ನಿರುದ್ಯೋಗ, ಹಣಕಾಸು ಸಮಸ್ಯೆ, ಮಾನಸಿಕ ಒತ್ತಡಕ್ಕೆ ಸಿಲುಕುತ್ತಿರುವ ಯುವಜನತೆ
by GS Bharath Gudibande
ಗುಡಿಬಂಡೆ: ಕಳೆದ ಎರಡು ವರ್ಷಗಳಿಂದ ಕೋವಿಡ್ ಸೋಂಕು ಕಾರಣಕ್ಕೆ ಎಲ್ಲರೂ ಕಂಗಾಲಾಗಿದ್ದರು. ಪ್ರತಿಯೊಬ್ಬರ ಜೀವನವೂ ಹಳಿತಪ್ಪಿ ಕಷ್ಟಕ್ಕೆ ಸಿಲುಕಿದ್ದರು. ಆದರೆ ಈಗ ಸಾಲದ ಶೂಲವೋ ಅಥವಾ ಮಾನಸಿಕ ಒತ್ತಡವೋ ಯುವಕರು ಆತ್ಮಹತ್ಯೆಗೆ ಶರಣಾಗುವ ಘಟನೆಗಳು ಹೆಚ್ಚಾಗುತ್ತಿದ್ದು, ಪೋಷಕರು ದಿಗ್ಭ್ರಾಂತರಾಗಿದ್ದಾರೆ.
ತಾಲೂಕಿನಲ್ಲಿ ಕೆಲ ಯುವಕರು ಮಾನಸಿಕ ಒತ್ತಡ ತಾಳಲಾರದೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.
ಇತ್ತೀಚೆಗಷ್ಟೇ ಗುಡಿಬಂಡೆಯ ಇಬ್ಬರು ಯುವಕರು ಆತ್ಮಹತ್ಯ ಮಾಡಿಕೊಂಡಿದ್ದು, ಇದರಿಂದ ತಾಲೂಕಿನ ಕೆಲ ಯುವಕರು ಮತ್ತು ಪೋಷಕರಲ್ಲಿ ಖಿನ್ನತೆಗೆ ಕಾರಣವಾಗಿದೆ. ಅಧಿಕಾರಿಗಳು ಯುವಕರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ.
ನಾನಾ ಕಾರಣಗಳಿಂದ ದೇಶ, ರಾಜ್ಯದಲ್ಲಿ ಯುವಕರ ಆತ್ಮಹತ್ಯೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ. ಸಣ್ಣಪುಟ್ಟ ಸಮಸ್ಯೆಗಳು ಯುವಕರನ್ನು ಕಂಗೆಡಿಸುತ್ತಿವೆ. ಜೀವನದಲ್ಲಿ ಸಮಸ್ಯೆಗಳು ಸಾಮಾನ್ಯ. ಪ್ರತೀ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಆದರೆ ಕೋಪ, ಖಿನ್ನತೆ, ಅವಿವೇಕದಿಂದ ದುಡುಕು ನಿರ್ಧಾರ ತೆಗೆದುಕೊಳ್ಳಬಾರದು. ಇಂದು ದೊಡ್ಡ ಬೆಟ್ಟದಂತೆ ಕಾಣುವ ಸಮಸ್ಯೆ, ನಾಳೆ ಸಣ್ಣ ಪ್ರಾಬ್ಲಂ ಎನಿಸಬಹುದು. ಸ್ವಾರ್ಟಾಗಿ ಕುಳಿತು ಯೋಚಿಸಿದರೆ ಆ ಸಮಸ್ಯೆ ಚಿಟಿಕೆ ಹೊಡೆಯುವದರಲ್ಲಿ ಪರಿಹಾರ ಆಗಬಹುದು. ಹಾಗಾಗಿ ನಮ್ಮ ಸಮಸ್ಯೆಗಳ ಬಗ್ಗೆ ನಮಗೆ ಅರಿವು ಇರಬೇಕು, ತಾಳ್ಮೆ ಹೆಚ್ಚು ಮುಖ್ಯ. ಆರೋಗ್ಯಕರ ಚಿಂತನೆ, ಒಳ್ಳೆಯ ಅಭ್ಯಾಸಗಳು, ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಜೀವ ತೆಗೆದುಕೊಳ್ಳುವ ಸನ್ನಿವೇಶ ಬರುವುದಿಲ್ಲ. ನಾವೆಲ್ಲರೂ ಸಂಘಜೀವಿಗಳು ಎನ್ನುವುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಯುವಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸಮಾಡಬೇಕು ಎನ್ನುವುದು ಸಿಕೆನ್ಯೂಸ್ ನೌ ಕಳಕಳಿಯಾಗಿದೆ. ಇದಕ್ಕೆ ಸಾಥ್ ಕೊಡಲು ಸಿಕೆನ್ಯೂಸ್ ನೌ ಸದಾ ಸಿದ್ಧವಾಗಿರುತ್ತದೆ.
