ಗತಿಸಿಹೋಗುತ್ತಿದೆ ಗುಡಿಬಂಡೆ ಗತವೈಭವ; ಕಾಲಗರ್ಭ ಸೇರುತ್ತಿರುವ 900 ವರ್ಷಗಳ ಐತಿಹಾಸಿಕ ದೇವಾಲಯ
By GS Bharath Gudibande
ಗುಡಿಬಂಡೆ: ತಾಲೂಕು ಐತಿಹಾಸಿಕವಾಗಿ ತುಂಬಾ ಆಸಕ್ತಿದಾಯಕವಾಗಿದೆ. ಅನೇಕ ದೇವಾಲಯಗಳಿದ್ದು, ಒಂದೊಂದು ದೇವಾಲಯಕ್ಕೂ ಪ್ರತ್ಯೇಕವಾದ ವಿಶಿಷ್ಟ್ಯ ಐತಿಹ್ಯವಿದೆ. ತೆರೆಮರೆಯಲ್ಲಿ ಅವುಗಳ ಸತ್ಯವನ್ನು ಕಂಡುಹಿಡಿಯಲು ಅನೇಕ ಪ್ರಯತ್ನಗಳು ನಡೆದಿವೆ.
ಗುಡಿಬಂಡೆ ತಾಲೂಕಿನ ದೇವಾಲಯಗಳ ಮಾಹಿತಿ, ಇತಿಹಾಸ, ರಹಸ್ಯಗಳು ಎಲ್ಲರನ್ನೂ ಬೆರಗುಗೊಳಿಸುವಂತಿವೆ. ಏಕೆಂದರೆ, ಹಲವಾರು ಪುರಾಣ ಮತ್ತು ಇತಿಹಾಸ ಇಲ್ಲಿದೆ. ನಾವೆಲ್ಲರೂ ಪೂಜಿಸುವ ಶ್ರೀರಾಮಚಂದ್ರರು ಸ್ವತಃ ಇಲ್ಲಿ ಶಿವಲಿಂಗ ಪ್ರತಿಷ್ಠಾನೆ ಮಾಡಿದ್ದಾರೆ ಎನ್ನುವ ಪುರಾಣ ಕಥೆಯೂ ಇದೆ. ಹೀಗೆ ತಾಲೂಕಿನ ಇಂಚಿಂಚು ಹುಡುಕಿ ಮಾಹಿತಿ ಶೇಖರಣೆ ಮಾಡುವ ಕೆಲಸ ಪುರಾತತ್ವ ಇಲಾಖೆ ಮಾಡಲೇಬೇಕಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಮುಜರಾಯಿ ಇಲಾಖೆ ದಿವ್ಯನಿರ್ಲಕ್ಷ್ಯ
ಪುಲಸಾನಿವೊಡ್ಡು ಗ್ರಾಮದಲ್ಲಿರುವ ಸುಮಾರು 900 ವರ್ಷಗಳ ಪುರಾತನ ದೇವಾಲಯವೆಂದು ಹೇಳಲಾಗುತ್ತಿರುವ ತಾಂಡವೇಶ್ವರ (ವೀರಗಲ್ಲು) ದೇವಾಲಯವು ಭೂಗರ್ಭದಲ್ಲಿ ಸೇರುವ ದುಸ್ಥಿತಿಯಲ್ಲಿದ್ದರೂ ಪುರಾತನ ದೇವಾಲಯಗಳನ್ನು ರಕ್ಷಿಸಬೇಕಾದ ಪುರಾತತ್ವ ಇಲಾಖೆ ಹಾಗೂ ಮುಜರಾಯಿ ಇಲಾಖೆಗಳು ನಿರ್ಲಕ್ಷ ವಹಿಸಿವೆ.
