ಪ್ಲ್ಯಾಸ್ಟಿಕ್ ಬಾಟೆಲ್, ಪೇಪರ್ ಹಾಕದಂತೆ ಅರಿವು; ವೀಕೆಂಡ್ʼನಲ್ಲಿ ವಿನೂತನ ಅಭಿಯಾನ
ಬೆಂಗಳೂರು: ಮಂಜಿನ ಮಡಿಲಲ್ಲಿ ಸ್ವರ್ಗದ ಅನುಭವ ನೀಡುವ ನಂದಿ ಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಗಿರಿಧಾಮದಲ್ಲಿ ಪ್ರವಾಸಿಗರು ಪ್ಲ್ಯಾಸ್ಟಿಕ್ ಬಾಟೆಲ್, ಪೇಪರ್ ನಂಥ ತ್ಯಾಜ್ಯವಸ್ತುಗಳನ್ನು ಎಲ್ಲೆಂದರಲ್ಲಿ ಬೀಸಾಡುತ್ತಾರೆ. ಅದರಿಂದ ಬೆಟ್ಟದ ಪರಿಸರ ಹಾಳಾಗುತ್ತಿದೆ. ಮುಂದಿನ ಪೀಳಿಗೆಗೆ ಉಳಿಸಿ ಸಂರಕ್ಷಣೆ ಮಾಡಬೇಕಾದ ಗಿರಿಧಾಮದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಾಡಬೇಕಿದೆ. ದಂಪತಿಯೊಬ್ಬರು ಸದ್ಸಿಲ್ಲದೆ, ಶ್ರೀ ಯೋಗನಂದೀಶ್ವರ ಸನ್ನಿಧಿಯಲ್ಲಿ ತ್ಯಾಜ್ಯವನ್ನು ತೆಗೆಯುತ್ತಾ ಪರಿಸರ ಕಾಳಜಿ ಮೆರೆದಿದ್ದಾರೆ.
ಬೆಂಗಳೂರು ಮೂಲದ ಎಸ್.ರಾಜು ಮತ್ತು ನಂದಿನಿ ಎಂಬ ದಂಪತಿ ತಮ್ಮ ವೀಕೆಂಡ್ʼನಲ್ಲಿ ಹತ್ತಿರದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಪರಿಸರದ ಬಗ್ಗೆ ಪ್ರವಾಸಿಗರಿಗೆ ಅರಿವು ಮೂಡಿಸುವುದಷ್ಟೇ ಅಲ್ಲದೆ, ಅಲ್ಲೆಲ್ಲ ಜನರು ಬೀಸಾಡಿರುವ ಪ್ಲ್ಯಾಸ್ಟಿಕ್ ಬಾಟೆಲ್, ಪ್ಲ್ಯಾಸ್ಟಿಕ್ ಕ್ಯಾರಿ ಬ್ಯಾಗ್‍ಗಳು, ಆಹಾರ ತಿಂದು ಬೀಸಾಡಿದ ಪ್ಲ್ಯಾಸ್ಟಿಕ್ ಪೊಟ್ಟಣಗಳನ್ನು ಆಯ್ದು ವಿಲೇವಾರಿ ಮಾಡುತ್ತಿಷದ್ದಾರೆ. ಜತೆಗೆ; ಪ್ರವಾಸಿ ಮತ್ತು ಧಾರ್ಮಿಕ ತಾಣಗಳಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಬೆಟ್ಟದಲ್ಲಿ ಪ್ಲಾಸ್ಟಿಕ್ ಬೀಸಾಡಬೇಡಿ
ಬೆಟ್ಟದ ಪರಿಸರಕ್ಕೆ ಪ್ಲ್ಯಾಸ್ಟಿಕ್ ಮಾರಕವಾಗಿದ್ದು, ನಿಷೇಧವಿದ್ದರೂ ಪ್ರವಾಸಿಗರ ನಿರ್ಲಕ್ಷ್ಯದಿಂದಾಗಿ ಸಮಸ್ಯೆ ಸೃಷ್ಟಿಯಾಗಿದೆ. ಕಸ ಸಂಗ್ರಹ ಮಾಡಿ ಅದನ್ನು ವಿಲೇವಾರಿ ಮಾಡುವುದು ತುಂಬಾ ಕಷ್ಟದ ಕೆಲಸ. ಹಾಗಾಗಿ ಬೆಂಗಳೂರಿನ ಈ ಯುವ ದಂಪತಿ ವಾರಾಂತ್ಯದಲ್ಲಿ ಪ್ರವಾಸಿ ತಾಣಗಳಿಗೆ ಬೇಟಿ ನಾಡುತ್ತಾರೆ. ಅದರ ಜತೆಗೆ ಸಾಮಾಜಿಕ ಕಳಕಳಿಯಿಂದ ಬೆಟ್ಟದ ಮೇಲೆ ಕಸದ ಸಂಗ್ರಹಣೆ ಸೇರಿದಂತೆ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡು ಎಲ್ಲರಿಗೂ ಅರಿವು ಮೂಡಿಸುತ್ತಿರುವ ರೀತಿಗೆ ಪ್ರವಾಸಿಗರುಬ ಮನಸೋತ್ತಿದ್ದಾರೆ.
