ಬಹುಮುಖ ಸಾಧನೆಯ ಗುರುವಿಗೆ ನುಡಿನಮನ
Obituary
ಪ್ರೊ.ಬಿ.ಗಣಗಾಧರ ಮೂರ್ತಿ ಅವರು ಅವಿಭಜಿತ ಕೋಲಾರ ಜಿಲ್ಲೆಯ ವೈಚಾರಿಕತೆಯ ಸಾಕ್ಷಿಪ್ರಜ್ಞೆ ಎಂದು ನಿರ್ವಿವಾದವಾಗಿ ಹೇಳಬಹುದು. ಬೋಧಕರಾಗಿ, ಚಿಂತಕರಾಗಿ, ಲೇಖಕರಾಗಿ ಅವರು ಅವರು ಹಚ್ಚಿದ ಅರಿವಿನ ಹಣತೆ ಗಡಿನಾಡಿನಲ್ಲಿ ದೊಡ್ಡ ಪ್ರಭಾವ ಬೀರಿದೆ.
by Subramanyam H.R Bagepalli
ಕನ್ನಡ ನಾಡಿನ ದಲಿತಬಹುಜನ ಮತ್ತು ವೈಚಾರಿಕ ಚಿತಂಕರಾಗಿದ್ದ ಪ್ರೊ.ಬಿ.ಗಂಗಾಧರ ಮೂರ್ತಿ ಅವರು ಬೆಂಗಳೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಿಧನರಾದ ಸುದ್ದಿ ಅವರ ಶಿಷ್ಯವೃಂದ ಮತ್ತು ಅನುಯಾಯಿಗಳಲ್ಲಿ ತೀವ್ರ ದುಃಖ ಉಂಟುಮಾಡಿದೆ.
ʼಪ್ರೊ.ಬಿ.ಜಿ.ಎಂʼ ಎಂದೇ ಪ್ರಖ್ಯಾತಿ ಪಡೆದಿದ್ದ ಅವರು ಕಳೆದ ನಾಲ್ಕು ದಶಕಗಳಿಂದ ದಲಿತ-ಬಹುಜನ ಚಳುವಳಿ, ರೈತ ಚಳುವಳಿ, ಜನವಿಜ್ಞಾನ ಚಳುವಳಿ, ಪ್ರಗತಿಪರ ಮತ್ತು ವಿಚಾರವಾದಿ ಚಳುವಳಿಗಳಲ್ಲಿ ಸಕ್ರಿಯರಾಗಿದ್ದರು. ಜೊತೆಗೆ ಸಾಂಸ್ಕೃತಿಕ ಚಿಂತಕರಾಗಿ, ಬರಹಗಾರರಾಗಿ, ಅನುವಾದರಾಗಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಭಾರತ ಜ್ಞಾನವಿಜ್ಞಾನ ಸಮಿತಿಯ ʼಟೀಚರ್ʼ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಒಂದು ದಶಕಕ್ಕೂ ಮಿಗಿಲಾಗಿ ಕಾರ್ಯನಿರ್ವಹಿಸಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದಲ್ಲಿ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವಾಗ ಇವರ ಗುರುಗಳಾದ ಡಾ.ಯು.ಆರ್.ಅನಂತಮೂರ್ತಿ ಅವರಿಂದ ಪ್ರಭಾವಿತರಾಗಿ ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಬೆಂಗಳೂರಿನ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಆಂಗ್ಲ ಪ್ರಾಧ್ಯಾಪಕರಾಗಿ ಸುಮಾರು ೩೦ ವರ್ಷಗಳ ಕಾಲ ಬೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.