ಈವರೆಗೂ ಯಾರು ಗಮನಿಸದ ಹಾಗೂ ನಿರಂತರವಾಗಿ ನಿರ್ಲಕ್ಷಿಸಲ್ಪಟ್ಟ ಈ ದೇವಾಲಯ ಈಗ ಅನಾಥವಾಗಿದೆ. ನಾಗರೀಕ ಸಮಾಜ ತಲೆತಗ್ಗಿಸುವಂತಿದೆ ಹಾಗೂ ಸರಕಾರ ಮತ್ತು ಆಡಳಿತಗಳ ಆತ್ಮಪ್ರಜ್ಞೆಯನ್ನು ಪ್ರಶ್ನಿಸುವಂತಿದೆ. ಅನರ್ಘ್ಯ ಪ್ರಾಚ್ಯ ಪರಂಪರೆಯನ್ನು ರಕ್ಷಿಸಬೇಕಾದ ಇಲಾಖೆಗಳೆಲ್ಲ ಗಡತ್ತಾಗಿ ಗೊರಕೆ ಹೊಡೆಯುತ್ತಿವೆ ಮಾತ್ರವಲ್ಲದೆ, ತಾಲೂಕು ಮತ್ತು ಜಿಲ್ಲಾಡಳಿತಗಳು ಕಣ್ಣಿದ್ದೂ ಕುರುಡಾಗಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಚೋಳರು ಕಟ್ಟಿಸಿದ ದೇವಾಲಯ
ಚೋಳರ ರಾಜವಂಶಕ್ಕೆ ಸೇರಿರಬಹುದೆಂದು ಹೇಳಲಾಗಿರುವ ಈ ದೇವಾಲಯದ ಕಣಕಣದಲ್ಲೂ ಕಲಾವೈಭವ ಅಡಕವಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರದೇಶಗಳನ್ನು ಆಳ್ವಿಕೆ ಮಾಡಿರುವ ಚೋಳರಸರು ಅನೇಕ ದೇಗುಲಗಳನ್ನು ಕಟ್ಟಿಸಿದ್ದಾರೆ. ಅವೆಲ್ಲ ಅವನತಿಯ ಹಾದಿಯಲ್ಲಿದ್ದು, ಈ ತಾಂಡವೇಶ್ವರ ದೇವಾಲಯವೂ ಯಾರಿಗೂ ಬೇಡದ ಸ್ಥಿತಿಯಲ್ಲಿದೆ. ತಾಂಡವೇಶ್ವರ ಎಂದರೆ ನಟರಾಜ ಸ್ವಾಮಿಯಂತೆ ಅಥವಾ ರುದ್ರತಾಂಡವರೂಪಿ ಭಂಗಿಯಲ್ಲಿ ಆ ಪರಮ ಶಿವನು ನಾಟ್ಯರೂಪದಲ್ಲಿದ್ದನ್ನು ಎನ್ನಲಾಗಿದೆ. ಆದರೆ, ಅಲ್ಲಿ ಮೂಲ ದೇವರ ಮೂರ್ತಿಯೇ ಇಲ್ಲದಾಗಿದೆ.
ಬೇಲೂರು, ಹಳೆಬೀಡು ಹಾಗೂ ಆಂಧ್ರ ಪ್ರದೇಶದ ಲೇಪಾಕ್ಷಿ ದೇವಾಲಯಗಳನ್ನು ಹೋಲುವ ರೀತಿಯಲ್ಲಿರುವ ತಾಂಡವೇಶ್ವರ ದೇವಾಲಯದಲ್ಲಿ ಲೇಪಾಕ್ಷಿ ದೇವಾಲಯದಲ್ಲಿರುವಂತೆ ನಿರ್ಮಿಸಲಾಗಿದ್ದು, ಶಿಲಾಬಾಲಕೆಯರ ಕೆತ್ತನೆಗಳಿವೆ. ವಿವಿಧ ದೇವತೆಗಳ ವಿಶೇಷ ರಚನೆಗಳನ್ನು ಒಳಗೊಂಡಿರುವ ಈ ದೇವಾಲಯವು ಈಗ ಸಂಪೂರ್ಣವಾಗಿ ಶಿಥಿಲವಾಗಿದ್ದು, ಇನ್ನೇನು ಕಾಲಗರ್ಭದಲ್ಲಿ ಸೇರುವ ಶೋಚನೀಯ ಸ್ಥಿತಿಯಲ್ಲಿದೆ. ಸಂಬಂಧಪಟ್ಟ ಯಾವ ಇಲಾಖೆಗಳು ಈ ದೇಗುಲದತ್ತ ಕಣ್ಣು ಹಾಯಿಸಿಲ್ಲ ಎನ್ನುವುದು ಪುಲಸಾನಿವೊಡ್ಡು ಗ್ರಾಮಸ್ಥರ ಆಕ್ರೋಶ.
