ಅಮಾನಿಭೈರ ಸಾಗರ ಕೆರೆ ಏರಿ ಮೇಲೆ ಭಾರೀ ವಾಹನಗಳು, ದ್ವಿಚಕ್ರ ವಾಹನ, ಆಟೋ ಓಡಾಟಕ್ಕೆ ತಾತ್ಕಾಲಿಕ ನಿಷೇಧ; ಇದು ಸಿಕೆನ್ಯೂಸ್ ನೌ ಬಿಗ್ ಇಂಪ್ಯಾಕ್ಟ್
ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಅಮಾನಿಭೈರ ಸಾಗರ ಕೋಡಿ
- ಹಂಪಸಂದ್ರದಲ್ಲಿ 3 ಶಾಲೆಗಳಿಗೆ ರಜೆ ಘೋಷಣೆ
- ವರ್ಲಕೊಂಡ ಗ್ರಾಮದಲ್ಲಿ ಭಾರೀ ಮಳೆಗೆ 3 ಮನೆಗಳಿಗೆ ಹಾನಿ, ಪ್ರಾಣಾಪಾಯವಿಲ್ಲ
- ಲಕ್ಕೇನಹಳ್ಳಿಯಲ್ಲಿ ಕೊಚ್ಚಿಹೋದ ದ್ವಿಚಕ್ರ ವಾಹನ, ಆಟೋ ಪಲ್ಟಿ.
By GS Bharath Gudibande
ಗುಡಿಬಂಡೆ: ಒಂದು ತಿಂಗಳಿಂದ ಮಳೆಯೋ ಮಳೆ. ಬಹುತೇಕ ಎಲ್ಲಾ ಕೆರೆ ಕುಂಟೆಗಳು ತುಂಬಿ ಕೋಡಿ ಹರಿಯುತ್ತಿದೆ. ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಕೆರೆ ನೀರು ರಸ್ತೆಯ ಸೇತುವೆ ಮೇಲೆ ರಭಸವಾಗಿ ಹರಿಯುವುದರಿಂದ ಭಾರೀ ಗಾತ್ರದ ವಾಹನಗಳು ಹಾಗೂ ತಾಲೂಕು ಆಡಳಿತ ದ್ವಿಚಕ್ರ ವಾಹನಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.
ಬೆಂಗಳೂರು, ಚಿಕ್ಕಬಳ್ಳಾಪುರ ಪೆರೇಸಂದ್ರ, ಪೋಲಂಪಲ್ಲಿ, ಬೀಚಗಾನಹಳ್ಳಿ ಕಡೆಯಿಂದ ಬರುವ ವಾಹನಗಳಿಗೆ ನಿರ್ಬಂಧ ಹೇರಿದ ಪರಿಣಾಮ ಒಂದು ರೀತಿಯಲ್ಲಿ ಗುಡಿಬಂಡೆಗೆ ಜಲ ದಿಗ್ಬಂಧನ ವಿಧಿಸಿದಂತೆ ಆಗಿದೆ. ಇದು ಅನಿವಾರ್ಯವೂ ಆಗಿದೆ.
ಇನ್ನೊಂದೆಡೆ ಕುಶಾವತಿ ನದಿ ಜಲಾನಯನ ಪ್ರದೇಶದಲ್ಲಿ ರಾತ್ರಿ ಸುರಿದ ಮಳೆಗೆ ನದಿಯಲ್ಲಿ ನೀರಿನ ಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಅದರ ಪರಿಣಾಮ ಅಮಾನಿ ಭೈರ ಸಾಗರ ಕೆರೆ ಮೇಲೆ ಬಿದ್ದಿದೆ. ಈಗ ಗುಡಿಬಂಡೆಗೆ ಬರಬೇಕಾದರೆ ರಾಮಪಟ್ಟಣ, ಹಂಪಸಂದ್ರ, ಕಡೇಹಳ್ಳಿ ಕಡೆಯಿಂದ ಬರಬೇಕಿದೆ.
ಅಪಾಯದಿಂದ ಪಾರಾದ ಕಾರು
ಗುಡಿಬಂಡೆ ಅಮಾನಿ ಭೈರಸಾಗರ ಕೆರೆ ಏರಿಯ ರಸ್ತೆಯಲ್ಲಿ 3-4 ಅಡಿ ಆಳದ ಹಳ್ಳ ಗುಂಡಿಗಳು ಬಿದ್ದಿವೆ. ನೀರು ರಭಸವಾಗಿ ಹರಿಯುತ್ತಿರುವುದರಿಂದ ಎಲ್ಲಿ ಗುಂಡಿಗಳಿವೆ ಎಂಬುದು ತಿಳಿಯುವುದು ಕಷ್ಟ ಹಾಗೂ ಕೆರೆ ಏರಿ ಮೇಲೆ ಭಾರೀ ಗಾತ್ರದ ವಾಹನಗಳು ಓಡಾಡುವುದರಿಂದ ಮತ್ತಷ್ಟು ಸಮಸ್ಯೆ ಆಗಬಹುದು. ಒಂದು ವೇಳೆ ಯಾವುದಾದರೂ ಭಾರೀ ವಾಹನ ಬಂದು ಕುಸಿದುಬಿದ್ದರೆ ಇಡೀ ಕೋಡಿಗೇ ಅಪಾಯ ಉಂಟಾಗಬಹುದು. ಈ ಕಾರಣಕ್ಕೆ ಏರಿಯ ಮೇಲೆಯೇ ವಾಹನ ಸಂಚಾರವನ್ನು ತಾಲೂಕು ಆಡಳಿತ ನಿಷೇಧ ಮಾಡಿದೆ.
ಕಳೆದ ರಾತ್ರಿ ಸುಮಾರು ಹನ್ನೊಂದು ಗಂಟೆ ಸುಮಾರಿನಲ್ಲಿ ಕೆರೆ ಏರಿ ಮೇಲೆ ಗುಡಿಬಂಡೆಗೆ ಬರುತ್ತಿದ್ದ ಕಾರೊಂದು ಏರಿ ಮೇಲೆ ಸಿಲುಕಿಕೊಂಡಿತ್ತು. ಎಂಜಿನ್ ಸಮೇತ ಕಾರು ಗುಂಡಿಯಲ್ಲಿ ಕುಸಿದಿತ್ತು. ನಂತರ ಕಾರಿನಲ್ಲಿದ್ದವರೇ ಹರಸಾಹಸ ಮಾಡಿ ಕಾರನ್ನು ದಡಕ್ಕೆ ಸೇರಿಸಿದ್ದಾರೆ.
ಮಂಗಳವಾರವಷ್ಟೇ ಸಿಕೆನ್ಯೂಸ್ ನೌ ಈ ಬಗ್ಗೆ ವಿವರವಾದ ವರದಿ ಪ್ರಕಟಿಸಿ ಅಧಿಕಾರಿಗಳ ಹಮನ ಸೆಳೆದಿತ್ತು.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಲಾಠಿ ಹಿಡಿದುನಿಂತ ತಹಸೀಲ್ದಾರ್
ಇಂದು ಬೆಳ್ಳಂಬೆಳಗ್ಗೆಯೇ ತಾಲೂಕಿನ ಹಂಪಸಂದ್ರ, ಲಕ್ಕೇನಹಳ್ಳಿ, ಕಡೇಹಳ್ಳಿ ಹಾಗೂ ಗುಡಿಬಂಡೆ ಅಮಾನಿ ಭೈರಸಾಗರ ಕೆರೆ ಪ್ರದೇಶಗಳಿಗೆ ಭೇಟಿ ನೀಡಿರುವ ತಹಸೀಲ್ದಾರ್ ಸಿಬ್ಗತ್ ವುಲ್ಲಾ ಅವರು; ಸ್ವತಃ ಲಾಠಿ ಹಿಡಿದು ರಸ್ತೆಯಲ್ಲಿ ನಿಂತು ಆಟೋ, ದ್ವಿಚಕ್ರ ವಾಹನ ಹಾಗೂ ಭಾರೀ ಗಾತ್ರದ ವಾಹನಗಳುನ್ನು ವಾಪಸ್ ಕಳುಹಿಸಿದರು. ಇದರಿಂದ ವಾಹನಗಳು ಆ ಕಡೆ ಈ ಕಡೆ ಕೆರೆ ಏರಿ ದಾಟಲಾಗದೇ ಜನರು ಗೊಂದಲಕ್ಕೆ ಒಳಗಾದರು. ಈ ಬಗ್ಗೆ ತಹಸೀಲ್ದಾರ್ ಅವರು ಸಾರ್ವಜನಕರಿಗೆ ಅರಿವು ಮೂಡಿಸಿದರಲ್ಲದೆ, ಆಪಾಯದ ಬಗ್ಗೆ ಎಚ್ಚರಿಕೆ ನೀಡಿ ವಾಹನ ಚಾಲಕರಿಗೆ ಮನವೊಲಿಸಿ ವಾಪಸ್ ಕಳಿಸಿದರು. ಅವರ ಕಾರ್ಯವೈಖರಿ ಬಗ್ಗೆ ಜಾಲಾತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಮಳೆಯಿಂದ ಶಾಲೆಗಳಿಗೆ ರಜೆ
ಗುಡಿಬಂಡೆ ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕೆರೆ ಕುಂಟೆ ತುಂಬಿ ನೀರು ರಭಸವಾಗಿ ರಸ್ತೆಗಳಲ್ಲಿ ಹರಿಯುತ್ತಿದೆ. ಹೀಗಾಗಿ ಮಕ್ಕಳು ಶಾಲೆಗೆ ಹೋಗಲು ಸಮಸ್ಯೆಯಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಹಂಪಸಂದ್ರದಲ್ಲಿ 3 ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಜೆ ಘೋಷಣೆ ಮಾಡಿದ್ದಾರೆ.
