ಚಿತ್ರಾವತಿ ಎತ್ತರ 3 ಮೀಟರ್ ತಗ್ಗಿಸಿದ್ದರಿಂದ ಬಾಗೇಪಲ್ಲಿ, ಗುಡಿಬಂಡೆ ಜನರಿಗೆ ಅನ್ಯಾಯ
by Ra Na Gopala Reddy Bagepalli
ಬಾಗೇಪಲ್ಲಿ: ರಾಜಕೀಯ ಇಚ್ಛಾಶಕ್ತಿ ಕೊರತೆ ಹಾಗೂ ಆಂಧ್ರ ಪ್ರದೇಶದ ಒತ್ತಡಕ್ಕೆ ಮಣಿದು ಚಿತ್ರಾವತಿ ಅಣೆಕಟ್ಟೆಯ ಎತ್ತರವನ್ನು ಮೂರು ಮೀಟರ್ ಕಡಿಮೆ ಮಾಡಲಾಯಿತು. ಇದರಿಂದ ಬಾಗೇಪಲ್ಲಿ ಮತ್ತು ಗುಡಿಬಂಡೆ ಜನರಿಗೆ ಅನ್ಯಾಯವಾಗಿದೆ ಎಂದು ಮಾಜಿ ಶಾಸಕ, ಪ್ರಜಾ ಸಂಘರ್ಷ ಸಮಿತಿ ಸಂಸ್ಥಾಪಕ ಸಂಚಾಲಕ ಜಿ.ವಿ.ಶ್ರೀರಾಮ ರೆಡ್ಡಿ ಆರೋಪ ಮಾಡಿದರು.
ಪಟ್ಟಣದ ಹೊರವಲಯದ ಪರಗೋಡುವಿನ ಬಳಿ ನಿರ್ಮಿಸಲಾಗಿರುವ ಚಿತ್ರಾವತಿ ಅಣೆಕಟ್ಟು ತುಂಬಿ ಹರಿಯುತ್ತಿದ್ದು, ಇಂದು ಬೆಳಗ್ಗೆ ಬಾಗಿನ ಅರ್ಪಿಸಿದ ನಂತರ ಅವರು ಮಾತನಾಡಿದರು.
ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಬರವಿದೆ. ಸಿಗುವ ಅಲ್ಪಸ್ವಲ್ಪ ನೀರಿನಲ್ಲೂ ಫ್ಲೋರೈಡ್ ವಿಷವಿದೆ. ಫ್ಲೋರೈಡ್ ಕಾಯಿಲೆಯಿಂದ ಮೂಳೆಗಳ ಸವೆತ, ಹಲ್ಲುಗಳು ಮಾಸಲು ಬಣ್ಣಕ್ಕೆ ತಿರುಗುವುದು, ನಡು ಬಾಗುವುದು ಇತ್ಯಾದಿಗಳಿಂದ ಜನ ನರಳುತ್ತಿದ್ದರು. ಹೀಗಾಗಿ ಇಲ್ಲಿನ ಜನರಿಗೆ ಶುದ್ದ ಕುಡಿಯುವ ನೀರನ್ನು ಕೊಡಬೇಕು ಎಂಬ ಉದ್ದೇಶದಿಂದ ಈ ಚಿತ್ರಾವತಿ ಅಣೆಕಟ್ಟು ಯೋಜನೆ ರೂಪಗೊಂಡಿತು. ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಸರಕಾರವಿದ್ದ ಸಂದರ್ಭದಲ್ಲಿ ನಾನು ಶಾಸಕನಾಗಿದ್ದಾಗ ಈ ಯೋಜನೆ ರೂಪುಗೊಂಡಿತು. ಆದರೆ, ಮೂಲ ಯೋಜನೆಯಂತೆ ಈ ಅಣೆಕಟ್ಟೆಯ ಕೆಲಸ ನಡೆಯಲಿಲ್ಲ. ಏಕೆಂದರೆ, ಆ ನಂತರದ ಚುನಾವಣೆಗಳಲ್ಲಿ ನನಗೆ ಸೋಲಾದ ಹಿನ್ನೆಲೆಯಲ್ಲಿ, ತದ ನಂತರ ಬಂದವರ ಆಡಳಿತದಲ್ಲಿ ಅಣೆಕಟ್ಟೆಯ ಎತ್ತರ ಮೂರು ಮೀಟರ್ ಕಡಿಮೆ ಮಾಡಿ, ನಿರ್ಮಾಣ ಮಾಡಿಸಿದರು. ಆ ನಂತರ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ನಾನು ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾದೆ. ಆಗ ಈ ಅಣೆಕಟ್ಟೆಯನ್ನು ಲೋಕಾರ್ಪಣೆ ಮಾಡಲಾಯಿತು ಎಂದರು.
ಮೂರು ಮೀಟರ್ ಎತ್ತರ ಕಡಿಮೆ ಮಾಡಿದ ಕಾರಣಕ್ಕೆ ನೀರಿನ ಸಂಗ್ರಹವೂ ಕಡಿಮೆಯಾಯಿತು. ಅಂದಿನ ಶಾಸಕರು, ಜಿಲ್ಲಾಡಳಿತದ ಇಚ್ಛಾಶಕ್ತಿಯ ಕೊರತೆಯಿಂದ ಎತ್ತರ ತಗ್ಗಿಸಲಾಯಿತು. ಆಂಧ್ರದ ಒತ್ತಡಕ್ಕೆ ಮಣೆ ಹಾಕಲಾಯಿತು ಎಂದು ಅವರು ಟೀಕಿಸಿದರು.
ಚಿತ್ರಾವತಿ ಅಣೆಕಟ್ಟೆಯಲ್ಲಿ ನೀರು ಸಂಗ್ರಹವಾಗಿ ಜನರಿಗೆ ಕುಡಿಯುವ ನೀರನ್ನು ನೀಡುತ್ತಿದೆ. ಎರಡೂ ತಾಲೂಕಿನ ಜನರಿಗೆ ವರದಾನವಾಗಿದೆ. ಇದೇ ರೀತಿ ವರ್ಷ ವರ್ಷ ಮಳೆಯಾಗಿ ಅಣೆಕಟ್ಟು ತುಂಬಿ ಹರಿಯಲಿ. ಯಾವುದೇ ರೀತಿಯಲ್ಲೂ ಕುಡಿಯುವ ನೀರಿಗೆ ಕೊರತೆ ಬಾರದಂತೆ ಕಾಲಕಾಲಕ್ಕೆ ಮಳೆ ಬೆಳೆಯಾಗಲಿ ಎಂದರು ಅವರು.
ಪುರೋಹಿತರ ಮಾರ್ಗದರ್ಶನದಂತೆ ಅವರು ಗಂಗೆಗೆ ಪೂಜೆ ನೆರವೇರಿಸಿದರು. ಪೂಜೆ ಮುಗಿದ ನಂತರ ಎಲ್ಲರಿಗೂ ಸಿಹಿ ವಿತರಣೆ ಮಾಡಿದರು. ಅಣೆಕಟ್ಟು ಸ್ಥಂಭಗಳಿಗೆ ವಿಶೇಷವಾಗಿ ಹೂವಿನಿಂದ ಅಲಂಕಾರ ಮಾಡಲಾಗಿತ್ತು.