ಅಧಿಕೃತವಾಗಿ ಘೋಷಿಸಿದ ವಾಯುಪಡೆ; ದುರ್ಘಟನೆಯಲ್ಲಿ ರಾವತ್ ಪತ್ನಿ ಕೂಡ ಸಾವು
ಊಟಿ: ಸೇನಾ ಪಡೆಗಳಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಹಾಗೂ ಸೇನೆ ಉನ್ನತ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಇಂದು ಬೆಳಗ್ಗೆ ನೀಲಗಿರಿ ಬೆಟ್ಟಗಳ ನಡುವಿನ ಕೂನೂರು ಬಳಿ ದುರಂತಕ್ಕೀಡಾಗಿದ್ದು, ದುರಂತದಲ್ಲಿ ರಾವತ್ ಅವರೂ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ.
ಈ ದುರ್ಘಟನೆಯಲ್ಲಿ ಜ.ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಅವರು ಅಸುನೀಗಿದ್ದಾರೆ.
ಈ ಬಗ್ಗೆ ಅಧಿಕೃತವಾಗಿ ಟ್ವೀಟ್ ಮಾಡಿರುವ ವಾಯುಪಡೆ; ಹೆಲಿಕಾಪ್ಟರ್ ದುರಂತದಲ್ಲಿ ಜ.ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಹಾಗೂ ಇನ್ನಿತರೆ 11 ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.
ದುರಂತ ಸಂಭಿಸಿದ ಕೂಡಲೇ ಸ್ಥಳದಲ್ಲೇ ಕೆಲವರು ಹೆಲಿಕಾಪ್ಟರ್ʼನಲ್ಲಿ ಉಂಟಾದ ಬೆಂಕಿಯಲ್ಲಿ ಸ್ಥಳದಲ್ಲೇ ಕೊನೆಯುಸಿರೆಳೆದರೆ, ತೀವ್ರವಾಗಿ ಗಾಯಗೊಂಡಿದ್ದ ಬಿಪಿನ್ ರಾವತ್ ಅವರನ್ನು ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಈ ಸೇನಾ ಹೆಲಿಕಾಪ್ಟರ್ʼನಲ್ಲಿ ಜ.ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರ್ಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ.ಸಾಯಿ ತೇಜಾ ಮತ್ತು ಹವಾಲ್ದಾರ್ ಸತ್ಪಾಲ್ ಸೇರಿ 14 ಜನರು ಪ್ರಯಾಣಿಸುತ್ತಿದ್ದರು. ಈ ನತದೃಷ್ಟ ಹೆಲಿಕಾಪ್ಟರ್ ಕೂನೂರು ಬಳಿಯ ವೆಲ್ಲಿಂಗ್ಟನ್ ಸೇನಾ ನೆಲೆಗೆ ತಲುಪಬೇಕಾಗಿತ್ತು.
ದುರಂತಕ್ಕೀಡಾದ ಹೆಲಿಕಾಪ್ಟರ್ ( Mi-17V5 helicopter) ಬಗ್ಗೆ ಹಾಗೂ ಘಟನೆಗೆ ಕುರಿತು ಟ್ವೀಟ್ ಮಾಡಿರುವ ಭಾರತೀಯ ವಾಯುಪಡೆ; “ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್, ಅವರ ಕುಟುಂಬ ಮತ್ತು ಇತರ ಉನ್ನತ ಮಟ್ಟದ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ದುರಂತಕ್ಕೀಡಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ” ಎಂದು ಹೇಳಿದೆ.
ಇದೇ ವೇಳೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಅಮಿತ್ ಶಾ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಂತಾದವರು ದುರ್ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಬಿಪಿನ್ ರಾವತ್ ಬಾಲ್ಯ ಜೀವನ
1958, ಮಾರ್ಚ್ 16ರಂದು ಉತ್ತರಾಖಂಡ್ನ ಪೌರಿಯಲ್ಲಿ ಬಿಪಿನ್ ರಾವತ್ ಅವರು ಜನಿಸಿದರು. ಬಿಪಿನ್ ರಾವತ್ ಅವರ ತಂದೆ ಲಕ್ಷ್ಮಣ್ ಸಿಂಗ್ ರಾವತ್ ಅವರು ಕೂಡ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಡೆಹರಾಡೂನ್ ನ ಕೇಂಬ್ರಿಡ್ಜ್ ಹಾಲ್ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ, ಶಿಮ್ಲಾದ ಸೆಂಟ್.ಎಡ್ವರ್ಡ್ ಸ್ಕೂಲ್ʼನಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದ ಬಿಪಿನ್ ರಾವತ್ ಅವರು ಡೆಹರಾಡೂನ್ ನಲ್ಲಿ ಮಿಲಿಟರಿ ಅಕಾಡೆಮಿಯಲ್ಲಿ ಸೇರ್ಪಡೆಯಾಗಿ ಸೈನ್ಯದ ಬಗ್ಗೆ ತರಬೇತಿ ಪಡೆದುಕೊಂಡಿದ್ದರು.