ಆಕಾರಕ್ಕೆ ಹಾನಿಯಾಗಿದೆ
ಈಗಾಗಲೇ ದೇವಾಲಯದ ಕಂಬಗಳು ಮುರಿದಿವೆ. ಗರ್ಭಗುಡಿಯಲ್ಲಿರುವ ವಿಗ್ರಹಗಳು ಅರ್ಧಂಬರ್ಧ ಭೂಮಿಯಲ್ಲಿ ಸೇರಿವೆ. ಗರ್ಭಗುಡಿಯ ಗೋಡೆಗಳು ಉರುಳಿದ್ದು ದೇವಾಲಯವು ಸಂಪೂರ್ಣವಾಗಿ ಗಿಡಮರಗಳಲ್ಲಿ ಮರೆಯಾಗಿದೆ. ದೇವಾಲಯಕ್ಕೆ ಸಂಬಂಧಿಸಿದ ಶಾಸನಗಳು ಅಳಿಸಿ ಹೋಗಿವೆ. ಗ್ರಾಮಸ್ಥರು ಮಾತ್ರ ಈ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದೆ ಎಂದು ಹೇಳುತ್ತಾರೆ. ಆದರೆ, ವಾಸ್ತವಕ್ಕೆ ಮುಜರಾಯಿ ಸೇರಿ ಯಾಚ ಇಲಾಖೆಯೂ ಇತ್ತ ಗಮನ ನೀಡುತ್ತಿಲ್ಲ. ಸಂಬಂಧಪಟ್ಟ ಇತರೆ ಯಾವುದೇ ಇಲಾಖೆಗಳು ರಕ್ಷಣೆ ಮಾಡುತ್ತಿಲ್ಲ. ಕನ್ನಡ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳನ್ನು ಜಿಲ್ಲೆಯಲ್ಲಿ ಹುಡಕಬೇಕು.
ದೇವಾಲಯದ ಇತಿಹಾಸ
ಸ್ಥಳಿಯರು ಹಾಗೂ ಇತಿಹಾಸ ಸಂಶೋಧಕರ ಪ್ರಕಾರ ಈ ಸ್ಥಳಕ್ಕೆ ಸುಮಾರು 900 ವರ್ಷಗಳ ಇತಿಹಾಸವಿದ್ದು, ಕ್ರಿಶ.11 ಮತ್ತು 12ನೇ ಶತಮಾನಗಳಲ್ಲಿ ಈ ಪ್ರಾಂತ್ಯವನ್ನು ಆಳಿದ ಚೋಳ ದೊರೆಗಳು ಈ ದೇಗುಲವನ್ನು ಕಟ್ಟಿಸಿದ್ದರು ಎನ್ನುವ ಮಾತಿದೆ. ಆದರೆ ಇತಿಹಾಸಕಾರರು, ವಿಜಯನಗರ ಅರಸರ ಕಾಲದಲ್ಲಿ ಈ ದೇಗುಲ ನಿರ್ಮಾಣವಾಗಿದೆ ಎನ್ನುತ್ತಾರೆ. ಆ ಕಾಲಘಟ್ಟದ ಓರ್ವ ಅರಸ ಲೇಪಾಕ್ಷಿಯಲ್ಲಿ ತಾಂಡವೇಶ್ವರ ದೇಗುಲ ಕಟ್ಟಿಸಿದ್ದಾನೆ. ಅಲ್ಲಿನ ದೇವಸ್ಥಾನದ ದೈವೀಕಾರ್ಯಗಳಿಗೆ ರಂಗಸಾನಿ ಎಂಬ “ಸಾನಿ” (ದೇವದಾಸಿ) ಪರಂಪರೆಯ ಮಹಿಳೆಯನ್ನು ನೇಮಕ ಮಾಡಲಾಗಿತ್ತು. ತನ್ನನ್ನು