ಉಪನ್ಯಾಸಕನಾಗಿ, ರೈತನಾಗಿ ಯಶಸ್ಸು ಕಂಡ ಪ್ರತಿಭಾವಂತ ಯುವಕ
By GS Bharath Gudibande
ಬಾಗೇಪಲ್ಲಿ: ತಾಲೂಕಿನ ನಡಂಪಲ್ಲಿ ಗ್ರಾಮದ ಯುವಕ ಕೃಷಿಯಲ್ಲಿ ಸಾಧನೆ ಮಾಡಿ, ಇತರರಿಗೆ ಆದರ್ಶರಾಗಿದ್ದಾರೆ. ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಕೃಷಿಯಲ್ಲಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ತಾಲೂಕು ಮಟ್ಟದ ಪ್ರಗತಿಪರ ಯುವ ರೈತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಬಾಗೇಪಲ್ಲಿ ತಾಲೂಕಿನಿಂದ 10-15 ಕಿ.ಮೀ. ದೂರದ ನಡಂಪಲ್ಲಿ ಗ್ರಾಮದ ಗಂಗಿರೆಡ್ಡಿ ಅವರ ಪುತ್ರರಾದ ಎನ್.ಜಿ. ಶ್ರೀನಿವಾಸ್, ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಬಾಗೇಪಲ್ಲಿ ನ್ಯಾಷನಲ್ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
14 ಎಕರೆಯಲ್ಲಿ ವಿವಿಧ ಬೆಳೆ
ಬಾಗೇಪಲ್ಲಿ ಅಂದರೆ ಬರಡು ನಾಡು, ಅಲ್ಲಿ ಕುಡಿಯಲು ನೀರು ಸಿಗುವುದೇ ಕಷ್ಟ, ಇನ್ನು ವ್ಯವಸಾಯ ಯಾರು ಮಾಡುತ್ತಾರೆ? ಎಂಬ ಮಾತುಗಳ ನಡುವೆ ಈ ಯುವ ಉಪನ್ಯಾಸಕ ಲಭ್ಯ ನೀರು ಬಳಿಸಿಕೊಂಡು ಭತ್ತ, ರಾಗಿ, ಮುಸುಕಿನ ಜೋಳ, ತೊಗರಿ, ಅಳಸಂದೆ, ಶೇಂಗಾದಲ್ಲಿ ಹೊಸ ತಳಿಗಳನ್ನು ಆಯ್ಕೆ ಮಾಡಿಕೊಂಡು ಬೆಳೆದು ಹೆಚ್ಚಿನ ಇಳುವರಿ ತೆಗೆದಿದ್ದಾರೆ. ಜತೆಗೆ ತೋಟಗಾರಿಕೆ ಬೆಳೆಗಳಾದ ಆಲೂಗಡ್ಡೆ, ಟೊಮ್ಯಾಟೊ, ಕ್ಯಾರೆಟ್ ಸೇರಿದಂತೆ ಇನ್ನೂ ಹಲವು ಬೆಳೆಗಳನ್ನು ಬೆಳೆದು ಅಧಿಕ ಆದಾಯ ಪಡೆದು ಆರ್ಥಿಕವಾಗಿ ಸಬಲರಾಗಿದ್ದಾರೆ.
ವರ್ಷಕ್ಕೆ 10 ಲಕ್ಷಕ್ಕೂ ಅಧಿಕ ಆದಾಯ
ರೇಷ್ಮೆ ಕೃಷಿಯಲ್ಲಿ ವರ್ಷಕ್ಕೆ 5 ಬೆಳೆಗಳನ್ನು ಬೆಳೆದು 1.60 ಲಕ್ಷ ರೂ. ಲಾಭ ಗಳಿಸುತ್ತಿದ್ದಾರೆ ಶ್ರೀನಿವಾಸ್. ಸಮಗ್ರ ಕೃಷಿಗೆ ಒತ್ತು ನೀಡಿದ್ದು ಅದಕ್ಕೆ ಪೂರಕವಾಗಿ ಹಸು, ಎತ್ತು, ಕುರಿ, ಕೋಳಿ ಮತ್ತು ಜೇನು ಸಾಕಾಣಿಕೆ ಮಾಡಿ 8 ಲಕ್ಷ ವಾರ್ಷಿಕ ಆದಾಯ ಗಳಿಸುತ್ತಿದ್ದಾರೆ ಹಾಗೂ ಅದರಿಂದ ಬರುವ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಬೆಳೆಗಳಿಗೆ ಉಪಯೋಗಿಸುತ್ತಿದ್ದಾರೆ.
