ಕೆರೆ ಕೋಡಿ ನಿಂತ ಮೇಲೆ ಕೇಳೋರಿಲ್ಲ; ಏರಿ ಗುಂಡಿಗಳಲ್ಲಿ ಬೀಳದವರಿಲ್ಲ
ರಸ್ತೆ ದುರಸ್ಥಿಗೆ ಮುಂದಾಗದ ಅಧಿಕಾರಿಗಳು
by GS Bharath Gudibande
ಗುಡಿಬಂಡೆ: ನಿರಂತರವಾಗಿ ಕೆಲ ತಿಂಗಳ ಕಾಲ ಉಕ್ಕಿ ಹರಿದ ಇಲ್ಲಿನ ಅಮಾನಭೈರ ಸಾಗರ ಕೆರೆ ಕೋಡಿ ಈಗ ಕೆರೆಯಂತಾಗಿದೆ.
ಕೆರೆ ಏರಿ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದು ಮಿನಿಕೆರೆ ನಿರ್ಮಾಣವಾಗಿದೆ. ಎಲ್ಲೆಲ್ಲಿ ಗುಂಡಿಗಳಿವೆ ಎಂದು ತಿಳಿಯದೇ ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ. ಕೊಂಚ ಎಚ್ಚರ ತಪ್ಪಿದರೆ ಕೆಳಗೆ ಬೀಳುವುದು ಖಚಿತ. ಈಗಾಗಲೇ ಅನೇಕ ದ್ವಿಚಕ್ರ ವಾಹನ ಸವಾರರು ಎದ್ದುಬಿದ್ದು ಹೋಗಿದ್ದಾರೆಂದು ಗೊತ್ತಾಗಿದೆ.
ಗುಡಿಬಂಡೆಗೆ ಬೀಚಗಾನಹಳ್ಳಿ, ಪೋಲಂಪಲ್ಲಿ, ಪೆರೇಸಂದ್ರ, ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿರುವ ಅಮಾನಿ ಭೈರಸಾಗರ ಕೆರೆ ಏರಿ ರಸ್ತೆ ಕುಸಿದು ಬೀಳುವ ಹಂತ ತಲುಪಿದ್ದು, 3-4 ಅಡಿ ಆಳದ ಗುಂಡಿಗಳನ್ನು ತಪ್ಪಿಸಿ ಸಂಚಾರ ಮಾಡುವುದೇ ಸಾಹಸವಾಗಿದೆ ಎನ್ನುತ್ತಾರೆ ವಾಹನ ಸವಾರರು.
ಈ ಹಿಂದೆಯೇ ಸಿಕೆನ್ಯೂಸ್ ನೌ ಈ ಬಗ್ಗೆ ವಿಸ್ತೃತವಾದ ವರದಿಗಳನ್ನು ಪ್ರಕಟಿಸಿತ್ತು. ಆಗ ಕೋಡಿ ಉಕ್ಕಿ ಹರಿಯುತ್ತಿದ್ದ ಪರಿಣಾಮ ಅಧಿಕಾರಿಗಳು ಗುಂಡಿಗಳು ಬಿದ್ದಿರುವ ಜಾಗದಲ್ಲಿ ಕೋಲುಗಳನ್ನು, ಕೆಂಪು ಬಾವುಟಗಳನ್ನು ಹಾಕಿ ಎಚ್ಚರಿಕೆ ಮೂಡಿಸಿದ್ದರು.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಮಳೆಯಿಂದ ಗುಂಡಿಗಳಲ್ಲಿ ನೀರು ತುಂಬಿಕೊಂಡದ್ದು, ಗುಂಡಿಯ ಆಳ ತಿಳಿಯದೇ ವಾಹನಗಳಲ್ಲಿ ಬಿದ್ದ ಸವಾರರು ಆಸ್ಪತ್ರೆ ಸೇರುತ್ತಿದ್ದಾರೆ. ಈ ರಸ್ತೆಯಲ್ಲಿ ಬರುವ ಹೊಸ ಸವಾರರಿಗೆ ಗುಂಡಿಗಳು ಎಎಲ್ಲಿವೆ ಎಂಬುದು ಗೊತ್ತಾಗುತ್ತಿಲ್ಲ. ಗುಂಡಿಗಳಲ್ಲಿ ಬಿದ್ದು ಕೈ ಕಾಲು ಮುರಿದು ಕೊಳ್ಳುವ ಸ್ಥಿತಿ ಉಂಟಾಗಿದೆ. ದ್ವಿಚಕ್ರ ವಾಹನಗಳಿಗಂತೂ ಈ ಗುಂಡಿಗಳು ಯಮಗುಂಡಿಗಳಾಗಿವೆ. ಆದರೂ ಅಧಿಕಾರಿಗಳು ಕೋಡಿ ನಿಂತ ಮೇಲೆಯೂ ಇತ್ತ ಗಮನ ಹರಿಸಿಲ್ಲ.