ತಾನು ದೇವರ ಸೇವೆಗೆ ಸಮರ್ಪಿಸಿಕೊಂಡು ಬಹಳ ಮುತುವರ್ಜಿಯಿಂದ ದೇವರ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುತ್ತಾಳೆ. ದೇವಸ್ಥಾನದ ಶುಚಿತ್ವ, ದೇವರ ಅಲಂಕಾರಕ್ಕೆ ಹೂವು ಹಣ್ಣು ಹಂಪಲು, ಎಲೆಗಳ ಸಂಗ್ರಹಣೆ, ದೇವಸ್ಥಾನದ ವಿಶೇಷ ಸಭೆ, ಸಮಾರಂಭಗಳಲ್ಲಿ ನೃತ್ಯ ಇವೆಲ್ಲಾ ಈಕೆಯ ಜವಾಬ್ದಾರಿಗೆ ಒಳಪಟ್ಟಿರುತ್ತವೆ ಎನ್ನುವ ಮಾಹಿತಿ ಇದೆ.
- ಅನನ್ಯ ಶಿಲ್ಪಕಲಾ ಸಂಪತ್ತಿನ ತಾಂಡವೇಶ್ವರ ಸ್ವಾಮಿ ದೇಗುಲದ ಅವಶೇಷಗಳ ಚಿತ್ರಗಳ ಸ್ಲೈಡ್ ಶೋ..
ರಂಗಸಾನಿಯ ತಂಗಿಯಾದ ಪೂಲಸಾನಿಯ ಮೂಲ ಹೆಸರು ಹನುಮಕ್ಕ. ಈಕೆ ಲೇಪಾಕ್ಷಿಯಿಂದ ಒಂದು ತಾಂಡವೇಶ್ವರ ಸ್ವಾಮಿಯ ಲಿಂಗವನ್ನು ಬುಟ್ಟಿಯಲ್ಲಿಟ್ಟುಕೊಂಡು ಹೊತ್ತು ತಂದು ಈಗಿನ ಗುಡಿಬಂಡೆಯ ಪಟ್ಟಣದೆಡೆಗೆ ಹೊರಟಿರುತ್ತಾಳೆ. ದಾರಿಯ ಮಧ್ಯೆ ಈ ಹಂಪಸಂದ್ರ ಬಳಿಯ ಜಾಗವು ಪ್ರಶಸ್ತ್ಯವಾಗಿ ಆಕೆಗೆ ಕಾಣುತ್ತದೆ. ಈ ಜಾಗದಲ್ಲಿಯೇ ಲಿಂಗವನ್ನು ಪ್ರತಿಷ್ಠಾಪಿಸಿ, ಮಾಧವ ವರ್ಮನ ಸಹಾಯದಿಂದ ಒಂದು ಭವ್ಯ ದೇವಸ್ಥಾನವನ್ನು ಕಟ್ಟಿಸುತ್ತಾಳೆ. ಇದರ ಜತೆಗೆ ಇಲ್ಲಿ ನೀರಿನ ಸೌಲಭ್ಯಕ್ಕೆ ಎರಡು ಕುಂಟೆಗಳನ್ನು ಸಹ ಕಟ್ಟಿಸಿ, ಗೋಣಿ ಮರವೊಂದನ್ನು ನೆಟ್ಟು, ಬಂಡೆಯ ಮೇಲೆ ಶಾಸನವನ್ನು ಬರೆಸುತ್ತಾಳೆ. ಹೀಗೆ ಈ ಪ್ರದೇಶವನ್ನು ಅಭಿವೃದ್ದಿ ಮಾಡಿದ್ದಕ್ಕಾಗಿ ಈ ಗ್ರಾಮಕ್ಕೆ ʼಪೂಲಸಾನಿವೊಡ್ಡುʼ ಎಂಬ ಹೆಸರು ಬಂದಿದೆ ಎಂಬುದು ಹಿರಿಯರು ಹಾಗೂ ಇತಿಹಾಸ ಸಂಶೋಧಕರು ಹೇಳುವ ಮಾತು.
ಸುತ್ತಮುತ್ತಲೂ ಹೂವು, ಎಲೆ, ಹಣ್ಣು-ಹಂಪಲು, ದವಸ ಧಾನ್ಯಗಳನ್ನು ಸಂಗ್ರಹಿಸಿ ಅತ್ತ ತನ್ನ ಅಕ್ಕನಿದ್ದ ಲೇಪಾಕ್ಷಿಗೂ ಮತ್ತು ಈ ದೇವಸ್ಥಾನದ ಸೇವೆಗೂ ಬಳಸುತ್ತಿದ್ದರು. ಇದೇ ಸಂದರ್ಭದಲ್ಲಿ ಗುಡಿಬಂಡೆ ಪ್ರದೇಶಕ್ಕೆ ಸಂಬಂಧಿಸಿದ ಅಲ್ಲಿನ ಸ್ಥಳೀಯ ಮುಖಂಡನೊಬ್ಬ ಆಕೆಯನ್ನು ಕಂಡು ಮೋಹಗೊಂಡು ಆಕೆಯ ಸಂಗಕ್ಕಾಗಿ ಪರಿತಪಿಸುತ್ತಾನೆ. ಅದನ್ನು ತಿರಸ್ಕರಿಸುವ ಹನುಮಕ್ಕ ತಾನು ಕೇವಲ ದೇವರ ಸೇವಕಿ, ಅಂದರೆ ತಾಂಡವೇಶ್ವರನ ಸೇವೆಗೆ ಮಾತ್ರ ಮೀಸಲಾದವಳು ಎಂದು ತಿಳಿಸುತ್ತಾಳೆ. ಇದರಿಂದ ಕೋಪಗೊಂಡು ಆತ ಈಕೆ ಒಮ್ಮೆ ಲೇಪಾಕ್ಷಿಗೆ ಹೋಗಿದ್ದ ಸಮಯದಲ್ಲಿ ತಾಂಡವೇಶ್ವರ ಲಿಂಗವನ್ನು ಕಿತ್ತು ಕೆರೆಯಲ್ಲಿ ಹಾಕಿಸಿಬಿಡುತ್ತಾನೆ. ಲೇಪಾಕ್ಷಿಯಿಂದ ಮರಳಿದ ಸಾನಿ ಹನುಮಕ್ಕ ತನ್ನ ಪ್ರಾಣಪ್ರಿಯನಾದ ತಾಂಡವೇಶ್ವರನನ್ನು ಕಾಣದೇ ಅದೇ ವೇದನೆಯಿಂದ ಆ ಜಾಗ ತೊರೆದು ಬಿಡುತ್ತಾಳೆ.
ನಂತರ ಒಮ್ಮೆ ಭೀಕರ ಕಾಯಿಲೆಗಳು ಅಲ್ಲಿನ ಗ್ರಾಮವನ್ನು ಮುತ್ತಿ ಸ್ಥಳೀಯ ಮುಖಂಡ ಘೋರ ಸಾವು ಕಾಣುತ್ತಾನೆ. ಅದನ್ನು ಕಣ್ಣಾರೆ ಕಂಡ ಪೂಲಸಾನಿ ನಂತರ ತಾಂಡವೇಶ್ವರನ ನೆನಪಿನಲ್ಲಿ ತನ್ನ ಅಂತಿಮ ಜೀವನ ಮುಗಿಸುತ್ತಾಳೆ ಎಂಬುದು ಇಲ್ಲಿನ ಐತಿಹಾಸಿಕ ಕಥನವಾಗಿದೆ.
