ಪಿಡಿಒ ವರ್ಗಾವಣೆ, ಪ್ರವಾಸೋದ್ಯಮ ಇಲಾಖೆಯಿಂದ ಕಾರು ಕೊಡುಸುತ್ತೇನೆ ಎಂದು ಅಮಾಯಕರಿಗೆ ದೋಖಾ; ಡೀಸಿ, ಸಿಇಒ ಹೆಸರೂ ದುರ್ಬಳಕೆ
by GS Bharath Gudibande
ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನದ ಮುಖ್ಯ ಲೆಕ್ಕ ಪರಿಶೋಧಕರ ಕಾರು ಚಾಲಕನಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬ, ತಾನು ಜಿಲ್ಲಾ ಪಂಚಾಯಿತಿ ಸಿಇಒ ಕಾರು ಚಾಲಕ ಅಂತ ಸುಳ್ಳು ಹೇಳುತ್ತ ಅಮಾಯಕರ ಬಳಿ ಹಣ ಪೀಕುತ್ತಿರುವುದು ಬೆಳಕಿಗೆ ಬಂದಿದೆ.
ಈ ಕಿಲಾಡಿ ಚಾಲಕ ಜನಸಾಮಾನ್ಯರ ಬಳಿ ಹಣಕ್ಕೆ ಡಿಮಾಂಡ್ ಮಾಡುತ್ತಿರುವ ಆಡಿಯೋ ಈಗ ಸಿಕೆನ್ಯೂಸ್ ನೌ ಗೆ ಲಭ್ಯವಾಗಿದ್ದು, ಕೆಲ ವಾಟ್ಸಾಪ್ ಮತ್ತು ಎಸ್ಸೆಮ್ಮೆಸ್ʼಗಳ ಸ್ಕ್ರೀನ್ʼಶಾಟ್‌ಗಳೂ ಸಿಕ್ಕಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕ ಪರಿಶೋಧಕರ ಕಾರು ಚಾಲಕನಾಗಿ ಹೊರಗುತ್ತಿಗೆಯ ಮೇರೆಗೆ ಕೆಲಸ ಮಾಡುತ್ತಿರುವ ಅಮರ್ ಎನ್ನುವ ಈತ, ಹಣ ಮಾಡುವ ದಂಧೆಯಲ್ಲಿ ನಿರತನಾಗಿದ್ದು, ಇದೀಗ ಜಿಲ್ಲೆಯಲ್ಲಿ ಈತ ಮಾತನಾಡಿರುವ ಆಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.
ನಾನು ಜಿಲ್ಲಾ ಪಂಚಾಯಿತಿ ಸಿಇಒ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಪಿಡಿಒ ವರ್ಗಾವಣೆ ಹಾಗೂ ಪ್ರವಾಸೋದ್ಯಮ ಇಲಾಖೆಯಲ್ಲಿ ಕಾರು ಕೊಡಿಸುತ್ತೇನೆ, ಉಚಿತ ನಿವೇಶನ ಮಂಜೂರು ಮಾಡಿಸುವೆ ಎಂಬೆಲ್ಲ ನಂಬಿಕೆಯ ಮಾತುಗಳನ್ನಾಡುತ್ತಾ ಅಮಾಯಕರ, ಬಡವರ ಹಣ ಲೂಟಿ ಮಾಡುತ್ತಿದ್ದು, ಹಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಮರ್ ಎಂಬ ಈ ವ್ಯಕ್ತಿ ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕ ಪರಿಶೋಧಕನ ಕಾರು ಚಾಲಕ. ಈತ ಮಾಡಬೇಕಾದ ಕೆಲಸ ಬಿಟ್ಟು, ಅಮಾಯಕರಿಗೆ ಆಸೆ- ಆಮಿಷಳನ್ನು ಹುಟ್ಟಿಸಿ ಬಡವರ ಜತೆ ಆಟ ಆಡುವಾಡುತ್ತಿರುವುದು ಜಿಪಂ ವಲಯದಲ್ಲಿ ಹಾಟ್ ಟಾಪಿಕ್ ಆಗಿದೆ. ಅನೇಕ ಅಮಾಯಕ ಜನರ ಹಣ ಲೂಟಿ ಹೊಡೆದು ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳ ಹೆಸರು ದುರ್ಬಳಕೆ ಮಾಡಿರುವ ಈತನ ಬಗ್ಗೆ ದೂರುಗಳೂ ಬಂದಿವೆ. ಅನೇಕ ದಿನಗಳಿಂದ ಈತ ಇದೇ ದಂಧೆ ಮಾಡುತ್ತಿದ್ದಾನೆಂಬ ಮಾಹಿತಿ ಜಿಪಂ ಪಡಸಾಲೆಯಿಂದಲೇ ಆಚೆ ಬಂದಿದೆ.
