ಗುಂಡಿಗಳಿಗೆ ಜಲ್ಲಿ; ಸ್ಥಳಕ್ಕೆ ಧಾವಿಸಿದ ಸಣ್ಣ ನೀರಾವರಿ ಅಧಿಕಾರಿಗಳು: ಇದು ಸಿಕೆನ್ಯೂಸ್ ನೌ ವರದಿ ಫಲಶ್ರುತಿ
ಅಮಾನಿ ಭೈರಸಾಗರದಿಂದ ಪ್ರತಿ ಸೆಕೆಂಡಿಗೆ ಹೊರಗೆ ಹರಿಯುತ್ತಿರುವ ನೀರಿನ ಪ್ರಮಾಣವೆಷ್ಟು ಗೊತ್ತಾ?
By GS Bharath Gudibande
ಗುಡಿಬಂಡೆ: ಇಲ್ಲಿನ ಐತಿಹಾಸಿಕ ಅಮಾನಿ ಭೈರಸಾಗರ ಕೆರೆ ಏರಿಯ ರಸ್ತೆ ದೊಡ್ಡ ಗುಂಡಿಗಳು ಬಿದ್ದು ಅದು ಅಪಾಯದ ಅಂಚಿನಲ್ಲಿದೆ ಎಂದು ಸಿಕೆನ್ಯೂಸ್ ನೌ ಪ್ರಕಟಿಸಿದ್ದ ವರದಿ ಬೆನ್ನಲ್ಲೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ಗುಡಿಬಂಡೆ ಕೆರೆ ಏರಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿರುವ ಪರಿಣಾಮವಾಗಿ ಬೆಳಗ್ಗೆಯಿಂದಲೇ ಪಟ್ಟಣಕ್ಕೆ ಭಾರೀ ವಾಹನಗಳ ಪ್ರವೇಶವನ್ನು ನಿಷೇಧ ಮಾಡಿದ ತಾಲೂಕು ಆಡಳಿತ, ಕೆರೆ ಏರಿಯ ಮೇಲೆ ತೀವ್ರ ನಿಗಾ ಇರಿಸಿತ್ತು. ಕಳೆದ ನಲವತ್ತಕ್ಕೂ ಹೆಚ್ಚು ದಿನಗಳಿಂದ ಕೋಡಿ ಹರಿಯುತ್ತಿರುವ ಪರಿಣಾಮ ಕೆರೆ ಏರಿಯ ಮೇಲೆ ದೊಡ್ಡ ದೊಡ್ಡ ಕಂದಕ, ಹಳ್ಳ, ಗುಂಡಿಗಳು ಬದ್ದಿವೆ. ಇದರಿಂದಾಗಿ ಕೋಡಿ ರಸ್ತೆಯ ಮೇಲೆ ವಾಹನ ಸವಾರರು ಹರಸಾಹಸ ಮಾಡುವ ಪರಿಸ್ಥಿತಿ ಎದುರಾಗಿದೆ.
ಎಚ್ಚೆತ್ತುಕೊಂಡ ಸಣ್ಣ ನೀರಾವರಿ ಇಲಾಖೆ
ಅಮಾನಿ ಭೈರಸಾಗರ ಕೆರೆ ಏರಿ ರಸ್ತೆ ಸುರಕ್ಷಿತವಾಗಿಲ್ಲ, ಅದು ಕುಸಿಯುವ ಆತಂಕವಿದೆ ಎಂದು ಕೆಲ ಮಹತ್ವದ ಅಂಶಗಳನ್ನು ಉಲ್ಲೇಖ ಮಾಡಿ ಸಿಕೆನ್ಯೂಸ್ ನೌ ವಿವರವಾದ ವರದಿ ಮಾಡಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದರಲ್ಲದೆ, ಕೆರೆ ಏರಿಯ ಎರಡೂ ಕಡೆ ಕಟ್ಟಿಗೆಗಳ ಮೂಲಕ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ವಾಹನ ಸವಾರರಿಗೆ ಕೊಂಚ ನೆಮ್ಮದಿ ನೀಡಿದ್ದಾರೆ.