ಆಂಗ್ಲ ಮತ್ತು ಕನ್ನಡ ಸಾಹಿತ್ಯವನ್ನು ಚೆನ್ನಾಗಿ ಬಲ್ಲವರಾಗಿದ್ದು ಸಾಹಿತ್ಯವನ್ನು ಜನಪರ ದೃಷ್ಟಿಯಲ್ಲಿ ಅರ್ಥೈಸುವ ಮತ್ತು ವಿಮರ್ಶಿಸುವ ವಿಚಾರವಂತಿಕೆಯನ್ನು ಪ್ರೊ.ಬಿಜಿಎಂ ಬೆಳೆಸಿಕೊಂಡಿದ್ದರು. ಯುವಕರಾಗಿದ್ದಾಗಲೇ ಕಾಲೇಜಿನಲ್ಲಿ ಬೋಧನೆಯೊಂದಿಗೆ ಬರವಣಿಗೆ, ಚಳವಳಿ ಮತ್ತು ವೈಚಾರಿಕತೆಯನ್ನು ಮೈಗೂಡಿಸಿಕೊಂಡು ಇವರ ಬಹುಕಾಲದ ಈ ಭಾಗದ ಮತ್ತೊಬ್ಬ ಚಳುವಳಿಯ ಒಡನಾಡಿ ಕೆ.ನಾರಾಯಣಸ್ವಾಮಿ ಅವರೊಟ್ಟಿಗೆ ಅವಿಭಜಿತ ಕೋಲಾರದ ಭಾಗದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಕಟ್ಟುವ ಮಹತ್ಕಾರ್ಯವನ್ನು ಮಾಡಿದ್ದಾರೆ. ನಾಗಸಂದ್ರ ಭೂ ಹೋರಾಟದಲ್ಲಿ ಮುಂಚೂಣಿಯ ನಾಯಕರಾಗಿ ಕೆಲಸ ಮಾಡಿ ಭೂರಹಿತ ದಲಿತ ಬಹುಜನರಿಗೆ ಭೂಮಿ ಮತ್ತು ನಿವೇಶನ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬರದ ನಾಡು ಮತ್ತು ಮೂಲ ಸೌರ್ಕರ್ಯಗಳಿಂದ ವಂಚಿತವಾಗಿದ್ದ ಪ್ರದೇಶದ ಕಾಲೇಜಿನ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿಶ್ವಾಸ ತುಂಬಿ ಜೀವನ ಕಟ್ಟಿಕೊಳ್ಳುವಲ್ಲಿ ನೆರವಾಗಿದ್ದಾರೆ. ಇದಕ್ಕೆ ಇಂದು ಈ ಭಾಗದ ತುಂಬೆಲ್ಲಾ ಕಂಬನಿ ಮಿಡಿಯುವ ಹೃದಯಗಳೇ ಸಾಕ್ಷಿ.
ತಲೆಯಲ್ಲಿ ಕಾರ್ಲ್ ಮಾರ್ಕ್ಸ್, ಹೃದಯದಲ್ಲಿ ಅಂಬೇಡ್ಕರ್ ಮತ್ತು ನಡೆಯಲ್ಲಿ ಮಹಾತ್ಮಾ ಗಾಂಧಿಯನ್ನು ಅನುಸರಿಸುತ್ತಿದ್ದ ಬಹುಜನರ ಪ್ರೀತೀಯ ಮೇಷ್ಟ್ರು, ಜೀವನ ಮತ್ತು ಬದುಕಿನ ತುಂಬೆಲ್ಲ ಸರಳತೆಯನ್ನೇ ಮೈವೇತ್ತಂತೆ ಇದ್ದರು. ಎಲ್ಲಿಯೂ ಗೋಜು-ಗೊಂದಲಕ್ಕೆ ಅವಕಾಶವನ್ನೇ ಕೊಟ್ಟವರಲ್ಲ. ಎಲ್ಲವೂ ಬಿಳಿಯಾಳೆಯಷ್ಟು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ನೇರ ಮತ್ತು ನಿಷ್ಠುರದ ವ್ಯಕ್ತಿತ್ವವಾದರೂ ಮಗುವಿನಂತಹ ಮನಸ್ಸು ಅವರದ್ದು. ಮುಖದಲ್ಲಿ ಗಂಭೀರತೆಯಿದ್ದರೂ, ಅಗತ್ಯಕ್ಕೆ ತಕ್ಕಷ್ಟು ಮಾತಾದರೂ, ಆಗಾಗ್ಗೆ ತಿಳಿಹಾಸ್ಯ ಅವರ ವ್ಯಕ್ತಿತ್ವಕ್ಕೆ ಭೂಷಣವಾಗಿತ್ತು. ಕಿರಿಯ ಮಗ ಗುಜರಾತಿ ಮೂಲದ ಅನ್ಯಧರ್ಮದ ಹೆಣ್ಣುಮಗಳನ್ನು ಮದುವೆಯಾಗಲು ಇಚ್ಚಿಸಿದಾಗ ಅವರು ಮನದುಂಬಿ ಹರಸಿದ್ದರು.
