ಸಂಕಷ್ಟದಲ್ಲಿ ರಾಗಿಣೆ, ಸಂಜನಾ; ಡ್ರಗ್ ಸೇವನೆ ಮಾಡಿರುವ ಬಗ್ಗೆ ಸಿಎಪ್‌ಎಸ್ಎಲ್ ವರದಿಯಲ್ಲಿ ದೃಢ
ಬೆಂಗಳೂರು: ಇಡೀ ದೇಶದ ಗಮನ ಸೆಳೆದಿದ್ದ ಮಾದಕ ವಸ್ತು (ಡ್ರಗ್) ಕೇಸಿನಲ್ಲಿ ಸಿಕ್ಕಿಕೊಂಡು ಕಳೆದ ವರ್ಷ ಜೈಲುವಾಸ ಅನುಭವಿಸಿದ್ದ ಸ್ಯಾಂಡಲ್ವುಡ್ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರಿಗೆ ಪುನಾ ಸಂಕಷ್ಟ ಎದುರಾಗಿದ್ದು, ಅವರು ಡ್ರಗ್ ಸೇವನೆ ಮಾಡಿದ್ದರೆಂಬ ಅಂಶ ದೃಢಪಟ್ಟಿದೆ.
ಈ ಇಬ್ಬರೂ ನಟಿಯರು ಡ್ರಗ್ಸ್ ಸೇವಿಸಿರುವುದು ಎಫ್‍ಎಸ್‍ಎಲ್ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಈ ವಿಷಯ ಹೊರಬರುತ್ತಿದ್ದಂತೆ ಕನ್ನಡ ಚಿತ್ರರಂಗ ಮತ್ತೆ ಶಾಕ್’ಗೆ ಗುರಿಯಾಗಿದೆ. ಆದರೆ, ಈ ಬಗ್ಗೆ ನಟಿಯರಿಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹೈದರಾಬಾದ್’ನ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ (ಸಿಎಫ್‍ಎಸ್‍ಎಲ್) ವರದಿಯಲ್ಲಿ ಈ ಸ್ಪೋಟಕ ಸತ್ಯ ಬಯಲಾಗಿದ್ದು, ಈ ಅಂಶವನ್ನು ಪೆÇಲೀಸ್ ಮೂಲಗಳು ಖಚಿತಪಡಿಸಿವೆ.
ಈ ನಟಿಯರಿಬ್ಬರ ಜತೆಗೆ, ಪ್ರರಣದಲ್ಲಿ ಬಂಧಿತರಾಗಿದ್ದ ವೀರೇಶ್ ಖನ್ನಾ, ರವಿ ಶಂಕರ್, ರಾಹುಲ್ ತೋನ್ಸೆ ಹಾಗೂ ಲೂಮ್ ಪೆಪ್ಪರ್ ಕೂಡ ಡ್ರಗ್ ಸೇವಿಸಿರುವುದು ದೃಢಪಟ್ಟಿದೆ.
ಅದರಲ್ಲೂ ದುಬಾರಿ ಬೆಲೆಯ ಮಾದಕವಸ್ತುಗಳನ್ನು ಇವರು ಸೇವನೆ ಮಾಡಿರುವ ಅಂಶವೂ ವರದಿಯಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ.
ಇನ್ನೊಂದೆಡೆ ವರದಿಯನ್ನು ಕೂಲಂಕಶವಾಗಿ ಪರಿಶೀಲನೆ ಮಾಡುತ್ತಿರುವ ಸಿಸಿಬಿ ಪೊಲೀಸರು ಮುಂದಿನ ಕ್ರಮದ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ.
ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಬೇಕೆ ಅಥವಾ ನೇರವಾಗಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕೆ ಎಂಬ ಬಗ್ಗೆ ಅವರು ಸಮಾಲೋಚನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಸಂಗ್ರಹ ಮಾಡಿಕೊಂಡಿರುವ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.