ಈ ವರದಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಗುಂಡಿಗಳಿಗೆ ತಾತ್ಕಾಲಿಕ ಪರಿಹಾರ
ಹಾಗೆಯೇ; ಕೆರೆ ಏರಿ ರಸ್ತೆಯಲ್ಲಿ ಕೋಡಿಯಲ್ಲಿ ನೀರು ರಭಸವಾಗಿ ಹರಿಯುತ್ತಿರುವ ಕಾರಣ ಎಲ್ಲೆಡೆ ಗುಂಡಿಗಳು ಬಿದ್ದಿವೆ. ನಾಲ್ಕು ಅಡಿ ಆಳದಷ್ಟು ಗುಂಡಿಗಳಿಗೆ ತಾತ್ಕಾಲಿಕವಾಗಿ ಜಲ್ಲಿ ಹಾಕುವ ಮೂಲಕ ಸಮಸ್ಯೆ ನಿವಾರಿಸಿದ್ದಾರೆ. ಅದು ಎಷ್ಟು ದಿನ ಉಳಿಯುತ್ತದೊ ಕಾದು ನೋಡಬೇಕಾಗಿದೆ. ಮುಖ್ಯವಾಗಿ ನೀರು ರಭಸವಾಗಿ ಹರಿಯುತ್ತಿರುವ ಕಾರಣ ಜಲ್ಲಿ ಸ್ಥಿರವಾಗಿ ನಿಲ್ಲುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಕೋಡಿ ನಿಂತ ನಂತರ ಶಾಶ್ವತ ಪರಿಹಾರ
ಅಮಾನಿ ಭೈರಸಾಗರ ಕೆರೆ ಕೋಡಿ 40 ದಿನಗಳಿಂದ ಎಡೆಬಿಡದೆ ಭಾರೀ ಪ್ರಮಾಣದಲ್ಲಿ ಹರಿಯುತ್ತದೆ. ಹಾಗಾಗಿ ಶಾಶ್ವತ ಪರಿಹಾರ ಕಲ್ಪಿಸಲು ಸಾಧ್ಯವಾಗಿಲ್ಲ. ಕರೆಗೆ ನೀರಿನ ಹರಿವು ಕಡಿಮೆಯಾದ ನಂತರ ಕೆರೆಯ ಬಲ ಭಾಗಕ್ಕೆ ಉಕ್ಕಿನ ತಡೆಗೋಡೆ ನಿರ್ಮಾಣ ಮಾಡುವುದರ ಜತೆಗೆ ಲೋಕೋಪಯೋಗಿ ಇಲಾಖೆಯ ಸಹಕಾರದಿಂದ ರಸ್ತೆಯನ್ನು ಉತ್ತಮ ರೀತಿಯಲ್ಲಿ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಕೀರ್ತಿ ಅವರು ತಿಳಿಸಿದ್ದಾರೆ.
ಅಪಾರ ನೀರು ಕೋಡಿಯಿಂದ ಹೊರಕ್ಕೆ
ಇಡೀ ರಾಜ್ಯದಲ್ಲಿಯೇ ಅತಿ ದೊಡ್ಡ ಕೆರೆಗಳಲ್ಲಿ ಒಂದಾದ ಅಮಾನಿ ಭೈರಸಾಗರ ತುಂಬಿದೆ ಎನ್ನುವ ಸಂತೋಷಕ್ಕಿಂತ, ಕೆರೆಯಲ್ಲಿ ತುಂಬಿರುವ ಭಾರೀ ಹೂಳಿನಿಂದ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ. ಅಲ್ಲದೆ, ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಕೆರೆ ಕೋಡಿ ಹರಿಯುತ್ತಿದೆಯಾದರೂ, ಆ ನೀರಿನ ಬಹುತೇಕ ಪ್ರಮಾಣ ನೆರೆ ರಾಜ್ಯ ಆಂದಧ್ರ ಪ್ರದೇಶದ ಪಾಲಾಗುತ್ತಿದೆ.