ಕಂಬಗಳ ಮೇಲೆ ನೃತ್ಯ ಚಿತ್ರಗಳು
ಪುಲಸಾನಿವೊಡ್ಡು ಗ್ರಾಮದಲ್ಲಿರುವ ದೇವಸ್ಥಾನದ ಕಂಬಗಳ ಮೇಲೆ ಪೂಲಸಾನಿ ಹನುಮಕ್ಕ ಹಾಗೂ ಅಕ್ಕ ರಂಗಸಾನಿಯವರ ವಿವಿಧ ಬಗೆಯ ನೃತ್ಯ ಶೈಲಿಯ ಭಂಗಿಗಳನ್ನು ಕಾಣಬಹುದು. ಚೋಳರ ರಾಜ ಲಾಂಛನಗಳಾದ ಚಾಮರ-ಛತ್ರಿ, ನವಿಲುಗಳು, ನೃತ್ಯ, ಲತಾ ಬಳ್ಳಿಗಳ ಸೊಬಗು, ಕಂಬಗಳ ಮೇಲುಭಾಗದಲ್ಲಿ ಸಿಂಹಗಳ ಚಿತ್ರ, ವಿವಿಧ ಪ್ರಾಣಿಗಳ ಚಿತ್ರಗಳು, ಅಂಗಸೇವೆ-ರಂಗಸೇವೆಗಳ ಚಿತ್ರಗಳು ಇವೆಲ್ಲವನ್ನು ಇಂದಿಗೂ ಇವೆ.
ದೇಗುಲದ ಧ್ವಾರದಲ್ಲಿ ಹೂಗಳನ್ನು ಚೆಲ್ಲುತ್ತಾ ನಿಂತು ಸ್ವಾಗತಿಸುತ್ತಿರುವ ರಂಗಸಾನಿ, ಪುಲಸಾನಿಯವರ ಉಬ್ಬುಶಿಲ್ಪಗಳಂತೂ ಬೇಲೂರು ಶಿಲಾ ಬಾಲಿಕೆಯರಿಗಿಂತ ಕಲಾತ್ಮಕವಾಗಿವೆ. ಇವೆಲ್ಲಾ ಗತವೈಭವದ ಸಾಕ್ಷಿಗಳಾಗಿ, ಮೂಕವೇದನೆ ಅನುಭವಿಸುತ್ತಾ ಪುಲಸಾನಿವೊಡ್ಡುವಿನ ಕಥೆ ಹೇಳುತ್ತಿವೆ.
ದೇವಾಲಯ ರಕ್ಷಿಸುವವರು ಯಾರು?
ದುರದೃಷ್ಟದ ವಿಚಾರವೆಂದರೆ, ಇಷ್ಟು ಅನನ್ಯ ಇತಿಹಾಸವಿರುವ ಈ ಪೂಲಸಾನಿ ಹನುಮಕ್ಕ ನಿರ್ಮಿಸಿದಂತಹ ಸುಂದರ ದೇವಾಲಯ ಎಂದು ಸ್ಥಳೀಯ ರಾಜಕೀಯ ನಾಯಕರ, ಸ್ಥಳೀಯ ಮುಖಂಡರ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಮುಜರಾಯಿ ಇಲಾಖೆಯವರ ಅಥವಾ ಪುರಾತತ್ವ ಇಲಾಖೆಯವರ ಗಮನಕ್ಕೂ ಬಾರದೇ ಮೂಕವಾಗಿ ರೋಧಿಸುತ್ತಾ ಈಗಲೋ ಆಗಲೋ ಮರೆಯಾಗಿಬಿಡುವ ಹಂತದಲ್ಲಿದೆ.
