಟ್ಯಾಕ್ಸಿ ವೈಮಾನಿಕ ಯೋಜನೆಯಲ್ಲಿ ಗುಡಿಬಂಡೆ ಎಂಜಿನಿಯರಿಂಗ್ ವಿದ್ಯಾರ್ಥಿನಿ: ಆವಿಷ್ಕಾರದಲ್ಲಿ ಅದ್ಭುತ ಸಾಧನೆ ಮಾಡಿದ ಹಳ್ಳಿಮೇಷ್ಟ್ರ ಮಗಳು
by GS Bharath Gudibande
ಗುಡಿಬಂಡೆ: ರಾಜ್ಯದ ಕಟ್ಟಕಡೆಯ ತಾಲೂಕು, ಸದಾ ಬರಪೀಡತ ನೆಲವೆಂಬ ನಾನಾ ಹೆಸರುಗಳಿಗೆ ಪಾತ್ರವಾಗಿರುವ ಗುಡಿಬಂಡೆ ತಾಲೂಕು ಈಗ ಪ್ರತಿಭೆಯ ಕಾರಣಕ್ಕೆ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಗಾತ್ರ ಚಿಕ್ಕದು, ʼಕೀರ್ತಿʼ ದೊಡ್ಡದು ಎನ್ನುವಂತೆ ತಾಲೂಕು ಮಿರಮಿರ ಮಿಂಚುತ್ತಿದೆ.
ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜ್ ಒಂದರಲ್ಲಿ ವ್ಯಾಸಂಗ ಮಾಡುತ್ತಿರುವ ಪಟ್ಟಣದ ವಿದ್ಯಾರ್ಥಿನಿಯೊಬ್ಬರು, ವಿಭಿನ್ನವಾದ ವೈಮಾನಿಕ ಪ್ರಾಜೆಕ್ಟ್ ಒಂದನ್ನು ಕಾರ್ಯಗತ ಮಾಡಿ ರಾಷ್ಟ್ರಮಟ್ಟದಲ್ಲಿ ಗುಡಿಬಂಡೆಗೆ ʼಕೀರ್ತಿʼ ತಂದಿದ್ದಾರೆ.
ಎಂವಿಜೆ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ ಅಂತಿಮ ಏರೋನಾಟಿಕ್ಸ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಜಿ.ಎನ್.ಕೀರ್ತಿ ಎಂಬ ವಿದ್ಯಾರ್ಥಿನಿ ಈ ಸಂಭ್ರಮಕ್ಕೆ ಕಾರಣವಾಗಿದ್ದು, ತಮ್ಮ ಸಹಪಾಠಿಗಳ ಜತೆ ಸೇರಿ ಅವರು ಮಾಡಿದ ಟೆಕ್ನಿಕಲ್ ಅಸೈನ್‌ಮೆಂಟ್ ಒಂದು ಇಡೀ ದೇಶದ ಗಮನ ಸೆಳೆದಿದೆ.
ಅವರು ತಮ್ಮ ತಂಡದ ಜತೆಗೂಡಿ ಮಾಡಿರುವ ಪ್ರಾಜೆಕ್ಟ್‌ಗೆ ರಾಷ್ಟ್ರೀಯ ಏರೋಸ್ಪೇಸ್ ಪರಿಕಲ್ಪನಾ ವಿನ್ಯಾಸ ಸ್ಪರ್ಧೆ (National Aerospace Conceptual Design Competition) ಯಲ್ಲಿ ಮೊದಲ ಬಹುಮಾನ ಸಿಕ್ಕಿದೆ. ಅಲ್ಲದೆ, ಹೊಸ ತಲೆಮಾರಿಗೆ ಮಹೋನ್ನತ ಕೊಡುಗೆ ನೀಡಬಲ್ಲ ಅವರ ಆವಿಷ್ಕಾರಕ್ಕೆ ಎಲ್ಲಡೆಯಿಂದ ಮೆಚ್ಚುಗೆಯ ಮಹಾಹೊಳೆಯೇ ಹರಿದು ಬರುತ್ತಿದೆ.
