ಗುಡಿಬಂಡೆಯಲ್ಲಿ ಪ್ರಧಾನಮಂತ್ರಿ ಸ್ವಚ್ಛ ಭಾರತಕ್ಕೆ ಎಳ್ಳುನೀರು
By GS Bharath Gudibande
ಗುಡಿಬಂಡೆ: ಇಡೀ ದೇಶವನ್ನು ಬಯಲು ಶೌಚಮುಕ್ತಗೊಳಿಸಲು ಕೇಂದ್ರ ಸರಕಾರವು ಸ್ವಚ್ಛ ಭಾರತ್ ಸೇರಿ ಅನೇಕ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರೂ, ಗ್ರಾಮೀಣ ಪ್ರದೇಶದಲ್ಲಿ ಆ ಯಾವ ಕಾರ್ಯಕ್ರಮಗಳೂ ಸಾಕಾರ ಆಗುತ್ತಿಲ್ಲ. ಬದಲಿಗೆ ಸರಕಾರದ ಹಣ ಪೋಲಾಗುತ್ತಿದೆಯೋ ಹೊರತು, ಜನರಿಗೆ ಪ್ರಯೋಜನ ಆಗುತ್ತಿಲ್ಲ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಬಹಳ ನಿರ್ಲಕ್ಷಿತ ತಾಲೂಕು ಕೇಂದ್ರವಾಗಿರುವ ಗುಡಿಬಂಡೆ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯವಿದೆ ಎನ್ನುವುದು ಸ್ಥಳೀಯರಿಗೂ ಗೊತ್ತಿಲ್ಲ. ಹೊರಗಿನವರಿಗಂತೂ ಶೌಚಾಲಯ ಇದೆಯಾ ಎಂಬ ದೊಡ್ಡ ಪ್ರಶ್ನೆ ಇಟ್ಟುಕೊಂಡೇ ಪಟ್ಟಣವನ್ನೆಲ್ಲ ರೌಂಡ್ ಹೊಡೆಯುತ್ತಾರೆ. ನೇಚರ್ ಕಾಲ್ ಬಂದರೆ ಹೊರಗಿನ ಜನರು ಪಟ್ಟಣದ ಹೊರಗೆ ಓಡಬೇಕು, ತಪ್ಪಿದರೆ ಯಾವುದಾದರೂ ನಿರ್ಜನವಾದ ಪ್ರದೇಶವನ್ನು ಹುಡುಕಿಕೊಳ್ಳಬೇಕು. ಯಾರಾದರೂ ನೋಡಿ ಬೈಯ್ದರೆ ಬೈಸಿಕೊಳ್ಳಬೇಕು.
ಇಡೀ ದೇಶವೆಲ್ಲ ಸ್ವಚ್ಛ ಭಾರತವೆಂದು ಭಜನೆ ಮಾಡುತ್ತಿದೆ. ರಾಜ್ಯ ಸರಕಾರವೂ ಹಾಗೂ ಜಿಲ್ಲಾಡಳಿತವೂ ಮಾತನಾಡುತ್ತಿವೆ. ವಿವಿಧ ಕಾರ್ಯಕ್ರಮಗಳಡಿ ಹಣ ಭರ್ಜರಿ ವೆಚ್ಚವಾಗುತ್ತಿದೆ. ಆದರೆ, ಸ್ವಚ್ಛ ಭಾರತಕ್ಕೆ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಳ್ಳೂನೀರು ಬೀಡಲಾಗುತ್ತಿದೆ.