ಪರಿಸರದ ಅಂದ ಕೆಡುತ್ತಿದೆ
ನಂದಿ ಬೆಟ್ಟದ ಪ್ರಕೃತಿಯಲ್ಲಿ ನಾನಾ ಜಾತಿಯ ಪಕ್ಷಿಗಳು, ಪ್ರಾಣಿಗಳು ನೆಲೆ ಕಂಡುಕೊಂಡಿವೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದಾಗಿ ಪ್ರಾಣಿಗಳು ಆಹಾರದ ನೆಪದಲ್ಲಿ ಪ್ಲಾಸ್ಟಿಕ್ ಸೇವಿಸುತ್ತಿವೆ. ಜತೆಗೆ, ಬೆಟ್ಟದ ಅಂದಕ್ಕು ಕಸ ಅಡ್ಡಿಯನ್ನುಂಟು ಮಾಡುತ್ತಿದೆ. ಇನ್ನು ನಂದಿಬೆಟ್ಟದ ಮೇಲಿರುವ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟಕ್ಕೆ ಅವಕಾಶವಿಲ್ಲ. ಕಳೆದ ಮೂರ್ನಾಲ್ಕು ವರ್ಷದಿಂದ ಈ ನಿಯಮವನ್ನು ಪಾಲಿಸಲಾಗುತ್ತಿದೆ. ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿ, ಕವರುಗಳನ್ನು ತರುವುದರಿಂದ ಸಮಸ್ಯೆ ಎದುರಾಗುತ್ತಿದೆ. ಪ್ರತಿಯೊಬ್ಬರನ್ನು ಪರಿಶೀಲಿಸಲು ಸಾಧ್ಯವಾಗದ ಹಿನ್ನೆಲೆ ಬೆಟ್ಟದ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗಿ ಕಂಡುಬರುತ್ತಿದೆ ಇದಕ್ಕೆ ಸೂಕ್ತವಾದ ಪರಿಹಾರ ಕ್ರಮಗಳನ್ನು ಪ್ರವಾಸೋದ್ಯಮ ಇಲಾಖೆ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವರ್ಷಕ್ಕೆ 15 ಟನ್ ಪ್ಲಾಸ್ಟಿಕ್ ಸಂಗ್ರಹ
ದಕ್ಷಿಣ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿ ಬೆಟ್ಟದಲ್ಲಿ ವರ್ಷಕ್ಕೆ 28 ಟನ್ ಕಸ ವಿಲೇವಾರಿಯಾಗುತ್ತಿದೆ. ಅದರಲ್ಲಿ ಬರೋಬ್ಬರಿ 15 ಟನ್ ಪ್ಲ್ಯಾಸ್ಟಿಕ್ ತ್ಯಾಜ್ಯ ಸಂಗ್ರಹ ಆಗುತ್ತಿದೆ, ಇದನ್ನು ನಿರ್ವಹಣೆ ಮಾಡುತ್ತಿರುವುದೇ ದೊಡ್ಡ ತಲೆ ನೋವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಪ್ರವಾಸಿಗರು ತಮ್ಮ ಮೋಜು, ಮಸ್ತಿಗಾಗಿ ಪರಿಸರ ಹಾಳು ಮಾಡುತ್ತಿದ್ದಾರೆ. ಎಲ್ಲಾ ಪ್ರಜ್ಞಾವಂತ ಯುವಕ, ಯುವತಿಯರು ಹೆಚ್ಚಾಗಿ ಬರುವುದರಿಂದ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ನಮ್ಮ ಮುಂದಿನ ಪೀಳಿಗೆಗೆ ಪರಿಸರ ಉಳಿಸಿ ನಾವು ಕೊಡುಗೆ ನೀಡಬೇಕು ಎನ್ನುತ್ತಾರೆ ಈ ಯುವ ದಂಪತಿ.
