ಹೂವಿನ ಕರಗ ಹೊತ್ತು ಹೆಜ್ಜೆಹಾಕಿದ ಬಾಲಾಜಿ ಸ್ವಾಮಿ; ವಿಶೇಷ ಪೂಜೆ, ಹಾಡುಗಳ ಮೂಲಕ ಕಣ್ಣುತುಂಬಿಕೊಂಡ ಜನಸಾಗರ
ಬಾಗೇಪಲ್ಲಿ ಶಾಸಕರಿಗೆ ಟಾಂಗ್ ಕೊಟ್ಟ ಮಿಥುನ್ ರೆಡ್ಡಿ
by GS Bharath Gudibande
ಗುಡಿಬಂಡೆ: ಪಟ್ಟಣದ ಪ್ರತಿ ಮನೆಗಳ ಮುಂದೆ ರಂಗಿನ ರಂಗೋಲಿ, ಮಾವಿನ ತೋರಣದಿಂದ ಸಿಂಗಾರಗೊಂಡ ಬೀದಿಗಳು.. ಜತೆಗೆ ತಾಲೂಕಿನಾದ್ಯಾಂತ ಹಬ್ಬದ ಸಡಗರ ಮನೆ ಮಾಡಿತ್ತು, ರಾತ್ರೀ ಇಡೀ ಜನಸಾಗರದಲ್ಲಿ ಕರಗವನ್ನು ನೋಡುವ ಉತ್ಸಾಹ ಕಡಿಮೆಯಾಗಿರಲಿಲ್ಲ.
ಸುಮಾರು ಎರಡು ವರ್ಷಗಳ ನಂತರ ಪಟ್ಟಣದಲ್ಲಿ ಕರಗ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪಟ್ಟಣದ ಸೊಪ್ಪಿನ ಪೇಟೆಯ ಜಾಲಾರಿ ಸಪ್ಪಲ್ಲಮ್ಮ ದೇವಿ ಹೂವಿನ ಕರಗ ಮಹೋತ್ಸವ ಕಾರ್ಯಕ್ರವನ್ನು ದೇವಸ್ಥಾನದ ಟ್ರಸ್ಟಿ, ಸಮಾಜ ಸೇವಕ ಮಿಥುನ್ ರೆಡ್ಡಿ ಮತ್ತು ತಂಡದವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಜಾಲಾರಿ ಸಪ್ಪಲಮ್ಮ ದೇವಸ್ಥಾನದಿಂದ ಹೂವಿನ ಕರಗ ಹೊರಬಂದ ಕೂಡಲೇ ಪಟ್ಟಣದ ಜನಸಾಗರ ಜೈಕಾರ ಹಾಕಿದರು. ಟಮಟೆಯ ನಾದಕ್ಕೆ ಭಕ್ತಪರವಶರಾಗಿ ಕರಗ ಹೊತ್ತ ಬಾಲಾಜಿ ಸ್ವಾಮಿಗಳು ನೃತ್ಯ ಮಾಡುವ ಮೂಲಕ ಎಲ್ಲರನ್ನೂ ಭಾವಪರವಶರನ್ನಾಗಿ ಮಾಡಿದರು.