ಪಟ್ಟಣದ ತಾಲೂಕು ಕಚೇರಿಯ ಆವರಣದ ಮೂಲೆಯಲ್ಲಿ ಇತ್ತೀಚಿಗೆ ನಿರ್ಮಿಸಲಾಗಿರುವ ಶೌಚಾಲಯದಲ್ಲಿ ನೀರು ಮತ್ತು ಶುಚಿತ್ವ ತಕ್ಕಮಟ್ಟಿಗಿದ್ದರೂ, ಮೂಲೆಯಲ್ಲಿದೆ ಎಂಬ ಉದಾಸೀನಕ್ಕೋ, ಹಣ ಕೊಡಬೇಕೆಂಬ ಜಿಪುಣತನಕ್ಕೋ, ಯಾರೂ ಅದನ್ನು ಬಳಸುತ್ತಿಲ್ಲ. ವಲಸೆ ಕಾರ್ಮಿಕರು, ಆಟೋ, ಟೆಂಪೊ ಚಾಲಕರು ಇದನ್ನು ಬಳಸುತ್ತಾರೆ. ಶೌಚಾಲಯದ ಕಟ್ಟಡವಿದ್ದರೂ ಈ ಕಟ್ಟಡದ ಹಿಂದಿನ ಗೋಡೆ ಬದಿಯಲ್ಲಿ ಎಲ್ಲವನ್ನು ಉಚಿತವಾಗಿಯೆ ಪೂರೈಸಿಕೊಳ್ಳುವ ನಡವಳಿಕೆಯಿಂದ ಅಲ್ಲೆಲ್ಲ ಗಬ್ಬೆದ್ದು ಹೋಗಿದೆ. ಅದರ ನಿರ್ವಹಣೆ ಕಳಪೆ ಕಾರಣಕ್ಕೆ ಯಾರೂ ಅತ್ತ ಹೋಗಲು ಮೂಗು ಮುರಿಯುತ್ತಾರೆ.
ಮುಖ್ಯರಸ್ತೆಯಲ್ಲೇ ಇಲ್ಲ ಸಾರ್ವಜನಿಕ ಶೌಚಾಲಯ
ತಾಲೂಕು ಕೇಂದ್ರ ಗುಡಿಬಂಡೆಗೆ ಪ್ರತಿನಿತ್ಯವೂ ನೂರಾರು ಜನರು ನಾನಾ ಕೆಲಸಗಳ ನಿಮಿತ್ತ ಬಂದು ಹೋಗುತ್ತಾರೆ. ಜತೆಗೆ, ಕೆಲ ದಶಕಗಳಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದ್ದು ವೀಕೆಂಡ್‌ನಲ್ಲಿ ಪ್ರವಾಸಿಗರ ದಂಡೇ ಹರಿಸುಬರುತ್ತದೆ. ಹೀಗಿದ್ದರೂ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ, ಅವುಗಳ ಬಳಕೆಯ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಿಲ್ಲ.
ಮುಖ್ಯರಸ್ತೆಯ ಅಗಲೀಕರಣದಲ್ಲಿ ಪಟ್ಟಣ ಪಂಚಾಯಿತಿಯಿಂದ ನಿರ್ಮಾಣ ಮಾಡಲಾಗಿದ್ದ ಒಂದು ಶೌಚಾಲಯವೂ ನೆಲಸಮವಾಗಿ ವರ್ಷವೇ ಕಳೆದಿದೆ. ಆದರೆ ಇದುವರೆಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಒಂದು ಉತ್ತಮ ಶೌಚಾಲಯ ನಿರ್ಮಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ ಎಂದು ಸ್ಥಳೀಯರು ದೂರುತ್ತಾರೆ.
ಬಳಕೆಗೆ ಶೌಚಾಲಯ ಇಲ್ಲದಿರುವ ಕಾರಣಕ್ಕೆ ಜನರು ಬಯಲು ಪ್ರದೇಶಗಳನ್ನೇ ಆಶ್ರಯಿಸಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ. ಇದರಿಂದ ಪಟ್ಟಣದಲ್ಲಿ ನೈರ್ಮಲ್ಯಕ್ಕೆ ಧಕ್ಕೆ ಉಂಟಾಗಿ ಪರಿಸರ ಹಾಳಾಗುತ್ತಿದೆ. ಸ್ಥಳೀಯರು ಮೂಗು ಮುಚ್ಚಿಕೊಂಡು ಸಂಚಾರ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಜನರ ಆರೋಗ್ಯದ ಮೇಲೂ ಇದು ದುಷ್ಪರಿಣಾಮ ಬೀರುತ್ತಿದೆ.
ಪಟ್ಟಣಕ್ಕೆ ಹೊರಗಿನಿಂದ ಬರುವ ಪ್ರಯಾಣಿಕರು ಮಲ, ಮೂತ್ರ ಕ್ರಿಯೆ ಪೂರೈಸಲು ಶೌಚಾಲಯಗಳಿಲ್ಲದೆ ಪರದಾಡುವಂತಾಗಿದೆ. ತಾಲೂಕು ಕಚೇರಿ ಆವರಣದಲ್ಲಿರುವ ಶೌಚಾಲಯವನ್ನು ಪ್ರಯಾಣಿಕರು ಹುಡುಕಿಕೊಂಡು ಹೋಗುವಷ್ಟರಲ್ಲಿ ಮತ್ತೇ ಬಸ್ಸುಗಳು ಸಿಗದೆ ಪರದಾಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಯಾರು ಏನಂತಾರೆ?
12 ಸಾವಿರ ಜನಸಂಖ್ಯೆ ಇರುವ ಪಟ್ಟಣದಲ್ಲಿ ಸಾರ್ವಜನಿಕರು ಉಪಯೋಗಿಸಲು ಒಂದೇ ಒಂದು ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ವಿಪರ್ಯಾಸ. ಜನರು ಸಮುದಾಯ ಭವನಗಳಿಗೆ ಹಣ ಕೇಳುವ ಬದಲು ಶೌಚಾಲಯ, ಚರಂಡಿಗಳನ್ನು ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಬೇಕು. ಭಾರತ ಬಿಟ್ಟರೆ ಬಯಲು ಬಹಿರ್ದೆಸೆ ಸಮಸ್ಯೆ ಜಗತ್ತಿನ ಯಾವ ರಾಷ್ಟ್ರದಲ್ಲೂ ಇಲ್ಲ. ಆರೋಗ್ಯ, ಪರಿಸರದ ದೃಷ್ಟಿಯಿಂದ ಬಯಲು ಶೌಚ ಅತ್ಯಂತ ಅಪಾಯಕಾರಿ. ಸಂಬಂಧಪಟ್ಟ ಅಧಿಕಾರಿಗಳ ಸೂಕ್ತ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿದರೆ ಒಳ್ಳೆಯದು.
ಮಂಜುನಾಥ್, ತಾಲೂಕು ಪಂಚಾಯತಿ ಮಾಜಿ ಸದಸ್ಯ
ಪಟ್ಟಣಕ್ಕೆ ಸಾವಿರಾರು ಪ್ರವಾಸಿಗರು ಹಾಗೂ ವಿವಿಧ ಹಳ್ಳಿಗಳಿಂದ ಜನ ಕೆಲಸ ಕಾರ್ಯಗಳಿಗೆ ಬರುತ್ತಾರೆ. ಆದರೆ ಮಲ, ಮೂತ್ರ ವಿಸರ್ಜಿಸಲು ಶೌಚಾಲವಿಲ್ಲದೆ ಪರದಾಡುವಂತಾಗಿದೆ. ಗುಡಿಬಂಡೆ ತಾಲೂಕು ಕೇಂದ್ರವಾದರೂ ಒಂದೇ ಒಂದು ಶೌಚಾಲಯ ವ್ಯವಸ್ಥೆ ಕಲ್ಪಸದೇ ಇರುವುದು ಅಧಿಕಾರಿಗಳ ಕಾರ್ಯ ವೈಖರಿಗೆ ಹಿಡಿದ ಕನ್ನಡಿ.
ದೇವರಾಜ್, ಪ್ರಯಾಣಿಕ