ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರು
ಹೈದರಾಬಾದ್: ತೀವ್ರ ಅನಾರೋಗ್ಯಕ್ಕೆ ಗುರಿಯಾಗಿ ಇಲ್ಲಿನ ಗಚ್ಛಿಬೌಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಟಾಲಿವುಡ್ ಹಿರಿಯ ನಟ ಹಾಗೂ ನಟ ಪ್ರಭಾಸ್ ಅವರ ದೊಡ್ಡಪ್ಪ ಕೃಷ್ಣಂರಾಜು ಭಾನುವಾರ ಬೆಳಗಿನಜಾವ 3.25 ಗಂಟೆ ಹೊತ್ತಿಗೆ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಕಳೆದ ಕೆಲ ದಿನಗಳಿಂದ ಇಲ್ಲಿನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೃಷ್ಣಂರಾಜು ಅವರು ಅಗಲಿದ ವಿಷಯ ಅತ್ತ ತೆಲುಗು ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿದೆ.
ತಮ್ಮ ದೊಡ್ಡಪ್ಪ ನಿಧನರಾದ ವಿಷಯ ತಿಳಿಯುತ್ತಿದ್ದಂತೆಯೇ ನಟ ಪ್ರಭಾಸ್ ಆಸ್ಪತ್ರೆಗೆ ಧಾವಿಸಿದ್ದಾರೆ. ಕೃಷ್ಣಂರಾಜು ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಾಳೆ ನಡೆಯಲಿದೆ.
1942 ಜನವರಿ 20ರಂದು ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತೂರು ಗ್ರಾಮದಲ್ಲಿ ಜನಿಸಿದ್ದ ಕೃಷ್ಣಂರಾಜು ಅವರು ತೆಲುಗು ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಎಂದೇ ಖ್ಯಾತರಾಗಿದ್ದರು. 1966ರಲ್ಲಿ ಅವರು ʼಚಿಲಕಾ ಗೋರಿಂಕಾʼ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದ್ದರು. ಇದಾದ ಮೇಲೆ ನಿರಂತರವಾಗಿ ನಟಿಸಿದ ಅವರು 2013ರ ವರೆಗೂ ಸಕ್ರಿಯವಾಗಿ ಬಣ್ಣ ಹಚ್ಚಿದ್ದರು.
ಭಕ್ತ ಕನ್ನಪ್ಪ, ತ್ರಿಶೂಲಂ, ಬೊಬ್ಬಿಲಿ ಬ್ರಹ್ಮನ್ನ, ತಾಂಡ್ರಪಾಪರಾಯುಡು ಸೇರಿ ಸುಮಾರು 183ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕೃಷ್ಣಂರಾಜು ಅವರು, ಪ್ರಭಾಸ್ ಅವರೊಂದಿಗೆ ರೆಬೆಲ್ ಮತ್ತು ಬಿಲ್ಲಾ ಚಿತ್ರಗಳಲ್ಲಿ ನಟಿಸಿದ್ದರು.
ಬಳಿಕ ರಾಜಕೀಯ ಪ್ರವೇಶ ಮಾಡಿದ ಅವರು ಎರಡು ಬಾರಿ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿ, ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಚಿತ್ರರಂಗ ಪ್ರವೇಶ ಮಾಡುವುದಕ್ಕೆ ಮುನ್ನ ಕೆಲಕಾಲ ಅವರು ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು.