- ಚಿಕ್ಕಬಳ್ಳಾಪುರದಲ್ಲಿ ಉಸ್ತುವಾರಿ ಸಚಿವರ ರೈನ್ ರೌಂಡ್ಸ್
- ಹಾಗೆ ಬಂದು ಹೀಗೆ ಮಾಯವಾದ ಡಾ.ಕೆ.ಸುಧಾಕರ್
- ಫಿಲ್ಮಿ ಸ್ಟೈಲಿನಲ್ಲಿ ವೀಕ್ಷಣೆ; ಸಾಮಾನ್ಯರಿಗಿಲ್ಲ ದರ್ಶನ
- ಜಲಪೀಡಿತ ಜಿಲ್ಲೆಯಲ್ಲಿ ಜನರ ನಿರಂತರ ಜಾಗರಣೆ
by M Krishnappa Chikkaballapura
ಚಿಕ್ಕಬಳ್ಳಾಪುರ: ಮೂರು ಹೊತ್ತು ಮುಖ್ಯಮಂತ್ರಿ ಸುತ್ತ ಸುತ್ತುವುದರಲ್ಲೇ ಬ್ಯುಸಿ ಇರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅಚ್ಚರಿ ಎಂಬಂತೆ ಶನಿವಾರ ಬೆಳಗ್ಗೆ ಮಳೆ-ನೆರೆ ಪೀಡಿತ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ಮಿಂಚಿನಂತೆ ಸಂಚರಿಸಿ ಮಾಯವಾದರು.
ಜಿಲ್ಲೆಯಲ್ಲಿ ಧಾರಾಕಾರ ಮಳೆ ಶುರುವಾದ ಮೇಲೆ ಜಿಲ್ಲೆಯ ಕಡೆ ಮೂರು ನಾಲ್ಕು ದಿನಕ್ಕೊಮ್ಮೆ ತಲೆ ಹಾಕುವ ಸಚಿವರು, ಇಂದು ಬೆಳಗ್ಗೆಯೇ ನಗರಸಭೆ ಅಧ್ಯಕ್ಷ ಆನಂದ್ ಬಾಬು ರೆಡ್ಡಿ, ಕೆಲ ಅಧಿಕಾರಿಗಳು, ಜನಪ್ರತಿನಿಧಿಗಳು, ತಮ್ಮ ಬೆಂಬಲಿಗ ಪಟಾಲಂ ಜತೆಯಲ್ಲಿ ಪ್ರತ್ಯಕ್ಷರಾದಾಗ ಜನರು ಚಕಿರಾದರಲ್ಲದೆ, ಶೂ ಹಾಕಿಕೊಂಡು ನೀರಿಗಿಳಿದು ಫಿಲ್ಮಿ ಸ್ಟೈಲಿನಲ್ಲಿ ನೆರೆಯನ್ನು ಪರಿಶೀಲನೆ ನಡೆಸಿದ ಮಂತ್ರಿಗಳನ್ನು ಕಂಡು ಅವಾಕ್ಕಾದರು.
ವಿಷಯ ಏನೆಂದರೆ; ಅವರ ಪರಿಶೀಲನೆ ಶಾಸ್ತ್ರವು ಬಿಬಿ ರಸ್ತೆಯಲ್ಲಿ ತಮ್ಮ ಸಂಬಂಧಿಕರೊಬ್ಬರು ಗುತ್ತಿಗೆ ಪಡೆದು ನಡೆಸುತ್ತಿರುವ ಕಳಪೆ ಕಾಮಗಾರಿಯ ವೀಕ್ಷಣೆಗೆ ಮಾತ್ರ ಸೀಮಿತವಾಯಿತು.
