ನಿರೂಪಕಿ ವಿರುದ್ಧ ಹೇಳಿಕೆಯನ್ನೇ ನೀಡಿಲ್ಲ ಎಂದ ಡಾನ್ಸರ್; ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಬೆಂಗಳೂರು: ಕನ್ನಡ ಕಿರುತೆರೆಯ ಸ್ಟಾರ್ ನಿರೂಪಕಿ ಅನುಶ್ರೀ ಡ್ರಗ್ ಕೇಸ್ಗೆ ಸಂಬಂಧಿಸಿ ಮತ್ತೆ ರಾಜ್ಯದ ಕೋಲಾಹಲ ಉಂಟಾಗಿದೆ.
ಮಂಗಳೂರು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿರುವ ಆರೋಪ ಪಟ್ಟಿ ಮತ್ತು ಅದರಲ್ಲಿರುವ ಅಂಶಗಳ ಬಗ್ಗೆ ಬೆಳಗ್ಗೆಯಿಂದ ಮಾಧ್ಯಮಗಳಲ್ಲಿ ಕೋಲಾಹಲ ನಡೆಯುತ್ತಿದ್ದು, ಇದರ ತೀವ್ರತೆಯನ್ನು ಸಾಮಾಜಿಕ ಹೋರಾಟಗಾರ ಪ್ರಶಾಂತ ಸಂಬರಗಿ ಹಾಗೂ ಪತ್ರಕರ್ತ-ಸಿನಿಮಾ ನಿರ್ದೇಶಕ ಇಂದ್ರಜಿತ್ ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.
ಇನ್ನೊಂದೆಡೆ ಸರಕಾರವೂ ಎಚ್ಚೆತ್ತುಕೊಂಡಿದೆ. ಮಾದಕ ವಸ್ತುಗಳ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ನಟಿ ಹಾಗೂ ನಿರೂಪಕಿ ಅನುಶ್ರೀ ಡ್ರಗ್ ಕೇಸ್ ಪ್ರಕರಣದಲ್ಲಿ ಯಾವುದೇ ರಾಜಕೀಯ ನಾಯಕನೂ ಸರಕಾರದ ಮೇಲೆ ಒತ್ತಡ ಹೇರುತ್ತಿಲ್ಲ ಎಂದು ತಿಳಿಸಿದ್ದಾರೆ.
ಆದರೆ, ಸರಕಾರದ ಮೇಲೆ ಹಾಗೂ ಪೊಲೀಸರ ಮೇಲೆ ಒತ್ತಡ ಹೇರಲಾಗಿದೆ ಎಂದು ಸಂಬರಗಿ ಹಾಗೂ ಇಂದ್ರಜಿತ್ ಇಬ್ಬರೂ ಹೇಳುತ್ತಿದ್ದು, ಅನುಶ್ರೀ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ.
ಬೆಳಗಾವಿಯಲ್ಲಿ ಇಂದು ಬೆಳಗ್ಗೆ ಈ ಮಾತನಾಡಿದ ಅರ ಜ್ಞಾನೇಂದ್ರ, “ಮಾದಕ ವಸ್ತು ಪ್ರಕರಣದಲ್ಲಿ ಪೊಲೀಸರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅಪರಾಧ ಮಾಡಿ ಯಾರೂ ಕೂಡ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಡ್ರಗ್ಸ್ ಬಗ್ಗೆ ನಮ್ಮ ಸರಕಾರ ಶೂನ್ಯ ಸಹಿಷ್ಣುತೆ ಹೊಂದಿದೆ” ಎಂದು ಹೇಳಿದರು.
ಅನುಶ್ರೀ ಡ್ರಗ್ ಪ್ರಕರಣ ಸೇರಿದಂತೆ ಇನ್ನಾವಿದೇ ಮಾದಕ ವಸ್ತು ಪ್ರಕರಣದ ಬಗ್ಗೆ ಯಾವ ರಾಜಕೀಯ ನಾಯಕನೂ ನಮ್ಮ ಮೇಲೆ ಒತ್ತಡ ಹೇರುತ್ತಿಲ್ಲ. ನಮ್ಮ ಪೊಲೀಸರು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು, ಆರೋಪ ಪಟ್ಟಿಯಿಂದ ಅನುಶ್ರೀ ಹೆಸರನ್ನು ಕೈಬಿಟ್ಟ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇನೆ.