ವಾರಾಂತ್ಯದಲ್ಲಿ ಸ್ವಚ್ಚತಾ ಅಭಿಯಾನ
ಬೆಂಗಳೂರಿನ ಕೆಂಪಾಪುರದ ಈ ಯುವ ದಂಪತಿ ರಾಜು ಮತ್ತು ನಂದಿನಿ ಅವರು ವಾರಾಂತ್ಯದಲ್ಲಿ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಚಾರಣಕ್ಕಾಗಿ ಹೋಗುತ್ತಾರೆ. ಅಲ್ಲಿ ಪ್ರವಾಸಿಗರು ಬೀಸಾಡಿದ ಪ್ಲಾಸ್ಟಿಕ್ ಬಾಟಲಿಗಳು, ಗಾಜಿನ ಬಾಟಲಿಗಳು, ಆಹಾರದ ಪೊಟ್ಟಣಗಳು ಸೇರಿದಂತೆ ಎಲ್ಲ ರೀತಿಯ ತ್ಯಾಜ್ಯವನ್ನು ವರ್ಗೀಕರಿಸಿ ಸಂಗ್ರಹ ಮಾಡುತ್ತಾರೆ ಅಲ್ಲದೆ ಪ್ರವಾಸಿಗರಿಗೆ ಪರಿಸರದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಈ ಪರಿಸರ ಪ್ರೇಮಿ ಕೆಲಸಕ್ಕೆ ಪ್ರವಾಸಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ನಾವು ಪ್ರತೀ ವಾರಾಂತ್ಯದಲ್ಲಿ ನಂದಿಬೆಟ್ಟಕ್ಕೆ ಚಾರಣಕ್ಕಾಗಿ ಬರುತ್ತೇವೆ. ಪ್ರವಾಸಿಗರು ಬೀಸಾಡಿದ ಪ್ಲ್ಯಾಸ್ಟಿಕ್ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ. ನಾವು ಪರಿಸರವನ್ನು ಉಳಿಸಬೇಕಾದರೆ, ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನಾವು ಪರಿಸರವನ್ನು ರಕ್ಷಿಸಲು ಮುಂದಾಗದಿದ್ದರೂ ಪರವಾಗಿಲ್ಲ. ಕೊನೆಪಕ್ಷ ನಮ್ಮಿಂದ ಯಾವುದೇ ಪರಿಸರ ಹಾನಿ ಕೆಲಸ ಮಾಡದೇ ಇದ್ದರೆ ಸಾಕು, ಪ್ರವಾಸಿತಾಣಗಳಿಗೆ ಬೇಟಿ ಮಾಡುವ ಪ್ರವಾಸಿಗರು ಪ್ಲಾಸ್ಟಿಕ್ ಬಳಕೆ ಹಾಗೂ ಬೀಸಾಡುವುದು ನಿಲ್ಲಿಸಬೇಕು. ನಮ್ಮ ಈ ಕೆಲಸದಿಂದ ಬೇರೆ ಪ್ರವಾಸಿಗರಿಗೆ ಅರಿವು ಮೂಡಲಿ ಅನ್ನುವ ಉದ್ದೇಶ ಅವರು ಸಹ ಇತರರಿಗೆ ಮಾದರಿಯಾಗಲಿ. ಅದಕ್ಕಾಗಿ ಎಲ್ಲರ ಸಹಕಾರ ಅಗತ್ಯ, ನಾವು ಪರಿಸರಕ್ಕೆ ಗೌರವ ಕೊಡಬೇಕು, ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕು ಇದು ನಮ್ಮೆಲ್ಲರ ಜವಾಬ್ದಾರಿ.
-ರಾಜು, ಪರಿಸರ ಪ್ರೇಮಿ, ಬೆಂಗಳೂರು.
ಇತ್ತೀಚಿಗೆ ನಂದಿಬೆಟ್ಟದಲ್ಲಿ ಪ್ರವಾಸಿಗರು ತಮ್ಮ ಮೋಜಿಗಾಗಿ ಪರಿಸರ ಹಾಳು ಮಾಡುತ್ತಿದ್ದಾರೆ. ಪ್ರಜ್ಞಾವಂತರು ಈ ರೀತಿಯ ಕೆಲಸ ಮಾಡಬಾರದು. ನಂದಿಬೆಟ್ಟದಲ್ಲಿ ಪ್ಲ್ಯಾಸ್ಟಿಕ್ ಬೀಸಾಡಿರುವುದನ್ನು ನಮ್ಮ ಕೈಯಲ್ಲಿ ಆದ ಸ್ವಚ್ಚತೆ ಮಾಡುತ್ತಿದ್ದೇವೆ. ಇದು ನಮ್ಮ ವೈಯಕ್ತಿಯ ಸಂತೋಷ ಹಾಗೂ ಪರಿಸರ ಕಾಳಜಿ. ಹಾಗಾಗಿ ನಾವು ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡಲು ಎಲ್ಲರು ಕೈ ಜೋಡಿಸಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಪ್ಲ್ಯಾಸ್ಟಿಕ್ ನಿಂದ ಕೂಡಿದ ಪರಿಸರ ನೀಡಬೇಕಾಗುತ್ತದೆ. ಪ್ರವಾಸಿಗರು ತಮ್ಮ ಸುತ್ತಮುತ್ತಲಿನ ಪರಿಸರ ಕಾಪಾಡಿಕೊಳ್ಳಲು ಮುಂದಾಗಬೇಕು.
-ನಂದಿನಿ, ಪರಿಸರ ಪ್ರೇಮಿ, ಬೆಂಗಳೂರು