ಮನೆ ಮನೆಗೂ ತೆರಳಿ ಮತಯಾಚನೆ: ನ.21ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೂ ಮತದಾನ; ನ.24ರಂದು ಫಲಿತಾಂಶ
By GS Bharath Gudibande
ಗುಡಿಬಂಡೆ/ಚಿಕ್ಕಬಳ್ಳಾಪುರ: ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆ ಮುಂದಕ್ಕೆ ಹೋಗಿ ತಡವಾಗಿತ್ತು, ಈಗ ಕಸಾಪ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದಂತೆ ವಿಶ್ರಾಂತಿಯಲ್ಲಿದ್ದ ಅಭ್ಯರ್ಥಿಗಳು ಕಣ್ಣಕ್ಕಿಳಿದು ಪ್ರಚಾರದ ಅಬ್ಬರ ಶುರು ಮಾಡಿದ್ದಾರೆ. ಅವಿರೋಧ ಆಯ್ಕೆಯ ಕನಸು ಕಂಡಿದ್ದ ಜಿಲ್ಲಾ ಸಾಹಿತ್ಯ ಬಳಗಕ್ಕೆ ಈಗ ಮತದಾನ ಅನಿವಾರ್ಯತೆ ಉಂಟಾಗಿ ನಿರಾಶೆ ಆಗಿದೆ.
ಈ ತಿಂಗಳ 21ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಪ್ರಚಾರದ ಅಬ್ಬರ ಜೋರಾಗಿದೆ.
ಕನ್ನಡ ನಾಡಿನ ನಾಡು-ನುಡಿ, ಭಾಷೆ, ಸಂಸ್ಕೃತಿ, ಗಡಿ ಪ್ರದೇಶದಲ್ಲಿ ಕನ್ನಡದ ಉಳಿವಿಗೆಂದೆ ಅಸ್ತಿತ್ವದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಪ್ರಚಾರವು ದಿನದಿಂದ ಕಾವೇರುತ್ತಿದೆ.
ನವೆಂಬರ್ 21ರಂದು ಮತದಾನ
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನ.21ರಂದು ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳಂತೆ, ಪ್ರಚಾರ, ಗುಂಪುಗಾರಿಕೆ, ಜಾತಿ ರಾಜಕೀಯದ ಲೆಕ್ಕಾಚಾರಗಳು ವಿಪರೀತ ಎನ್ನುವಂತ ಹಂತ ಮುಟ್ಟಿವೆ. ಕಸಾಪ ಸದಸ್ಯತ್ವ ಪಡೆದ ಮೂರು ವರ್ಷಗಳಾದ ಸದಸ್ಯರು ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿರುತ್ತಾರೆ. ಈಗ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳು ಅವರೆಲ್ಲರ ಮನೆ ಬಾಗಿಲು ತಟ್ಟುತ್ತಿದ್ದಾರೆ.
ಡಾ.ಕೋಡಿ ರಂಗಪ್ಪ ಮತ್ತು ಕೈವಾರ ಶ್ರೀನಿವಾಸ್
ಕಣದಲ್ಲಿ ಯಾರಿದ್ದಾರೆ?
ಈಗಾಗಲೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಡಾ. ಕೈವಾರ ಶ್ರೀನಿವಾಸ್ ಈ ಸಲವೂ ಕಣಕ್ಕಿಳಿದಿದ್ದಾರೆ. ವೃತ್ತಿಯಲ್ಲಿ ಕನ್ನಡ ಶಿಕ್ಷಕರಾಗಿ, ಕನ್ನಡಕ್ಕಾಗಿ ಹಲವು ಹೋರಾಟ, ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಮತ್ತೊಬ್ಬರು ಶಿಕ್ಷಣತಜ್ಞ ಡಾ.ಕೋಡಿ ರಂಗಪ್ಪ ಅವರು ಹೊಸದಾಗಿ ಅಖಾಡಕ್ಕೆ ಇಳಿದಿದ್ದಾರೆ. ಮತದಾರರು ಯಾರ ಮೇಲೆ ಒಲವು ತೋರಲಿದ್ದಾರೆ ಎನ್ನುವುದು ನಿಗೂಢವಾಗಿದೆ.