ಮೂಲತಃಹ ಹಾಸನ ಜಿಲ್ಲೆಯವರಾದರೂ ಸಹ ಬದುಕಿಗೊಂದು ಕಾಯಕ ಕಲ್ಪಿಸಿದ ಗೌರಿಬಿದನೂರಿನಲ್ಲೇ ಕೊನೆಯವರೆಗೂ ದಣಿವರಿಯದೆ ದುಡಿದರು. ಭಾರತ ಸ್ವಾತಂತ್ರ್ಯ ಚಳುವಳಿಯ ಇತಿಹಾಸದಲ್ಲಿ ಸ್ಥಳೀಯರ ಪಾತ್ರ ಮತ್ತು ಅದನ್ನು ಮುಂದಿನ ತಲೆಮಾರಿಗೂ ದಾಟಿಸುವ ಅವರ ರಾಜಕೀಯ ಪ್ರಜ್ಞೆ ಅದ್ವಿತೀಯವಾದದ್ದು. ಇದಕ್ಕೆ ಸಂಬಂಧಿಸಿದ ಅವರ ಮಹತ್ವಪೂರ್ಣ ಕೆಲಸವೆಂದರೆ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯ ಸ್ಮಾರಕವನ್ನು ರೂಪಿಸಿದ್ದು. ೧೯೩೮ರ ಧ್ವಜ ಸತ್ಯಾಗ್ರಹದ ಹತ್ಯಾಕಾಂಡದ ನಂತರ ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಕರೆಯಲ್ಪಡುವ ವಿದುರಾಶ್ವತ್ಥದಲ್ಲಿ ಸ್ವಾತಂತ್ತ್ಯ ಸ್ಮಾರಕ ಸಂಕೀರ್ಣವನ್ನು ಅಪಾರ ಶ್ರಮ ಹಾಗೂ ಬದ್ದತೆಯಿಂದ ವಿಶಿಷ್ಟವಾಗಿ ರೂಪಿಸಿ, ವಿನ್ಯಾಸಗೊಳಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಚಿತ್ರಪಟ ಗ್ಯಾಲರಿ ಮತ್ತು ಥೀಮ್ ಗ್ರಂಥಾಲಯ ರೂಪಿಸಿದ್ದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಹಲವು ಆಯಾಮಗಳನ್ನು ಅನಾವರಣಗೊಳಿಸುವ ಆ ಸ್ಮಾರಕ ದೇಶದಲ್ಲೇ ಅಪರೂಪದ ಸ್ಮಾರಕವಾಗಿ ಖ್ಯಾತಿ ಪಡೆದಿದೆ.
ಸತ್ಯಶೋಧನೆಯಲ್ಲಿ ಬಹುವಾಗಿ ನಂಬಿಕೆಯಿರಿಸಿದ್ದರಿಂದ, ಸತ್ಯಾಸತ್ಯತೆಯನ್ನು ಸಮಾಜಕ್ಕೆ ತಿಳಿಸಲು ದೇಶದ ಪ್ರಖ್ಯಾತ ಚಿಂತಕರಾದ ಜಿ.ಎನ್.ದೇವಿ, ನಗರಿ ಬಾಬಯ್ಯ, ಪ್ರೊ.ಶ್ರೀಧರ್, ಡಾ.ಜಿ.ರಾಮಕೃಷ್ಣ, ಗುಂಡಣ್ಣ, ಪ್ರೊ.ನಗರಗೆರೆ ರಮೇಶ್, ವೇಣುಗೋಪಾಲ್ ಮತ್ತು ದು.ಸರಸ್ವತಿ ಅವರನ್ನು ಕರೆಸಿ ಚರ್ಚಾಕೂಟಗಳನ್ನು ಏರ್ಪಡಿದ್ದರು ಪ್ರೊ.ಗಂಗಾಧರ ಮೂರ್ತಿ ಅವರು.