ಈ ಚಾಲಕನ ಹಣ ಎತ್ತುವಳಿ ವಿಚಾರ ಹಿರಿಯ ಅಧಿಕಾರಿಗಳ ಗಮನಕ್ಕೂ ಹೋಗಿದ್ದು, ಅವರು ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಶಿವಕುಮಾರ್ ಅವರು ಹೇಳುವಂತೆ, “ಈಗಾಗಲೇ ಅಮರ್ ಮೇಲೆ ಹಲವರು ದೂರು ನೀಡಿದ್ದಾರೆ. ಒಮ್ಮೆ ಎಚ್ಚರಿಕೆಯನ್ನೂ ನೀಡಿದ್ದೇನೆ. ಮತ್ತೆ ಮತ್ತೆ ಆತನ ಬಗ್ಗೆ ಆರೋಪಗಳು ಬರುತ್ತಲೇ ಇದ್ದು, ಈಗ ಕಠಿಣ ಕ್ರಮ ಜುರುಗಿಸಲಾಗುವುದು” ಎಂದು ತಿಳಿಸಿದ್ದಾರೆ.
ಇನ್ನು, ಈತನಿಗೆ ಹಣಕೊಟ್ಟ ಕೆಲವರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ತನ್ನ ಪ್ರಭಾವ ಬಳಸಿ ಏನಾದರೂ ತೊಂದರೆ ಮಾಡಬಹುದಾ? ಎನ್ನುವ ಆತಂಕವೂ ಕೆಲವರಿಗಿದೆ. ಆದರೂ ಈ ಬಗ್ಗೆ ಒಬ್ಬರೂ ಸಿಕೆನ್ಯೂಸ್ ನೌ ಜತೆ ಮಾತನಾಡಿದ್ದಾರೆ.
“ಅಮರ್ ಎಂಬ ವ್ಯಕ್ತಿ ಉಚಿತ ನಿವೇಶನ, ವರ್ಗಾವಣೆ, ಪ್ರವಾಸೋದ್ಯಮ ಇಲಾಖೆಯಲ್ಲಿ ವಾಹನ ಕೊಡಿಸುತ್ತೇನೆ, ಲೋನ್ ಮಾಡಿಸಿಕೊಡುತ್ತೇನೆ ಎಂದು ಅನೇಕ ಬಡಜನರ ಬಳಿ ಹಣ ಲೂಟಿ ಮಾಡಿದ್ದಾನೆ, ಈಗ ನನಗೆ ವಾಹನ ಕೊಡಿಸುವುದಾಗಿ ಹೇಳಿ ಹಣ ಕೇಳುತ್ತಿದ್ದಾನೆ. ಉನ್ನತ ಅಧಿಕಾರಿಗಳ ಹೆಸರು ದರ್ಬಳಕೆ ಮಾಡುತ್ತಿರುವವನಿಗೆ ಕಾನೂನು ರೀತ್ಯಾ ಪಾಠ ಕಲಿಸಬೇಕು” ಎಂದು ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಇಷ್ಟೇ ಅಲ್ಲ, ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಕೆಲಸ ಕೊಡಿಸುವೆ, ಡೀಸಿ ಮತ್ತು ಸಿಇಒ ಸಾಹೇಬರನ್ನು ಸ್ವಲ್ಪ ನೋಡೊಕೊಂಡರೆ ಕೆಲಸ ಗ್ಯಾರಂಟಿ ಸಿಗುತ್ತದೆ. ಅವರಿಬ್ಬರೂ ನನಗೆ ಗೊತ್ತು. ಡೀಸಿ ಕಚೇರಿಯಲ್ಲಿ ಕೆಲಸ ಕೊಡಿಸುವೆ ಎಂದು ಕೆಲವರಿಗೆ ಆಮಿಷ ಒಡ್ಡಿರುವ ಈತ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಹೆಸರನ್ನು