ಸಚಿವ ಡಾ.ಕೆ.ಸುಧಾಕರ್ ಕಾಟಾಚಾರದ ಪೂಜೆಗೆ ತೀವ್ರ ಟೀಕೆ; ಸಂಘದ ಕಾರ್ಯಕರ್ತರ ಬೇಸರ
ಚಿಕ್ಕಬಳ್ಳಾಪುರ: ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ಶೂಗಳನ್ನು ಕಳಚದೇ ಪೂಜಾ ಕಾರ್ಯಕ್ರಮಗಳನ್ನು ನೆರೆವೇರಿಸಿದ ಬಗ್ಗೆ ಜಿಲ್ಲೆಯಲ್ಲಿ ಮಾತ್ರವಲ್ಲದೆ, ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರಿಂದ ತೀವ್ರ ಟೀಕೆ ವ್ಯಕ್ತವಾಗಿದೆ.
ಶನಿವಾರದಂದು ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ಹೋಬಳಿಯ ನಾಗರೆಡ್ಡಿಹಳ್ಳಿ ಬಳಿ ಆಶ್ರಯ ತಾಣ ನಿರ್ಮಿಸುವ ಗೋಶಾಲೆ ಭೂಮಿಪೂಜೆ ಹಾಗೂ ಅಬ್ಲೂಡು ಕೆರೆಗೆ ಬಾಗೀನ ಅರ್ಪಿಸಿ ಗಂಗಾ ಮಾತೆಗೆ ಪೂಜೆ ಸಲ್ಲಿಸುವ ವೇಳೆ ಅವರು ಶೂ ತೊಟ್ಟುಕೊಂಡೇ ಕಾಟಾಚಾರಕ್ಕೆ ಪೂಜೆ ನೆರೆವೇರಿಸಿದ್ದು, ಜನರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಸಚಿವರು ಮಾತ್ರವಲ್ಲದೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯಾರೊಬ್ಬರೂ ದೈವಕ್ಕೆ ಗೌರವ ತೋರದೇ ಅಪಚಾರವೆಸಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತೀಯ ಪರಂಪರೆಯ ಪ್ರಕಾರ ದೇವರ ಪೂಜೆ ಮಾಡುವ ಸಂದರ್ಭದಲ್ಲಿ ಯಾರೂ ಪಾದರಕ್ಷೆ, ಶೂ ಧರಿಸುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರ ಇಂಥ ಸಂಪ್ರದಾಯವನ್ನು ಬಹಳ ಶ್ರದ್ಧೆಯಿಂದ ಪಾಲಿಸಿಕೊಂಡು ಬಂದಿದೆ. ಅಷ್ಟೇ ಏಕೆ, ಸಂಘದ ನಾಯಕರು ಗೋಶಾಲೆಗಳನ್ನು ಪ್ರವೇಶ ಮಾಡಬೇಕಾದರೂ ಚಪ್ಪಲಿ ಕಳಚಿಟ್ಟು ಪ್ರವೇಶ ಮಾಡುತ್ತಾರೆ.