ಅಪ್ಪಟ ನಾಸ್ತಿಕರಾದರೂ ಬುದ್ದ, ಬಸವ, ಗಾಂಧಿ ಹಾಗೂ ಅಂಬೇಡ್ಕಋ ಅವರನ್ನು ತಾವು ಮಾಡುವ ಕೆಲಸದಲ್ಲಿ ಕಾಣುತ್ತಿದ್ದರು ಪ್ರೊ.ಬಿಜಿಎಂ. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯವನ್ನು ತನ್ನ ಜೀವನದುದ್ದಕ್ಕೂ ಪ್ರತಿಪಾದಿಸುತ್ತಿದ್ದದ್ದರು. ಸಾಮಾಜಿಕ ಸಮಾನತೆಗಾಗಿ ದುಡಿಯುವ ಮತ್ತು ಮಿಡಿಯುವ ಜನತೆಗಾಗಿ ಸ್ಥಳೀಯ ಶಾಸಕರ ನೆರವಿನಿಂದ ಪಟ್ಟಣದ ಹೊಸ ತಹಶೀಲ್ದಾರ್ ಕಚೇರಿ ಪಕ್ಕದಲ್ಲಿ ಅಂಬೇಡ್ಕರ್ ನೆನಪಿನಲ್ಲಿ ʼಸಮಾನತಾ ಸೌಧʼವನ್ನು ರೂಪಿಸುವಲ್ಲಿ ಶ್ರಮಿಸಿದ್ದಾರೆ. ಇದರಲ್ಲಿ ಒಂದು ಭಾಗದಲ್ಲಿ ಅಂಬೇಡ್ಕರ್ ಜೀವನ ಮತ್ತು ಮುಖ್ಯ ಘಟನೆಗಳನ್ನು ಬಿಂಬಿಸುವ ಗ್ಯಾಲರಿಗಳನ್ನು ಅನಾವರಣ ಮಾಡಲಾಗಿದೆ. ಮತ್ತೊಂದು ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳ ತರಬೇತಿ ಮತ್ತು ಅಧ್ಯಯನಕ್ಕೆ ಸಜ್ಜುಗೊಳಿಸಲಾಗಿದೆ.
ಕೆಳವಗಿನ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ..
ಇದರ ಜತೆಗೆ ಪಟ್ಟಣದಲ್ಲಿ ಓದುವ ಅಭಿರುಚಿ ಇರುವ ಯುವಜನ, ವಿದ್ಯಾರ್ಥಿ ಮತ್ತು ಶಿಕ್ಷಕ, ಶಿಕ್ಷಕಿಯರನ್ನೊಳಗೊಂಡ ಗುಂಪುಗಳನ್ನು ಮಾಡಿ ಆಯ್ದ ಲೇಖಕರಿಂದ ರಚಿತವಾದ ಪುಸ್ತಕಗಳನ್ನು ಹಂಚಿ, ಓದಿ, ಚರ್ಚಿಸುವಂತೆ ಮಾಡುತ್ತಿದ್ದರು. ನಮ್ಮಂತಹ ಸಂವಿಧಾನ ಪ್ರೇಮಿ ಯುವಜನರ ʼಜನಪದವಾಗಲಿ ಸಂವಿಧಾನʼ ಎಂಬ ತಂಡಕ್ಕೆಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿದ್ದರು. ನನ್ನಂತಹ ಎಷ್ಟೋ ಮಂದಿಗೆ ಮಾರ್ಗದರ್ಶಕರಾಗಿ ಹೋರಾಟದ ಹಾದಿಯನ್ನೂ ತೋರಿಸಿದ್ದಾರೆ. ನನ್ನನ್ನು ಬರವಣಿಗೆಗೆ ಹಚ್ಚಿದವರು ಇವರೇ. ಇತ್ತೀಚೆಗೆ ಬಿಡುಗಡೆಯಾದ ನನ್ನ ಅನುವಾದ ಕೃತಿಯನ್ನು ಬಹಳ ಆಸ್ಥೆಯಿಂದ ಅವರೇ, ಪ್ರಕಟಿಸಿ, ನ್ಯಾಷನಲ್ ಕಾಲೇಜು ಬಾಗೇಪಲ್ಲಿಯಲ್ಲಿ ರಂಗಕರ್ಮಿ ಪ್ರಸನ್ನರಿಂದ ಬಿಡುಗಡೆಗೊಳಿಸಿದ್ದರು.