ಪಟ್ಟಣದ 2ನೇ ವಾರ್ಡ್ʼನ ನಿವಾಸಿಯಾದ ಶಿಕ್ಷಕ ನಾಗರಾಜ್ ಮತ್ತು ಪಟ್ಟಣ ಪಂಚಾಯಿತಿಯ ಮಾಜಿ ಸದಸ್ಯೆ ಕಾಂತಮ್ಮ ದಂಪತಿ ಪುತ್ರಿಯಾದ ಕೀರ್ತಿ ಅವರ ಸಾಧನೆ ಈಗ ತಾಲೂಕು, ಜಿಲ್ಲೆ, ರಾಜ್ಯದ ಗಡಿ ದಾಟಿ ಇಡೀ ದೇಶವನ್ನು ವ್ಯಾಪಿಸಿದೆ.
ಎಡದಿಂದ ಬಲಕ್ಕೆ: ಕೌಶಿಕ್, ಅಯೂಬ್ ಹಕೀಂ, ಮಿಥುನ್ ಪ್ರಾನ್ಸಿಸ್, ಅಮೃತಾಂಶು ಮತ್ತು ಕೀರ್ತಿ
ಕೀರ್ತಿ ಮಾಡಿದ ಸಾಧನೆ ಏನು?
ನಮ್ಮ ದೇಶವನ್ನು ಕಾಡುತ್ತಿರುವ ವಾಹನ ದಟ್ಟಣಿ ಹಾಗೂ ವಾಯುಮಾಲಿನ್ಯವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಎಂವಿಜೆ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳ ತಂಡ ವಿಭಿನ್ನವಾಗಿ ʼಏರ್‌ಟ್ಯಾಕ್ಸಿ-ಐಸ್ ವೀ ಟೋಲಾʼ (ಇಂಟರ್‌ಸಿಟಿ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಅಂಡ್ ಲ್ಯಾಂಡಿಂಗ್- Inter-city Electric Vertical Take-off and Landing Aircraft (ICeVTOLA) ಎಂಬ ಪ್ರಾಜೆಕ್ಟ್ ಮಾಡಿ ಯಶಸ್ವಿಯಾಗಿ ಹಾರಾಟ ನಡೆಸಿದ್ದಾರೆ. ಅತಿ ಕಿರಿದಾದ ಲಘು ವಿಮಾನಾಕಾರದ ಈ ಏರ್‌ಟ್ಯಾಕ್ಸಿಯಲ್ಲಿ ನಾಲ್ವರು ಪ್ರಯಾಣಿಕರು ಹಾಗೂ ಓರ್ವ ಪೈಲಟ್ ಹಾರಾಟ ನಡೆಸಬಹುದು. 10,000 ಅಡಿ ಎತ್ತರದಲ್ಲಿ 500 ಕಿ.ಮೀ. ದೂರ ಕ್ರಮಿಸಬಹುದು ಎಂದು ವಿದ್ಯಾರ್ಥಿನಿ ಕೀರ್ತಿ ಅವರು ತಮ್ಮ ಪ್ರಾಜೆಕ್ಟ್ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ಮಾಹಿತಿ ಹಂಚಿಕೊಂಡರು.
ಇದು ಲಘು ವಿಮಾನದಂತೆ ಸಿದ್ಧವಾಗಿದ್ದು, ಸಂಪೂರ್ಣ ವಿದ್ಯುತ್ ಚಾಲಿತವಾಗಿರುತ್ತದೆ. ಇಂಧನ ಬಳಕೆ ಇಲ್ಲದಿರುವುದರಿಂದ ಇದು ಹೊಗೆಯನ್ನೂ ಉಗುಳುವುದಿಲ್ಲ. ಪರಿಣಾಮ, ಪರಿಸರಕ್ಕೆ ಬಹಳ ಪೂರಕ ಎನ್ನುವುದು ಕೀರ್ತಿ ಹೇಳುವ ಮಾತು.
ಈ ಪ್ರಾಜೆಕ್ಟ್ ಮಾಡಲು ಪ್ರತಿದಿನ 6ರಿಂದ 8 ಗಂಟೆ ಕಾಲ ಕೆಲಸ ಮಾಡುತ್ತಿದ್ದೆವು. ಅವಿಶ್ರಾಂತವಾಗಿ ಎಲ್ಲರೂ ಕೆಲಸ ಮಾಡುತ್ತಿದ್ದೆವು. ಇದೇ ನಮ್ಮ ತಂಡ ಶಕ್ತಿ ಮತ್ತು ಸ್ಪೂರ್ತಿ. ಜತೆಗೆ; ಗೂಗಲ್ ಮೀಟ್ ಮತ್ತು ಜೂಮ್ ಮೀಟಿಂಗ್ʼಗಳಲ್ಲಿ ಸದಾ ಚರ್ಚೆ, ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಬಹಳಷ್ಟು ತಯಾರಿ ಮಾಡಿಕೊಂಡಿದ್ದೆವು. ಇದಕ್ಕೆ ನಮ್ಮ ಕಾಲೇಜಿನ ಉಪನ್ಯಾಸಕರು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ನಮ್ಮ ತಂದೆ-ತಾಯಿ ಅವರ ಸಹಕಾರವೂ ಇದೆ. ಎಲ್ಲರಿಗೂ ನನ್ನ ಕೃತಜ್ಞತೆಗಳು.