ಸುಮಾರು ನಲವತ್ತೈದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಚಿಕ್ಕಬಳ್ಳಾಪುರ ಜನರು ಕಂಗೆಟ್ಟಿದ್ದಾರೆ. ಪ್ರಭಾವಿಗಳು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪರಿಣಾಮ ಮಳೆ ನೀರು ಕಾಲುವೆಗಳ ಬದಲು ರಸ್ತೆಗಳಲ್ಲಿ ನದಿಯಂತೆ ಹರಿಯುತ್ತಿದೆ. ಚರಂಡಿ ನೀರು ಮನೆಗಳು ಮತ್ತು ತೋಟಗಳಿಗೆ ನುಗ್ಗಿ ನರಕವನ್ನೇ ಸೃಷ್ಠಿ ಮಾಡಿದೆ.
ಸದಾ ಬೆಂಗಳೂರಿನಲ್ಲಿ ಬ್ಯುಸಿ ಆಗಿರುವ ಸಚಿವರು, ಬೆಳಗ್ಗೆ ಇದ್ದಕ್ಕಿದಂತೆ ನಗರದಲ್ಲಿ ಕಾಣಿಸಿಕೊಂಡ ಕಾರಣವನ್ನು ಕೆದಕಿದಾಗ ಗೊತ್ತಾಗಿದ್ದು, ಸಂಜೆ 3 ಗಂಟೆಗೆ ಜಿಲ್ಲಾ ಕೇಂದ್ರದಲ್ಲಿ ಏರ್ಪಾಡಾಗಿದ್ದ ಬಿಜೆಪಿ ಜನಸ್ವರಾಜ್ಯ ಯಾತ್ರೆ ಎಂಬುದು. ಯಾತ್ರೆಯಲ್ಲಿ ಭಾಗವಹಿಸುವುದು ಹಾಗೂ ಆ ಕಾರ್ಯಕ್ರಮದ ಸಿದ್ಧತೆಗಳನ್ನು ಪೂರ್ವಭಾವಿಯಾಗಿ ಪರಿಶೀಲನೆ ಮಾಡುವ ʼಸದುದ್ದೇಶʼಕ್ಕೆ ಸಚಿವರು ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಸಿಟಿ ಸಂಚಾರ ಏರ್ಪಡಿಸಿಕೊಂಡಿದ್ದರು.
ವಿಚಿತ್ರವೆಂದರೆ; ಯಾವುದೇ ದಿನ ಸಚಿವರು ಚಿಕ್ಕಬಳ್ಳಾಪುರಕ್ಕೆ ಬಂದರೂ ಸದಾ ಅವರ ಎಡಬಲದಲ್ಲಿ ಕಾಣಿಸಿಕೊಳ್ಳುವ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅವರಿಬಬರೂ ನೆರೆ ಪರಿಶೀಲನೆ ವೇಳೆ ಕಾಣಿಸಲಿಲ್ಲ. ಜಿಲ್ಲಾಧಿಕಾರಿಗಳು ತಾಲೂಕುಗಳಿಗೆ ಭೇಟಿ ನೀಡಿದ್ದರೆ, ಎಸ್ಪಿ ಅವರ ಬಗ್ಗೆ ಮಾಹಿತಿ ಇರಲಿಲ್ಲ.
ಬಿಬಿ ರೋಡಿಗೆ ಮಾತ್ರ ಸೀಮಿತ ಪರಿಶೀಲನೆ
ಸಚಿವ ಸುಧಾಕರ್ ಅವರ ಶನಿವಾರದ ನೆರೆ ತಪಾಸಣೆ ಶಾಸ್ತ್ರ ಬಿಬಿ ರಸ್ತೆಗೆ ಮಾತ್ರ ಸೀಮಿತವಾಯಿತು. ರಸ್ತೆಯ ಬಳಿ ಹರಿಯುತ್ತಿರುವ ರಾಜಕಾಲುವೆಯನ್ನು ವೀಕ್ಷಿಸಿದ ಅವರು, ಅಲ್ಲಿಂದಲೇ ಜಾಗ ಖಾಲಿ ಮಾಡಿದರು. ಅಲ್ಲದೇ, ಆ ರಸ್ತೆಯಲ್ಲಿನ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಬಳಿ ನಡೆಯುತ್ತಿರುವ ಕಾಮಗಾರಿ, ಅದು ಕಳಪೆ ಕಾಮಗಾರಿ ಎಂಬ ಕೂಗು ಇಂದು ನಿನ್ನೆಯದಲ್ಲ.