ಈ ವೇಳೆ ಸಮಾಜ ಸೇವಕ ಹಾಗೂ ಬಾಗೇಪಲ್ಲಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಿಥುನ್ ರೆಡ್ಡಿ ಕರಗ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಗುಡಿಬಂಡೆ ಪಟ್ಟಣದಲ್ಲಿ ಎರಡು ವರ್ಷಗಳ ನಂತರ ಹೂವಿನ ಕರಗ ಮಹೋತ್ಸವ ಮಾಡುತ್ತಿರುವುದು ಸಂತೋಷವಾಗಿದೆ. 2005ರಲ್ಲಿ ದಿವಂಗತ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಏನು ಅಭಿವೃದ್ದಿ ಮಾಡಿದ್ದರೂ ಅಷ್ಟೇ, ಅದನ್ನು ಹೊರತುಪಡಿಸಿದರೆ ಬೇರೆಯವರು ಮಾಡಿರುವ ಅಭಿವೃದ್ಧಿ ಏನು? 300 ಎಕರೆ ಜಮೀನನ್ನು ಕೈಗಾರಿಕೆಗಳ ಸ್ಥಾಪನೆಗೆ ಮೀಸಲಿಡಲಾಗಿತ್ತು. ಈಗ 700 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆದರೆ, ಇದುವರೆಗೂ ಯಾವುದೇ ಅಭಿವೃದ್ದಿಯಾಗಿಲ್ಲ. ಬಾಗೇಪಲ್ಲಿ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದರೂ ಅದನ್ನು ಹೋಗಲಾಡಿಸುವ ಪ್ರಯತ್ನವನ್ನು ಶಾಸಕರು ಮಾಡಿದ್ದಾರಾ? ಎಂದು ನೇರವಾಗಿ ಪ್ರಶ್ನೆ ಮಾಡಿದರು.
ಕರಗದ ಮತ್ತಷ್ಟು ಚಿತ್ರಗಳನ್ನು ನೋಡಲು ಈ ಕೆಳಗಿನ ಸ್ಲೈಡ್ ಶೋ ನೋಡಿ...
ಹೆಣ್ಣುಮಕ್ಕಳು ಕೆಲಸ ಹುಡಿಕಿಕೊಂಡು ಹೋಗಬೇಕು
ಬಾಗೇಪಲ್ಲಿ, ಗುಡಿಬಂಡೆ ತಾಲೂಕಿನ ಹೆಣ್ಣುಮಕ್ಕಳು, ಯುವಕರು ಕೆಲಸಕ್ಕಾಗಿ ಪಕ್ಕದ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಕ್ಕೆ ಬೆಳಗ್ಗೆ 5 ಗಂಟೆಗೆ ಎದ್ದು ಹೊಗುವ ಪರಿಸ್ಥಿತಿ ಇದೆ. ಇದುವರೆಗೂ ಗುಡಿಬಂಡೆಯಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಲ್ಲ. ಇನ್ನು ಮುಂದೆ ಆ ಜವಾಬ್ದಾರಿಯನ್ನು ನಾನು ಹೊತ್ತುಕೊಂಡು ತಕ್ಷಣಕ್ಕೆ 500 ಜನ ಹೆಣ್ಣುಮಕ್ಕಳು ಕೆಲಸ ಮಾಡುವ ಗಾರ್ಮೆಂಟ್ಸ್ ಮಾಡಿಸಲು ಶೀಘ್ರದಲ್ಲಿ ಭೂಮಿಪೂಜೆ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಪಿಎಸೈ ಪರೀಕ್ಷೆ ಶುಲ್ಕ ಕೊಡುತ್ತೇನೆ
ಸುಮಾರು ಜನರು ಕ್ಷೇತ್ರಕ್ಕೆ ಬರುತ್ತಾರೆ. ನಾನು ಸಮಾಜ ಸೇವೆ ಮಾಡುತ್ತೇನೆ, ನಾನು ಅಭ್ಯರ್ಥಿ ಅಂತ ಬರುತ್ತಾರೆ. ಆದರೆ, ಹಣ ಕೊಟ್ಟು ಗೆದ್ದುಕೊಂಡು ಹೋಗುತ್ತಾರೆ ವಿನಾ ಇಲ್ಲಿನ ಜನರಿಗೆ ಯಾರೂ ಕೆಲಸ ಮಾಡಿಕೊಟ್ಟಿಲ್ಲ. ಪಿಸಿ, ಪಿಎಸೈ ಪರೀಕ್ಷೆ ಬರೆಯಲು 500 ರಿಂದ 800 ರೂಪಾಯಿ ಪರೀಕ್ಷೆ ಶುಲ್ಕ ಕಟ್ಟಲು ಸಾಧ್ಯವಾಗದೆ ನೂರಾರು ಬಡ ವಿದ್ಯಾಥಿಗಳು ಹಿಂದೆ ಉಳಿಯುತ್ತಿದ್ದಾರೆ. ಅಂತಹ ಎಷ್ಟೇ ಅಭ್ಯರ್ಥಿಗಳಿದ್ದರೂ ಅವರಿಗೆ ನಾನು ಸಂಪೂರ್ಣ ಪ್ರೋತ್ಸಾಹ ನೀಡುತ್ತೇನೆ ಎಂದು ಯುವಕರಿಗೆ ಧೈರ್ಯ ತುಂಬಿದರು.
