ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿ 108 ಆಂಬ್ಯುಲೆನ್ಸ್ ಇಲ್ಲದೆ ರೋಗಿಗಳ ಪರದಾಟ
ಮಳೆಯಿಂದ 9 ಮನೆಗಳಿಗೆ ಹಾನಿ, ಇಬ್ಬರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ
ಪೋಲಂಪಲ್ಲಿಯಲ್ಲಿ ಮನೆ ಕಳೆದುಕೊಂಡ ಮಹಿಳೆಗೆ ಶೀಘ್ರ ಮನೆ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸೂಚನೆ
By GS Bharath Gudibande
ಗುಡಿಬಂಡೆ: ಯಾರಿಗೆ ಏನೇ ತೊಂದರೆ ಆದರೂ ಎಲ್ಲರಿಗೂ ತಕ್ಷಣ ನೆನಪಿಗೆ ಬರುವುದೇ 108 ಆಂಬ್ಯುಲೆನ್ಸ್. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಆಂಬ್ಯುಲೆನ್ಸ್ ಅನಾರೋಗ್ಯದಿಂದ ಕೆಟ್ಟು ನಿಂತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಿಂದ 108 ಆಂಬ್ಯುಲೆನ್ಸ್ ಕೆಟ್ಟು ನಿಂತಿದ್ದು, ತುರ್ತುಸ್ಥಿತಿಯಲ್ಲಿ ರೋಗಿಗಳಿಗೆ ಸ್ಪಂದಿಸುವಲ್ಲಿ ಅಲಭ್ಯವಾಗಿರುವುದು ತಾಲೂಕಿನ ಜನರಿಗೆ ಸಮಸ್ಯೆಯಾಗಿದೆ. ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಿಲ್ಲ, ಐ ವಿಲ್ ಅಪ್ಡೇಟ್ ಯೂ ಅಂತ ಮೆಸೇಜ್ʼಗೆ ರೀಪ್ಲೆ ಅಷ್ಟೇ ಸಿಕ್ಕಿದೆ. ಇದರ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲಾತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳೆಗೆ ಬಿದ್ದ ಮನೆ, ಕರೆ ಮಾಡಿದರೆ ಬಾರದ ಆಂಬ್ಯುಲೆನ್ಸ್
ತಾಲೂಕಿನ ಪೋಲಂಪಲ್ಲಿ ಗ್ರಾಮದಲ್ಲಿ ನಿರಂತರ ಮಳೆಯಿಂದ ಮನೆ ಬಿದ್ದುಹೋಗಿದ್ದು, ಮನೆಯಲ್ಲಿದ್ದ ಮಹಿಳೆ ವೆಂಕಟನರಸಮ್ಮ (52) ಮಣ್ಣಿನ ಗೋಡೆ ಕುಸಿದು ಬಿದ್ದ ಪರಿಣಾಮ ಗಾಯಗೊಂಡು ಪ್ರಜ್ಞಾಹೀನರಾಗಿದ್ದರು. ಕೂಡಲೇ ನೆರವಿಗೆ ಧಾವಿಸಿದ ಗ್ರಾಮಸ್ಥರು ಆಕೆಯನ್ನು ರಕ್ಷಿಸಿ ಹೊರಗೆ ಕರೆತಂದು ಬೇರೆ ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬುಧವಾರ ಆರೋಗ್ಯ ರಕ್ಷಾ ಸಮಿತಿ ಸಭೆ
ಒಂದು ವಾರದಿಂದ ಸುರಿದ ಭಾರೀ ಮಳೆಗೆ ಪೋಲಂಪಲ್ಲಿ ಮನೆಬಿದ್ದು ಹೋಗಿದ್ದು, ಮನೆಯಲ್ಲಿದ್ದ ಇಬ್ಬರಿಗೆ ಗಾಯವಾಗಿದೆ. ಒಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂಬ್ಯುಲೆನ್ಸ್ (108) ಸರಿಯಾದ ಸಮಯಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಬುಧವಾರ ತಾಲೂಕು ಆಸ್ಪತ್ರೆಗೆ ಭೇಟಿ ಮಾಡಿ ಆರೋಗ್ಯ ರಕ್ಷಾ ಸಮಿತಿ ಸಭೆಯನ್ನು ಮಾಡಿ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುತ್ತೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದ್ದಾರೆ.
ತಾಲೂಕು ಆರೋಗ್ಯಾಧಿಕಾರಿ ಹಾಗೂ ಆಡಳಿತಾಧಿಕಾರಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಏನೇ ಸಮಸ್ಯೆಯಿದ್ದರೂ ನೇರವಾಗಿ ನನ್ನ ಗಮನಕ್ಕೆ ತರಬೇಕು ಎಂದು ಅವರು ಸೂಚಿಸಿದ್ದಾರೆ.