ರಜೆ ದಿನ ಮತ್ತು ಸಂಜೆ ವೇಳೆ ಪ್ರಚಾರ
ಕಸಾಪ ಸದಸ್ಯರಲ್ಲಿ ಬಹುತೇಕರು ಸರಕಾರಿ ನೌಕರರೇ ಆಗಿರುವುದರಿಂದ ಕಸಾಪ ಸದಸ್ಯರನ್ನು (ಮತದಾರರನ್ನು) ಭೇಟಿ ಮಾಡಲು ರಜೆ ಅಥವಾ ಸಾಯಂಕಾಲದ ವೇಳೆ ಸೂಕ್ತವಾಗಿದ್ದು, ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಕೈವಾರ ಶ್ರೀನಿವಾಸ್ ಮತ್ತು ಕೋಡಿ ರಂಗಪ್ಪ ಅವರು ಬಿರುಸಿನ ಪ್ರಚಾರ ಕೈಗೊಂಡಿದ್ದು, ವಿಜಯಮಾಲೆ ಯಾರಿಗೆ ಒಲಿಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಆರು ತಾಲೂಕುಗಳಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 6,400 ಸದಸ್ಯರಿದ್ದಾರೆ ಎಂದು ಅಂದಾಜಿಸಲಾಗಿದೆ.
- ಚಿಕ್ಕಬಳ್ಳಾಪುರ: 2119
- ಬಾಗೇಪಲ್ಲಿ: 219
- ಗುಡಿಬಂಡೆ: 535
- ಗೌರಿಬಿದನೂರು: 850
- ಶಿಡ್ಲಘಟ್ಟ: 1818
- ಚಿಂತಾಮಣಿ: 1350
ನವೆಂಬರ್ 21ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೂ ಮತದಾನ ನಡೆಯಲಿದೆ. ಚಿಕ್ಕಬಳ್ಳಾಪುರ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ, ಬಾಗೇಪಲ್ಲಿ, ಚಿಂತಾಮಣಿ ತಾಲೂಕು ಕಚೇರಿಗಳಲ್ಲಿ ಮತಗಟ್ಟೆಗಳಿರುತ್ತವೆ. ಜತೆಗೆ; ಒಂದು ಸಾವಿರಕ್ಕೂ ಹೆಚ್ಚು ಮತದಾರರು ಇರುವ ಕಡೆ ಎರಡು ಮತಗಟ್ಟೆಗಳನ್ನು ತೆರೆಯಲಾಗುವುದು. ಆಯಾ ತಾಲೂಕಿನ ತಹಸೀಲ್ದಾರ್ ಅವರು ಚುನಾವಣಾ ಅಧಿಕಾರಿ ಆಗಿರುತ್ತಾರೆ.
ಕೇಂದ್ರ ಸಾಹಿತ್ಯ ಪರಿಷತ್‌ಗೂ ಅಂದೇ ಚುನಾವಣೆ
ನವೆಂಬರ್ 21ರಂದೇ ಕೇಂದ್ರ ಸಾಹಿತ್ಯ ಪರಿಷತ್ತಿಗೂ ಚುನಾವಣೆ ನಡೆಯುತ್ತದೆ. ರಾಜ್ಯಾದ್ಯಂತ 3,10,109 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ. ರಾಜ್ಯದ ತಾಲೂಕು ಕೇಂದ್ರಗಳು ಸೇರಿ ಬೆಂಗಳೂರು ನಗರದಲ್ಲಿ 27 ವಿಧಾನಸಭಾ ಕ್ಷೇತ್ರದ ಆಯ್ದ ಸ್ಥಳಗಳಲ್ಲಿ ಮತದಾನ ನಡೆಯಲಿದೆ. ಕೇಂದ್ರ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ವ.ಚ.ಚನ್ನೇಗೌಡ, ಡಾ.ಮಹೇಶ್ ಜೋಶಿ, ರಾಜಶೇಖರ ಮುಲಾಲಿ ಸೇರಿದಂತೆ 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ.