ಸತ್ಯಸಾಯಿ ಗ್ರಾಮದ ಶರನ್ನವರಾತ್ರಿ ದಸರಾ ಮಹೋತ್ಸವಕ್ಕೆ ತೆರೆ
by M Krishnappa Chikkaballapura
ಚಿಕ್ಕಬಳ್ಳಾಪುರ: ಸತ್ಯಸಾಯಿ ಗ್ರಾಮದ ಶರನ್ನವರಾತ್ರಿ ದಸರಾ ಮಹೋತ್ಸವ ಧಾರ್ಮಿಕ ಕಾರ್ಯಗಳಿಗೆ ಶುಕ್ರವಾರ ವಿದ್ಯುಕ್ತ ತೆರೆ ಬಿದ್ದಿತು.
ಸದ್ಧರ್ಮ ಮತ್ತು ಸದಾಚಾರಗಳಿಂದ ಲೋಕ ನಿಂತಿದೆ. ಇವೆರಡೂ ಕಾಲಕಾಲಕ್ಕೆ ಪಾಲನೆಯಾಗುತ್ತಾ ಬಂದರೆ ಲೋಕ ಕಲ್ಯಾಣವಾಗುತ್ತದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಇದೇ ಸಂದರ್ಭದಲ್ಲಿ ಸಂದೇಶ ನೀಡುತ್ತಾ ನುಡಿದರು.
ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಯಜ್ಞ ವೇದಿಕೆಯಲ್ಲಿ ನಾಡಹಬ್ಬ ಶರನ್ನವರಾತ್ರಿ ದಸರಾ ವಿಜಯದಶಮಿ ನಿಮಿತ್ತ ಆಯೋಜನೆಗೊಂಡಿದ್ದ ನವರಾತ್ರಿ ಹೋಮ, ದುರ್ಗಾಪೂಜೆ, ಮಹಾರುದ್ರ ಯಾಗ ಮತ್ತು ಬಹುವಿಧ ಪೌಷ್ಟಿಕಾಂಶ ಉತ್ಪಾದನಾ ಘಟಕದ ಭೂಮಿಪೂಜೆ ಸಭಾ ಸಾನ್ನಿಧ್ಯ ವಹಿಸಿ ಮಾತನಾಡಿರು.
ಗತಿಸಿದ ನವ ದಿನಗಳಿಂದ ನಾಡ ಹಬ್ಬದ ನಿಮಿತ್ತ ಸತ್ಯಸಾಯಿ ಗ್ರಾಮವು ಸಾಕ್ಷಾತ್ ಕೈಲಾಸವೇ ಧರೆಗಿಳಿದಂತೆ ಕಂಗೊಳಿಸುತ್ತಿತ್ತು. ಭಾರತೀಯ ಭವ್ಯ ಪರಂಪರೆಯನ್ನು ನಾನಾ ಕೈಂಕರ್ಯ ಆಚರಣೆಗಳಿಂದ ನೆನಪಿಸುವಂತೆ ಮಾಡಿತ್ತು. ಇಂದು ಆ ಸ್ಮರಣೀಯ ಕ್ಷಣಗಳು ದುರ್ಗಾಪೂಜೆ, ನವರಾತ್ರಿ ಹೋಮ ಮತ್ತು ಮಹಾರುದ್ರಯಾಗಗಳ ಪೂರ್ಣಾಹುತಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ತೆರೆ ಕಂಡಿವೆ ಎಂದು ಅವರು ಹೇಳಿದರು.
ಮನಸು ಮತ್ತು ಇಂದ್ರಿಯಗಳ ಮಿತಿಯನ್ನು ದಾಟಿ ಸತ್ಕಾರ್ಯಗಳ ಕಡೆಗೆ ಮುಂದುವರಿಯುವುದೇ ವಿಜಯದಶಮಿ. ಇದಕ್ಕಾಗಿ ಆಂತರಿಕ ಮತ್ತು ಬಾಹ್ಯ ಶುದ್ಧಿ ಆಗಬೇಕು. ಆಂತರಿಕ ಮತ್ತು ಬಾಹ್ಯ ಶುದ್ದಿಯು ಆಚರಣೆಗಳ ಮಹತ್ವ ಅರಿತು ಅದನ್ನು ಕಾರ್ಯರೂಪಕ್ಕೆ ತಂದಾಗ ಆಗುತ್ತದೆ. ಶ್ರದ್ಧೆ ಮತ್ತು ನಿಷ್ಠೆಯಿಂದ ಯಾವುದೇ ಕಾರ್ಯವನ್ನು ಮಾಡಿದರೂ ಅದು ಯಜ್ಞವೆನಿಸುತ್ತದೆ. ಆದುದರಿಂದ ದಿವ್ಯ ಸ್ವರೂಪರಾದ ಮಾನವರ ಸೇವೆಗಾಗಿ ಪವಿತ್ರ ಜೀವಿತವನ್ನು ವಿನಿಯೋಗಿಸಬೇಕು. ಮಾನಸಿಕ ಮತ್ತು ಆಧ್ಯಾತ್ಮಿಕ ವಿಕಾಸಕ್ಕಾಗಿ ಆಚರಣೆಗಳು, ಹಾಗೆಯೇ ದೈಹಿಕ ಪೋಷಣೆಗಾಗಿ ಪೌಷ್ಠಿಕಾಂಶ ಉತ್ಪಾದನಾ ಘಟಕ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ಪುಣ್ಯ ಕಾರ್ಯಗಳನ್ನು ಕಾಲಕಾಲಕ್ಕೆ ಮಾಡುತ್ತಾ ಬಂದರೆ ಎಲ್ಲರೂ ಎಲ್ಲಾ ರೀತಿಯಲ್ಲೂ ವಿಕಾಸವನ್ನು ಹೊಂದಲು ಸಾಧ್ಯವಿದೆ. ಆದುದರಿಂದ ಪ್ರತಿಯೊಬ್ಬರೂ ಲೋಕಕಲ್ಯಾಣಕ್ಕಾಗಿ ದುಡಿಯಬೇಕು ಎಂದರು ಸದ್ಗುರುಗಳು.
ಸಂಪನ್ನ ಸಮಾರಂಭದ ಯಜ್ಞಾಧ್ಯಕ್ಷ ಗುರು ಶ್ರೀ ಮಧುಸೂದನ ಸಾಯಿಯವರು ಸರ್ವಯಾಗಗಳಿಗೆ ಹವಿಸ್ಸನ್ನು ಅರ್ಪಿಸಿದರು. ಸದ್ಗುರುಗಳೊಂದಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಲೋಕದ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯನ್ನು ಬಯಸಿ ಸದ್ಗುರುಗಳ ಮಾರ್ಗದರ್ಶನದಂತೆ ಯಜ್ಞಕ್ಕೆ ಹವಿಸ್ಸನ್ನು ನೀಡಿ ಜನ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.
ಈಗಾಗಲೇ ದೇಶದ 17 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಿಕ್ಷಣ ಆರೋಗ್ಯ ಮತ್ತು ಪೌಷ್ಟಿಕಾಂಶ ವಿಭಾಗಗಳಲ್ಲಿ ಕಾರ್ಯ ಪ್ರವರ್ತಿಸುತ್ತಾ ತನ್ನನ್ನು ತೊಡಗಿಸಿಕೊಂಡು ಅನೇಕ ಮಕ್ಕಳು ಗರ್ಭಿಣಿ ಬಾಣಂತಿಯರ ಬಾಳಿನಲ್ಲಿ ಆರೋಗ್ಯವೃದ್ಧಿಗೆ ಸಹಕಾರಿಯಾದ ಬಹುವಿಧ ಪೌಷ್ಠಿಕಾಂಶವನ್ನು “ಸಾಯಿ ಶ್ಯೂರ್ ” ಪೂರಕ ಆಹಾರದ ಮೂಲಕ ನೀಡಿ ಲೋಕೋಪಕಾರ ಮಾಡುತ್ತಿರುವ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಪೌಷ್ಟಿಕಾಂಶ ಉತ್ಪಾದನಾ ಘಟಕಕ್ಕೆ ಭೂಮಿ ಪೂಜೆ ನೆರವೇರಿತು.
ಕೋವಿಡ್ ಮಾರ್ಗಸೂಚಿಯ ಅನುಸಾರ ಸೀಮಿತ ಸಂಖ್ಯೆಯಲ್ಲಿ ಆಗಮಿಸಿದ್ದ ಆಮಂತ್ರಿತರೊಂದಿಗೆ ಗುರುಕುಲದ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಶಿಕ್ಷಕ-ಶಿಕ್ಷಕಿಯರು, ಪದಾಧಿಕಾರಿಗಳು, ವಿದ್ಯಾ ನಿವೇಶನದ ಹಿರಿಯ ಮತ್ತು ಕಾಯಂ ನಿವಾಸಿಗಳು ಸಮಾರಂಭದಲ್ಲಿ ಹಾಜರಿದ್ದರು. ಗಣ್ಯರಿಂದ ಅಲಂಕರಿಸಲ್ಪಟ್ಟಿದ್ದ ಸಭಾವೇದಿಕೆಯಲ್ಲಿ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ ಅವರು ಉಪಸ್ಥಿತರಿದ್ದರು.