ರಾಜ್ಯ ಮಾತ್ರವಲ್ಲದೆ, ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಸ್ಯಾಡಲ್ವುಡ್ ಡ್ರಗ್ ಕೇಸ್ ಗೆ ಸಂಬಂಧಿಸಿದಂತೆ ಕಳೆದ ವರ್ಷ (2020) ಸೆಪ್ಟೆಂಬರ್ 14ರಂದು ನಟಿ ರಾಗಿಣಿ ಅವರು ಬಂಧನಕ್ಕೆ ಒಳಗಾಗಿದ್ದರು. ಅವರು ನಿರಂತರ ನೂರಾ ನಲವತ್ತು ದಿನ ಜೈಲಿನಲ್ಲಿದ್ದರು. ಬಳಿಕ ನ್ಯಾಯಲಯದಲ್ಲಿ ನಡೆದ ಹಲವಾರು ವಿಚಾರಣೆಗಳ ನಂತರ 2021ರ ಜನವರಿ 21ರಂದು ಸುಪ್ರೀಂ ಕೋರ್ಟ್ ರಾಗಿಣಿಗೆ ಜಾಮೀನು ನೀಡಿತ್ತು. ಜನವರಿ 25ರಂದು ಅವರು ಜೈಲಿಂದ ಬಿಡುಗಡೆ ಹೊಂದಿದ್ದರು.
ಇನ್ನು ಕಳೆದ ವರ್ಷ ಸೆಪ್ಟೆಂಬರ್ 16ರಂದು ಬಂಧನಕ್ಕೆ ಒಳಗಾಗಿ ಜೈಲು ಪಾಲಾಗಿದ್ದ ಸಂಜನಾ ಅವರು ಅದೇ ವರ್ಷ ಡಿಸೆಂಬರ್ 11ರಂದೇ ಜೈಲಿನಿಂದ ರಿಲಿಸ್ ಆಗಿದ್ದರು. ಇವರೂ ಸಹ 56 ದಿನ ಜೈಲುವಾಸ ಅನುಭವಿಸಿದ್ದರು.
ಸತ್ಯ ಹೊರಬಿದ್ದಿದ್ದು ಹೇಗೆ?
ಪ್ರಕರಣ ಬಯಲಿಗೆ ಬಂದ ಹತ್ತು ತಿಂಗಳ ಬಳಿಕ ಎಫ್‍ಎಸ್‍ಎಲ್ ವರದಿ ಹೊರ ಬಂದಿದ್ದು, ನಟಿಮಣಿಯರ ತಲೆಕೂದಲು ಪರೀಕ್ಷೆಯಿಂದ ಸತ್ಯ ಬಯಲಾಗಿದೆ. ಇದರೊಂದಿಗೆ ರಾಗಿಣಿ ಮತ್ತು ಸಂಜನಾ ಅವರು ಭಾಗಿಯಾಗಿದ್ದ ಸ್ಯಾಂಡಲ್ವುಡ್ ಡ್ರಗ್ ಕೇಸಿಗೆ ಮಹತ್ವದ ತಿರುವು ಸಿಕ್ಕಿದ್ದು, ಪೊಲೀಸರು ಇನ್ನಷ್ಟು ತೀವ್ರವಾಗಿ ತನಿಖೆ ಮುಂದುವರಿಸಿದ್ದಾರೆ.
ತಲೆಗೂದಲಿಂದ ಡ್ರಗ್ ಸೇವನೆ ಪತ್ತೆ ಹಚ್ಚಿದ ಬಗ್ಗೆ ಸಿಸಿಬಿ ಮುಖ್ಯಸ್ಥ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರು ರೋಚಕ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಹೇಳಿದ್ದಿಷ್ಟು;
- ಕರ್ನಾಟಕದಲ್ಲಿ ಇದೇ ಮೊದಲ ಬಾರಿ ತಲೆಗೂದಲನ್ನು ಪರೀಕ್ಷೆಗೆ ಒಳಪಡಿಸಿ ಡ್ರಗ್ ಸೇವನೆ ಮಾಡಿರುವುದನ್ನು ಪತ್ತೆ ಹಚ್ಚಲಾಗಿದೆ. ಕಳೆದ ವರ್ಷ ದಾಖಲಾಗಿದ್ದ ಡ್ರಗ್ ಕೇಸಿನಲ್ಲಿ ಬಂಧಿತರಾಗಿದ್ದ ಆರೋಪಿಗಳ ತಲೆಗೂದಲನ್ನು ಹೈದರಾಬಾದ್ ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿ ಅಲ್ಲಿಂದ ವರದಿ ಪಡೆಯಲಾಗಿದ್ದು ಆರೋಪಿಗಳು ಡ್ರಗ್ ಸೇವನೆ ಮಾಡಿರುವುದು ರುಜುವಾತಾಗಿದೆ.