ಆತ್ಮಹತ್ಯೆ ತಡೆಗಟ್ಟುವುದು ಹೇಗೆ?
ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಮಾನಸಿಕ ಖಿನ್ನತೆಗೆ ಹಲವು ಕಾರಣಗಳಿವೆ. ನಮ್ಮ ಜೀವನಶೈಲಿ ಎಲ್ಲವೂ ತುಂಬಾ ಫಾಸ್ಟ್ ಆಗಿದೆ. ಅದನ್ನು ಸ್ವಲ್ಪ ನಿಧಾನ ಮಾಡಬೇಕು. ಅಭಿವೃದ್ಧಿ, ತಂತ್ರಜ್ಞಾನ ನಮ್ಮನ್ನು ಸಂಪೂರ್ಣ ನಿಯಂತ್ರಣ ಮಾಡಲು ಬಿಟ್ಟಿದ್ದೇವೆ. ನಮ್ಮ ಭಾರತೀಯ ಪರಂಪರೆಯಂತೆ ಹಬ್ಬ, ಹರಿದಿನಗಳ ಆಚರಣೆ, ಪೌಷ್ಠಿಕ ಆಹಾರ, ಕ್ರೀಡೇಗಳು, ಧ್ಯಾನ, ಯೋಗ, ಆರ್ಯುವೇದ, ಒಳ್ಳೆಯ ಆಲೋಚನೆ.. ಇವುಗಳನ್ನು ನಾವು ಪಾಲಿಸುವುದಿಲ್ಲ. ಎಲ್ಲರೂ ಇಂಥ ಅಂಶಗಳನ್ನು ಜೀವನದ ಒಂದು ಭಾಗವಾಗಿ ಮಾಡಿಕೊಳ್ಳಬೇಕು ಎಂದು ತಾಲೂಕು ವೈಧ್ಯಾಧಿಕಾರಿ ಡಾ.ನರಸಿಂಹ ಮೂರ್ತಿ ಯುವಕರಿಗೆ ಹೇಳುವ ಕಿವಿಮಾತು.
ಓಡುತ್ತಿರುವ ಈ ಜಗತ್ತಿನಲ್ಲಿ ಯಾರಿಗೂ ಸಮಯವೇ ಇಲ್ಲ ಎಂಬ ಮಾತಿದೆ. ಬಯಸಿದ್ದು ಸಿಗದಿರುವುದು, ಅವಮಾನ ಸಹಿಸಿಕೊಳ್ಳದಿರುವುದು, ಕೆಲಸದ ಒತ್ತಡ, ಖಿನ್ನತೆ, ಕುಟುಂಬದಿಂದ ದೂರದಲ್ಲಿರುವುದು, ಸ್ನೇಹಿತರ ಚಿಂತೆ, ಆರೋಗ್ಯದ ಕಡೆ ಗಮನ ಕೊಡದಿರುವುದು, ಹಣಕಾಸು ಮತ್ತು ಕೆಲಸದ ಒತ್ತಡ, ಜತೆಗೆ ಭವಿಷ್ಯದ ಅನಿಶ್ಚಿತತೆಯ ಬಗ್ಗೆ ಚಿಂತೆ.. ಹೀಗೆ ಒಂದಾ, ಎರಡಾ? ಸಮಸ್ಯೆಗಳ ಆಗರವನ್ನೇ ಮನುಷ್ಯ ತಾನಾಗಿಯೇ ಕಟ್ಟಿಕೊಂಡಿದ್ದಾನೆ. ಇವುಗಳಿಂದ ಹೊರ ಬರಲಾಗದೇ ಆತ್ಮಹತ್ಯೆಯ ಬಗ್ಗೆ ಅಲೋಚನೆ ಮಾಡುತ್ತಾನೆ. ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು, ಧ್ಯಾನ ಯೋಗ, ಆರ್ಯುವೇದ ಹೀಗೆ ನಮ್ಮ ಸಂಪ್ರದಾಯದ ಬಗ್ಗೆ ಗಮನ ನೀಡಬೇಕು. ಯುವಕರಿಗೆ ಧೈರ್ಯ ತುಂಬುವ ವಿಶೇಷ ಕಾರ್ಯಗಾರವನ್ನು ಶೀಘ್ರದಲ್ಲಿಯೇ ಮಾಡುತ್ತೇವೆ.