ಕೆಲಸಕ್ಕೆ ಬದಲು ಬಾರ್ʼಗಳನ್ನು ಕೊಟ್ಟ ಶಾಸಕರು!!
ಈ ಕ್ಷೇತ್ರದಲ್ಲಿ ಓದಲು ಉತ್ತಮ ಶಾಲಾ ಕಾಲೇಜುಗಳಿಲ್ಲ. ಉತ್ತಮ ಆಸ್ಪತ್ರೆಗಳಿಲ್ಲ. ರೈತರ ಬಳಿ ಜಮೀನುಗಳನ್ನು ಕಿತ್ತುಕೊಂಡು ಕೈಗಾರಿಕೆಗಳಿಗೆ ಕೊಡುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದಂತೆ ಬೆಂಗಳೂರಿನಿಂದ ಸಮಾಜ ಸೇವಕರು ಸೂಟ್ಕೇಸ್ ತೆಗೆದುಕೊಂಡು ಬರುತ್ತಾರೆ ಅಂತ ಹೇಳುವ ಶಾಸಕರು, ಈವರೆಗೆ ಏನು ಸಮಾಜ ಸೇವೆ ಮಾಡಿದ್ದಾರೆ? 10 ವರ್ಷಗಳಿಂದ ಶಾಕರಾಗಿದ್ದಾರೆ. ಅವರು ಜನರಿಗೆ ಕೆಲಸ ಕೊಡಿ ಅಂದರೆ, ಕುಡಿಯಲ್ಲಿಕ್ಕೆ ಬಾರ್ʼಗಳನ್ನು ತೆರೆದು ಜನರನ್ನು ಹಾಳು ಮಾಡುತ್ತಿದ್ದಾರೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ವಿರುದ್ಧ ನೇರವಾಗಿ ಮಿಥುನ್ ರೆಡ್ಡಿ ಆರೋಪಿಸಿದರು.
ಕೋವಿಡ್ ಸಂದರ್ಭದಲ್ಲಿ ಎಲ್ಲಾ ಬಾರ್ʼಗಳನ್ನು ಮುಚ್ಚಲಾಗಿತ್ತು. ಅಂತಹ ಸಂದರ್ಭದಲ್ಲಿಯೂ ಮದ್ಯವನ್ನು ಬ್ಲಾಕ್‍ನಲ್ಲಿ ಮಾರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬರುವ ಅಭ್ಯರ್ಥಿಗಳ ಸಾವಿರ, ಎರಡು ಸಾವಿರ ಹಣ ಕೊಟ್ಟು ಓಟು ಹಾಕಿಸಿಕೊಳ್ಳುತ್ತಾರೆ. ಆದರೆ, ನೀವು ಪಡೆದ ಸಾವಿರ, ಎರಡು ಸಾವಿರ ರೂ. ಹಣ ಒಂದು ರಾತ್ರಿ ಕೂಡ ನಿಮ್ಮ ಬಳಿ ಇರುವುದಿಲ್ಲ. ಹಾಗಾಗಿ ಒಳ್ಳೆಯ ನಾಯಕನನ್ನು ಆಯ್ಕೆ ಮಾಡಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಜನರಲ್ಲಿ ಮನವಿ ಮಾಡಿಕೊಂಡರು.