ಜಿ.ಎನ್.ಕೀರ್ತಿ, ಏರೋನಾಟಿಕ್ ವಿದ್ಯಾರ್ಥಿ
26 ತಂಡಗಳ ಪೈಕಿ ಪ್ರಥಮ ಸ್ಥಾನ
ಬೆಂಗಳೂರಿನ ಎಂವಿಜೆ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರತೀ ವರ್ಷ ಮುಂಬಯಿಯಲ್ಲಿ ನಡೆಯುವ ʼದಿ ಬೆಸ್ಟ್ ಡಿಸೈನ್ ಸ್ಫರ್ಧೆʼಯಲ್ಲಿ ಭಾಗವಹಿಸುತ್ತದೆ. ಈ ವರ್ಷವೂ ʼಏರ್‌ಟ್ಯಾಕ್ಸಿʼ ಎಂಬ ಪ್ರಾಜೆಕ್ಟ್ʼನಲ್ಲಿ ಕಾಲೇಜ್ ವಿದ್ಯಾರ್ಥಿಗಳು ಸೇರಿ ಕರ್ನಾಟಕ 3 ಕಾಲೇಜುಗಳ ತಂಡಗಳು ಸೇರಿ ದೇಶದ 26 ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಭಾಗವಹಿಸಿದ್ದ ಎಂವಿಜೆ ಕಾಲೇಜ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಏರ್‌ಟ್ಯಾಕ್ಸಿ ಪ್ರಾಜೆಕ್ಟ್ ಮಾಡಲು ಎಂವಿಜೆ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ ಮಾಡಿ ಆಯ್ಕೆ ಮಾಡಲಾಗುತ್ತದೆ. ಆ ಆಯ್ಕೆಯಲ್ಲಿ ಕಿರಿಯ ಅಭ್ಯರ್ಥಿಯಾಗಿ ಆಯ್ಕೆಯಾದ ಗುಡಿಬಂಡೆಯ ಕೀರ್ತಿ ಅವರು ನಾಲ್ವರು ಹಿರಿಯ ವಿದ್ಯಾರ್ಥಿಗಳ ತಂಡದಲ್ಲಿ ಪ್ರಾಜೆಕ್ಟ್ ಮಾಡಿ ಈಗ ಸೀನಿಯರ್ ಆಗಿ ಉನ್ನತಿಗೊಂಡು ಯೋಜನೆಯನ್ನು ಸಕ್ಸಸ್ ಮಾಡಿದ್ದಾರೆ.
ಕೋವಿಡ್ ಕಾಲದಲ್ಲೂ ಅವಿಶ್ರಾಂತ ಕೆಲಸ
ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿಯೂ ಇಡೀ ಶಿಕ್ಷಣ ಕ್ಷೇತ್ರ ಅತಂತ್ರವಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ತಂಡ ಗೂಗಲ್ ಮೀಟ್ ಮತ್ತು ಜೂಮ್ ಮೀಟಿಂಗ್ʼಗಳ ಮೂಲಕ ಪ್ರಾಜೆಕ್ಟ್ ಬಗ್ಗೆ ಸದಾ ಚರ್ಚೆ, ವಿಚಾರ ವಿನಿಮಯ ಮಾಡಿಕೊಂಡು ಒಂದು ವರದಿ ತಯಾರಿ ಮಾಡಿಕೊಂಡು ಮುಂಬಯಿಯಲ್ಲಿ ನಡೆಯಲಿದ್ದ ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದರು. ಆ ಸ್ಪರ್ಧೆಯಲ್ಲಿ ಕೀರ್ತಿ ಅವರಿದ್ದ ತಂಡದ ʼಏರ್‌ಟ್ಯಾಕ್ಸಿʼ ಪ್ರಾಜೆಕ್ಟ್ ಅತ್ಯುತ್ತಮ ಪ್ರಾಜೆಕ್ಟ್ ಆಗಿ ಹೊರಹೊಮ್ಮಿ ಬಹುಮಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ತಂಡದಲ್ಲಿ ಕೀರ್ತಿ ಜತೆಗೆ ಕೌಶಿಕ್, ಅಯೂಬ್ ಹಕೀಂ, ಮಿಥುನ್ ಪ್ರಾನ್ಸಿಸ್, ಅಮೃತಾಂಶು ಇದ್ದರು.
2030ರಲ್ಲಿ ಮಾರುಕಟ್ಟೆಗೆ, ಉಪಯೋಗ ಹೇಗೆ?
ʼಏರ್‌ಟ್ಯಾಕ್ಸಿʼ ಪ್ರಾಜೆಕ್ಟ್ ಪ್ರಥಮ ಸ್ಥಾನ ಪಡೆದ ನಂತರ ಈ ಲಘು ವಿಮಾನವನ್ನು 2030ರ ವೇಳೆಗೆ ಮಾರುಕಟ್ಟೆಗೆ ಪ್ರಾಯೋಗಿಕವಾಗಿ ತರಲು ಇವರ ತಂಡ ಪ್ರಯತ್ನ ಮಾಡುತ್ತಿದೆ. ಮುಖ್ಯವಾಗಿ ಬೆಂಗಳೂರಿನಂಥ ವಿಪರೀತ ಟ್ರಾಫಿಕ್ ಇರುವ ನಗರಗಳಲ್ಲಿ ಇದರ ಬಳಕೆ ಬಹಳ ಉಪಯುಕ್ತ. ಶೂನ್ಯ ಮಾಲಿನ್ಯ ಹೊಂದಿರುವ ಏರ್‌ಟ್ಯಾಕ್ಸಿಯು ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕ, ಆರೋಗ್ಯ ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿ ಬಳಕೆ ಸಾಧ್ಯ. ಉದಾಹರಣೆಗೆ ಬೆಂಗಳೂರಿನಿಂದ 500 ಕಿ.ಮೀ. ದೂರದಲ್ಲಿರುವ ತಾಣಗಳಿಗೆ ವೇಗವಾಗಿ ತಲುಪಬೇಕಾದರೆ ಇದು ಬೆಸ್ಟ್.
ನಮ್ಮ ಮಗಳು ವೈದ್ಯ ಶಿಕ್ಷಣವನ್ನು ಓದಬೇಕು ಎಂಬ ಆಸೆ ಇತ್ತು. ಆದರೆ ಕೀರ್ತಿಗೆ ಏರೋನಾಟಿಕ್ಸ್ ಮೇಲೆ ಹೆಚ್ಚು ಆಸಕ್ತಿ ಇರುವ ಉದ್ದೇಶದಿಂದ ಆ ಕೋರ್ಸಿಗೆ ಸೇರಿಸಿ ಸಹಕಾರ ನೀಡಿದೆವು. ಕೀರ್ತಿ ಸಾಧನೆಗೆ ನಮಗೆ ಸಂತಸ ಉಂಟು ಮಾಡಿದೆ. ನಮಗೆ ಹೆಮ್ಮೆ ತಂದಿದ್ದಾಳೆ.
ಕಾಂತಮ್ಮ, ಕೀರ್ತಿ ಅವರ ತಾಯಿ
ಗುಡಿಬಂಡೆ ಪಟ್ಟಣದ ಕೀರ್ತಿ ಏರ್‌ಟ್ಯಾಕ್ಸಿ ಪ್ರಾಜೆಕ್ಟ್ʼನಲ್ಲಿ ದೇಶದ 26 ತಂಡಗಳ ಪೈಕಿ ಪ್ರಥಮ ಸ್ಥಾನ ಪಡೆದಿರುವುದು ಶ್ಲಾಘನೀಯ. ಅವರ ಯಶಸ್ಸಿನ ಹಿಂದೆ ದುಡಿದ ಎಂವಿಜೆ ಕಾಲೇಜಿನ ಉಪನ್ಯಾಸಕರಿಗೆ, ಪೋಷಕರಿಗೆ ನಮ್ಮ ಅಭಿನಂಧನೆಗಳು.
ವಿ.ಶ್ರೀರಾಮಪ್ಪ, ಪ್ರಧಾನ ಕಾರ್ಯದರ್ಶಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಗುಡಿಬಂಡೆ
Well done Keerthi putta. Hats off to you your team even your College
Well done kirthi we are proud of you