- ಈ ಮೊದಲು ಡ್ರಗ್ ಪ್ರಕರಣದಲ್ಲಿ ಯಾರನ್ನಾದರೂ ಬಂಧಿಸಿದರೆ ಅವರ ರಕ್ತ ಮತ್ತು ಮೂತ್ರದ ಸ್ಯಾಂಪಲ್ ಗಳನ್ನು ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿತ್ತು. ಡ್ರಗ್ ಸೇವನೆ ಮಾಡಿದ ಒಂದೆರಡು ದಿನದಲ್ಲಿ ಮಾತ್ರ ಸ್ಯಾಂಪಲ್ ತೆಗೆದುಕೊಂಡರೆ ಪಾಸಿಟಿವ್ ಅಂತ ಬರುತ್ತಿತ್ತು. ತಡವಾದರೆ, ನೆಗೆಟೀವ್ ಅಂತ ಬರುತ್ತಿತ್ತು.
- ಬಹಳಷ್ಟು ಆರೋಪಿಗಳು ಕೇಸ್ ದಾಖಲಿಸಿ ಎಫ್‍ಐಆರ್ ಮಾಡಿದ ಕೂಡಲೇ ಪರಾರಿಯಾಗಿ ಬಿಡುತ್ತಿದ್ದರು. ಒಂದೆರಡು ತಿಂಗಳಾದರೂ ಸಿಗುತ್ತಿರಲಿಲ್ಲ. ಆಮೇಲೆ ನ್ಯಾಯಾಲಯಕ್ಕೆ ಶರಣಾಗುವುದೋ ಅಥವಾ ಪೊಲೀಸರಿಗೆ ಶರಣಾಗುವುದೋ ಮಾಡುತ್ತಾರೆ. ಹೀಗೆ ಮಾಡಿದಾಗ ಅವರ ರಕ್ತ-ಮೂತ್ರಗಳ ಸ್ಯಾಂಪಲ್ ಗಳಿಂದ ಡ್ರಗ್ ಸೇವನೆ ಮಾಡುವುದು ಪತ್ತೆ ಮಾಡುವುದು ಕಷ್ಟವಾಗುತ್ತಿತ್ತು. ಬಹಳ ಆರೋಪಿಗಳು ಇದನ್ನೇ ಪ್ಲಸ್ ಪಾಯಂಟ್ ಮಾಡಿಕೊಂಡು ಕಾನೂನಿನಿಂದ ತಪ್ಪಿಸಿಕೊಳ್ಳುತ್ತಿದ್ದರು.
- ಇದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಡ್ರಗ್ ಪ್ರಕರರಣಗಳಲ್ಲಿ ಇನ್ನು ಹೆಚ್ಚಿನ ವೈಜ್ಞಾನಿಕ ದಾಖಲೆ, ಸಾಕ್ಷ್ಯಾಧಾರಗಳನ್ನು ಸಂಗ್ರಹ ಮಾಡುವುದು ಹೇಗೆ ಎಂದು ನಾವು ಆಲೋಚನೆ ಮಾಡುತ್ತಿದ್ದಾಗ ತಲೆಗೂದಲು ಮೂಲಕವೂ ಡ್ರಗ್ ಸೇವನೆಯನ್ನು ಪತ್ತೆ ಹಚ್ಚಿಬಹುದು ಎಂದು ಒಂದು ಅಧ್ಯಯನದಿಂದ ಗೊತ್ತಾಯಿತು.