ಮಳೆ ನೀರಿನ ಸಮರ್ಪಕ ಬಳಕೆ
ನೀರಿನ ಸದ್ಬಳಕೆಗಾಗಿ ಶ್ರೀನಿವಾಸ್ ಅವರು ಕೃಷಿ ಹೊಂಡ ಮತ್ತು ಕಂದಕಗಳೊಂದಿಗೆ ಬದು ನಿರ್ಮಿಸಿಕೊಂಡು ಮಳೆ ನೀರನ್ನು ಸಂಗ್ರಹಿಸಿ, ಬೆಳೆಗಳಿಗೆ ಹನಿ ಮತ್ತು ತುಂತುರು ನೀರಾವರಿ ಮೂಲಕ ಮಿತವಾಗಿ ಬಳಸುತ್ತಿದ್ದಾರೆ. ಹೀಗೆ ಪ್ರತಿಯೊಂದು ವಿಭಿನ್ನ ಪದ್ದತಿಯ ಮೂಲಕ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡುತ್ತಿದ್ದಾರೆ.
ನನ್ನ ಕೃಷಿ ಚಟುವಟಿಕೆಗಳಿಗೆ ತಾಲೂಕು ಮಟ್ಟದ ಪ್ರಗತಿಪರ ಯುವ ರೈತ ಪ್ರಶಸ್ತಿ ನೀಡಿರುವುದು ಸಂತೋಷ ನೀಡಿದೆ. ಸರಕಾರ ಹಾಗೂ ಅಧಿಕಾರಿಗಳು ರೈತರಿಗೆ ಕೃಷಿ ಚಟುವಟಿಕೆಗಳ ಬಗ್ಗೆ ಹೆಚ್ಚು ತರಬೇತಿ ನೀಡಬೇಕು. ಅರಿವು ಮೂಡಿಸಬೇಕು, ತಾಂತ್ರಿಕವಾಗಿ ಕೃಷಿ ಚಟುವಟಿಕೆಗಳು ರೈತರಿಗೆ ಅನುಕೂಲವಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಕ್ರಮ ವಹಿಸಿದರೆ ಎಲ್ಲಾ ರೈತರು ನೆಮ್ಮದಿಯಿಂದ ಜೀವನ ಸಾಗಿಸಬಹುದು. ಕೃಷಿಯಲ್ಲಿ ನನ್ನ ಸೇವೆ ಗುರುತಿಸಿ ಪ್ರಶಸ್ತಿ ಆಯ್ಕೆ ಮಾಡಿದಿ ಎಲ್ಲಾ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಜಿ.ಎನ್.ಶ್ರೀನಿವಾಸ್, ಉಪನ್ಯಾಸಕ ಹಾಗೂ ಪ್ರಗತಿಪರ ಯುವ ರೈತ, ಬಾಗೇಪಲ್ಲಿ
ಅಭಿನಂದನೆಗಳು ಶ್ರೀನಿವಾಸ್. ನಿಮ್ಮಂತಹ ಯುವಕರು ಕೃಷಿಯಲ್ಲಿ ತೊಡಗಿ ಎಲ್ಲರಿಗೂ ಮಾದರಿಯಾಗಿದ್ದೀರಾ. ದೇಶಕ್ಕೆ ಎಂದಿಗೂ ಎಂದೆಂದಿಗೂ ರೈತರೇ ಬೆನ್ನೆಲುಬು. ನಮ್ಮ ಜೀವದಾತನಿಗೆ ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆಗಳು👏👏👏👏🙏🙏🙏🙏