ಆದರೆ, ಚಿಕ್ಕಬಳ್ಳಾಪುರದ ಜಿಲ್ಲಾ ಉಸ್ತುವಾರಿ ಸಚಿವರಂತು ಬಿಜೆಪಿ ಮತ್ತು ಸಂಘ ಪರಿವಾರ ಅಥವಾ ಸಮಸ್ತ ಹಿಂದೂ ಸಮಾಜ ನಂಬಿರುವ ಶ್ರದ್ಧೆಗೆ ವಿರುದ್ಧವಾಗಿ ವರ್ತಸಿದರಲ್ಲದೆ, ಬೂಟುಗಳನ್ನು ಧರಿಸಿಯೇ ಪೂಜೆ ನೆರೆವೇರಿಸಿದರು. ಕೊನೆಯ ಪಕ್ಷ ಅರ್ಚಕರೂ ಅವರಿಗೆ ಶೂ ಕಳಚುವಂತೆ ಹೇಳಲಿಲ್ಲ. ಆದರೆ, ಅಕ್ಕಪಕ್ಕದಲ್ಲಿ ನೆರೆದಿದ್ದ ಜನರು ಮಾತ್ರ, “ನಮ್ಮ ಸಾಹೇಬ್ರು ಬೂಟು ಬಿಚ್ಚದೇ ಪೂಜೆ ಮಾಡುತ್ತಿದ್ದಾರೆ” ಎಂದು ಗೊಣಗಿಕೊಂಡರು. ಸುಧಾಕರ್ ಇದಾವುದರ ಪರಿವೇ ಇಲ್ಲದೆ ಶೂ ಹಾಕಿಕೊಂಡೇ ಪೂಜೆ ಪೂರೈಸಿ ಆರತಿಯನ್ನೂ ಪಡೆದರು.
ಸಚಿವ ಸುಧಾಕರ್ ಮಾತ್ರವಲ್ಲ, ಅವರ ಪಕ್ಕದಲ್ಲೇ ಇದ್ದ ಮಾಜಿ ಸಚಿವ, ಶಾಸಕರು, ವಯೋವೃದ್ಧರೂ ಆದ ವಿ.ಮುನಿಯಪ್ಪನವರೂ ಚಪ್ಪಲಿ ಕಳಚಲಿಲ್ಲ. ಅವರ ಪಕ್ಕದಲ್ಲೇ ನಿಂತಿದ್ದ ಮಾಜಿ ಶಾಸಕ ರಾಜಣ್ಣ ಕೂಡ ಒಂದು ಚಪ್ಪಲಿ ಬಿಚ್ಚಿ ಅದರ ಮೇಲೆ ಕಾಲಿಟ್ಟುಕೊಂಡು ಇನ್ನೊಂದು ಚಪ್ಪಲಿ ಧರಿಸಿ ಭಕ್ತಿ ಪ್ರದರ್ಶಿಸಿದರು. ಉಳಿದಂತೆ ಅಲ್ಲಿ ನೆರೆದಿದ್ದ ಜಿಲ್ಲೆಯ ಅಧಿಕಾರಿಗಳೆಲ್ಲ ಠೀವಿಯಿಂದ ಚಪ್ಪಲಿ, ಶೂ ಧರಿಸಿಕೊಂಡಢೇ ಪೂಜೆಯಲ್ಲಿ ಭಾಗಿಯಾಗಿ ಪುನೀತರಾದರು.
ಗಂಗಾ ಮಾತೆಗೂ ಶೂ ಹಾಕಿಕೊಂಡೇ ಪೂಜೆ!
ಗೋಶಾಲೆಯ ಭೂಮಿಪೂಜೆ ಕಥೆ ಹೀಗಾದರೆ, ಶಿಡ್ಲಘಟ್ಟ ತಾಲೂಕಿನ ಗುಡಿಹಳ್ಳಿಯ ಅಬ್ಲೂಡು ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಆ ಕೆರೆಗೆ ಬಾಗಿನ ಅರ್ಪಿಸಿ, ಗಂಗಾ ಪೂಜೆ ಸಲ್ಲಿಸಿದ ಕಾರ್ಯಕ್ರಮದಲ್ಲೂ ಅದೇ ದೃಶ್ಯವೇ ಮರುಕಳಿಸಿತು.
ಮಾಜಿ ಸಚಿವ ವಿ.ಮುನಿಯಪ್ಪ, ಮಾಜಿ ಶಾಸಕ ರಾಜಣ್ಣ ಜತೆಗೂಡಿ ಗಂಗಾ ಮಾತೆಗೆ ಬಾಗೀನ ಅರ್ಪಿಸಿ ಪೂಜೆ ಮಾಡುವಾಗಲೂ ಸಚಿವ ಡಾ.ಸುಧಾಕರ್ ಶೂ ಬಿಚ್ಚಲಿಲ್ಲ.