-ಅರಗ ಜ್ಞಾನೇಂದ್ರ, ಗೃಹ ಸಚಿವ
ಆರೋಪ ಪಟ್ಟಿನಲ್ಲಿ ಅನುಶ್ರೀ ಹೆಸರನ್ನು ಕೈಬಿಟ್ಟಿರುವ ಪೊಲೀಸರ ಕ್ರಮದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಗೃಹ ಸಚಿವರು, ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಅನುಶ್ರೀ ಹೆಸರು ಕೈಬಿಟ್ಟಿರುವ ಮಾಹಿತಿ ನನ್ನಲ್ಲಿ ಇಲ್ಲ ಎಂದರು.
ಈಗಾಗಲೇ ಕನ್ನಡ ಚಿತ್ರರಂಗದ ಕೆಲ ತಾರೆಯರು ಮಾದಕ ವಸ್ತು ಜಾಲದಲ್ಲಿ ಸಿಲುಕಿಕೊಂಡಿರುವ ಬಗ್ಗೆ ನಮ್ಮ ಪೊಲೀಸರು ವ್ಯಾಪಕ ತನಿಖೆ ನಡೆಸಿ ನ್ಯಾಯಾಯಲಕ್ಕೆ ವಿವರಗಳನ್ನು ಸಲ್ಲಿಸಿದ್ದಾರೆ. ಅದೇ ರೀತಿ ಅನುಶ್ರೀ ಪ್ರಕರಣವನ್ನೂ ಪರಿಗಣಿಸಲಾಗುವುದು. ಎಷ್ಟೇ ಪ್ರಭಾವಿಗಳಾದರೂ ಸರಕಾರ ಎಲ್ಲ ರೀತಿ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಅರಗ ಜ್ಞಾನೇಂದ್ರ ಪುನರುಚ್ಛರಿಸಿದರು.
ಆರೋಪ ಪಟ್ಟಿಯಲ್ಲಿ ಏನಿದೆ?
ಇದೇ ವೇಳೆ ನಿರೂಪಕಿ ಅನುಶ್ರೀ ಅವರು ಡ್ರಗ್ ಲೋಕದ ಜತೆ ನಂಟು ಹೊಂದಿರುವ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಈ ಡ್ರಗ್ಸ್ ಕೇಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಕರಣದ ಚಾರ್ಜ್ಶೀಟ್ʼನಲ್ಲಿರುವ ಮಾಹಿತಿ ಲಭ್ಯವಾಗಿದ್ದು, ಅದರಲ್ಲಿ ಅನುಶ್ರೀ ಬಗ್ಗೆ ಉಲ್ಲೇಖವಿದೆ. ನ್ಯಾಯಾಲಯಕ್ಕೆ ಸಲ್ಲಿಸಿದೆ ಎನ್ನಲಾದ ಆರೋಪ ಪಟ್ಟಿಯನ್ನು ಇಟ್ಟುಕೊಂಡು ಅನೇಕ ಕಡೆ ಚರ್ಚೆ ನಡೆಯುತ್ತಿದೆ.
ಅನುಶ್ರೀ ಡ್ರಗ್ಸ್ ಸೇವನೆ ಜತೆಗೆ ಅದರ ಸಾಗಾಟ ಅಥವಾ ಇನ್ನೊಬ್ಬರಿಗೆ ನೀಡುತ್ತಿದ್ದರು ಎಂದು ಈ ಪ್ರಕರಣದ ಎ2 ಆರೋಪಿ ಆಗಿರುವ ಕಿಶೋರ್ ಅಮನ್ ಶೆಟ್ಟಿ ಹೇಳಿಕೆಯನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.
ಕಿಶೋರ್ ಶೆಟ್ಟಿ ನೀಡಿರುವ ಹೇಳಿಕೆಯಂತೆ, ಅವರ ರೂಮ್ಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದರು. ಕಿಶೋರ್, ತರುಣ್ ಜೊತೆ ಸಾಕಷ್ಟು ಸಲ ಅನುಶ್ರೀ ಕೂಡ ಡ್ರಗ್ಸ್ ಸೇವನೆ ಮಾಡಿದ್ದರು ಎಂದು ಹೇಳಿಕೆಯಲ್ಲಿ ದಾಖಲಿಸಲಾಗಿದೆ. ಇಡೀ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್ಶೀಟ್ನಲ್ಲಿ ಎ2 ಕಿಶೋರ್ ಶೆಟ್ಟಿ ಹೇಳಿಕೆಯನ್ನು ವಿಸ್ತೃತವಾಗಿ ಉಲ್ಲೇಖಿಸಲಾಗಿದೆ ಎಂದು ಹೆಚ್ಚು ಚರ್ಚೆ ಆಗುತ್ತಿರುವ ಅಂಶ.