ಡಾ.ನರಸಿಂಹಮೂರ್ತಿ, ತಾಲೂಕು ಆರೋಗ್ಯ ವೈದ್ಯಾಧಿಕಾರಿ, ಗುಡಿಬಂಡೆ
ಮನುಷ್ಯ ಹುಟ್ಟುವಾಗ ಹೋರಾಟ ನಡೆಸಿಯೇ ಹುಟ್ಟುತ್ತಾನೆ. ಹೀಗಿರುವಾಗ ಜೀವನದಲ್ಲಿ ಬರುವ ಸಮಸ್ಯೆಗಳೆಲ್ಲವೂ ಎಂದಿಗೂ ದೊಡ್ಡದಲ್ಲ. ಪ್ರತೀ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಆದರೆ; ಕೋಪ, ಖಿನ್ನತೆಯಲ್ಲಿ ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಇಂದು ದೊಡ್ಡ ಬೆಟ್ಟವಾಗಿ ಕಾಣುವ ಸಮಸ್ಯೆಗಳು ನಾಳೆ ಕುಳಿತು ಯೋಚಿಸಿದರೆ ಅದು ಸಮಸ್ಯೆಯೇ ಎನ್ನಿಸುವುದಿಲ್ಲ. ಗುಡಿಬಂಡೆ ತಾಲೂಕಿನಲ್ಲಿ ಜೀವನಾಧಾರಕ್ಕೆ, ನಿರುದೋಗ ನಿವಾರಣೆಗೆ ಯಾವುದೇ ಕಾರ್ಖಾನೆ ಅಥವಾ ಬೇರೆ ಏನೂ ಇಲ್ಲ. ನಮ್ಮ ಜನಪ್ರತಿನಿಧಿಗಳು ಹಲವು ದಶಕಗಳಿಂದ ಬರೀ ಸುಳ್ಳು ಆಶ್ವಾಸನೆಗಳು ಕೊಡುತ್ತಿದ್ದಾರೆ ಅಷ್ಟೆ. ಇನ್ನಾದರೂ ಗುಡಿಬಂಡೆ ತಾಲೂಕಿನ ಜನರು ಎಚ್ಚೆತ್ತುಕೊಳ್ಳಬೇಕು. ಕನಿಷ್ಠ ನಮ್ಮ ಜೀವನ, ಆರ್ಥಿಕ ಶಕ್ತಿಯನ್ನು ಬದಲಿಸಿಕೊಳ್ಳುವ ರೀತಿಯಲ್ಲಿ ಜನಪ್ರತಿನಿಧಿಗಳು ಕೆಲಸ ಮಾಡಬೇಕು. ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ. ಅಧಿಕಾರಿಗಳು ತಾಲೂಕಿನಲ್ಲಿ ಸಕಾರಾತ್ಮಕ ಮನೋಭಾವ ವೃದ್ಧಿಸುವ ಕಾರ್ಯಗಾರ ಮಾಡಿ ಯುವ ಮನಸ್ಸುಗಳಿಗೆ ಧೈರ್ಯ ತುಂಬ ಕೆಲಸ ಮಾಡಬೇಕು.
ಆಶಾ ಜಯಪ್ಪ, ಮಾಜಿ ಅಧ್ಯಕ್ಷೆ, ತಾಲೂಕು ಪಂಚಾಯಿತಿ, ಗುಡಿಬಂಡೆ