ನಗರದ ಕಂದವಾರ ಕೆರೆಯ ಮೂರು ಪ್ರಮುಖ ರಾಜಕಾಲುವೆಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು, ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಕೆಲ ದಿನಗಳ ಹಿಂದೆ ಜಿಲ್ಲಾಡಳಿತಕ್ಕೆ ಜನರು ಚಳಿ ಬಿಡಿಸಿದಾಗ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಎರಡು ರಾಜಕಾಲುವೆಗಳನ್ನು ಮಾತ್ರ ತೆರವುಗೊಳಿಸುವ ಕೆಲಸ ಮಾಡಿದ್ದರು. ರಾಜಕಾಲುವೆಯನ್ನು ಸಾಕಷ್ಟು ಒತ್ತುವರಿ ಮಾಡಿಕೊಂಡು ಬಿಬಿ ರಸ್ತೆಯಲ್ಲಿ ಪ್ರಭಾವಿಗಳು ಮನೆ, ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿಕೊಂಡಿರುವ ಪರಿಣಾಮ ಭಾರೀ ಮಳೆ ನೀರು ಬಿಬಿ ರಸ್ತೆಯಲ್ಲಿಯೇ ಹರಿಯುತ್ತಿದೆ.
ಲಕ್ಕಮ್ಮ ಚೌಲ್ಟ್ರಿ ಹಾಗೂ ಸರಕಾರಿ ಆಸ್ಪತ್ರೆ ಬಳಿ ರಾಜಕಾಲುವೆಯನ್ನು ಮುಚ್ಚಿಸಿರುವ ಪರಿಣಾಮ ಮಳೆ ನೀರೆಲ್ಲ 8, 9ನೇ ವಾರ್ಡುಗಳಲ್ಲಿನ ಮನೆಗಳಿಗೆ ನುಗ್ಗಿದೆ. ಕಳೆದ ನಾಲ್ಕು ದಿನಗಳಿಂದ ಜಾಗರಣೆ ಮಾಡುತ್ತಿರುವ ಎರಡೂ ಬಡಾವಣೆಗಳ ನಿವಾಸಿಗಳು, ಇಡೀ ರಾತ್ರಿಯೆಲ್ಲ ಮನೆಗೆ ನುಗ್ಗುವ ನೀರನ್ನೇ ಹೊರಚೆಲ್ಲುವ ಕೆಲಸದಲ್ಲಿ ನಿರತರಾಗಿದ್ದಾರೆ. ಜತೆಗೆ, ಶನಿಮಹಾತ್ಮ ಸ್ವಾಮಿ ದೇಗುಲ, ಭಾರತೀ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಆ ಪ್ರದೇಶಗಳೆಲ್ಲ ಜಲಾವೃತವಾಗಿದ್ದು, ಜನರು ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ಶಾಪ ಹಾಕುತ್ತಿದ್ದಾರೆ.