ಕರೆಗೆ ಬಾಗೀನ ಬಿಡುವಾಗಲಾಗಲಿ ಅಥವಾ ಕೆರೆಯಂಗಳದಲ್ಲಿ ಗಂಗೆಗೆ ಪೂಜೆ ಸಲ್ಲಿಸುವಾಗ ಆಗಲಿ ಸಚಿವರು ಶೂ ಕಳಚಿಡುವ ಗೋಜಿಗೇ ಹೋಗಲಿಲ್ಲ. ಸಚಿವರಂತೆ ಅಲ್ಲಿ ನೆರೆದಿದ್ದವರಾರೂ ಪಾದರಕ್ಷೆ ಕಳಚಲಿಲ್ಲ. ಕಾಟಾಚಾರಕ್ಕೆ ಪೂಜೆ ನಡೆಯಿತಷ್ಟೇ.
ಸ್ಥಳದಲ್ಲೇ ಇದ್ದ ಕೆಲ ಜನರು ಶೂ ತೊಟ್ಟು ಪುಜೆ ಮಾಡಿದ ಸಚಿವರನ್ನು ಗಮನಿಸಿದರಾದರೂ ಯಾರೊಬ್ಬರೂ ಹೇಳುವ ಪ್ರಯತ್ನ ಮಾಡಲಿಲ್ಲ. ಅಧಿಕಾರಿಗಳಂತೂ ಅಷ್ಟು ಧೈರ್ಯ ಮಾಡುವ ಹಾಗೆಯೇ ಇಲ್ಲ. ಆದರೆ, ಎರಡೂ ಕಡೆ ನಡೆದ ಕಾಟಾಚಾರದ ಪೂಜೆಯ ಬಗ್ಗೆ ಜನರು ತಮ್ಮ ಪಾಡಿಗೆ ತಾವು ಆಡಿಕೊಂಡು ಸುಮ್ಮನಾದರು.
ಶೂ ಬಿಚ್ಚಿ ಪೂಜೆ ಮಾಡಬೇಕಿತ್ತು
ಸಚಿವ ಡಾ.ಸುಧಾಕರ್ ಅವರು ಬೂಟು ಬಿಚ್ಚದೇ ಗೋಶಾಲೆ ಮತ್ತು ಗಂಗೆಗೆ ಪೂಜೆ ಮಾಡಿದ್ದು ಸರಿಯಲ್ಲ. ಅವರು ಜನರ ಮತ್ತು ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿ ವರ್ತಿಸಬಾರದಿತ್ತು ಎಂದು ಹಿರಿಯ ಪತ್ರಕರ್ತ ಹಾಗೂ ಸಂಘ ಪರಿವಾರದ ಕಾರ್ಯಕರ್ತ ದು.ಗು.ಲಕ್ಮಣ್ ಅಭಿಪ್ರಾಯಪಟ್ಟಿದ್ದಾರೆ.
ಶೂ ಧರಿಸಿ ಪೂಜೆ ಮಾಡಿದ್ದು ಅತ್ಯಂತ ದುರದೃಷ್ಟಕರ. ಅವರ ಜತೆ ನಿಂತಿದ್ದ ಶಾಸಕರು, ಮಾಜಿ ಶಾಸಕರು ಕೂಡ ಚಪ್ಪಲಿ ಕಳಚಿಲ್ಲ. ಜನರ ಭಾವನೆಗಳು, ಸಮಾಜದ ಶ್ರದ್ಧೆ-ನಂಬಿಕೆಗೆ ಧಕ್ಕೆ ತರುವ ಕೆಲಸವನ್ನು ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ಸಚಿವ ಡಾ.ಸುಧಾಕರ್ ಮಾಡಿದ್ದಾರೆ.