ಪಾಳುಬಿದ್ದಿರುವ ಅನನ್ಯ ದೇಗುಲ.
ಪಕ್ಕದಲ್ಲೇ ಬೆಳೆಸಿದ್ದ ಬೃಹತ್ ಗಾತ್ರದ ಗೋಣಿ ಮರವು ದೇಗುಲದ ಒಂದು ಪಾರ್ಶ್ವದಲ್ಲಿ ಬಿದ್ದು ಇಡೀ ದೇವಸ್ಥಾನವನ್ನೇ ಹಾಳುಗೆಡವಿದೆ. ಸುತ್ತಲಿನ ಗೋಡೆಗಳು ಕದಲಿ ಬೀಳುವ ಹಂತದಲ್ಲಿವೆ. ಮೂಲ ತಾಂಡವೇಶ್ವರ ಲಿಂಗವಿಲ್ಲದೆ ಆ ಜಾಗದಲ್ಲಿ ವೀರಗಲ್ಲುಗಳನ್ನು ತಂದು ಇಡಲಾಗಿದೆ. ಇಂತಹ ಸುಂದರ ಕಲಾ ದೇವಾಲಯಗಳು ಒಮ್ಮೆ ಗತಿಸಿಹೋದರೆ ಮತ್ತೆ ಮರು ನಿರ್ಮಿಸಲು ಸಾದ್ಯವೇ? ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳ ಎಚ್ಚರಗೊಳ್ಳಲಿ, ಇತ್ತ ಗಮನ ಹರಿಸಿ ಗತವೈಭವಗಳ ಉಳಿವಿಗೆ ಗಮನ ನೀಡಿಲಿ ಜನರ ಮನವಿಯಾಗಿದೆ.
ಎಲ್ಲದೆ ಪುಲಸಾನಿವೊಡ್ಡು?
ಗುಡಿಬಂಡೆ ಪಟ್ಟಣಕ್ಕೆ ಹತ್ತು ಕಿ.ಮೀ. ದೂರದಲ್ಲಿರುವ ಹಂಪಸಂದ್ರಕ್ಕೆ ಒಂದು ಕಿ.ಮೀ ದೂರದಲ್ಲಿದೆ ಈ ದೇಗುಲ. ಈ ಐತಿಹಾಸಿಕ ದೇವಾಲಯ ಗ್ರಾಮದ ರಸ್ತೆ ಪಕ್ಕದಲ್ಲಿದೆ. ಸುಸ್ಥಿತಿಯಲ್ಲಿದ್ದಾಗ ಸ್ಥಳೀಯರು ಹೋಗಿ ಪೂಜೆ ಮಾಡುತ್ತಿದ್ದರು. ಪಾಳುಬಿದ್ದ ಮೇಲೆ ಜನ ಹೋಗುವುದನ್ನು ಬಿಟ್ಟರು. ಇತಿಹಾಸಕಾರರ ಕಣ್ಣಿಗೂ ಈ ದೇಗುಲ ಬಿದ್ದಿಲ್ಲದಿರುವುದು ದುರದೃಷ್ಟಕರ. ಈಗಾಗಲೇ ಅನೇಕ ಐತಿಹಾಸಿಕ ತಾಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಗುಡಿಬಂಡೆಗೆ ಈ ದೇಗುಲವು ಖಂಡಿತ ಒಂದು ಹೆಮ್ಮೆಯ ಗರಿಯಾಗಲಿದೆ. ಮುಂದಿನ ಸಂಶೋಧನೆಗೆ ಪೂರಕವಾಗಲಿದೆ.
ಯಾರು ಏನಂತಾರೆ?
