7 ಸಾವಿರಕ್ಕೂ ಅಧಿಕ ಮಕ್ಕಳು ಭಾಗಿ
by GS Bharath Gudibande
ಗುಡಿಬಂಡೆ: ಗಡಿ ತಾಲೂಕು ಗುಡಿಬಂಡೆಯಲ್ಲಿ ‘ಹರ್ ಘರ್ ತಿರಂಗಾ’ ಸಂಭ್ರಮದ ಬೆಡಗು ಹೆಚ್ಚಾಗಿದ್ದು, ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಶಾಲಾ ಮಕ್ಕಳಲ್ಲಿ ದೇಶಪ್ರೇಮ ಮೂಡಿಸುವ ಕೆಲಸ ಮಾಡುತ್ತಿದೆ ಶಿಕ್ಷಣ ಇಲಾಖೆ.
ಶಿಕ್ಷಣ ಇಲಾಖೆ ಸೂಚನೆ ಮೆರೆಗೆ ಭಾರತದ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರು ಸೂಚನೆ ನೀಡಿದ್ದಾರೆ. ತಾಲೂಕಿನಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 500ಕ್ಕೂ ಅಧಿಕ ಶಿಕ್ಷಕರು, 7 ಸಾವಿರಕ್ಕೂ ಅಧಿಕ ಮಕ್ಕಳು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಈ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಾಡಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಾಥ್ ನೀಡಿದ್ದು, ಮಕ್ಕಳು ಹೇಗೆ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕೆಂಬ ಮಾಹಿತಿ ನೀಡುತ್ತಿದೆ. ಜತೆಗೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸ್ವಾತಂತ್ರ್ಯದ ಮಹತ್ವವನ್ನು ಸಾರುತ್ತಿದ್ದಾರೆ. ಸದ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾಲೂಕು ಶಿಕ್ಷಣ ಸಂಯೋಜಕರ ನೇತೃತ್ವದಲ್ಲಿ ಮುಖ್ಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಪೋಷಕರೊಂದಿಗೆ ಚರ್ಚಿಸಿದ್ದಾರೆ.
ಮನೆಮನೆಯಲ್ಲೂ ಧ್ವಜ ಹಾರಿಸಲು ಉತ್ತೇಜನೆ
ತಾಲೂಕಿನ ಪ್ರತಿ ವಿದ್ಯಾರ್ಥಿಗಳ ಮನೆಗಳಲ್ಲಿ ರಾಷ್ಟ್ರದಧ್ವಜ ಹಾರಿಸಲು ಸಿದ್ದತೆಗಳನ್ನು ಶಿಕ್ಷಣ ಇಲಾಖೆ ಪೂರ್ಣಗೊಳಿಸಿದೆ. ಅದರಂತೆ ವಿದ್ಯಾರ್ಥಿಗಳು ಒಂದು ಭಾವುಟಕ್ಕೆ 22 ರೂಪಾಯಿಗಳನ್ನು ಕೊಟ್ಟು ಪಡೆಯಬೇಕು ಹಾಗೂ ಅದನ್ನು 13ರಿಂದ 15ರವರಿಗೆ ತಮ್ಮ ಮನೆಗಳ ಮೇಲೆ ಹಾರಿಸಬೇಕು ಎಂದು ತಿಳಿಸಿದೆ.
ಅಗಸ್ಟ್ 13ರಿಂದ 15ರವರೆಗೆ ಅಭಿಯಾನ
ಅಗಸ್ಟ್ 13ರಿಂದ ಆರಂಭವಾಗುವ ‘ಹರ್ ಘರ್ ತಿರಂಗಾ’ ಅಭಿಯಾನವು ಅಗಷ್ಟ್ 15 ಸ್ವಾತಂತ್ರ್ಯ ದಿನದವರೆಗೂ ನಡೆಯುವ ಈ ಅಭಿಯಾನದಲ್ಲಿ ಶಾಲಾ ವಿದ್ಯಾರ್ಥಿಗಳು, ಹಾಗೂ ಪ್ರತಿ ಮನೆ ಮನೆಯಲ್ಲಿ ರಾಷ್ಟ್ರೀಯ ಧ್ವಜ ಹಾರಿಸುವಂತೆ ಪ್ರೇರೇಪಿಸುವುದರ ಮೂಲಕ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರ ಪ್ರೇಮವನ್ನು ಮೂಡಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ.
ಶಿಕ್ಷಕರ ಜವಾಬ್ದಾರಿ ಏನು?
