ಗುಡಿಬಂಡೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ
ಕನ್ನಡಿಗರಾಗಿ ಹುಟ್ಟಿರುವುದೇ ಪುಣ್ಯ ಎಂದ ಉಪನ್ಯಾಸಕ ಭರತ್; ಕನ್ನಡ ಭವನ ನಿರ್ಮಾಣದ ಭರವಸೆ ನೀಡಿದ ಶಾಸಕರು
ವರದಿ: ನವೀನ್
ಗುಡಿಬಂಡೆ: ಕನ್ನಡ ನಾಡು, ನುಡಿ, ಜಲ ಮತ್ತು ಮಣ್ಣಿಗೆ ವಿಶೇಷ ಸ್ಥಾನಮಾನವಿದೆ. ಅದನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬ ಕನ್ನಡಿಗ ಮುಂದಾಗಬೇಕು ಎಂದು ಉಪನ್ಯಾಸಕ ಜಿ.ಎಸ್.ಭರತ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಪಟ್ಟಣ ಪಂಚಾಯತಿ ಹಾಗೂ ತಾಲೂಕಿನ ವಿವಿಧ ಕನ್ನಡಪರ ಸಂಘಟನೆಗಳ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು ಅವರು.
ಕನ್ನಡ ನಾಡು ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ ಮಧ್ಯೆ ಹರಿಯುವ ನದಿಗಳು, ಸಾಧು, ಸಂತರು, ದಾಸರು ಶಿವಶರಣರು, ಕವಿಮನಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರೇ ಕನ್ನಡಿಗರಿಗೆ ಒಂದು ದಿವ್ಯಶಕ್ತಿ ಎಂದು ಭರತ್ ನುಡಿದರು.
ಕನ್ನಡ ಉಳಿಸೋಣ
ಗುಡಿಬಂಡೆ ತಾಲೂಕಿನ ಗ್ರಂಥಾಲಯವನ್ನು ಅಭಿವೃದ್ಧಿ ಮಾಡಬೇಕು. ಕನ್ನಡ ದಿನ ಪತ್ರಿಕೆಗಳನ್ನು ಓದುವವರ ಸಂಖ್ಯೆ ಹೆಚ್ಚು ಮಾಡಬೇಕು. ಸರಕಾರಿ ಶಾಲೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು, ಕನ್ನಡದ ಬಗ್ಗೆ ನಗರ ಪಟ್ಟಣ, ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಹೆಚ್ಚು ಜವಾಬ್ದಾರಿ ವಹಿಸಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿನಿತ್ಯ ಅರಿವು ಮೂಡಿಸುವ ಮೂಲಕ ಭಾಷೆಯನ್ನು ಬೆಳಸಬೇಕು ಎಂದು ಅವರು ಸಲಹೆ ಮಾಡಿದರು.
ಕನ್ನಡ ಭವನ ನಿರ್ಮಾಣ
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮಾತನಾಡಿ, “ದೇಶ ವಿದೇಶಗಳಲ್ಲಿ ಕನ್ನಡ ದನಿ ಮೊಳಗಬೇಕು. ನಾಡು, ನುಡಿ ವಿಚಾರದಲ್ಲಿ ಕನ್ನಡಗರ ಪಾತ್ರ ಶ್ಲಾಘನೀಯ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ, ಎರಡೂವರೆ ಸಾವಿರ ವರ್ಷಗಳ ಇತಿಹಾಸ, ಪ್ರಪಂಚದ ಹಲವು ಭಾಷೆಗಳ ಪೈಕಿ 8 ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾಷೆ ಕನ್ನಡವಾಗಿದೆ. ಹಾಗಾಗಿ ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ. ಮುಂದಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ ಗುರಿ ಹೊಂದಿದ್ದೇನೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸಿಬ್ಗತ್ ವುಲ್ಲಾ, ಆರಕ್ಷಕ ವೃತ್ತ ನಿರೀಕ್ಷಕ ಲಿಂಗರಾಜು, ಕಾರ್ಯನಿರ್ಹಣಾಧಿಕಾರಿ ರವೀಂದ್ರ, ಮುಖ್ಯಾಧಿಕಾರಿ ರಾಜಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಸರಕಾರ ನೌಕರರ ಸಂಘದ ಅಧ್ಯಕ್ಷ ಕೆ.ವಿ ನಾರಾಯಣಸ್ವಾಮಿ, ಕಸಪಾ ಮಾಜಿ ಅಧ್ಯಕ್ಷೆ ಅನುರಾಧ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಶ್ರೀರಾಮಪ್ಪ, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಬುಲೆಟ್ ಶ್ರೀನಿವಾಸ್, ಜಿಲ್ಲಾ ಯುವಾಧ್ಯಕ್ಷ ಜಿ.ಎನ್.ನವೀನ್, ನ್ಯೂ ಪಬ್ಲಿಕ್ ಶಾಲೆಯ ಪರಿಮಳಾ, ಪ್ರೆಸ್ ಸುಬ್ಬರಾಯಪ್ಪ, ಅರಣ್ಯ ಇಲಾಖೆಯ ಹುಲಿಗೆಪ್ಪ, ಶಿಕ್ಷಕರಾದ ಕೃಷ್ಣಪ್ಪ, ನಿವೃತ್ತ ಶಿಕ್ಷಕರಾದ ನಾರಾಯಣಸ್ವಾಮಿ, ಟಿಪಿಒ ಪ್ರಕಾಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಆದಿನಾರಾಯಣಪ್ಪ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.