ಇನ್ನೂ ನಲವತ್ತೈದು ದಿನ ಮಳೆ ಸುರಿದು ಜನ ಹೈರಾಣಾಗಿದ್ದರೂ ಕೆಲ ದಿನಗಳ ಹಿಂದೆಯಷ್ಟೇ ಕಾಳಜಿ ಕೇಂದ್ರಗಳನ್ನು ಜಿಲ್ಲಾಡಳಿತ ತೆರೆದಿದೆ. ಅಲ್ಲಿಯೂ ಕಳಪೆ ನಿರ್ವಹಣೆ ಎದ್ದು ಕಾಣುತ್ತಿದೆ. ನೀರು ನುಗ್ಗಿರುವ ನಗರದ ಬಹುತೇಕ ಪ್ರದೇಶಗಳಲ್ಲಿ ಇಂಥ ಕೇಂದ್ರಗಳನ್ನು ಸ್ಥಾಪಿಸಲಾಗಿಲ್ಲ. ಮಳೆ ಮತ್ತು ನೆರೆ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಮೊದಲ ಬಾರಿ ಶಾಸಕರಾಗಿ ಗೆದ್ದಾಗ ಸಚಿವ ಸುಧಾಕರ್ ಅವರು ಚಿಕ್ಕಬಳ್ಳಾಪುರವನ್ನು ಸಿಂಗಾಪುರ ಮಾಡುವುದಾಗಿ ಹೇಳಿದ್ದರು. ತಮ್ಮ ರಾಜಕೀಯ ಗುರು ಎಸ್.ಎಂ.ಕೃಷ್ಣ ಅವರು ಬೆಂಗಳೂರು ಮಹಾನಗರವನ್ನು ಸಿಂಗಾಪುರ ಮಾಡುತ್ತೇನೆ ಎಂದು ಹೇಳಿ ಜನರನ್ನು ನಂಬಿಸಿದಂತೆ ಸಚಿವರು ಕೂಡ ಜನರನ್ನು ನಂಬಿಸಿದ್ದರು. ಆದರೆ, ಇಂದು ಚಿಕ್ಕಬಳ್ಳಾಪುರ ನಗರ ಸಿಂಗಾಪುರ ಆಗುವುದಿರಲಿ ಚರಂಡಿಯಾಗಿ ಪರಿವರ್ತನೆಯಾಗಿದೆ. ಹಾದಿಬೀದಿಗಳಲ್ಲಿ ಕೊಳಚೆ ನೀರು, ಮಳೆ ನೀರು ಹರಿಯುತ್ತಿದೆ ಎಂದು ನಗರವಾಸಿಗಳು ಹೇಳುತ್ತಿದ್ದಾರೆ. ಆ ದೃಶ್ಯಗಳು ಜನರ ಕಣ್ಣಿಗೆ ರಾಚುತ್ತಿವೆ.
ಸಚಿವರು ಬರ್ತಾರೆ, ಹೋಗ್ತಾರೆ! ಪ್ರಯೋಜನವಿಲ್ಲ!!
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ತಮ್ಮ ಬೆಂಬಲಿಗರು, ಉನ್ನತ ಅಧಿಕಾರಿಗಳಿಗೆ ಮಾತ್ರ ದರುಶನ ಭಾಗ್ಯ ನೀಡುತ್ತಾರೆಯೇ ಹೊರತು ಶ್ರೀಸಾಮಾನ್ಯರ ಪಾಲಿಗೆ ಅವರು ಗಗನಕುಸುಮವೇ ಆಗಿದ್ದಾರೆ ಎನ್ನುವುದು ಚಿಕ್ಕಬಳ್ಳಾಪುರ ಜನರ ಆರೋಪ.
ಸಚಿವರು ಚಿಕ್ಕಬಳ್ಳಾಪುರಕ್ಕೆ ಬರುತ್ತಾರೆಂದರೆ, ಎಲ್ಲಿಗಾದರೂ ಭೇಟಿ ಕೊಡುತ್ತಾರೆ ಎಂದರೆ ಅವರ ಬೆಂಬಲಿಗ ಪಟಾಲಂ ಪ್ರತ್ಯಕ್ಷವಾಗಿಬಿಡುತ್ತದೆ. ಪರಿಣಾಮವಾಗಿ ಸಚಿವರಿಗೆ ಕಷ್ಟಗಳನ್ನು ಹೇಳಿಕೊಳ್ಳಲು ಸಾಮಾನ್ಯ ಜನರಿಗೆ ಸಾಧ್ಯವಾಗುತ್ತಿಲ್ಲ. ಆ ಪಟಾಲಮ್ಮಿನ ಅಬೇಧ್ಯ ಕೋಟೆಯನ್ನು ಬೇಧಿಸಿ ಹೋಗಿ ಸಚಿವರನ್ನು ದರ್ಶನ ಮಾಡುವ ಭಾಗ್ಯ ಅವರಿಗೆ ಮತ ಹಾಕಿದ ಜನರಿಗೆ ಸಿಗುತ್ತಿಲ್ಲ. ಎದರು ನಿಂತು ಸಚಿವರಿಗೆ ಕಷ್ಟ ಹೇಳಿಕೊಳ್ಳುವುದಿರಲಿ, ಅವರನ್ನು ಹತ್ತಿರದಿಂದ ನೋಡುವುದೂ ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಮುಖಂಡರೇ ಸಿಕೆನ್ಯೂಸ್ ನೌ ಬಳಿ ಅಲವತ್ತುಕೊಳ್ಳುತ್ತಿದ್ದಾರೆ.