ಮಕ್ಕಳಿಗೆ ಯಾವ ಗಾತ್ರದ ರಾಷ್ಟ್ರಧ್ವಜವನ್ನು ಯಾವಾಗ ಹಾರಿಸಿ ಇಳಿಸಬೇಕೆಂಬ ಮಾಹಿತಿಯನ್ನು ಶಿಕ್ಷಕರು ನೀಡಿತ್ತಾರೆ. 2021ರ ರಾಷ್ಟ್ರಧ್ವಜ ತಿದ್ದುಪಡಿ ಕಾಯಿದೆ ಅನ್ವಯ ಪ್ಲಾಸ್ಟಿಕ್ ಧ್ವಜರಹಿತ ಬಟ್ಟೆಯಿಂದ ತಯಾರಿಸಿದ ರಾಷ್ಟ್ರಧ್ವಜ ಹಾರಿಸಬೇಕೆಂದು ಅರಿವು ಮೂಡಿಸಲಾಗಿದೆ. ಶಾಲೆಗಳಲ್ಲಿ ಅ.1ರಿಂದ 10ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
ಮತ್ತಷ್ಟು ಚಿತ್ರಗಳಿಗಾಗಿ ಕೆಳಗಿನ ಸ್ಲೈಡ್ ಶೋ ನೋಡಿ..
ಮಕ್ಕಳಿಗೆ ಯಾವೆಲ್ಲ ಸ್ಪರ್ಧೆ?
- 1 ರಿಂದ ಮೂರನೇ ತರಗತಿ ಮಕ್ಕಳಿಗೆ ರಾಷ್ಟ್ರ ಬಾವುಟದ ಚಿತ್ರ ಬಿಡಿಸುವುದು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
- 4ರಿಂದ 5ನೇ ತರಗತಿ ಮಕ್ಕಳಿಗೆ ರಾಷ್ಟ್ರೀಯ ಭಾವನೆ ಮೂಡಿಸುವ ಗೀತ ಗಾಯನ ಸ್ಪರ್ಧೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
- 6ರಿಂದ 10ನೇ ತರಗತಿ ಮಕ್ಕಳಿಗೆ ಗೀತ ಗಾಯನ, ಭಾಷಣ ಸ್ಪರ್ಧೆ, ಸ್ವಾತಂತ್ರ್ಯ ಭಾರತದ ಅಭಿವೃದ್ಧಿ ಕುರಿತು ಪ್ರಬಂಧ ಸ್ಪರ್ಧೆಗಳನ್ನು ಶಿಕ್ಷಣ ಇಲಾಖೆ ನಡೆಸುತ್ತಿದೆ.
ಹರ್ ಘರ್ ತಿರಂಗಾ ಉದ್ದೇಶ
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ದೇಶದ ಜನತೆಗೆ ಬಹಳ ವಿಶೇಷವಾಗಿದೆ. ಏಕೆಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದೆ ಈ ಶುಭ ಸಂದರ್ಭದ ಹಿನ್ನೆಲೆಯಲ್ಲಿ ನಮ್ಮ ದೇಶಕ್ಕೆ ಗೌರವ ಸೂಚಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ‘ಹರ್ ಘರ್ ತಿರಂಗಾ’ ಆಂದೋಲನವನ್ನು ಅಗಸ್ಟ್ 13 ಮತ್ತು 15ರ ನಡುವೆ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಅಥವಾ ಪ್ರದರ್ಶಿಸಲು ಕರೆ ನೀಡಿದ್ದಾರೆ.
ಮಕ್ಕಳು ಸ್ಪರ್ಧೆಯಲ್ಲಿ ಬಿಡಿಸಿದ ಚಿತ್ರ, ತಮ್ಮ ಮನೆಗಳಲ್ಲಿ ಧ್ವಜ ಹಾರಿಸಿದ ಭಾವಚಿತ್ರ ಹಾಗೂ ಶಾಲಾ ಹಂತದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮೆರವಣಿಗೆಯಲ್ಲಿ ಪಾಲ್ಗೊಂಡ ಭಾವಚಿತ್ರಗಳನ್ನು ‘ಆಜಾದಿ ಕಾ ಆಮೃತ್’ ವೆಬ್ಸೈಟ್ನಲ್ಲಿ ಆಯಾಯ ಶಾಲೆ ಮುಖ್ಯಶಿಕ್ಷಕರು ಅಪ್ ಲೋಡ್ ಮಾಡಲಿದ್ದಾರೆ.
ಚಂದ್ರಶೇಖರ್, ಶಿಕ್ಷಣ ಸಂಯೋಜಕರು
ಮಕ್ಕಳು ತಮ್ಮ ಮನೆಗಳಲ್ಲಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮದಡಿ ಆ.13ರಿಂದ 15ರವರೆಗೆ ರಾಷ್ಟ್ರಧ್ವಜ ಹಾರಿಸಲಿದ್ದಾರೆ. ಆ.15ರಂದು ಎಂದಿನಂತೆ ಎಲ್ಲಾ ಶಾಲೆಗಳಲ್ಲಿ ಧ್ವಜಾರೋಹಣ ಹಾಗೂ ಮೆರವಣಿಗೆ ಕಾರ್ಯಕ್ರಮ ಜರುಗಲಿದೆ.
ಮುರಳಿ, ತಾಲೂಕು ದೈಹಿಕ ಶಿಕ್ಷಕರು, ಎಲ್ಲೋಡು