ಮುಖ್ಯಮಂತ್ರಿ ಬೊಮ್ಮಾಯಿ ತಿರುಗೇಟು
ಬೆಂಗಳೂರು: ಕೊಲೆಗಳು ನಡೆದಾಗ ಹೇಗೆ ನಿಭಾಯಿಸಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ ಯಾರೂ ಹೇಳಿಕೊಡಬೇಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಿಡಿಕಾರಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಸಿಎಂ, ಸೂರತ್ ಕಲ್ ನಲ್ಲಿ ಕೊಲೆ ಆಗಿದ್ದು ಎಡಿಜಿಪಿ ಅವರಿಗೆ ಅಲ್ಲಿಯೇ ಇರಲು ಹೇಳಿದ್ದೇನೆ ಎಂದು ತಿಳಿಸಿದರು.
ನಾನು ಪ್ರವೀಣ್ ಮನೆಗೆ ಹೋಗಿ ವಾಪಸ್ ಬರುವಾಗ ಮತ್ತೊಂದು ಕೊಲೆ ಆಗಿದೆ. ಈ ಮೂರು ಕೊಲೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಹೇಳಿದರು.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಹೇಳಿದ್ದೇ ವೇದವಾಕ್ಯ ಅಲ್ಲ. ಅವರು ಸಿಎಂ ಆಗಿದ್ದಾಗ 32 ಕೊಲೆಗಳು ಆಗಿವೆ. ಯಾವ ರೀತಿ ನಿಭಾಯಿಸಬೇಕು ಅಂತಾ ನಮಗೆ ಗೊತ್ತಿದೆ, ಎಲ್ಲವನ್ನೂ ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ತಿರುಗೇಟು ನೀಡಿದರು.
ಕೇರಳ ಭಾಗದ 55 ರಸ್ತೆಗಳಲ್ಲಿ ನಾಕಾ ಬಂದಿ ಹಾಕಿ ಖಡಕ್ ತಪಾಸಣೆ ನಡೆಸಲು ಸೂಚಿಸಲಾಗಿದೆ. ಯಾರೂ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ. ನಮ್ಮ ಕಾರ್ಯಕರ್ತರು ನಮ್ಮನ್ನೇ ಕೇಳ್ತಿರೋದು, ಕಾಂಗ್ರೆಸ್ ನವರನ್ನ ಕೇಳ್ತಿಲ್ಲ ಎಂದು ಸಿಎಂ ಗರಂ ಆದರು.
10 ದಿನಗಳಲ್ಲಿ 3 ನೇ ಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರತಿಯೊಂದು ಕೊಲೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ.
ಬೆಂಗಳೂರಿನಲ್ಲಿ ಡಿಜಿ, ಐಜಿಪಿ ಮತ್ತು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಕರಾವಳಿ ಭಾಗದಲ್ಲಿ ವಿಶೇಷ ಕಠಿಣ ಕ್ರಮ ಜಾರಿ ಮಾಡುವ ಬಗ್ಗೆ ಚರ್ಚಿಸುತ್ತೇನೆ, ಕರಾವಳಿ,ಕರ್ನಾಟಕ ಭಾಗದಲ್ಲಿ ನಿರ್ಬಂಧ ಹೇರುವ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.