ಇನ್ನು ಚಿಕ್ಕಬಳ್ಳಾಪುರಕ್ಕೆ ಕೇವಲ ಅಧಿಕೃತ ಕಾರ್ಯಕ್ರಮಗಳಿಗೆ ಮಾತ್ರ ಸಚಿವ ಸುಧಾಕರ್ ಬರುತ್ತಾರಾದರೂ, ಪಟಾಲಮ್ಮುಗಳ ಕೋಟೆ, ಪೊಲೀಸರ ಹವಾ, ಝೀರೋ ಟ್ರಾಫಿಕ್ ಹಂಗಾಮಾದಿಂದ ಜನರಿಗೆ ಅವರು ಲಭ್ಯವಾಗುತ್ತಿಲ್ಲ. ನಮ್ಮ ಕೆಲಸ ಮಾಡಿಕೊಡದ, ಕನಿಷ್ಠ ಅಹವಾಲನ್ನೂ ಆಲಿಸದ ಇಂಥ ಶಾಸಕ, ಸಚಿವರು ಏತಕ್ಕೆ ಬೇಕು? ಎಂದು ಜನರು ಕೇಳುತ್ತಿದ್ದಾರೆ. ಒಟ್ಟಾರೆಯಾಗಿ ಉಸ್ತುವಾರಿ ಸಚಿವರ ವರ್ತನೆಗೆ ಜನರು ರೋಸಿ ಹೋಗಿದ್ದಾರೆ.
ಫೋಟೋಗಾಗಿ ಪರಿಶೀಲನೆ
ಚಿಕ್ಕಬಳ್ಳಾಪುರದ ಪರಿಸ್ಥಿತಿ ಅಕ್ಷರಶಃ ನರಕವಾಗಿದೆ. ಕೆಲ ಬಡಾವಣೆಗಳಲ್ಲಿ ಮನೆಗಳಿಗೆ ಹೊರಗಿನ ಸಂಪರ್ಕವೇ ಇಲ್ಲವಾಗಿದೆ. ಒಂದು ಕಡೆ ಭಾರೀ ಮಳೆ ಬೀಳುತ್ತಿದ್ದರೆ, ಇನ್ನೊಂದೆಡೆ ಬೆಂಗಳೂರು ನೀರು ಜಿಲ್ಲೆಯ ಕೆರೆಗಳಿಗೆ ಭಾರೀ ಪ್ರಮಾಣದಲ್ಲಿ ಹರಿದುಬರುತ್ತಿದೆ. ಬೆಂಗಳೂರು ನೀರನ್ನು ಮಳೆ ನಿಲ್ಲುವ ತನಕ ನಿಲ್ಲಿಸುವ ಕೆಲಸವನ್ನು ಸಣ್ಣ ನೀರಾವರಿ ಇಲಾಖೆ, ಬೆಂಗಳೂರು ಜಲಮಂಡಳಿ ಮಾಡಿಲ್ಲ. ಜಿಲ್ಲಾಡಳಿತವಂತೂ ಈ ಬಗ್ಗೆ ಯೋಚನೆಯನ್ನೇ ಮಾಡಿಲ್ಲ. ಅದು ಪೂರ್ಣ ವಿಫಲವಾಗಿದೆ. ಇನ್ನು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಯಂತೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ತಹಸೀಲ್ದಾರ್ ಅವರು ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವುದನ್ನು ಪತ್ತೆ ಹಚ್ಚಿ ಸಮಗ್ರ ವರದಿಯನ್ನು ಸಲ್ಲಿಸಿದ್ದರೂ ಅದರ ಆಧಾರದ ಮೇಲೆ ಕ್ರಮ ವಹಿಸುವ ಧೈರ್ಯವನ್ನು ಜಿಲ್ಲಾಧಿಕಾರಿ ಮಾಡಿಲ್ಲ. ಶನಿವಾರ ಸಚಿವರು ನಡೆಸಿದ ನೆರೆ ಪರಿಶೀಲನೆ ಕೇವಲ ಫೋಟೋಗಳಿಗಾಗಿ. ನಗರದಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳನ್ನು ಅವರ ಆಪ್ತರು, ಸಂಬಂಧಿಕರೇ ಮಾಡುತ್ತಿದ್ದಾರೆ. ಅನೇಕ ಬೇನಾಮಿಗಳು ಗುತ್ತಿಗೆದಾರರ ಅವತಾರ ಎತ್ತಿದ್ದಾರೆ ಎನ್ನುತ್ತಾರೆ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ನಾರಾಯಣ ಸ್ವಾಮಿ ಅವರು. ಅವರು ಸಿಕೆನ್ಯೂಸ್ ನೌ ಜತೆ ಮಾತನಾಡಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಮಾಡಿಲ್ಲ. ಕೆಲ ಚರಂಡಿ ನಿರ್ಮಾಣ ಕಾಮಗಾರಿಗಳು ತೆವಳುತ್ತಾ ಸಾಗಿವೆ. ರಾಜಕಾಲುವೆಗಳ ಒತ್ತುವರಿಯನ್ನು ತೆರವು ಮಾಡಿಲ್ಲ. ನಿರಂತರವಾಗಿ ಮಳೆ ಬೀಳುತ್ತಿದ್ದರೂ ಈ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಒಂದು ವೇಳೆ ಸಕಾಲಕ್ಕೆ ಕ್ರಮ ಕೈಗೊಂಡಿದ್ದಿದ್ದರೆ ಇಷ್ಟು ಅನಾಹುತ ಉಂಟಾಗುತ್ತಿರಲಿಲ್ಲ. ಜನರು ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ.
ಎಸ್.ಎಂ.ಮುನಿಯಪ್ಪ, ಮಾಜಿ ಶಾಸಕ
ಚಿಕ್ಕಬಳ್ಳಾಪುರದಲ್ಲಿ ಇಷ್ಟೊಂದು ಅವ್ಯವಸ್ಥೆ ಆಗಲು ನಗರಸಭೆಯ ಎಂಜಿನಿಯರುಗಳು ನಡೆಸುತ್ತಿರುವ ಅವೈಜ್ಞಾನಿಕ ಕಾಮಗಾರಿಗಳೇ ಕಾರಣ. ಕಳಪೆ ಮತ್ತು ಅಸಮರ್ಪಕ ಕಾಮಗಾರಿ ಹಾಗೂ ಯೋಜನೆಗಳಿಂದ ನಗರವನ್ನು ನಗರಸಭೆ ನರಕವನ್ನಾಗಿ ಮಾಡಿದೆ. ನಾಲ್ಕು ವಾರ್ಡುಗಳಿಂದ ಬರುವ ನೀರು ಹೋಗಲು ಕೇವಲ ಒಂದು ಅಡಿ ಚರಂಡಿ ಮಾಡಲಾಗಿದೆ. ಇದು ಯಾವ ಸೀಮೆಯ ಕಾಮಗಾರಿ?
ಮಟಮಪ್ಪ, ನಗರಸಭೆ ಸದಸ್ಯ
Comments 1