- ಕೂಡಲೇ ನಾವು ಕಳೆದ ವರ್ಷದ ಕೆಲ ಹೈ ಪ್ರೊಫೈಲ್ ಕೇಸುಗಳು ಸೇರಿ ಹಲವಾರು ಡ್ರಗ್ ಪ್ರಕರಣಗಳ ತನಿಖೆಗೆ ಆರೋಪಿಗಳ ತಲೆಗೂದಲನ್ನೂ ಸಂಗ್ರಹ ಮಾಡಿ ಹೈದರಾಬಾದ್ ನಲ್ಲಿರುವ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ (ಸಿಎಫ್‍ಎಸ್‍ಎಲ್)ಕ್ಕೆ ಕಳಿಸಿಕೊಟ್ಟೆವು. ಕರ್ನಾಟಕ ಪೊಲೀಸ್ ವ್ಯವಸ್ಥೆಯಲ್ಲಿ ಇಂಥ ಪ್ರಯತ್ನ ಇದೇ ಮೊದಲು.
- ಈಗ ಹೈದರಾಬಾದ್ ನಿಂದ ವರದಿ ಬಂದಿದ್ದು, ಆರೋಪಿಗಳು ಡ್ರಗ್ ಸೇವನೆ ಮಾಡಿರುವುದು ದೃಢಪಟ್ಟಿದೆ.
ಎಚ್ಚರಿಕೆ ಘಂಟೆ
ಆರೋಪಿಗಳಿಗೆ ಇದೊಂದು ಎಚ್ಚರಿಕೆ ಘಂಟೆಯಾಗಿದೆ. ಈ ಮೊದಲು ರಕ್ತ-ಮೂತ್ರದ ಸ್ಯಾಂಪಲ್ಗಳನ್ನು ಪಡೆಯುವಾಗ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ, ಡ್ರಗ್ ಸೇವನೆ ಮಾಡಿದ ನಂತರ ಒಂದು ವರ್ಷವಾದ ಮೇಲೂ ಸತ್ಯವನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಮೂಲಕ ಪತ್ತೆ ಹಚ್ಚಬಹುದು ಎಂದಬುದು ಗೊತ್ತಾದ ಮೇಲೆ ಅಂಥ ತಪ್ಪು ಮಾಡಲು ಯೋಚಿಸುತ್ತಾರೆ. ಒಂದು ರೀತಿಯಲ್ಲಿ ದೊಡ್ಡ ಎಚ್ಚರಿಕೆ ಇದು. ಬೆಂಗಳೂರು ಮತ್ತು ಕರ್ನಾಟಕದಲ್ಲಿ ಮಾದಕ ವಸ್ತು ಸೇವನೆಯನ್ನು ತಡೆಯಲು ತಲೆಗೂದಲಿನಿಂದ ಸತ್ಯಾಂಶ ಹೊರಬರುವ ವಿಷಯ ಹೆಚ್ಚು ಸಹಕಾರಿ. ಈ ನಿಟ್ಟಿನಲ್ಲಿ ಪೊಲೀಸರು ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ.
-ಸಂದೀಪ್ ಪಾಟೀಲ್, ಜಂಟಿ ಪೊಲೀಸ್ ಆಯುಕ್ತ, ಸಿಸಿಬಿ
ಇದು ಸಿಸಿಬಿ ಗೆಲುವು
ಹೈದರಾಬಾದ್ ಸಿಎಫ್‌ಎಸ್‌ಎಲ್ ವರದಿ ಖುಷಿ ತಂದಿದೆ. ಇದು ನಿಜಕ್ಕೂ ಸಿಸಿಬಿಗೆ ಸಿಕ್ಕಿದ ಗೆಲುವು. ಕಳೆದ ಸೆಪ್ಟೆಂಬರ್ ಆಸುಪಾಸು ನಾವು ದಾಖಲು ಮಾಡಿದ್ದ ಕೇಸುಗಳಿಗೆ ಒಳ್ಳೆಯ ಮುನ್ನಡೆ ಸಿಕ್ಕಿದೆ. ವೈಜ್ಞಾನಿಕವಾಗಿ ಸಾಕ್ಷ್ಯಾಧಾರಗಳನ್ನು ಸಿಸಿಬಿ ಸಂಗ್ರಹ ಮಾಡಿದೆ. ಕೆಲ ಮಹತ್ವದ ಮಾಹಿತಿಗಳಿದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು.
ಕಮಲ್ ಪಂತ್, ಬೆಂಗಳೂರು ಪೊಲೀಸ್ ಆಯುಕ್ತ