ಅಲ್ಲದೆ; ಮಕ್ಕಳ ಮಳೆ ಹಿನ್ನೆಲೆಯಲ್ಲಿ ಸುರಕ್ಷತೆಯ ಬಗ್ಗೆ ಶಿಕ್ಷಣ ಇಲಾಖೆ ತೀವ್ರ ನಿಗಾ ಇರಿಸಿದ್ದು, ಕೊರೊನಾದಿಂದ ತತ್ತರಿಸಿದ್ದ ತಾಲೂಕು ಶೈಕ್ಷಣಿಕ ಚಟುವಟಿಕೆಗಳಿಗೆ ಮಳೆ ಕೂಡ ಅಡ್ಡಿ ಮಾಡುತ್ತಿದೆ.
ಇದೇ ವೇಳೆ, ಅಮಾನಿಭೈರ ಸಾಗರ ಕೆರೆ ಏರಿ ಮೇಲೆ ಪ್ರಯಾಣಿಕರ ಬಸ್ʼಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ, ಈ ಬಗ್ಗೆ ಗುಡಿಬಂಡೆ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಉಕ್ಕಿಹರಿಯುತ್ತಿರುವ ಕೆರೆ ಕೋಡಿ ಮೇಲೆ ಜನರ ಬಸ್ʼಗಳನ್ನು ಬಿಡುತ್ತಿರುವುದು ಎಷ್ಟರಮಟ್ಟಿಗೆ ಸರಿ? ಇದು ಅಪಾಯವನ್ನು ಅಪಾಯಕ್ಕೆ ಅವಕಾಶ ಕೊಟ್ಟಂತೆಯೇ ಅಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಲ್ಲಿ?
ಇನ್ನೊಂದೆಡೆ, ಅಮಾನಿಭೈರ ಸಾಗರದಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹವಾಗಿದೆ. ಮತ್ತೊಂದೆಡೆ ಕೋಡಿ ಹರಿಯುತ್ತಲೇ ಇದೆ. ಇಂಥ ಹೊತ್ತಿನಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆಕಟ್ಟೆಯನ್ನು ಪರಿಶೀಲನೆ ನಡೆಸಬೇಕಿದೆ. ಕಟ್ಟೆಯ ಮೇಲೆ ಬಸ್ಸುಗಳು ಸೇರಿ ಭಾರೀ ಗಾತ್ರದ ವಾಹನಗಳು ಸಂಚಾರ ಮಾಡುತ್ತವೆ. ಆದರೆ, ಈವರೆಗೂ ಆ ಇಲಾಖೆಯ ಅಧಿಕಾರಿಗಳು ಪತ್ತೆ ಇಲ್ಲ, ಜನರಿಗೂ ಲಭ್ಯವಾಗುತ್ತಿಲ್ಲ, ಕೆರೆಕಟ್ಟೆ ಸುರಕ್ಷತೆಯ ಬಗ್ಗೆ ಜನರಿಗೆ ಅಥವಾ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿಲ್ಲ.