ಚುನಾವಣೆ ಹತ್ತಿರ ಬರುತಿದ್ದಂತೆ ಯಾರಿಗೆ ಮನೆ, ಸೈಟುಗಳಿಲ್ಲ, ಅವರಿಗೆ ಸರಕಾರದಿಂದ ಬರುವ ಉಚಿತ ನಿವೇಶನಗಳನ್ನು ನೀಡಲು ಶಾಸಕರು ಪಟ್ಟಿ ರೆಡಿ ಮಾಡಿ ಇಟ್ಟುಕೊಂಡಿದ್ದಾರೆ. ನಾನು ಸೈಟು ಕೊಟ್ಟಿದ್ದೇನೆ, ಅದಕ್ಕೆಲ್ಲ ನೀವು ಮರಳಾಗಬೇಡಿ. ರಾಜ್ಯದ ರಾಜಧಾನಿಯಿಂದ ಕೇವಲ 80 ಕಿ.ಮೀ. ದೂರದಲ್ಲಿರುವ ಬಾಗೇಪಲ್ಲಿ ಕ್ಷೇತ್ರ ಭಾರೀ ಹಿಂದುಳಿದಿದೆ. ಜನರಿಗೆ ಕೆಲಸವಿಲ್ಲ, ರೈತರ ಜಮೀನು ಕೈಗಾರಿಕೆಗಾಗಿ ಸ್ವಾಧೀನ ಮಾಡಿಕೊಂಡು ಕಿತ್ತುಕೊಳ್ಳುತ್ತಿದ್ದಾರೆ. ಕ್ಷೇತ್ರದ ಜನರಿಗೆ ಏನೇ ಕಷ್ಟ-ಸುಖಗಳಿರಲಿ, ಜಾತಿ ರಾಜಕಾರಣ ಮಾಡದೇ ಎಲ್ಲರೂ ಒಟ್ಟಾಗಿ ಕೇತ್ರದ ಅಭಿವೃದ್ಧಿಗೆ ಶ್ರಮಿಸೋಣ, ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಕ್ಷೇತ್ರದ ಜನರಿಗೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪಟ್ಟಣದ ಪಂಚಾಯತಿ ಮಾಜಿ ಅಧ್ಯಕ್ಷ ದ್ವಾರಕಾನಾಥ್ ನಾಯ್ಡು, ಅಪ್ಸರ್ ಪಾಷ, ಉಪಾಧ್ಯಕ್ಷ ರಾಜಣ್ಣ, ಜಾಲಾರಿ ಸಪ್ಪಲಮ್ಮ ದೇವಿಯ ಹೂವಿನ ಕರಗದ ಆಯೋಜಕರಾದ ಶ್ರೀನಿವಾಸ್ ಸ್ವಾಮಿ, ರಾಮಾಂಜಿ, ಪ್ರಭಾಕರ್, ಮಿಥುನ್ ರೆಡ್ಡಿ ಅಭಿಮಾನಿಗಳು, ಸಾಕಷ್ಟು ಜನರು ಹಾಜರಿದ್ದರು.
ಗುಡಿಬಂಡೆ ಪಟ್ಟಣದಲ್ಲಿ ಎರಡು-ಮೂರು ವರ್ಷಗಳ ನಂತರ ಕರಗ ಮಹೋತ್ಸವವನ್ನು ಆಯೋಜಿಸಿರುವುದು ಬಹಳ ಸಂತೋಷದ ವಿಷಯ. ಹಿಂದು-ಮುಸ್ಲಿಮರು ಸೇರಿ ಭಾವೈಕ್ಯತೆಯಿಂದ ಕರಗವನ್ನು ಆಚರಣೆ ಮಾಡಿದ್ದು ವಿಶೇಷವಾಗಿತ್ತು. ಇದೇ ರೀತಿ ಮುಂದಿನ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂಬುದು ನನ್ನ ಅಭಿಲಾಶೆಯಾಗಿದೆ.
ಅಪ್ಸರ್ ಪಾಷಾ, ಪಪಂ ಮಾಜಿ ಅಧ್ಯಕ್ಷರು, ಗುಡಿಬಂಡೆ