ಅಧಿಕಾರಿಗಳ ಮಾತು ಎಲ್ಲಿಗೆ ಹೋಯ್ತು?
ಕಳೆದ ಕೆಲ ದಿನಗಳಲ್ಲಿ ಸುರಿದ ವರುಣನ ಅಬ್ಬರಕ್ಕೆ, ಕೆರೆ ಕುಂಟೆಗಳು ತುಂಬಿ, ಒಡೆದು ಹೋಗಿ ದೊಡ್ಡ ಅವಾಂತರವೇ ಸೃಷ್ಟಿಯಾಗಿತ್ತು. ಆಗ ಸಣ್ಣ ನೀರಾವರಿ ಅಧಿಕಾರಿಗಳು, ಜಿಲ್ಲಾಡಳಿತ, ತಾಲೂಕು ಆಡಳಿತ ಮಳೆ ನೀರು ನಿಂತ ತಕ್ಷಣವೇ ಕೆರೆ ಏರಿ ರಸ್ತೆ ಸರಿಪಡಿಸುತ್ತೇವೆ ಎಂದಿದ್ದರು, ಆದರೆ ಇಂದಿಗೂ ಇತ್ತ ಯಾರೂ ಮುಖ ಮಾಡಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಶಾಸಕರು ಬಾಗೇಪಲ್ಲಿಗಷ್ಟೇ ಸೀಮಿತ
ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸದಾ ಬಾಗೇಪಲ್ಲಿಯೇ ಬ್ಯುಸಿಯಾಗಿರುತ್ತಾರೆ. ಗುಡಿಬಂಡೆಯಲ್ಲಿ ಅನೇಕ ಸಮಸ್ಯೆಗಳು ಇದ್ದರೂ ಕೂಡಲೇ ಸರಿಪಡಿಸುತ್ತೇವೆ ಎಂದು ಆಯಾ ಸಂದರ್ಭಗಳಲ್ಲಿ ಹೇಳಿಕೆ ನೀಡುತ್ತಾರೆ. ಆದರೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿ ಕೋಡಿ ರಸ್ತೆಯನ್ನು ಸರಿಪಡಿಸುವ ಕೆಲಸ ಮಾಡಿಲ್ಲ ಎಂದು ಸಿಪಿಎಂ, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಆರೋಪ ಮಾಡುತ್ತಿದ್ದಾರೆ.
ಯಾರು ಏನಂತಾರೆ?
ಗುಡಿಬಂಡೆ ತಾಲೂಕು ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಇದೇ ಎಂಬುದನ್ನು ಶಾಸಕರು ಮರೆತಿದ್ದಾರೆ. ಸದಾ ಬಾಗೇಪಲ್ಲಿಯಲ್ಲಿ ಅಭಿವೃದ್ಧಿ, ಕಾಮಗಾರಿ, ಜನತಾ ದರ್ಶನ ಅಂತ ಬ್ಯುಸಿ ಇರುತ್ತಾರೆ. ಗುಡಿಬಂಡೆ ಸಮಸ್ಯೆಗಳ ಬಗ್ಗೆ ಅವರು ಸ್ವಲ್ಪ ಗಮನಿಸಬೇಕು. ಗುಡಿಬಂಡೆ ಮತದಾರರು ಅವರಿಗೆ ಮತ ಹಾಕಿದ್ದಾರೆ. ಅವರು ಕೇವಲ ಬಾಗೇಪಲ್ಲಿ ತಾಲೂಕಿಗೆ ಸೀಮಿತವಾಗಬಾರದು.
ಪಿ.ಸಿ.ಮಂಜುನಾಥರೆಡ್ಡಿ, ಮಾಜಿ ಸದಸ್ಯರು, ಗುಡಿಬಂಡೆ ತಾಲೂಕು ಪಂಚಾಯತಿ
ದ್ವಿಚಕ್ರ ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಬಿದ್ದು ಗಾಯಗಳನ್ನು ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ. ಗುಡಿಬಂಡೆಗೆ ಮುಖ್ಯಮಂತ್ರಿ ಭೇಟಿ ನೀಡುತ್ತಾರೆ ಎಂದಾಗ ಅಧಿಕಾರಿಗಳು ಕೆರೆ ಕೋಡಿಯಲ್ಲಿ ಲೈಟ್ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿದ್ದರು. ಆದರೆ ಕಾಮನ್ʼಮ್ಯಾನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಅತ್ಯಂತ ಹಿಂದುಳಿದ ಗುಡಿಬಂಡೆ ತಾಲೂಕಿಗೆ ಮುಖ ಮಾಡಿಲ್ಲ.
ನವೀನ್ ರೆಡ್ಡಿ, ಬೈಕ್ ಸವಾರ
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..