ಜತೆಗೆ; ರಸ್ತೆಯ ಗುಣಮಟ್ಟ ನೋಡಿಕೊಳ್ಳಬೇಕಾದ ಲೋಕೋಪಯೋಗಿ ಇಲಾಖೆ ಅಥವಾ ಮತ್ತಾವುದೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡ ಪತ್ತೆ ಇಲ್ಲ. ಕಳೆದ ನಲವತ್ತಕ್ಕೂ ಹೆಚ್ಚು ದಿನಗಳಿಂದ ಕೋಡಿ ಹರಿಯುತ್ತಿರುವ ಕೆರೆ ಕೋಡಿ ರಸ್ತೆಯ ಗುಣಮಟ್ಟದ ಬಗ್ಗೆ ಅವರು ಪರಿಶೀಲನೆ ನಡೆಸಿಲ್ಲ. ಜತೆಗೆ, ಹಳ್ಳ-ಗುಂಡಿಗಳು ಬಿದ್ದು ಜನರು ಹೈರಾಣಾಗಿದ್ದರೂ ಅವರು ಅಡ್ರೆಸ್ ಇಲ್ಲ ಎಂದು ಜನರು ದೂರುತ್ತಿದ್ದಾರೆ.
ಸುಮಾರು 40 ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದೆ. ತಾಲೂಕಿನ ಎಲ್ಲಾ ಕೆರೆ ಕುಂಟೆಗಳು ತುಂಬಿವೆ. ಸೇತುವೆ ಮೇಲೆ ನೀರಿನ ಕೋಡಿ ರಭಸವಾಗಿ ಹರಿಯುತ್ತಿದೆ. ಅಮಾನಿ ಭೈರಸಾಗರ ಕೆರೆ ಏರಿ ಮೇಲೆ ಭಾರೀ ಗಾತ್ರದ ವಾಹನಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಹಂಪಸಂದ್ರದಲ್ಲಿ 3 ಶಾಲೆಗಳಿಗೆ ರಜೆ ನೀಡಲಾಗಿದೆ. ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸರ ಸಹಕಾರದಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.
ಸಿಬ್ಗತ್ ವುಲ್ಲಾ, ತಹಸೀಲ್ದಾರ್, ಗುಡಿಬಂಡೆ
ಬಾಗೀನಕ್ಕೆ ಮುಗಿಬಿದ್ದ ಜನಪ್ರತಿನಿಧಿಗಳು ನಾಪತ್ತೆ
ಅಮಾನಿ ಭೈರ ಸಾಗರ ತುಂಬುತ್ತಿದ್ದಂತೆ ಕೆರೆಗೆ ಬಾಗೀನ ಅರ್ಪಿಸುವ ನೆಪದಲ್ಲಿ ಮಾಧ್ಯಮಗಳಲ್ಲಿ ಮಿಂಚಿದ್ದ ಜನಪ್ರತಿನಿಧಿಗಳು ಕೂಡ ಈಗ ಪತ್ತೆ ಇಲ್ಲ. ಕೋಡಿ ಭಾಗದ ರಸ್ತೆಯೂ ಹಾಳಾಗಿದ್ದು, ಅದರ ಸುರಕ್ಷತೆಯೇ ಪ್ರಶ್ನಾರ್ಹವಾಗಿದೆ. ಅಲ್ಲದೆ, ಶತಮಾನಗಳ ಹಿಂದೆ ಪಾಳೆಯಗಾರರಿಂದ ನಿರ್ಮಾಣವಾಗಿರುವ ಕೆರೆಕಟ್ಟೆಯ ಸುರಕ್ಷತೆಯ ಬಗ್ಗೆಯೂ ಅವರು ಮಾತನಾಡಬೇಕಿದೆ. ಏಕೆಂದರೆ, ಭಾರೀ ಮಳೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಅನೇಕ ಕೆರೆ ಕಟ್ಟೆಗಳು ಒಡೆದುಹೋಗಿವೆ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು. ದುರಂತವೆಂದರೆ, ಬಾಗೀನ ಅರ್ಪಿಸಲು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸಿದ್ದ ಜನಪ್ರತಿನಿಧಿಗಳು, ಎಲ್ಲ ಪಕ್ಷಗಳ ರಾಜಕೀಯ ಮುಖಂಡರು ಈಗ ಕೆರೆ ಕೋಡಿ ಬಳಿ ಒದ್ದಾಡುತ್ತಿರುವ ಜನರತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ.
Comments 1