ಅನಾದಿ ಕಾಲದಿಂದಲೂ ನಮ್ಮಲ್ಲಿರುವ ನಂಬಿಕೆ-ಶ್ರದ್ಧೆ ಪ್ರಕಾರ ನಾವು ದೇವಾಲಯಕ್ಕೆ ಪಾದರಕ್ಷೆ ಧರಿಸಿ ಪ್ರವೇಶ ಮಾಡುವುದಿಲ್ಲ. ಪಾದರಕ್ಷೆ ಧರಿಸಿ ಪೂಜೆ ಮಾಡುವುದಿಲ್ಲ ಕೂಡ. ಸುಧಾಕರ್ ಪವಿತ್ರವಾದ ಗೋವಿಗೆ ಆಶ್ರಯ ತಾಣವಾದ ಗೋ ಶಾಲೆಗೆ ಭೂಮಿ ಪೂಜೆ ಮಾಡುವಾಗ ಶೂ ಬಿಚ್ಚಿಡಬೇಕಿತ್ತು.
ಪಂಚಭೂತಗಳಲ್ಲಿ ಒಂದಾದ ನೀರಿನ ಬಗ್ಗೆ ನಮ್ಮ ಆಚಾರ-ವಿಚಾರಗಳಲ್ಲಿ ಬಹಳಷ್ಟು ನಂಬಿಕೆ, ಶ್ರದ್ಧೆ ಅಡಗಿದೆ. ಅಲ್ಲಿಯೂ ಅವರು ಬೂಟುಗಳನ್ನು ಧರಿಸಿ ಪೂಜೆ ಮಾಡಿರುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಗೆ ಸಾರ್ವಜನಿಕ ಜೀವನದಲ್ಲಿ ನಡೆದುಕೊಳ್ಳುತ್ತಾರೆ ಎಂಬುದನ್ನು ಸುಧಾಕರ್ ನೋಡಿ ಕಲಿಯಬೇಕು. ಓರ್ವ ಮಂತ್ರಿಯಾಗಿ ಅವರ ನಡವಳಿಕೆ ಸರಿಯಲ್ಲ. ಪೂಜೆಯ ವೇಳೆ ಅವರು ಶೂ ಬಿಚ್ಚಲಿಲ್ಲ ಅನ್ನುವ ಕಾರಣಕ್ಕೆ ಅಲ್ಲಿ ಸೇರಿದ್ದ ಉಳಿದವರೂ ಪಾದರಕ್ಷೆ ತೆಗೆಯಲಿಲ್ಲ. ಯಥಾ ರಾಜ, ತಥಾ ಪ್ರಜಾ ಎನ್ನುವಂತಿವೆ ಆ ದೃಶ್ಯಗಳು.
ದು.ಗು.ಲಕ್ಮಣ್ , ಹಿರಿಯ ಪತ್ರಕರ್ತ -ಸಂಘ ಪರಿವಾರದ ಕಾರ್ಯಕರ್ತ
ಕೆಳಗಿನಿಂದ ಮೇಲೆ ಸರಿ ಹೋಗಬೇಕು ಎಂದು ಸಚಿವರು ಭಾವಿಸಿದಂತಿದೆ, ಅದು ತಪ್ಪು. ಮೊದಲು ಮೇಲಿನಿಂದ ಕೆಳಮುಖವಾಗಿ ಸರಿ ಹೋಗಬೇಕು. ಮೊದಲು ಅವರು ಉತ್ತಮ ನಡವಳಿಕೆ ತೋರಿಸಬೇಕು. ಇಂಥವರಿಂದ ಜನರಾಗಲಿ, ಅವರ ಪಕ್ಷದ ಕಾರ್ಯಕರ್ತರಾಗಲಿ ಕಲಿಯುವುದೇನು ಎಂದು ಎಂದು ಲಕ್ಷ್ಮಣರು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..