ಸಿಕೆನ್ಯೂಸ್ ನೌ ವೆಬ್‌ತಾಣಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ; ಪ್ರತಿ ಸೆಕೆಂಡಿಗೆ ಸುಮಾರು 214 ಕ್ಯೂಸೆಕ್ ನೀರು ಅಮಾನಿ ಭೈರಸಾಗರ ಕೆರೆಯಿಂದ ಹೊರಗೆ ಕೋಡಿ ಮೂಲಕ ಹರಿದುಹೋಗುತ್ತಿದೆ. ಈ ಲೆಕ್ಕದಂತೆ 40 ದಿನಗಳಲ್ಲಿ ಅಂದಾಜು 23,101,200 ಕ್ಯೂಸೆಕ್ ನೀರು ಹರಿದು ಹೋಗಿದೆ ಎಂಬ ಮಾಹಿತಿ ಸಣ್ಣ ನೀರಾವರಿ ಇಲಾಖೆಯಿಂದ ಸಿಕ್ಕಿದೆ. ಇಷ್ಟು ನೀರಿನಲ್ಲಿ ಕೊಂಚ ಪ್ರಮಾಣ ಹಂಪಸಂದ್ರ, ಕಡೇಹಳ್ಳಿ ಕೆರೆಗಳಿಗೆ ಹೋಗಿ ಸೇರಿದೆಯಾದರೂ ಅಪಾರ ಜಲರಾಶಿ ನೆರೆ ರಾಜ್ಯದ ಪಾಲಾಗಿದೆ.
ಅಮಾನಿ ಭೈರಸಾಗರ ಕೆರೆ ಕೋಡಿ ನೀರು ನಿಂತ ತಕ್ಷಣ ಬಲಭಾಗಕ್ಕೆ ಸ್ಟೀಲ್ ತಡೆಗೋಡೆ ನಿರ್ಮಿಸುತ್ತೇವೆ. ಜತೆಗೆ; ಲೋಕೋಪಯೋಗಿ ಇಲಾಖೆಯ ಸಹಕಾರದಿಂದ ರಸ್ತೆಯ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡುತ್ತೇವೆ.
ಕೀರ್ತಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ಚಿಕ್ಕಬಳ್ಳಾಪುರ
ಮೇಲು ಸೇತುವೆ ಪ್ರಸ್ತಾವನೆ: ಶಾಸಕರು
ಗುಡಿಬಂಡೆ ಅಮಾನಿ ಭೈರಸಾಗರ ಕೆರೆಯಿಂದ ಪಟ್ಟಣಕ್ಕೆ ಫ್ಲೈಓವರ್ ನಿರ್ಮಾಣ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸೂಕ್ತ ಕ್ರಮ ವಹಿಸುತ್ತೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಹಂಪಸಂದ್ರ, ಲಕ್ಕೇನಹಳ್ಳಿ ಬಳಿ ಕೂಡ ಮೇಲು ಸೇತುವೆಯ ಅವಶ್ಯಕತೆ ಇದೆ. ಆದರೆ, ಗುಡಿಬಂಡೆ ಅಮಾನಿ ಭೈರಸಾಗರ ಕೆರೆ ಏರಿ ರಸ್ತೆಯಲ್ಲಿ ಹೆಚ್ಚು ಓಡಾಟ ಇರುವುದರಿಂದ ಮೊದಲ ಆದ್ಯತೆ ಕೊಡುತ್ತೇನೆ. ಗುಂಡಿ ಮುಚ್ಚಿ, ಸೂಕ್ತ ಕ್ರಮವನ್ನು ವಹಿಸಲು ಸಣ್ಣ ನೀರಾವರಿ, ಪಿಡಬ್ಲ್ಯಡಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.
Comments 1