ಸಾಯಿ ಪಲ್ಲವಿ ಬಗ್ಗೆ ಪ್ರೇಕ್ಷಕರು ಫಿದಾ
ಹೈದರಾಬಾದ್: ಹಿಂದೆ ಸೂಪರ್ಸ್ಟಾರ್ ರಜನೀಕಾಂತ್ ಮಾರು ವೇಷದಲ್ಲಿ ಬೆಂಗಳೂರಿನಲ್ಲಿ ಸಂಚಾರ ಮಾಡುತ್ತಿದ್ದರು ಎಂದು ಕೇಳಿದ್ದೇವೆ. ಗೆಳೆಯರನ್ನು ನೋಡಲು ಬರುತ್ತಿದ್ದ ಅವರು ಬೇರೆ ಬೇರೆ ವೇಷಗಳನ್ನು ಧರಿಸುತ್ತಿದ್ದರು ಎಂದು ಅನೇಕರು ಹೇಳುತ್ತಿದ್ದರು.
ಈಗ ಟಾಲಿವುಡ್ ಟಾಪ್ ನಟಿ ಸಾಯಿ ಪಲ್ಲವಿ ತಾವು ನಟಿಸಿರುವ ʼಶ್ಯಾಮ್ ಸಿಂಹ ರಾಯ್ʼ ಸಿನಿಮಾವನ್ನು ಬುರ್ಖಾ ಧರಿಸಿ, ಪ್ರೇಕ್ಷಕರ ಮಧ್ಯೆಯೇ ಕುಳಿತು ಥಿಯೇಟರ್ʼನಲ್ಲಿ ನೋಡಿದ್ದಾರೆ. ತಮ್ಮ ಪಕ್ಕದಲ್ಲೇ ಕೂತು ಸಿನಿಮಾ ನೋಡಿದ ನಟಿಯನ್ನು ಪತ್ತೆ ಹಚ್ಚುವುದು ಸಹ ಪ್ರೇಕ್ಷಕರಿಗೆ ಸಾಧ್ಯವಾಗಿಲ್ಲ.
ಆದರೆ; ಸಾಯಿ ಪಲ್ಲವಿ ಬುರ್ಖಾ ಧರಿಸಿ ಸಿನಿಮಾ ನೋಡುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಅಲ್ಲದೆ; ಸಿನಿಮಾ ನೋಡಿದ ನಂತರ ಥಿಯೇಟರ್ʼನಿಂದ ಹೊರಬಂದ ಅವರು ಕಾರು ಹತ್ತುವ ಮುನ್ನ ಬುರ್ಖಾ ಸರಿಸಿ ತಮ್ಮ ಮುಖ ತೋರಿಸಿದ್ದಾರೆ.
‘ಶ್ಯಾಮ್ ಸಿಂಹ ರಾಯ್’ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ನಾನಿ ದ್ವಿಪಾತ್ರದಲ್ಲಿ ನಟಿಸಿದ್ದರೆ, ರಾಹುಲ್ ಸಂಕೃತ್ಯನ್ ನಿರ್ದೇಶನದಲ್ಲಿ ಸಾಯಿ ಪಲ್ಲವಿ ‘ದೇವದಾಸಿ’ಯಾಗಿ ಕಾಣಿಸಿಕೊಂಡಿದ್ದಾರೆ.