ಸಚಿವ ಜೆ.ಸಿ.ಮಾಧುಸ್ವಾಮಿಗೆ ಪಾಸಿಟಿವ್
ಬೆಂಗಳೂರು: ಕೋವಿಡ್ ಮೂರನೇ ಅಲೆಯ ಅಬ್ಬರ ಮಿತಿ ಮೀರಿದೆ. ಸಚಿವ ಆರ್.ಅಶೋಕ್ ಅವರಿಗೆ ಸೋಂಕು ವಕ್ಕರಿಸಿದ ಬೆನ್ನಲ್ಲೇ ಸಚಿವರಿಗೆ ಸಾಲು ಸಾಲಾಗಿ ಸೋಂಕು ತಗುಲುತ್ತಿದೆ.
ಮೊದಲ, ಎರಡನೇ ಅಲೆಗಿಂತ ಮೂರನೇ ಅಲೆ ತೀವ್ರವಾಗಿ ಹಬ್ಬುತ್ತಿದ್ದು, ಜನರು ಕೂಡ ಅಂಕೆ ಇಲ್ಲದೆ ಮನಸೋ ಇಚ್ಚೆ ಓಡಾಡುತ್ತಿದ್ದಾರೆ. ಕಾಂಗ್ರೆಸ್ ಪಾದಯಾತ್ರೆ ಒಂದೆಡೆ ನಡೆಯುತ್ತಿದ್ದರೆ, ಬಿಜೆಪಿ ಕಾರ್ಯಕ್ರಮಗಳು ವ್ಯಾಪಕವಾಗಿ ನಡೆಯುತ್ತಿವೆ.
ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್-19 ದೃಢಪಟ್ಟಿತ್ತು. ಮಂಗಳವಾರ ಹಿರಿಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಜತೆಗೆ, ಮಾಧುಸ್ವಾಮಿ ಅವರ ಪುತ್ರಿಗೂ ಪಾಸಿಟಿವ್ ಬಂದಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೊಂದೆಡೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ಅವರೂ ಸೋಂಕಿಗೆ ತುತ್ತಾಗಿ ಐಸೋಲೇಷನ್ ಆಗಿದ್ದಾರೆ.
ವಿಚಿತ್ರವೆಂದರೆ; ಮುಖ್ಯಮಂತ್ರಿ ಸುತ್ತ ದಿನಪೂರ್ತಿ ಗಿರಕಿ ಹೊಡೆಯುವ ಕೆಲ ಸಚಿವರು ಈವರೆಗೂ ಸೋಂಕು ಪರೀಕ್ಷೆ ಮಾಡಿಸಿಕೊಂಡಿಲ್ಲ. ಆದರೆ, ಅತಿ ಹೆಚ್ಚು ಮುಖ್ಯಮಂತ್ರಿ ಜತೆಯಲ್ಲೇ ಇರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸ್ವಯಂ ಕ್ವಾರಂಟೈನ್ʼಗೆ ಒಳಗಾಗಿದ್ದಾರೆ.
ಉಳಿದಂತೆ ಮುಖ್ಯಮಂತ್ರಿಗಳ ನೇರ ಸಂಪರ್ಕದಲ್ಲಿದ್ದು, ಅವರು ಕರೆದಿದ್ದ ಸಭೆಗಳಲ್ಲಿ ಪಾಲ್ಗೊಂಡಿದ್ದ ವಿವಿಧ ಸಚಿವರು, ಅಧಿಕಾರಿಗಳು ಈಗ ಸೋಂಕಿನ ಆತಂಕದಲ್ಲಿದ್ದಾರೆ.