ದುರುಪಯೋಗ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮುಖ್ಯವಾಗಿ ರೈತರು, ಬಡವರು, ಅಮಾಯಕರನ್ನು ಈತ ವಂಚನೆ ಮಾಡಿರುವ ಅಂಶವೂ ಇರುವುದು ಬಯಲಿಗೆ ಬಂದಿದ್ದು, ಹಿಂದೆ ಈತ ಕೆಲಸ ಮಾಡಿದ್ದ ಬಜಾಜ್ ಫೈನಾನ್ಸ್ʼನಲ್ಲೂ ಅವ್ಯವಹಾರ ನಡೆಸಿರುವ ಪ್ರಕರಣಗಳೂ ಇವೆ ಎಂದು ಗೊತ್ತಾಗಿದೆ. ಹಿಂದೆ ಸಿಇಒ ಆಗಿದ್ದ ಫೌಜಿಯಾ ತಮರುನ್ನಂ ಅವರು ಅಮರ್ ವಿರುದ್ಧ ಪೊಲೀಸ್ ಪರಿಶೀಲನೆಗೂ ಬರೆದಿದ್ದರು. ಆದರೆ, ಅಷ್ಟರಲ್ಲಿ ಅವರು ಬೆಂಗಳೂರಿನ ತೋಟಗಾರಿಕೆ ಇಲಾಖೆಗೆ ವರ್ಗವಾದರು. ಬಳಿಕ ಸಿಇಒ ಆಗಿಬಂದ ಬಂದ ಶಿವಶಂಕರ್ ಅವರು ಈ ಬಗ್ಗೆ ಗಮನ ಹರಿಸಿಲ್ಲ ಎಂದು ತಿಳಿದು ಬಂದಿದೆ.
ಫೌಜಿಯಾ ತಮರುನ್ನಂ ಅವರಿದ್ದಾಗಲೇ ಅಮರ್ʼನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಶಿವಶಂಕರ್ ಅವರು ಸಿಇಒ ಆಗಿ ಬಂದ ಕೂಡಲೇ ಈತ ಮತ್ತೆ ಜಿಲ್ಲಾ ಪಂಚಾಯಿತಿಗೆ ಎಂಟ್ರಿ ಕೊಟ್ಟಿದ್ದು ಹಳೆಯ ಚಾಳಿಯನ್ನೇ ಮುಂದುವರಿಸಿದ್ದಾನೆಂದು ಜಿಲ್ಲಾ ಪಂಚಾಯಿತಿಯಲ್ಲಿನ ಕೆಲ ಮೂಲಗಳು ತಿಳಿಸಿದವು.
ಅಧಿಕಾರಿಗಳು ಏನಂತಾರೆ?
ಅಮರ್ ಬಗ್ಗೆ ಈಗಾಗಲೇ ಎರಡು ದಿನಗಳ ಹಿಂದೆ ದೂರುಗಳು ಬಂದಿವೆ. ಇಂದು (ಸೋಮವಾರ) ಕರೆದು ವಿಚಾರಣೆ ಮಾಡಿ ಎಚ್ಚರಿಕೆ ನೀಡಿದ್ದೇನೆ ಹಾಗೂ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಯಾರಾದರೂ ಈತನಿಂದ ಇನ್ನೂ ವಂಚನೆಗೆ ಒಳಗಾಗಿದ್ದರೆ ಬಂದು ಧೈರ್ಯವಾಗಿ ದೂರು ನೀಡಬಹುದು. ನಾನು ಈಗಾಗಲೇ ಮುಖ್ಯ ಲೆಕ್ಕ ಪರಿಶೋಧಕರ ಗಮನಕ್ಕೂ ಈ ವಿಷಯವನ್ನು ತಂದಿದ್ದೇನೆ. ಈತನನ್ನು ಕೆಲಸದಿಂದ ತೆಗೆದುಹಾಕುವ ಬಗ್ಗೆ ಕ್ರಮ ವಹಿಸಲಾಗುವುದು.
–ಶಿವಕುಮಾರ್, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಚಿಕ್ಕಬಳ್ಳಾಪುರ