ಲೇಖಕರಾಗಿಯೂ ಗಂಗಾಧರಮೂರ್ತಿ ಅವರು ಮಹತ್ದ ಕೆಲಸವನ್ನು ಮಾಡಿದ್ದಾರೆ. ಅವುಗಳೆಂದರೆ, ಹೂ ಹರಳುವಂಥ ಮಣ್ಣು (ಕವನ), ಸಂಸ್ಕಾರ ಸಮೀಕ್ಷೆ (ಸಂ:ವಿಮರ್ಶಾ ಲೇಖನಗಳು), ಬಾರತೀಯ ಸಾಹಿತ್ಯ ವರ್ಗನೆಲೆ (ಸಹ ಸಂ: ವಿಮರ್ಶಾ ಲೇಖನಗಳು), ನಾಗಸಂದ್ರ ಭೂ ಅಕ್ರಮಣ ಚಳುವಳಿ, ಮಕ್ಕಳಿಗಾಗಿ ಸೂಫಿ ಕಥೆಗಳು, ಭಾರತ ಸ್ವಾತಂತ್ರ್ಯ ಚಳುವಳಿಯ ಪ್ರಧಾನೇತರ ಹೋರಾಟಗಳು, ದ ಪಾಲಿಟಿಕ್ಸ್ ಆಫ್ ಬ್ಯಾನಿಂಗ್ ಭೀಫ್, ಕರ್ನಾಟಕದ ಜಲಿಯನ್ ವಾಲಾಬಾಗ್-ವಿಧುರಾಶ್ವತ್ಥ,(ಸ್ಮಿತಾರೆಡ್ಡಿ ಅವರೊಂದಿಗೆ), ಪದ್ಮಭೂಷಣ ಡಾ.ಎಚ್.ನರಸಿಂಹಯ್ಯನವರು (ಸಂಕ್ಷಿಪ್ತ ಜೀವನ ಚಿತ್ರಣ), ಭಾರತದ ಭೌದ್ದಿಕ ದಾರಿದ್ರ್ಯ (ಅನುವಾದ), ಭಾರತೀಯ ಸಂಸ್ಕೃತಿಯ ಜಾತಿ ಲಕ್ಷಣ (ಅನುವಾದ), ಅಂಬೇಡ್ಕರ್ ಮತ್ತು ಮುಸ್ಲೀಮರು (ಅನುವಾದ), ವಸಾಹತುಪೂರ್ವ ಕಾಲದ ಜಾತಿ ಹೋರಾಟಗಳು (ಅನುವಾದ), ಹಿಂದುತ್ವ ಮತ್ತು ದಲಿತರು (ಅನುವಾದ) ಕೋಮುವಾದಿ ಕಾರ್ಯಚರಣೆ ಮತ್ತು ದಲಿತ ಪ್ರತಿಸ್ಪಂದನೆ (ಅನುವಾದ), ಗೀತೆ ಒಳಗಿನ ಸತ್ಯ ಏನು? (ಅನುವಾದ), ಭಾರತೀಯ ಭಾಷಾ ಸಾಹಿತ್ಯಗಳ ವರ್ಗಸೆಲೆ (ಸಂಪಾದನೆ) ಕತ್ತೆ ಪುರಾಣ, ಅಂಬೇಡ್ಕರ್ ಅನುಭವದ ಆರು ಕಥನಗಳು. ದೇಶ ವಿಭಜನೆಯ ವಾಸ್ತವ ಸತ್ಯಗಳು (ಅನುವಾದ), ಲಕ್ಷ್ಮೀಪುರಾಣ (ಅನುವಾದ), ಮತ್ತು ಭಾರತದ ಪ್ರಜೆಗಳಾದ ನಾವು (ಅನುವಾದ).
೨೦೧೩ರಲ್ಲಿ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ ಮತ್ತು ೨೦೧೭ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳಿಂದ ಇವರು ಸನ್ಮಾನಿತರಾಗಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ನಾನು ಅವರನ್ನು ಭೇಟಿ ಮಾಡಿದ್ದೆ. ಆದರೆ, ಈಗ ಅವರು ನಮ್ಮೊಂದಿಗೆ ಇಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ಕಲಿಸಿದ್ದು, ಹೇಳಿದ್ದು, ತೋರಿದ ಋಜುಮಾರ್ಗ ಸದಾ ನಮಗೆಲ್ಲರಿಗೂ ಬೆಳಕಾಗಿದೆ.
***
ಲೇಖಕ ಸುಬ್ರಮಣ್ಯಂ ಹೆಚ್.ಆರ್. ಅವರು ಪ್ರೊ.ಬಿ.ಗಂಗಾಧರಮೂರ್ತಿ ಅವರ ಶಿಷ್ಯರು. ಅವರ ಜತೆ ಕೆಲವಾರು ವರ್ಷ ನಿಕಟವಾಗಿದ್ದವರು. ಬಾಗೇಪಲ್ಲಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.