ಬಿಪಿನ್ ರಾವತ್ ವೃತ್ತಿಜೀವನ
1978ರಲ್ಲಿ ಗೂರ್ಖಾ ರೆಜಿಮೆಂಟ್ ಮೂಲಕ ಸೇನೆಗೆ ನಿಯುಕ್ತಿಗೊಂಡ ಬಿಪಿನ್ ರಾವತ್ ರಾವತ್ ಬ್ರಿಗೇಡ್ ಕಮಾಂಡರ್, ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (ಜಿಒಸಿ-ಸಿ) ಸದರ್ನ್ ಕಮಾಂಡ್, ಮಿಲಿಟರಿ ಕಾರ್ಯಾಚರಣೆ ನಿರ್ದೇಶನಾಲಯದಲ್ಲಿ ಜನರಲ್ ಸ್ಟಾಫ್ ಆಫೀಸರ್ ಗ್ರೇಡ್ 2, ಕರ್ನಲ್ ಮಿಲಿಟರಿ ಕಾರ್ಯದರ್ಶಿ ಮತ್ತು ಉಪ ಮಿಲಿಟರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಿಲಿಟರಿ ಕಾರ್ಯದರ್ಶಿಯ ಶಾಖೆ ಮತ್ತು ಜೂನಿಯರ್ ಕಮಾಂಡ್ ವಿಂಗ್ನಲ್ಲಿ ಹಿರಿಯ ಬೋಧಕರಾಗಿದ್ರು. ಇನ್ನು ಯುನೈಟೆಡ್ ನೇಷನ್ಸ್ ಪೀಸ್ ಕೀಪಿಂಗ್ ಫೋರ್ಸ್ನ ಭಾಗವಾಗಿದ್ದಾರೆ ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಬಹುರಾಷ್ಟ್ರೀಯ ಬ್ರಿಗೇಡ್ಗೆ ಕಮಾಂಡರ್ ಆಗಿ ಭಾರತೀಯ ಸೈನ್ಯಕ್ಕೆ ಸೇವೆ ಸಲ್ಲಿಸಿದ್ರು. ಅಲ್ಲಿಂದ ಮುಂದೆ 2016ರಲ್ಲಿ ಭಾರತೀಯ ಮೂರು ಸೇನಾಪಡೆಗಳ ಮುಖ್ಯಸ್ಥರಾಗಿ ನಿಯೋಜನೆಯ ಗೊಂಡರು..
ಬಿಪಿನ್ ರಾವತ್ ವೈಯಕ್ತಿಕ ಜೀವನ
ಮಧುಲಿಕಾ ರಾವತ್ ಅವರೊಂದಿಗೆ ವಿವಾಹ ಬಂಧನಕ್ಕೆ ಒಳಗಾದ ಬಿಪಿನ್ ರಾವತ್ ಅವರಿಗೆ ಬರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದಾನೆ.. ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್, ಭಾರತೀಯ ಸೈನ್ಯದಲ್ಲಿ ಮಹಿಳಾ ಕಲ್ಯಾಣ ಸಂಘದ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.
ಸೈನಿಕರ ಹಿನ್ನೆಲೆ ಹೊಂದಿದ್ದ ರಾವತ್ ಕುಟುಂಬ
ಇನ್ನು ರಾವತ್ ಅವರು ಮಾತ್ರವಲ್ಲದೆ ಅವರ ಇಡೀ ಕುಟುಂಬವೇ ಭಾರತೀಯ ಸೈನ್ಯಕ್ಕೆ ಸೇವೆಸಲ್ಲಿಸಿತ್ತು. ಬಿಪಿನ್ ರಾವತ್ ತಂದೆಯ ಲಕ್ಷ್ಮಣ ಸಿಂಗ್ ರಾವತ್ ಸಹ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಕರ್ತವ್ಯ ನಿರ್ವಹಣೆ ಮಾಡಿದರು. ಇಷ್ಟೇ ಅಲ್ಲದೆ ಬಿಪಿನ್ ರಾವತ್ ಅವರ ಚಿಕ್ಕಪ್ಪ ಹರಿನಂದನ್, ಭರತ್ ಸಿಂಗ್ ರಾವತ್ ಅವರು ಭಾರತೀಯ ಸೈನ್ಯದಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಣೆ ಮಾಡಿ ನಿವೃತ್ತಿ ಗೊಂಡಿದ್ದರು.. ಅಲ್ಲದೇ ಇವರ ಮಕ್ಕಳು ಸಹ ಭಾರತೀಯ ಸೈನ್ಯದಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.
ಭಾರತೀಯ ಸೈನ್ಯಕ್ಕೆ ರಾವತ್ ಕೊಡುಗೆ
1987ರಲ್ಲಿ ಅರುಣಾಚಲ ಪ್ರದೇಶದ ಸುಮದೊರೋಂಗ್ ಚು ಕಣಿವೆಯಲ್ಲಿ ಚೀನಾ ಮತ್ತು ಭಾರತ ಸೇನೆ ಮುಖಾಮುಖಿಯಾದಾಗ ಬಿಪಿನ್ ರಾವತ್ ನೇತೃತ್ವದ ಬಟಾಲಿಯನ್ ಪ್ರಮುಖ ಪಾತ್ರ ವಹಿಸಿತ್ತು. 2015ರಲ್ಲಿ ಮಯನ್ಮಾರ್ನಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲೂ ಬಿಪಿನ್ ರಾವತ್ ಅವರ ಪಾತ್ರವಿತ್ತು. ಕಾಂಗೋದಲ್ಲಿ ವಿಶ್ವಸಂಸ್ಥೆಯ ಪರವಾಗಿ ಹೋದ ಭಾರತೀಯ ಸೇನಾ ಪಡೆಯ ನೇತೃತ್ವವನ್ನು ರಾವತ್ ಅವರೇ ವಹಿಸಿದ್ದರು. ಹಲವು ಸೇನಾನುಭವ ಮತ್ತು ಯುದ್ಧಾನುಭವ ಹೊಂದಿರುವ ಬಿಪಿನ್ ರಾವತ್ ಬಗ್ಗೆ ಮೋದಿ ಸರ್ಕಾರ ಸಹಜ ಒಲವು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರದ ನಿಲುವಿಗೆ ಪೂರಕವಾದ ಹೇಳಿಕೆಗಳನ್ನೂ ರಾವತ್ ನೀಡುತ್ತಾ ಬಂದಿದ್ದರು.