ವಾರದಲ್ಲಿ ಮನೆ ನಿರ್ಮಿಸಿ ಕೊಡಲು ಸೂಚನೆ
ಪೋಲಂಪಲ್ಲಿ ಗ್ರಾಮದಲ್ಲಿ ಮಳೆಯಿಂದ ಮನೆ ಮೇಲ್ಛಾವಣಿ ಬಿದ್ದು ಗಾಯಗೊಂಡಿರುವ ವೆಂಕಟನರಸಮ್ಮ ಅವರಿಗೆ ಆದಷ್ಟು ಬೇಗ ಮನೆ ನಿರ್ಮಿಸಿಕೊಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರ ಮನೆ ಸಂಪೂರ್ಣ ಹಾಳಾಗಿದ್ದು ತೀರಾ ಬಡವರಾಗಿದ್ದಾರೆ. ಒಂದು ವಾರದಲ್ಲಿ ಗುತ್ತಿಗೆದಾರನನ್ನು ಗುರುತಿಸಿ ಮನೆ ನಿರ್ಮಿಸಲು ಸೂಚಿಸುತ್ತೇನೆ. ಸರಕಾರದ ಎಲ್ಲಾ ಸೌಲಭ್ಯಗಳನ್ನು ಶೀಘ್ರವಾಗಿ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪೋಲಂಪಲ್ಲಿ ಗ್ರಾಮದಲ್ಲಿ ಕುಸಿದುಬಿದ್ದಿರುವ ಮನೆ.
ಗ್ರಾಮದಲ್ಲಿ ನೆಲಸಮವಾಗಿದ್ದ ಮನೆಯನ್ನು ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಶಾಸಕರು; ಸತತವಾಗಿ ಬೀಳುತ್ತಿರುವ ಮಳೆಯಿಂದ ಗ್ರಾಮದಲ್ಲಿ ಒಂಭತ್ತು ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ ವೆಂಕಟನರಸಮ್ಮ ಅವರ ಮನೆಗೆ ಹೆಚ್ಚು ಹಾನಿಯಾಗಿದೆ. ಗಾಯಗೊಂಡಿದ್ದ ಆ ಮಹಿಳೆ ಅಪಾಯದಿಂದ ಪಾರಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸೊಸೆಗೆ ಕಾಲು ಮುರಿದಿದೆ. ಮಳೆ ಹೆಚ್ಚು ಸುರಿಯುವಾಗ ಹಳೆ ಮನೆಗಳಲ್ಲಿ ವಾಸ ಮಾಡುವವರು ಸ್ವಲ್ಪ ಎಚ್ಚರಿಕೆ ವಹಿಸಬೇಕು. ಸರಕಾರದಿಂದ ಇವರಿಗೆ ಏನೆಲ್ಲ ನೆರವು ಸಿಗುತ್ತದೋ ಅದೆಲ್ಲವನ್ನೂ ಕೊಡಿಸುತ್ತೇನೆ. ಒಂದು ಲಕ್ಷ ರೂಪಾಯಿ ಪರಿಹಾರವೂ ಬರುತ್ತದೆ, ಜತೆಗೆ ಅವರಿಗೆ ಪಿಂಚಣಿಯನ್ನೂ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಪೋಲಂಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ.
ಮಳೆಗಾಲದಲ್ಲಿ ಅಥವಾ ಹೆಚ್ಚು ಮಳೆ ಸುರಿಯುವ ಸಂದರ್ಭದಲ್ಲಿ ಹಳೆಯ ಮನೆಗಳಲ್ಲಿ ವಾಸ ಮಾಡುವ ಜನ ಎಚ್ಚರಿಕೆಯಿಂದ ಇರಬೇಕು. ಈ ಬಗ್ಗೆ ಅರಿವು ಮೂಡಿಸಬೇಕು. ಮನೆಗಳು ಇಲ್ಲದವರಿಗೆ ವಸತಿ ನಿರ್ಮಿಸಿಕೊಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು.
ಎಸ್.ಎನ್.ಸುಬ್ಬಾರೆಡ್ಡಿ, ಶಾಸಕರು
ಈ ವೇಳೆ ತಹಸೀಲ್ದಾರ್ ಸಿಬ್ಗತ್ ವುಲ್ಲಾ, ಗ್ರಾಮ ಲೆಕ್ಕಾಧಿಕಾರಿ ಸುದರ್ಶನ್, ಗ್ರಾಮ ಪಂಚಾಯಿತಿ ಸದಸ್ಯ ಚನ್ನರಾಯಪ್ಪ, ಗ್ರಾಮದ ಹಿರಿಯ , ಮುಖಂಡ ಪಿ.ವಿ.ನಾರಾಯಣಪ್ಪ ಹಾಗೂ ಕಾಂಗ್ರೆಸ್ ಮುಖಂಡರು ಸೇರಿದಂತೆ ಪೊಲಂಪಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.