ರಿಯಾಲಿಟಿ ಶೋನ ಕೊರಿಯೋಗ್ರಾಫರ್ ಆಗಿದ್ದ ತರುಣ್ ಮುಖಾಂತರ ತನಗೆ ಅನುಶ್ರೀ ಪರಿಚಯವಾಗಿತ್ತು. ತರುಣ್ ರೂಮ್ನಲ್ಲಿ ತಡರಾತ್ರಿವರೆಗೂ ಅನುಶ್ರೀಗೆ ಡಾನ್ಸ್ ಪ್ರಾಕ್ಟೀಸ್ ಮಾಡಿಸುತ್ತಿದ್ದೆವು. ಡಾನ್ಸ್ ಪ್ರಾಕ್ಟೀಸ್ಗೆ ಬರುವಾಗ ಅನುಶ್ರೀ ಎಕ್ಸ್ಟಸಿ ಡ್ರಗ್ಸ್ ಖರೀದಿಸಿ ತರುತ್ತಿದ್ದರು. ನಮಗೆ ಎಕ್ಸ್ಟಸಿ ಡ್ರಗ್ಸ್ ನೀಡಿ ಅನುಶ್ರೀ ಕೂಡ ಸೇವಿಸುತ್ತಿದ್ದರು. ಅನುಶ್ರೀಗೆ ಡ್ರಗ್ಸ್ ಪೆಡ್ಲರ್ಗಳ ಪರಿಚಯವಿದೆ ಎಂಬುದಾಗಿ ಆರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ ಎನ್ನಲಾಗುತ್ತಿದೆ.
ಡ್ರಗ್ಸ್ ಎಲ್ಲಿ ಸಿಗುತ್ತದೆ? ಯಾರು ಪೂರೈಸುತ್ತಾರೆಂದು ಆಕೆಗೆ ಗೊತ್ತಿತ್ತು. ಡ್ರಗ್ಸ್ ಅಷ್ಟು ಸುಲಭವಾಗಿ ಅನುಶ್ರೀಗೆ ಹೇಗೆ ಸಿಗುತ್ತಿತ್ತೋ ಗೊತ್ತಿಲ್ಲ’ ಎಂದು ಚಾರ್ಜ್ಶೀಟ್ನಲ್ಲಿ ಎ2 ಕಿಶೋರ್ ಶೆಟ್ಟಿ ಹೇಳಿಕೆಯನ್ನು ಉಲ್ಲೇಖಿಸಲಾಗಿದೆಯಂತೆ.
ನಿರಾಕರಿಸಿದ ಕಿಶೋರ್ ಅಮನ್ ಶೆಟ್ಟಿ
ಬೆಳಗ್ಗೆಯಿಂದ ಮಾಧ್ಯಮಗಳಲ್ಲಿ ಆರೋಪ ಪಟ್ಟಿಯ ಬಗ್ಗೆ ಮಾಹಿತಿ ಸ್ಫೋಟಗೊಳ್ಳುತ್ತಿದ್ದಂತೆ ಮಾಧ್ಯಮಗಳಲ್ಲಿ ಪ್ರತ್ಯಕ್ಷರಾದ ಕಿಶೋರ್ ಅಮನ್ ಶೆಟ್ಟಿ, ʼಅನುಶ್ರೀ ಅವರ ಬಗ್ಗೆ ನಾನು ಈ ರೀತಿಯ ಹೇಳಿಕೆಯನ್ನೇ ನೀಡಿಲ್ಲʼ ಎಂದು ಹೇಳಿದ್ದಾರೆ. ನಾನು ಪೊಲೀಸರಿಗೆ ಹಾಗೆ ಹೇಳಿಯೇ ಇಲ್ಲ ಎಂದು ಹೇಳಿಕೊಳ್ಳುತ್ತಿರುವ ಶೆಟ್ಟಿ, ಈ ಬಗ್ಗೆ ಕಾನೂನು ತ್ಞರ ಜತೆ ಚರ್ಚೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.