ಸಿದ್ದು ಸಿಎಂ ಆಗಬೇಕೆಂಬುದು ನನ್ನ ಅಭಿಪ್ರಾಯ; ಅದರಲ್ಲಿ ತಪ್ಪೇನಿಲ್ಲ
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯ ಮಂತ್ರಿ ಯಾರಾಗಬೇಕೆಂಬುದನ್ನು ನಮ್ಮ ಹೈಕಮಾಂಡ್ ತೀರ್ಮಾನಿಸುತ್ತದೆ.ಆದರೆ ನಾನು ನನ್ನ ಅಭಿಪ್ರಾಯ ಹೇಳುವುದರಲ್ಲಿ ಏನೂ ತಪ್ಪಿಲ್ಲ ಎಂದು ಡಿ.ಕೆ.ಶಿವಕುಮಾರ್ ಗೆ ಶಾಸಕ ಜಮೀರ್ ಅಹಮದ್ ಟಾಂಗ್ ನೀಡಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಈ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿ ಆಗಬೇಕೆಂಬುದು ನನ್ನ ಅಭಿಪ್ರಾಯವಷ್ಟೆ.ಇದನ್ನು ಹೇಳುವುದರಲ್ಲಿ ತಪ್ಪಿಲ್ಲವಲ್ಲ ಎಂದರು.
ಸಿದ್ದರಾಮಯ್ಯ ಸಿಎಂ ಆಗಬೇಕೆಂಬ ನಿಮ್ಮ ಹೇಳಿಕೆಗೆ ಡಿಕೆಶಿ ಸಿಟ್ಟಾಗಿದ್ದರಲ್ಲ ಎಂಬ ಮಾಧ್ಯಮ ಪ್ರತಿ ನಿಧಿಗಳ ಪ್ರಶ್ನೆಗೆ ಮೇಲಿನಂತೆ ಜಮೀರ್ ಪ್ರತಿಕ್ರಿಯಿಸಿದರು.
ನಮ್ಮ ಪಕ್ಷದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇದ್ದಾರೆ.ಅವರೇ ಎಲ್ಲವನ್ನೂ ನಿರ್ಧರಿಸುತ್ತಾರೆ.ಅವರ ನಿರ್ಧಾರವೇ ಅಂತಿಮ,ಅವರು ಸೂಚಿಸಿದವರು ಸಿಎಂ ಆಗುತ್ತಾರೆ ಎಂದು ಹೇಳಿದರು.
ನನ್ನ ಅಭಿಪ್ರಾಯ ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುದು ಇದನ್ನೇ ಹೇಳಿದ್ದೇನೆ ಅದಕ್ಕೆ ಯಾರು ಕೋಪ ಮಾಡಿಕೊಂಡರೆ ಏನೂ ಮಾಡಕ್ಕಾಗಲ್ಲ ಎಂದು ತಿರುಗೇಟು ನೀಡಿದರು.
ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ನಡೆಯಲಿದೆ.ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬುತ್ತಿದೆ.ಇದುವರೆಗೆ ಅವರು ಜನ್ಮದಿನ ಆಚರಿಸಿಕೊಂಡಿಲ್ಲ,ಅವರು 50 ವರ್ಷ ರಾಜಕಾರಣಿಯಾಗಿ ಶ್ರಮಿಸಿದ್ದಾರೆ.
ಅದಕ್ಕಾಗಿ ನಾನೂ ಸೇರಿದಂತೆ ಅವರ ಅಭಿಮಾನಿಗಳೆಲ್ಲ ಕೂಡಿ ದಾವಣಗೆರೆಯಲ್ಲಿ ಸಮಾರಂಭ ಮಾಡುತ್ತಿದ್ದೇವೆ ಅಷ್ಟೇ.ಇದರಲ್ಲಿ ಯಾರ ಶಕ್ತಿ ಪ್ರದರ್ಶನವೂ ಇಲ್ಲ ಸಿದ್ದು ಮುಖ್ಯ ಮಂತ್ರಿ ಆಗಬೇಕು ಅಂತ ಈ ಉತ್ಸವ ಮಾಡುತ್ತಿಲ್ಲ ಎಂದು ಜಮೀರ್ ಸ್ಪಷ್ಟಪಡಿಸಿದರು.