ಪುಲಸಾನಿವೊಡ್ಡು ಗ್ರಾಮಕ್ಕೆ ನಾನು ಬೇಟಿ ಮಾಡಿದ್ದೆ. ಪುರಾತನ ಕಾಲದ ದೇವಲಯದ ದೃಶ್ಯ ಕಾಣುತ್ತದೆ. ಅದು ಸಂಪೂರ್ಣ ಅಳಿವಿನ ಅಂಚಿನಲ್ಲಿದೆ. ಗರ್ಭ ಗುಡಿಯಲ್ಲಿ ಈಗಲೂ ವಿಗ್ರಹಗಳಿವೆ. ಅವುಗಳ ಮೇಲೆ ಬರೆದಿರುವ ಅಕ್ಷರಗಳನ್ನು ಕಾಣಬಹುದು, ಇಂತಹ ಐತಿಹಾಸಿಕ ಸ್ಥಳಗಳು ತಾಲೂಕಿನಲ್ಲಿ ಹೆಚ್ಚಾಗಿವೆ. ಅವುಗಳ ಮಾಹಿತಿ ಪಡೆದು ಅಭಿವೃದ್ಧಿಗೆ ಮುಂದಾಗಬೇಕು. ಐತಿಹಾಸಿಕ ಹಿನ್ನಲೆ ಇರುವ ದೇವಾಲಯಗಳನ್ನು ಗುರುತಿಸಿ ಸರಕಾರ ಹಳೇ ದೇವಾಲಯಗಳ ಜೀರ್ಣೋದ್ದಾರ ಮಾಡಲು ಸಮಿತಿ ರಚಿಸಿ ಅಭಿವೃದ್ಧಿಗೆ ಮುಂದಾಗಬೇಕು.
ವಿ.ಲಕ್ಷ್ಮೀನಾರಾಯಣ, ಜಂಟಿ ಕಾರ್ಯದರ್ಶಿ ಮಾಜಿ ಸೈನಿಕರ ಸಂಘ ಚಿಕ್ಕಬಳ್ಳಾಪುರ ಜಿಲ್ಲೆ.
ತಾಂಡವೇಶ್ವರ ದೇಗುಲ ನಿರ್ಮಾಣದ ಬಗ್ಗೆ ಸಂಶೋಧನೆ ಆಗಬೇಕು. ಈ ದೇಗುಲವನ್ನು ಚೋಳರು ಕಟ್ಟಿಸಿದರಾ ಅಥವಾ ವಿಜಯ ನಗರ ಅರಸರು ನಿರ್ಮಿಸಿದರಾ ಎನ್ನುವ ಬಗ್ಗೆ ಅಧ್ಯಯನ ನಡೆಸಬೇಕಿದೆ. ದೇಗುಲದ ನಿರ್ಮಾಣದ ಚಹರೆ ವಿಜಯನಗರ ಕಲಾ ಪ್ರಕಾರವನ್ನೇ ಹೋಲುವುದರಿಂದ ಹಂಪಸಂದ್ರದ ತಾಂಡವೇಶ್ವರ ದೇಗುಲವನ್ನು ನಿರ್ಮಿಸಿರಬಹುದು.
ಸ.ನ.ನಾಗೇಂದ್ರ, ಇತಿಹಾಸಕಾರ, ಗುಡಿಬಂಡೆ
ಗುಡಿಬಂಡೆ ತಾಲೂಕಿನಲ್ಲಿ ಬಗೆದಷ್ಟು ಐತಿಹಾಸಿಕ ಮಾಹಿತಿ ಲಭ್ಯವಾಗುತ್ತಿದೆ. ಪುರಾತನ ದೇವಾಲಯ, ಕಲ್ಯಾಣಿ ಭಾವಿಗಳನ್ನು ಸಂರಕ್ಷಿಸಿ ಸ್ಮಾರಕಗಳ ನಿರ್ಮಾಣಕ್ಕೆ ಮುಂದಾಗಬೇಕು. ಮಿನಿ ಹಂಪಿಯಂತೆ ಅಭಿವೃದ್ಧಿ ಮಾಡಲು ಸರಕಾರ ಮುಂದಾಗಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.
ಅರ್ಶಿತ, ಗುಡಿಬಂಡೆ ನಿವಾಸಿ